ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿದ್ದೋಲೆ ಪ್ರಕಟಣೆ ಸಂವಿಧಾನವನ್ನೇ ಅಣಕಿಸುವಂತಿದೆ: ಶಿಕ್ಷಣ ತಜ್ಞ ನಿರಂಜನಾರಾಧ್ಯ

Last Updated 28 ಜೂನ್ 2022, 16:02 IST
ಅಕ್ಷರ ಗಾತ್ರ

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಮಕ್ಕಳಿಗೆ ವಿಷಪ್ರಾಶನ ಮಾಡಿಸುವ ಕೆಲಸದಲ್ಲಿ ಸರ್ಕಾರವನ್ನು ಬಾಹ್ಯವಾಗಿ ನಿಯಂತ್ರಿಸುತ್ತಿರುವ ಸಂವಿಧಾನವನ್ನೂ ಮೀರಿದ ಶಕ್ತಿಗಳು ಈಗ ರಾಜ್ಯ ಸರ್ಕಾರದ ಮೂಲಕ ತಿದ್ದೋಲೆ ಕೊಡಿಸಿರುವ ಕ್ರಮವು ಸಂವಿಧಾನವನ್ನೇ ಅಣಕಿಸುವಂತಿದೆ ಎಂದು ಶಿಕ್ಷಣ ತಜ್ಞ ಹಾಗೂ ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯ ಮಹಾ ಪೋಷಕ ನಿರಂಜನಾರಾಧ್ಯ ವಿ.ಪಿ. ಟೀಕಿಸಿದ್ದಾರೆ.

ಪರಿಷ್ಕೃತ ಪಠ್ಯಪುಸ್ತಕಗಳಲ್ಲಿನ ತಪ್ಪುಗಳಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಸೋಮವಾರ ಪ್ರಕಟಿಸಿರುವ ತಿದ್ದುಪಡಿಗಳ ಕುರಿತು ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಅವರು, ‘ತಿದ್ದೋಲೆ ಹೊರಡಿಸಲು ಅನುಮತಿಸಿರುವ ಆದೇಶವು ವಿಷವುಣಿಸಿ ವ್ಯಕ್ತಿ ಸಾಯುವ ಮುನ್ನ ನೀರು ಕೊಡಲು ಕರುಣಿಸಿದಂತಿದೆ. ವಿಷವುಣಿಸಿದ ಘೋರ ಅಪರಾಧವನ್ನು ಮುಚ್ಚಿಹಾಕಿ, ಅಪರಾಧವೇ ನಡೆದಿಲ್ಲ ಎಂಬಂತೆ ಬಿಂಬಿಸಲು ಹೊರಟಿರುವುದು ಇಡೀ ಪ್ರಕ್ರಿಯೆಯ ಹಿಂದಿರುವ ಕುತಂತ್ರ ಹಾಗೂ ಹುನ್ನಾರಗಳನ್ನು ಬೆತ್ತಲೆಗೊಳಿಸಿದೆ’ ಎಂದಿದ್ದಾರೆ.

ದಮನಿತ ಮತ್ತು ಅವಕಾಶ ವಂಚಿತ ಸಮುದಾಯಗಳ ಮಕ್ಕಳಿಗೆ ಸಾವಿರಾರು ವರ್ಷಗಳಿಂದ ಅಕ್ಷರ ವಂಚಿಸಲಾಗಿತ್ತು. ಈಗ ಮತ್ತೆ ಅದೇ ಪ್ರಯತ್ನವನ್ನು ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನಲ್ಲಿ ಮಾಡಲಾಗುತ್ತಿದೆ. ಸರ್ಕಾರ ಹೊರಡಿಸಿರುವ ತಿದ್ದೋಲೆಯು ಅಕ್ಷರ ವಂಚನೆ ಸಂಸ್ಕೃತಿಯನ್ನು ಮುಂದುವರಿಸುವ ಪ್ರಯತ್ನದ ಭಾಗವಾಗಿದೆ. ಶಿಕ್ಷಕರು ಮಕ್ಕಳಿಗೆ ಕಲಿಸುವ ಬದಲಿಗೆ ಪಠ್ಯಪುಸ್ತಕಗಳಲ್ಲಿರುವ ದೋಷಗಳನ್ನು ತಿದ್ದುವುದರಲ್ಲೇ ಶೈಕ್ಷಣಿಕ ವರ್ಷ ಕಳೆಯಬೇಕಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ತಪ್ಪು ನಡೆದಿರುವುದನ್ನು ಸರ್ಕಾರ ಒಪ್ಪಿಕೊಂಡಿದೆ. ತಿದ್ದೋಲೆ ಹೆಸರಿನಲ್ಲಿ ಅದಕ್ಕೆ ತಿಪ್ಪೆ ಸಾರಿಸುವ ಕೆಲಸ ಮಾಡಬಾರದು. ಪರಿಷ್ಕೃತ ಪಠ್ಯಪುಸ್ತಕಗಳ ಪರಿಶೀಲನೆಯ ಜವಾಬ್ದಾರಿಯನ್ನು ತಜ್ಞರ ಸಮಿತಿ ಅಥವಾ ಸದನ ಸಮಿತಿಗೆ ಒಪ್ಪಿಸಬೇಕು. ವರದಿ ಬರುವವರೆಗೂ ಹಳೆಯ ಪಠ್ಯಪುಸ್ತಕಗಳನ್ನೇ ಮುಂದುವರಿಸಬೇಕು. ಈ ಅವಾಂತರಕ್ಕೆ ಕಾರಣವಾದ ಶಿಕ್ಷಣ ಸಚಿವರನ್ನು ಮುಖ್ಯಮಂತ್ರಿಯವರು ತಮ್ಮ ಸಾಂವಿಧಾನಿಕ ಅಧಿಕಾರ ಬಳಸಿಕೊಂಡು ಸಂಪುಟದಿಂದ ಕೈಬಿಡಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT