ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಬಳಿ ಇರುವ ರೈತರ, ವಿದ್ಯಾರ್ಥಿಗಳ ಮಾಹಿತಿ ಖಾಸಗಿ ಕಂಪನಿಗಳಿಗೆ ಮಾರಾಟ!

ರೈತರು, ವಿದ್ಯಾರ್ಥಿಗಳ ದತ್ತಾಂಶ ಮಾರಾಟಕ್ಕೆ ಮುಂದಾದ ರಾಜ್ಯ ಸರ್ಕಾರ
Last Updated 7 ಡಿಸೆಂಬರ್ 2021, 3:04 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರದ ಬಳಿ ಇರುವ ರೈತರು ಮತ್ತು ವಿದ್ಯಾರ್ಥಿಗಳ ಸಮಗ್ರ ಮಾಹಿತಿಯುಳ್ಳ ದತ್ತಾಂಶವನ್ನು ಸಂಪೂರ್ಣ ಸಹಮತಿಯ ಆಧಾರದಲ್ಲಿ ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಲು ಅವಕಾಶ ಕಲ್ಪಿಸುವ ‘ಇ–ಸಹಮತಿ’ ಯೋಜನೆ ಅಂತಿಮ ಅನುಮೋದನೆಗಾಗಿ ಕಾನೂನು ಇಲಾಖೆಯನ್ನು ತಲುಪಿದೆ.

ತನ್ನ ಬಳಿ ಇರುವ ದತ್ತಾಂಶವನ್ನು ಮಾರಾಟ ಮಾಡುವುದಕ್ಕಾಗಿ ‘ಸಹಮತಿ ಆಧಾರದ ವ್ಯವಸ್ಥೆ’ಯೊಂದನ್ನು ರೂಪಿಸುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ 2020ರ ಡಿಸೆಂಬರ್‌ನಲ್ಲಿ ಆರಂಭಿಸಿತ್ತು. ಅದರ ಮುಂದುವರಿದ ಭಾಗವಾಗಿಯೇ ಕೃಷಿ ಉತ್ಪನ್ನ ಮಾರುಕಟ್ಟೆ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಅಧಿಸೂಚಿತ ಮಾರುಕಟ್ಟೆಗಳ ಬಳಿ ರೈತರಿಂದ ಕೃಷಿ ಉತ್ಪನ್ನ ಖರೀದಿಸುವ ಕಂಪನಿಗಳಿಗೆ ರೈತರ ದತ್ತಾಂಶ ಒದಗಿಸುವುದು ಇದರ ಉದ್ದೇಶವಾಗಿತ್ತು.

ಈಗ ವಿದ್ಯಾರ್ಥಿಗಳ ದತ್ತಾಂಶವನ್ನೂ ಮಾರಾಟ ಮಾಡಲು ಸರ್ಕಾರ ಯೋಚಿಸಿದೆ. ಡಿಸೆಂಬರ್‌ 10ರ ವೇಳೆಗೆ ಇ–ಸಹಮತಿ ಯೋಜನೆಗೆ ಕಾನೂನು ಇಲಾಖೆಯ ಒಪ್ಪಿಗೆ ದೊರೆಯುವ ಸಾಧ್ಯತೆ ಇದೆ. ಆ ಬಳಿಕ ಮೊಬೈಲ್‌ ತಂತ್ರಾಂಶದ ಮೂಲಕ ದತ್ತಾಂಶಗಳ ಖರೀದಿಗೆ ಅವಕಾಶ ದೊರೆಯಲಿದೆ ಎಂದು ಇ–ಆಡಳಿತ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫ್ರೂಟ್ಸ್‌) ತಂತ್ರಾಂಶದಲ್ಲಿ ರಾಜ್ಯದ 70 ಲಕ್ಷ ರೈತರ ಮಾಹಿತಿಯ ಸಂಗ್ರಹವಿದೆ. ಜಮೀನುಗಳ ವಿಸ್ತೀರ್ಣ, ಸರ್ವೆ ನಂಬರ್‌, ಬೆಳೆ ಮತ್ತಿತರ ಮಾಹಿತಿ ಈ ದತ್ತಾಂಶದಲ್ಲಿದೆ. ರೈತರ ಸಹಮತಿಯನ್ನು ಪಡೆದು ಈ ಮಾಹಿತಿಯನ್ನು ಖಾಸಗಿ ಕಂಪನಿಗಳ ಜತೆ ಹಂಚಿಕೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಬೃಹತ್‌ ಕಂಪನಿಗಳು ನೇಮಕಾತಿಯ ಸಂದರ್ಭದಲ್ಲಿ ಅಭ್ಯರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲಿಸಲು ಬಯಸುತ್ತವೆ. ಅಂತಹವರಿಗೆ ನೇರವಾಗಿ ಸರ್ಕಾರದ ಬಳಿ ಲಭ್ಯವಿರುವ ಅಂಕಪಟ್ಟಿ, ಪ್ರಮಾಣಪತ್ರ ಮತ್ತಿತರ ದಾಖಲೆಗಳನ್ನು ಪಡೆಯಲು ಅವಕಾಶ ಕಲ್ಪಿಸುವ ಪ್ರಸ್ತಾವವಿದೆ. ಕೇಂದ್ರದ ರಾಷ್ಟ್ರೀಯ ಶೈಕ್ಷಣಿಕ ದಾಖಲೆಗಳ ಸಂಗ್ರಹಾಗಾರದಲ್ಲಿ (ಎನ್‌ಎಡಿ) ಇರುವ ಮಾಹಿತಿಯನ್ನು ಸಹಮತಿ ಆಧಾರದಲ್ಲಿ ಹಂಚಿಕೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ವಿವರಿಸಿದರು.

ದತ್ತಾಂಶ ಮಾರಾಟಕ್ಕೆ ಈವರೆಗೂ ದರ ನಿಗದಿಯಾಗಿಲ್ಲ. ಮೊಬೈಲ್‌ ಆ್ಯಪ್‌ ಮೂಲಕ ದತ್ತಾಂಶ ಒದಗಿಸುವ ಈ ಯೋಜನೆ ವೈಯಕ್ತಿಕ ದತ್ತಾಂಶ ಮಸೂದೆಯ ವ್ಯಾಪ್ತಿಗೆ ಬರುತ್ತದೆ. ಈ ಮಸೂದೆಗೆ ಸಂಸತ್ತಿನ ಅಂಗೀಕಾರ ದೊರೆಯುವುದು ಬಾಕಿ ಇದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT