ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಮತದಾರರ ಕರಡು ಪಟ್ಟಿ ಪ್ರಕಟ: ಮನೋಜ್ ಕುಮಾರ್ ಮೀನಾ

Last Updated 9 ನವೆಂಬರ್ 2022, 20:10 IST
ಅಕ್ಷರ ಗಾತ್ರ

ಬೆಂಗಳೂರು: ‘ಮತದಾರರ ಕರಡು ಪಟ್ಟಿಯನ್ನು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಕಟಿಸಲಾಗಿದೆ. ಜಿಲ್ಲಾಧಿಕಾರಿಗಳು, ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿ ಹಾಗೂ ಆ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳಲ್ಲಿ ಈ ಪಟ್ಟಿ ಲಭ್ಯವಿದೆ’ ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದರು.

‘ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ- 2023’ರ ಮತದಾರರ ಕರಡು ಪಟ್ಟಿಗೆ ಸಂಬಂಧಿಸಿದಂತೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಡಿ. 8ರವರೆಗೆ ಅವಕಾಶವಿದೆ. ಈ ಪಟ್ಟಿ ಕುರಿತು ನ. 12 ಮತ್ತು 20, ಡಿ.‌ 3 ಮತ್ತು 4‌ರಂದುವಿಶೇಷ ಪ್ರಚಾರ ಹಮ್ಮಿಕೊಳ್ಳಲಾಗುವುದು. ಜ. 5ರಂದು ಅಂತಿಮ ಪಟ್ಟಿ ಪ್ರಕಟಿಸಲಾಗುವುದು’ ಎಂದರು.

‘ಜ. 1ರೊಳಗೆ 18 ವರ್ಷ ತುಂಬಿದವರು ಮಾತ್ರ ವಾರ್ಷಿಕ ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ನೋಂದಾಯಿಸಿಕೊಳ್ಳಲು ಈ ಮೊದಲು ಅವಕಾಶ ನೀಡಲಾ‌ಗಿತ್ತು. ಈಗ 17 ವರ್ಷ ದಾಟಿದವರು ಮತದಾರರಾಗಲು ಒಂದು ವರ್ಷ ಮೊದಲೇ ನಮೂನೆ 6‌ರ ಮೂಲಕ ಮುಂಗಡವಾಗಿ ಅರ್ಜಿ ಸಲ್ಲಿಸಬಹುದು’ ಎಂದರು.

ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6, ಅನಿವಾಸಿ ಭಾರತೀಯರು ಹೆಸರು ಸೇರಿಸಲು ನಮೂನೆ-6ಎ, ಪಟ್ಟಿಯಲ್ಲಿ ಹೆಸರಿರುವ ಮತದಾರರು ಸ್ವಯಂಪ್ರೇರಿತರಾಗಿ ಆಧಾರ್ ಅಥವಾ ನಮೂನೆ–6ಬಿಯಲ್ಲಿ ನಮೂದಿಸಿದ ಇತರ 11 ದಾಖಲೆಗಳಲ್ಲಿ ಒಂದನ್ನು ಜೋಡಿಸಿ ದೃಢೀಕರಿಸಲು ನಮೂನೆ-6ಬಿ, ಆಕ್ಷೇಪಣೆ, ಹೆಸರು ತೆಗೆದು ಹಾಕಲು ನಮೂನೆ–7, ವಿಧಾನಸಭಾ ಕ್ಷೇತ್ರದ ಒಳಗೆ-ಹೊರಗೆ ನಿವಾಸ, ಮೊಬೈಲ್ ಸಂಖ್ಯೆ ಬದಲಿಸಲು, ತಿದ್ದುಪಡಿ, ಅಸ್ಪಷ್ಟ ಭಾವಚಿತ್ರ ಬದಲಾಯಿಸಲು, ಎಪಿಕ್ ಬದಲಾವಣೆ, ಪಟ್ಟಿಯಲ್ಲಿ ವ್ಯಕ್ತಿಯ ಗುರುತು ನಮೂದಿಸಲು ನಮೂನೆ- 8ನ್ನು www.nvsp.in ಅಥವಾ Voter Portal ಅಥವಾ ಮೊಬೈಲ್‌ ಆ್ಯಪ್‌ Voter Helpline ಮೂಲಕ ಸಲ್ಲಿಸಬಹುದು’ ಎಂದು ಅವರು ವಿವರಿಸಿದರು‌.

‘18‌ರಿಂದ 19 ವಯಸ್ಸಿನ ಎಲ್ಲರ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಣಿಗೆ ಪ್ರಚಾರ ಕೈಗೊಳ್ಳಲಾಗಿದೆ. ಜೊತೆಗೆ, ಪಟ್ಟಿಯಲ್ಲಿ ಹೆಸರಿದ್ದು, ಮೃತಪಟ್ಟಿದ್ದರೆ, ವಲಸೆ ಹೋಗಿದ್ದರೆ, ಎರಡು ಕಡೆ ಹೆಸರುಗಳಿದ್ದರೆ, ಅಂಥ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುವುದು. ಮತದಾರರ ವಿವರ ತಪ್ಪಾಗಿದ್ದಾರೆ ನಮೂನೆ 8 ಸಲ್ಲಿಸಿ ತಿದ್ದುಪಡಿ ಮಾಡಿಕೊಳ್ಳಬಹುದು. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳು ಪ್ರತಿ ವಿಧಾನಸಭಾ ಕ್ಷೇತ್ರದ ಪ್ರತಿ ಮತಗಟ್ಟೆಗೆ ಒಬ್ಬರಂತೆ ಬೂತ್ ಲೆವೆಲ್ ಏಜೆಂಟ್ (ಬಿಎಲ್‌ಒ) ನೇಮಿಸಿ, ಅರ್ಹ ಮತದಾರರ ನೋಂದಣಿಗೆ ಸಹಕರಿಸಬೇಕು’ ಎಂದು ಅವರು ಮನವಿ ಮಾಡಿದರು.

‘ಅರ್ಹ ಮತದಾರರು ತಮ್ಮ ಮೊಬೈಲ್‍ಗಳಲ್ಲಿ Voter Helpline ಆ್ಯಪ್ ಡೌನ್‍ಲೋಡ್ ಮಾಡಿ ಸಂಬಂಧಪಟ್ಟ ಅರ್ಜಿಗಳನ್ನು www.nvsp.in ಪೋರ್ಟಲ್ ಮೂಲಕವೂ ಸಲ್ಲಿಸಬಹುದು. ಮತದಾರರ ಪಟ್ಟಿ, ಗುರುತಿನ ಚೀಟಿ, ಅರ್ಜಿ ಸಲ್ಲಿಸುವ ವಿಧಾನಗಳ ಕುರಿತು ಮಾಹಿತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳು, ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಮತ್ತು ಮತಗಟ್ಟೆ ಅಧಿಕಾರಿಗಳಿಂದಲೂ ಪಡೆಯಬಹುದು’ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT