ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನದ ಅಪಬಳಕೆಗೆ ಅವಕಾಶ ಬೇಡ: ಪಟ್ಲ

Last Updated 20 ಫೆಬ್ರವರಿ 2023, 5:21 IST
ಅಕ್ಷರ ಗಾತ್ರ

ಮಂಗಳೂರು: ‘ಯಕ್ಷಗಾನಕ್ಕೆ ಧಾರ್ಮಿಕ ಚೌಕಟ್ಟಿದೆ. ಈ ಕಲೆಯ ಬಗ್ಗೆ ಜನರಿಗೆ ಆರಾಧ್ಯ ಭಾವನೆ ಇದೆ. ಇದನ್ನು ಕೇವಲ ಮನರಂಜನೆಯ ಸಾಧನವನ್ನಾಗಿ ಮಾತ್ರ ನೋಡುವುದಿಲ್ಲ. ಕಲೆಗೆ ಅಪಚಾರವಾಗುವಂತೆ ಯಕ್ಷಗಾನವನ್ನು ಬಳಸುವುದು ಸಲ್ಲದು’ ಎಂದು ಭಾಗವತ ಪಟ್ಲ ಸತೀಶ ಶೆಟ್ಟಿ ಅಭಿಪ್ರಾಯಪಟ್ಟರು.

ಭಾರತ್ ಫೌಂಡೇಷನ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಿಥಿಕ್‌ ಸೊಸೈಟಿ ಆಶ್ರಯದಲ್ಲಿ ಇಲ್ಲಿ ಏರ್ಪಡಿಸಿರುವ ಮಂಗಳೂರು ಲಿಟ್‌ ಫೆಸ್ಟ್‌ನಲ್ಲಿ (ಮಂಗಳೂರು ಸಾಹಿತ್ಯ ಉತ್ಸವ) ‘ಯಕ್ಷಗಾನದ ಹೊಸ ರೂಪಗಳು‘ ಕುರಿತ ಗೋಷ್ಠಿಯಲ್ಲಿ ಪ್ರೇಕ್ಷಕರೊಬ್ಬರು ಎತ್ತಿದ ಪ್ರಶ್ನೆಗೆ ಅವರು ಸಹಮತ ವ್ಯಕ್ತಪಡಿಸಿದರು.

‘ಯಕ್ಷಗಾನದ ಜಾಗಟೆ, ಚೆಂಡೆ, ಮದ್ದಲೆಗಳನ್ನು ನಾವು ಪೂಜಿಸುತ್ತೇವೆ. ಫೆವಿಕಾಲ್‌ ಜಾಹೀರಾತಿನಲ್ಲಿ ವೇಷಧಾರಿಯೊಬ್ಬ ಅದನ್ನು ಎಸೆಯುವಂತೆ ಚಿತ್ರಿಸಿದ್ದಾರೆ. ವಾಣಿಜ್ಯ ಉದ್ದೇಶಕ್ಕಾಗಿ ಕಲೆಯನ್ನು ಈ ರೀತಿ ದುರ್ಬಳಕೆ ಮಾಡುವುದನ್ನು ಸಹಿಸಲಾಗದು. ಇಂತಹ ಅಪಸವ್ಯಗಳನ್ನು ನಿಲ್ಲಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದರು.

‘ಕಲೆಯು ಕಾಲಕ್ಕನುಗುಣವಾಗಿ ಮಾರ್ಪಾಡು ಹೊಂದಬೇಕಾಗುತ್ತದೆ. ಈಗಿನ ಕಾಲಮಿತಿಯ ಪ್ರಯೋಗದ ಬಗ್ಗೆ ಜನರ ಅಭಿರುಚಿ ಹೆಚ್ಚುತ್ತಿದೆ. ರಾತ್ರಿ ಇಡೀ ಪ್ರಸಂಗ ಪ್ರದರ್ಶಿಸುವಾಗ ರಾತ್ರಿ 4ರ ಬಳಿಕ ಉದಯರಾಗ, ರಾತ್ರಿ 2 ಗಂಟೆಗೆ ಹಂಸಧ್ವನಿ ಎಂಬೆಲ್ಲ ಕಟ್ಟುಪಾಡುಗಳಿರುವುದು ನಿಜ. ಕಾಲಮಿತಿಯಲ್ಲಿ ಅದಕ್ಕೆಲ್ಲ ಅವಕಾಶ ಇಲ್ಲ. ಬಣ್ಣದ ವೇಷಗಳು ರಾತ್ರಿಯ ಬೆಳಕಿನಲ್ಲಿ ಸೊಗಸಾಗಿ ಕಾಣುತ್ತವೆ. ಮಧ್ಯರಾತ್ರಿಯ ನೀರವತೆಯಲ್ಲಿ ಯಕ್ಷಗಾನದ ಹಾಡುಗಳನ್ನು ಸವಿಯುವ ಆನಂದವೇ ಬೇರೆ. ಕಾಲಮಿತಿಯ ಜೊತೆ ಜೊತೆಗೇ ರಾತ್ರಿ ಇಡೀ ಪ್ರದರ್ಶಿಸುವ ಯಕ್ಷಗಾನಕ್ಕೂ ಅವಕಾಶ ಮುಕ್ತವಾಗಿರಬೇಕು. ಈ ವಿಚಾರದಲ್ಲಿ ಸರ್ಕಾರದ ಹಸ್ತಕ್ಷೇಪ ಮಾಡಬಾರದು’ ಎಂದು ಒತ್ತಾಯಿಸಿದರು.

ಕಲಾವಿದೆ ವೃಂದಾ ಕೊನಾರ್‌, ‘ಯುವಜನರು ಯಕ್ಷಗಾನದತ್ತ ಆಕರ್ಷಿತರಾಗುತ್ತಿದ್ದಾರೆ. ಯಕ್ಷಗಾನವನ್ನು ಶಾಸ್ತ್ರೀಯವಾಗಿ ಕಲಿಸುವಂತಹ ಡಿಪ್ಲೊಮಾದಂತಹ ಕೋರ್ಸ್‌ಗಳನ್ನು ಜನಪ್ರಿಯಗೊಳಿಸಬೇಕು’ ಎಂದರು.

ಪ್ರೇಕ್ಷಕರ ಬೇಡಿಕೆ ಮೇರೆಗೆ ಪಟ್ಲ ಸತೀಶ ಶೆಟ್ಟಿ ಅವರು ಯಕ್ಷಗಾನದ ಹಾಡುಗಳನ್ನು ಹಾಡಿದರು.

ಪುರುಷೋತ್ತಮ ಭಂಡಾರಿ ಅವರು ಸಂವಾದ ನಡೆಸಿಕೊಟ್ಟರು.

**

ಶುದ್ಧ ಕನ್ನಡವನ್ನು ಉಳಿಸಲು ನೆರವಾಗುತ್ತಿರುವ ಯಕ್ಷಗಾನವನ್ನು ಈ ನಾಡಿನ ಕಲೆಯನ್ನಾಗಿ ಗುರುತಿಸಬೇಕು ಎಂಬ ಬೇಡಿಕೆಗೆ ಸರ್ಕಾರ ಮನ್ನಣೆ ನೀಡಬೇಕು
-ಪಟ್ಲ ಸತೀಶ ಶೆಟ್ಟಿ, ಭಾಗವತರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT