ಶನಿವಾರ, ಜುಲೈ 2, 2022
25 °C
ಕೊಕೇನ್ ಖರೀದಿಸುವಾಗಲೇ ಎನ್‌ಸಿಬಿ ದಾಳಿ

ಡ್ರಗ್ಸ್: ಉದ್ಯಮಿ ಆದಿ ಶ್ರೀನಿವಾಸ್ ನಾಯ್ಡು ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧ ಉದ್ಯಮಿ ಆದಿ ಶ್ರೀನಿವಾಸ್ ನಾಯ್ಡು ಅವರನ್ನು ಎನ್‌ಸಿಬಿ (ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ) ಅಧಿಕಾರಿಗಳು ದೇವನಹಳ್ಳಿ ಸಮೀಪದ ಸಾದಹಳ್ಳಿ ಗೇಟ್ ಬಳಿ ಇತ್ತೀಚೆಗೆ ಬಂಧಿಸಿದ್ದಾರೆ.

ಬಂಧಿತ ಶ್ರೀನಿವಾಸ್, ಆಂಧ್ರಪ್ರದೇಶ ಟಿಡಿಪಿ ಮುಖಂಡರೂ ಆಗಿದ್ದ ಉದ್ಯಮಿ ದಿವಂಗತ ಡಿ.ಕೆ.ಆದಿಕೇಶವಲು ನಾಯ್ಡು ಅವರ ಮಗ. ಡ್ರಗ್ಸ್ ಖರೀದಿಸುವಾಗಲೇ ಎನ್‌ಸಿಬಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.

‘ನಗರದ ಹಲವು ಆಸ್ಪತ್ರೆಗಳ ಪಾಲುದಾರರು ಹಾಗೂ ಉದ್ಯಮಿ ಆಗಿರುವ ಶ್ರೀನಿವಾಸ್, ಕೆಲವರಿಂದ ಡ್ರಗ್ಸ್ ಖರೀದಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಲು ವಿಶೇಷ ತಂಡ ರಚಿಸಲಾಗಿತ್ತು’ ಎಂದು ಎನ್‌ಸಿಬಿ ಮೂಲಗಳು ಹೇಳಿವೆ.

‘ಹೈದರಾಬಾದ್‌ಗೆ ಇತ್ತೀಚೆಗೆ ಹೋಗಿದ್ದ ಶ್ರೀನಿವಾಸ್, ಕಾರಿನಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದರು. ಸಾದಹಳ್ಳಿ ಗೇಟ್ ಬಳಿ ಕೆಲ ನಿಮಿಷ ಕಾರು ನಿಲ್ಲಿಸಿದ್ದರು. ಅದೇ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ, ಶ್ರೀನಿವಾಸ್ ಕೈಗೆ ಕೊಕೇನ್ ಡ್ರಗ್ಸ್ ಇದ್ದ ಪೊಟ್ಟಣ ನೀಡಿದ್ದ.’

‘ಸಮೀಪದಲ್ಲೇ ಇದ್ದ ವಿಶೇಷ ತಂಡದ ಸಿಬ್ಬಂದಿ, ಕಾರಿನ ಬಳಿ ಹೋಗಿ ಸುತ್ತುವರೆದಿದ್ದರು. ಶ್ರೀನಿವಾಸ್ ಅವರನ್ನು ವಶಕ್ಕೆ ಪಡೆದು ಪೊಟ್ಟಣ ಪರಿಶೀಲಿಸಿದ್ದರು. ಪೊಟ್ಟಣದಲ್ಲಿ ಕೊಕೇನ್ ಇತ್ತು. ಅದನ್ನು ಜಪ್ತಿ ಮಾಡಿ, ಶ್ರೀನಿವಾಸ್ ಅವರನ್ನು ಬಂಧಿಸಲಾಯಿತು’ ಎಂದೂ ಮೂಲಗಳು ತಿಳಿಸಿವೆ.

‘ಶ್ರೀನಿವಾಸ್ ಅವರು ಡ್ರಗ್ಸ್ ವ್ಯಸನಿ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಪೆಡ್ಲರ್ ಜೊತೆ ಸಂಪರ್ಕವಿಟ್ಟುಕೊಂಡಿದ್ದ ಅವರು, ಡ್ರಗ್ಸ್ ತರಿಸಿಕೊಂಡು ಸೇವಿಸುತ್ತಿದ್ದರು. ಇತರರಿಗೆ ಸೇವಿಸುವಂತೆ ಪ್ರಚೋದಿಸುತ್ತಿದ್ದರು’ ಎಂದೂ ಹೇಳಿವೆ.

ಮನೆ ಮೇಲೂ ದಾಳಿ: ‘ಸದಾಶಿವನಗರದಲ್ಲಿರುವ ಶ್ರೀನಿವಾಸ್ ಅವರ ಮನೆ ಮೇಲೂ ದಾಳಿ ಮಾಡಲಾಗಿತ್ತು. ಆದರೆ, ಯಾವುದೇ ಮಾದಕ ವಸ್ತು ಪತ್ತೆಯಾಗಿಲ್ಲ’ ಎಂದು ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು