ಶನಿವಾರ, ಅಕ್ಟೋಬರ್ 1, 2022
25 °C

ಹಿಂದೂಗಳ ಏರಿಯಾಕ್ಕೆ ಸಿದ್ದರಾಮಯ್ಯ ಬಂದಿದ್ದೇಕೆ ಎಂದು ಪ್ರತಿಭಟನೆ: ಬಿಜೆಪಿ ಗೇಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮುಸಲ್ಮಾನರ ಏರಿಯಾದಲ್ಲಿ ಸಾವರ್ಕರ್‌ ಬ್ಯಾನರ್‌ ಹಾಕಿದ್ದೇಕೆ’ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ. ಅವರದೇ ಮಾತನ್ನು ಅನುಸರಿಸಿದ ಕೊಡಗಿನ ಜನತೆ ‘ಹಿಂದೂಗಳ ಏರಿಯಾಕ್ಕೆ ಸಿದ್ದರಾಮಯ್ಯ ಬಂದಿದ್ದೇಕೆ’ ಎಂದು ಪ್ರತಿಭಟಿಸಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ. 

ಕೊಡಗು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಲು ಗುರುವಾರ ಬಂದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಕಾರ್ಯಕರ್ತರು ಘೇರಾವ್ ಹಾಕಿದ್ದರು. ಕಪ್ಪು ಬಾವುಟ ಪ್ರದರ್ಶಿಸಿ, ಅವರು ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಕೋಳಿಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. 

ಈ ಬಗ್ಗೆ ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ನಡುವೆ ವಾಗ್ವಾದ ನಡೆಯುತ್ತಿದೆ. 

ಗುರುವಾರ ಟ್ವೀಟ್‌ ಮಾಡಿದ್ದ ಸಿದ್ದರಾಮಯ್ಯ, 'ಮುಖ್ಯಮಂತ್ರಿ ಬೊಮ್ಮಾಯಿ ಅವರೇ, ಮೊಟ್ಟೆ ಎಸೆಯುವ ಗೂಂಡಾಗಿರಿಯ ರಾಜಕೀಯ ಶುರುಮಾಡಬೇಡಿ. ಅದನ್ನು ಅಂತ್ಯ ಮಾಡುವುದು ಹೇಗೆ ಎಂದು ನಮಗೂ ಗೊತ್ತು. ನಮ್ಮ ಕಾರ್ಯಕರ್ತರು ನಿಮ್ಮವರಂತೆಯೇ ಬೀದಿಗಿಳಿದರೆ ನೀವು ಮನೆಯಿಂದ ಹೊರಬರುವುದು ಕೂಡ ಕಷ್ಟವಾಗಬಹುದು. ಉತ್ತರ ಪ್ರದೇಶ ಮಾದರಿ ಎಂದರೆ ಇದೆನಾ?’ ಎಂದು ಪ್ರಶ್ನೆ ಮಾಡಿದ್ದರು. 

ಈ ಹಿನ್ನೆಲೆಯಲ್ಲಿ ಶುಕ್ರವಾರ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಮುಸಲ್ಮಾನರ ಏರಿಯಾದಲ್ಲಿ ಹಿಂದೂಗಳು ಬ್ಯಾನರ್‌ ಹಾಕಿದ್ದೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.  ಅವರದೇ ಮಾತನ್ನು ಅನುಸರಿಸಿದ ಕೊಡಗಿನ ಜನತೆ ‘ಹಿಂದೂಗಳ ಏರಿಯಾಕ್ಕೆ ಸಿದ್ದರಾಮಯ್ಯ ಬಂದಿದ್ದೇಕೆ‘ ಎಂದು ಪ್ರತಿಭಟಿಸಿದ್ದಾರೆ. ಸಿದ್ದರಾಮಯ್ಯ ಅವರೇ, ಈ ಪ್ರಶ್ನೆಗೆ ನಿಮ್ಮಲ್ಲಿ ಉತ್ತರವಿದೆಯೇ? ಎಂದು ಮರು ಪ್ರಶ್ನೆ ಕೇಳಿದೆ. 

‘ಸಿದ್ದರಾಮಯ್ಯ ಅವರೇ ಕೊಡಗಿನಲ್ಲಿ ನೀವು ಎದುರಿಸಿದ್ದು ಜನರ ಆಕ್ರೋಶ. ಬಹುಸಂಖ್ಯಾತ ಹಿಂದೂ ಸಮಾಜದ ವಿರುದ್ಧ ನೀವು ನೀಡಿದ ಹೇಳಿಕೆಗಳಿಗೆ ಪ್ರತಿರೋಧವಾಗಿ ಸಂವಿಧಾನದ ಆಶಯದಂತೆ ಜನರು ಪ್ರತಿಭಟಿಸಿದ್ದಾರೆ. ಆದರೆ ಇಲ್ಲಿ ನೀವು ಬೆದರಿಕೆ ಹಾಕುತ್ತಿರುವುದು ಪ್ರಜಾಪ್ರಭುತ್ವದ ಲಕ್ಷಣವೇ?’ ಎಂದು ಮತ್ತೊಂದು ಪ್ರಶ್ನೆ ಕೇಳಿದೆ. 

ಸಿದ್ದರಾಮಯ್ಯ ಅವರ ಕಾರಿನ ಮೇಲೆ ಗುರುವಾರ ಕೋಳಿ ಮೊಟ್ಟೆ ಎಸೆದ ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. 

ಘಟನೆಯನ್ನು ಖಂಡಿಸಿ ಆಗಸ್ಟ್ 26ರಂದು ಕೊಡಗಿನನಲ್ಲಿ ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. 

ಚಿಕ್ಕಮಗಳೂರಿನ ಕೊಪ್ಪ ತಾಲ್ಲೂಕಿನ ಮಕ್ಕಿಕೊಪ್ಪ ಗ್ರಾಮದ ವೃತ್ತದಲ್ಲಿ ಇಂದು ಕೂಡ ಬಿಗು ಭದ್ರತೆಯ ನಡುವೆ ಸಿದ್ದರಾಮಯ್ಯ ಅವರ ವಾಹನಕ್ಕೆ ಬಿಜೆಪಿಯ ಕೆಲವರು ಕಪ್ಪು ಬಟ್ಟೆ ಪ್ರದರ್ಶಿಸಿ, ಘೋಷಣೆ ಕೂಗಿದ ಘಟನೆ ವರದಿಯಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು