ಶುಕ್ರವಾರ, ಅಕ್ಟೋಬರ್ 22, 2021
28 °C

ಇ–ಕಾಮರ್ಸ್‌: ವಿ‍ಪುಲ ಅವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ದೇಶದಲ್ಲಿ ಇ–ಕಾಮರ್ಸ್‌ ವಲಯ ಇನ್ನೂ ಬೆಳವಣಿಗೆಯ ಹಂತದಲ್ಲಿದ್ದು, ಶೇಕಡ 5ರಷ್ಟು ಮಾತ್ರ ಪಾಲು ಹೊಂದಿದೆ’ ಎಂದು ಉಡಾನ್‌ ಕ್ಯಾಪಿಟಲ್‌ನ ಚೈತನ್ಯ ಅಡಪ ತಿಳಿಸಿದರು.

ನಗರದಲ್ಲಿ ಸೋಮವಾರ ನಡೆದ ‘ಉದ್ಯಮಿಯಾಗು– ಉದ್ಯೋಗ ನೀಡು’ ಕಾರ್ಯಾಗಾರದಲ್ಲಿ ‘ಇ–ಕಾಮರ್ಸ್‌ ವಲಯದಲ್ಲಿನ ಅವಕಾಶಗಳು’ ಕುರಿತು ಮಾತನಾಡಿದ ಅವರು, ‘ಶೇ 95ರಷ್ಟು ವಾಣಿಜ್ಯ ವಹಿವಾಟು ಮೊದಲಿನಂತೆಯೇ ನಡೆಯುತ್ತಿದೆ. ಆದ್ದರಿಂದ, ಇ–ಕಾಮರ್ಸ್‌ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿರುವುದರಿಂದ ಯುವಕರು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಜಾಗತಿಕವಾಗಿಯೂ ಸಹ ಈ ಕ್ಷೇತ್ರ ಇನ್ನೂ ವಿಸ್ತಾರಗೊಂಡಿಲ್ಲ. ಅಮೆರಿಕದಲ್ಲಿ ಶೇ 20, ರಷ್ಯಾ ಮತ್ತು ಬ್ರೆಜಿಲ್‌ನಲ್ಲಿ ಶೇ 10ರಿಂದ 15ರಷ್ಟು ವಹಿವಾಟು ನಡೆಯುತ್ತಿದೆ. ಹೀಗಾಗಿ, ನಿರ್ದಿಷ್ಟ ಯೋಜನೆ ಮತ್ತು ಮಾರುಕಟ್ಟೆ ವ್ಯವಸ್ಥೆಯನ್ನು ಅರಿತುಕೊಂಡು ಹೆಜ್ಜೆ ಇರಿಸಬೇಕು’ ಎಂದು ಸಲಹೆ ನೀಡಿದರು.

‘ಡಿಜಿಟಲ್‌ ಮಾರುಕಟ್ಟೆಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳುವುದು ಮತ್ತು ವಿವಿಧ ಕಂಪನಿಗಳ ಸಹಭಾಗಿತ್ವ ಪಡೆದುಕೊಳ್ಳುವುದು  ಮುಖ್ಯವಾಗುತ್ತದೆ. ಡಿಜಿಟಲ್‌ ವ್ಯವಸ್ಥೆಯ ಮೂಲಕವೇ ದೇಶದ ಅರ್ಧದಷ್ಟು ಸ್ಥಳಗಳನ್ನು ಸುಲಭವಾಗಿ ತಲುಪಬಹುದು’ ಎಂದು ತಿಳಿಸಿದರು.

‘ಭಾರತದ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್‌ ಮಾಡಲು ಆದ್ಯತೆ ನೀಡಬೇಕಾಗಿದೆ. ಬ್ರ್ಯಾಂಡಿಂಗ್‌ನಲ್ಲಿ ವಿಫಲವಾದರೆ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿಸುವುದು ಕಷ್ಟಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ಎಲೆಕ್ಟ್ರಿಕ್‌ ವಾಹನಗಳು ಮತ್ತು ಸುಸ್ಥಿರ ಇಂಧನ ವಲಯದಲ್ಲಿನ ಅವಕಾಶಗಳು ಕುರಿತು ಮಾತನಾಡಿದ ಬೌನ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಸಹ–ಸಂಸ್ಥಾಪಕ ವಿವೇಕಾನಂದ ಹಳ್ಳೆಕೆರೆ ಅವರು, ’ಯಾವುದೇ ಉದ್ಯಮದಲ್ಲಿ ಯಶಸ್ಸು ಸಾಧಿಸಲು ಆಸಕ್ತಿ ಮತ್ತು ಪರಿಶ್ರಮ ಮುಖ್ಯ’ ಎಂದು ಹೇಳಿದರು.

‘ಬೌನ್ಸ್‌ನ 25 ಸಾವಿರ ವಾಹನಗಳಿದ್ದು, ಇದುವರೆಗೆ 30 ಕೋಟಿ ಮಂದಿ ವಾಹನಗಳನ್ನು ಚಲಾಯಿಸಿದ್ದಾರೆ. ಉದ್ಯಮಶೀಲರಾಗುವ ಬಯಸುವ ಹತ್ತು ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಮಾರ್ಗದರ್ಶನ ನೀಡಲಾಗುವುದು. ಬೌನ್ಸ್‌ ವೆಬ್‌ಸೈಟ್‌ ವೀಕ್ಷಿಸಿ ಹೆಸರು ನೋಂದಾಯಿಸಿಕೊಳ್ಳಬೇಕು’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.