ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಜಾಲ; ಸಾಕ್ಷ್ಯ ನಾಶದ ಅನುಮಾನ

ತನಿಖೆ ಚುರುಕುಗೊಳಿಸಿದ ಸಿಸಿಬಿ ಪೊಲೀಸರು l ಮತ್ತೊಮ್ಮೆ ದಿಗಂತ್‌–ಐಂದ್ರಿತಾ ವಿಚಾರಣೆ ಸಾಧ್ಯತೆ
Last Updated 17 ಸೆಪ್ಟೆಂಬರ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ಜಾಲದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದು, ಇದರ ನಡುವೆಯೇ ಕೆಲ ಆರೋಪಿಗಳು ಸಾಕ್ಷ್ಯ ನಾಶ ಮಾಡಿರುವ ಅನುಮಾನ ವ್ಯಕ್ತವಾಗಿದೆ.

ಜಾಲದ ಜೊತೆ ನಂಟಿರುವ ಅನುಮಾನದಡಿ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ರೇ ಅವರನ್ನು ಬುಧವಾರವಷ್ಟೇ ವಿಚಾರಣೆ ನಡೆಸಿದ್ದ ಪೊಲೀಸರು, ಅವರಿಬ್ಬರ ಹೇಳಿಕೆ ಪಡೆದು ವಾಪಸ್‌ ಕಳುಹಿಸಿದ್ದಾರೆ. ಇದೀಗ ಹೇಳಿಕೆಯನ್ನು ಪರಿಶೀಲಿಸುತ್ತಿದ್ದು,
ಪುನಃ ಅವರಿಬ್ಬರನ್ನು ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ.

ಪ್ರಕರಣದಲ್ಲಿ ಬಿ.ಕೆ.ರವಿಶಂಕರ್ ಹಾಗೂ ನಟಿ ರಾಗಿಣಿ ಅವರನ್ನು ಬಂಧಿಸುತ್ತಿದ್ದಂತೆ, ಕೆಲ ಆರೋಪಿಗಳು ಎಚ್ಚೆತ್ತುಕೊಂಡಿದ್ದರು. ಸಿಸಿಬಿ ಪೊಲೀಸರು ತಮ್ಮ ಬಳಿ ಬರಬಹುದು ಹಾಗೂ ತಮ್ಮನ್ನೂ ಬಂಧಿಸಬಹುದೆಂದು ತಿಳಿದ ಕೆಲ ಆರೋಪಿಗಳು ಸಾಕ್ಷ್ಯ ನಾಶ ಮಾಡಿರುವ ಸಂಶಯ ಇರುವುದಾಗಿ ಸಿಸಿಬಿ ಮೂಲಗಳು ತಿಳಿಸಿವೆ.

‘ದೆಹಲಿಯ ವಿರೇನ್ ಖನ್ನಾ ಹಾಗೂ ಇತರೆ ಆರೋಪಿಗಳ ಹೇಳಿಕೆ ಪ್ರಕಾರ, ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿದ್ದ ಬಹುತೇಕರು ಮಾದಕ ವ್ಯಸನಿಗಳು. ಲಾಕ್‌ಡೌನ್ ಸಮಯದಲ್ಲಿ ಕೆಲವರು ಮನೆಗೆ ಡ್ರಗ್ಸ್ ತರಿಸಿಕೊಂಡ ಪುರಾವೆಗಳು ಸಿಕ್ಕಿವೆ. ಬಂಧಿತ ಡ್ರಗ್ಸ್ ಪೆಡ್ಲರ್ ಆಫ್ರಿಕಾ ಮೂಲದ ಲೋಮ್ ಪೆಪ್ಪರ್ ಸಹ ಅದನ್ನೇ ಹೇಳಿದ್ದಾರೆ.’

‘ಹಲವು ಆರೋಪಿಗಳ ಮನೆ ಮೇಲೆ ದಾಳಿ ಮಾಡಿದಾಗ ಡ್ರಗ್ಸ್ ಸಿಕ್ಕಿದೆ.ಕೆಲ ಆರೋಪಿಗಳ ಮನೆಯಲ್ಲಿ ಏನು ಸಿಕ್ಕಿಲ್ಲ. ಅದೇ ಆರೋಪಿಗಳು, ಮನೆಯ ಶೌಚಾಲಯದಲ್ಲೇ ಡ್ರಗ್ಸ್ ಚೆಲ್ಲಿ ನೀರು ಹಾಕಿರುವ ಅನುಮಾನ ದಟ್ಟವಾಗಿದೆ’ ಎಂದೂ ತಿಳಿಸಿವೆ.

ಸಂಜನಾ ಬಳಿ ಮೂರು ಮೊಬೈಲ್: ‘ನಟಿ ಸಂಜನಾ ಗಲ್ರಾನಿ ಬಳಿ 3 ಮೊಬೈಲ್‌ಗಳು ಇದ್ದವು. ಎರಡರಲ್ಲಿ ಸಿಮ್ ಕಾರ್ಡ್‌ ಇತ್ತು. ಒಂದರಲ್ಲಿ ಇರಲಿಲ್ಲ. ವೈಫೈ ಮೂಲಕ ಆ ಮೊಬೈಲ್ ಬಳಕೆಯಾಗುತ್ತಿತ್ತು. ಆ ಮೊಬೈಲ್ ದತ್ತಾಂಶವನ್ನು ತಾಂತ್ರಿಕ ವಿಭಾಗದ ಸಿಬ್ಬಂದಿ ಪರಿಶೀಲಿಸುತ್ತಿದ್ದಾರೆ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

‘ನಟಿ ರಾಗಿಣಿ, ಹಳೇ ಮೊಬೈಲ್‌ನಲ್ಲಿದ್ದ ದತ್ತಾಂಶ ಅಳಿಸಿ ಹೊಸ ಮೊಬೈಲ್ ಬಳಸುತ್ತಿದ್ದರು. ಅವರು ಸಹ ಸಾಕ್ಷ್ಯ ನಾಶ ಮಾಡಿರುವುದಕ್ಕೆ ಪುರಾವೆಗಳು ಇವೆ’ ಎಂದೂ ತಿಳಿಸಿದರು.

‘ನಮಗೇನು ಗೊತ್ತಿಲ್ಲ’:‘ಹೊರ ದೇಶದಲ್ಲಿ ನಡೆದಿದ್ದ ಪಾರ್ಟಿಯೊಂದಕ್ಕೆ ಹೋಗಿ ಬಂದಿದ್ದೇವೆ. ಈಗ ಬಂಧಿತರಾಗಿರುವ ಆರೋಪಿಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ. ಡ್ರಗ್ಸ್ ಬಗ್ಗೆ ನಮಗೇನು ಹೆಚ್ಚು ಗೊತ್ತಿಲ್ಲ’ ಎಂದು ತಾರಾ ಜೋಡಿ ದಿಗಂತ್–ಐಂದ್ರಿತಾ ರೇ ಸಿಸಿಬಿ ಪೊಲೀಸರ ಬಳಿ ಹೇಳಿರುವುದಾಗಿ ಗೊತ್ತಾಗಿದೆ.

‘ನಾವಿಬ್ಬರೂ ಸಿನಿ ತಾರೆಯರು. ಇಬ್ಬರಿಗೂ ಅಭಿಮಾನಿಗಳು ಹೆಚ್ಚಿದ್ದಾರೆ. ಕೆಲವರು ಪಾರ್ಟಿಗಳಿಗೂ ಕರೆಯುತ್ತಿದ್ದರು. ಅವರ ಆಹ್ವಾನದ ಮೇರೆಗೆ ಪಾರ್ಟಿಗೆ ಹೋಗುತ್ತಿದ್ದೆವು. ಪಾರ್ಟಿ ಮುಗಿಸಿ ನಮ್ಮ ಪಾಡಿಗೆ ವಾಪಸ್‌ ಬಂದಿದ್ದೆವು’ ಎಂದೂ ತಾರಾ ಜೋಡಿ ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ಸಂಜನಾ ಸಂಭಾಷಣೆ ವಿಡಿಯೊ ಹರಿದಾಟ:ನಟಿ ಸಂಜನಾ ಗಲ್ರಾನಿ ಹಾಗೂ ಆಂಧ್ರಪ್ರದೇಶದ ಉದ್ಯಮಿಯೊಬ್ಬರ ಮಧ್ಯದ ಸಂಭಾಷಣೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಉದ್ಯಮಿ ತೆಲುಗಿನಲ್ಲಿ ಅಸಭ್ಯವಾಗಿ ಮಾತನಾಡಿದ್ದು, ಅದನ್ನು ಸಂಜನಾ ಪ್ರಶ್ನಿಸಿದ್ದಾರೆ. ಈ ವಿಡಿಯೊ ಮಾಡಿದವರು ಯಾರು ಹಾಗೂ ಅದರ ಹಿಂದಿನ ಉದ್ದೇಶವೇನು ಎಂಬುದು ತನಿಖೆಯಿಂದಲೇ ಗೊತ್ತಾಗಬೇಕಿದೆ.

‘ವಿಡಿಯೊ ಬಗ್ಗೆ ಗೊತ್ತಾಗಿದೆ. ಪರಿಶೀಲಿಸುತ್ತಿದ್ದೇವೆ’ ಎಂದುಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದರು.

‘ಕಾಂಗ್ರೆಸ್‌ ಅವಧಿಯಲ್ಲಿ ಮಾಫಿಯಾ ಇರಲಿಲ್ಲವೇ?’:ಮಂಗಳೂರು: ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಇರಲಿಲ್ಲವೇ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರಶ್ನಿಸಿದರು.

‘ಆಗ ಯಾಕೆ ತನಿಖೆ ನಡೆಸಲಿಲ್ಲ? ಆಗ ರಮಾನಾಥ ರೈ, ಯು.ಟಿ. ಖಾದರ್ ಸಚಿವರಾಗಿದ್ದರ
ಲ್ಲವೇ? ಮಂಗಳೂರಿನ ಮಾಜಿ ಮೇಯರ್‌ ಒಬ್ಬರ ಮಗ ಈ ದಂಧೆಯಲ್ಲಿ ಇರಲಿಲ್ಲವೇ?’ ಎಂದರು.

ನ್ಯಾಯಾಂಗ ತನಿಖೆಗೆ ಒತ್ತಾಯ:‘ಡ್ರಗ್ಸ್‌ ಜಾಲದ ಕುರಿತು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ‘ಈ ಪ್ರಕರಣದಲ್ಲಿ ಪೊಲೀಸರು ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಪ್ರಮುಖ ಆರೋಪಿಗಳನ್ನು ಬಂಧಿಸದಂತೆ ಸರ್ಕಾರ ಒತ್ತಡ ಹೇರುತ್ತಿದೆ’ ಎಂದು ಆರೋಪಿಸಿದರು.

‘ದೇವರ ಪ್ರಸಾದ’ವೆಂದು ಡ್ರಗ್ಸ್‌ ಸಾಗಣೆ:ಬೆಂಗಳೂರು: ಮಾದಕ ವಸ್ತು ಬ್ರೌನ್‌ ಶುಗರ್ ಸಾಗಣೆ ಮಾಡುತ್ತಿದ್ದ ಆರೋಪದಡಿ ವಿಕ್ರಮ್ ಖಿಲೇರಿ (25) ಎಂಬಾತನನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ.

‘ಗಿರಿನಗರದ ವಿಕ್ರಮ್, ಪಟ್ನೂಲ್ ಪೇಟೆಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಭಾತ್ಮಿದಾರರು ನೀಡಿದ್ದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಲಾಯಿತು. 90 ಗ್ರಾಂ ಬ್ರೌನ್ ಶುಗರ್, ಮೊಬೈಲ್, ಬೈಕ್‌ ಜಪ್ತಿ ಮಾಡಲಾಗಿದೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದರು.

‘ಪೊಲೀಸರು ಸ್ಥಳಕ್ಕೆ ಹೋದಾಗ ಆರೋಪಿ ಬಳಿ ಯಾವುದೇ ಡ್ರಗ್ಸ್ ಸಿಕ್ಕಿರಲಿಲ್ಲ. ಆತನ ಹೆಲ್ಮೆಟ್‌ ಪರಿಶೀಲಿಸಿದಾಗ ಅದರಲ್ಲಿ ಡ್ರಗ್ಸ್ ಪತ್ತೆಯಾಯಿತು. ಬೆಂಗಳೂರು ಮಾತ್ರವಲ್ಲದೇ ಹಲವು ನಗರಗಳಿಗೆ ಆರೋಪಿ ಬ್ರೌನ್ ಶುಗರ್ ಪೂರೈಸುತ್ತಿದ್ದ ಮಾಹಿತಿ ಇದೆ.’

‘ಡ್ರಗ್ಸ್ ಪೊಟ್ಟಣದಲ್ಲಿ ತುಂಬುತ್ತಿದ್ದ ಆರೋಪಿ, ಅದರ ಮೇಲೆ ದೇವರ ಭಾವಚಿತ್ರ ಅಂಟಿಸುತ್ತಿದ್ದ. ದೇವರ ಪ್ರಸಾದವೆಂದು ಹೇಳಿ ಬಸ್ ಹಾಗೂ ವಿವಿಧ ಕಂಪನಿಗಳ ಮೂಲಕ ಕೋರಿಯರ್‌ನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ವಿಷಯ ತನಿಖೆಯಿಂದ ಗೊತ್ತಾಗಿದೆ’ ಎಂದೂ ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT