ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿಯ ಮಾಹಿತಿ ಕಳವು: ‘ಚಿಲುಮೆ’ ಬೆನ್ನುಬಿದ್ದ ಖಾಕಿ

ಇಬ್ಬರ ಬಂಧನ l ಹಲವೆಡೆ ಪೊಲೀಸರ ಶೋಧ l ತನಿಖೆ ಚುರುಕು
Last Updated 18 ನವೆಂಬರ್ 2022, 21:20 IST
ಅಕ್ಷರ ಗಾತ್ರ

ಬೆಂಗಳೂರು: ಮತದಾರರ ಪಟ್ಟಿಯ ಮಾಹಿತಿ ಕಳವು ಮಾಡುತ್ತಿದ್ದ ಆರೋಪಕ್ಕೆ ಗುರಿಯಾಗಿರುವ ‘ಚಿಲುಮೆ’ ಸಂಸ್ಥೆಯ ಇಬ್ಬರನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಮಧ್ಯೆಯೇ,ಪ್ರಕರಣದ ಸಮಗ್ರ ತನಿಖೆ ನಡೆಸಲು ಚುನಾವಣಾ ಆಯೋಗ ಮುಂದಡಿ ಇಟ್ಟಿದೆ.

‘ಆಡಳಿತಾರೂಢ ಬಿಜೆಪಿ ಸರ್ಕಾರವೇ ಮತದಾರರ ಪಟ್ಟಿಗೆ ಕನ್ನ ಹಾಕಲು ಕುಮ್ಮಕ್ಕು ನೀಡಿದೆ’ ಎಂದು ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮತ್ತೆ ವಾಗ್ದಾಳಿ ನಡೆಸಿವೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಹೆಸರಿನಲ್ಲಿ ಕಲೆಹಾಕಲಾಗಿದ್ದ ಮಾಹಿತಿಯನ್ನು ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದ್ದಾಗ ಸೋರಿಕೆ ಮಾಡಿದ್ದಲ್ಲದೇ, ಚುನಾವಣೆಯಲ್ಲಿ ದುರುಪಯೋಗ ಮಾಡಿಕೊಂಡಿದೆ ಎಂದು ಬಿಜೆಪಿ ದೂರಿದೆ.

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದಿಲ್ಲ. ಶಿವಾಜಿನಗರ, ಹೆಬ್ಬಾಳ ಸೇರಿದಂತೆ ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರಗಳಲ್ಲಿ ದುರುದ್ದೇಶಪೂರ್ವಕವಾಗಿ ಹೆಸರುಗಳನ್ನು ಕೈಬಿಡಲಾಗಿದೆ ಎಂದು ವಿರೋಧ ಪಕ್ಷದ ಶಾಸಕರು ಆರೋಪಿಸಿದ್ದಾರೆ. ಇದೇ 9ರಂದು ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದ ಮತದಾರರ ಕರಡು ಪಟ್ಟಿಯಲ್ಲಿ 6.69‍ಲಕ್ಷ ಮತದಾರರನ್ನು ಕೈಬಿಟ್ಟು, 3.07 ಲಕ್ಷ ಮತದಾರರನ್ನು ಸೇರ್ಪಡೆ ಮಾಡಲಾಗಿತ್ತು. ಈ ಅಂಕಿ ಸಂಖ್ಯೆಯೂ ಮತ್ತೆ ಚರ್ಚೆಯಮುನ್ನೆಲೆಗೆ ಬಂದಿದೆ.

ತನಿಖೆ ಚುರುಕು: ಬೂತ್‌ಮಟ್ಟದ ಅಧಿಕಾರಿಗಳ (ಬಿಎಲ್‌ಒ) ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡು ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ‘ಚಿಲುಮೆ’ ಸಂಸ್ಥೆಯ ನಾಲ್ವರನ್ನು ಶುಕ್ರವಾರ ಬೆಳಿಗ್ಗೆ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ಬಳಿಕ ಮತಗಟ್ಟೆ ಅಧಿಕಾರಿಗಳು ಎಂದು ಹೇಳಿಕೊಂಡಿದ್ದ ರೇಣುಕಾಪ್ರಸಾದ್ ಹಾಗೂ ಧರ್ಮೇಶ್ ಅವರನ್ನು ಬಂಧಿಸಲಾಗಿದೆ.

ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ ಗೌಡ ನೇತೃತ್ವದ ತಂಡ ಶುಕ್ರವಾರ ಬೆಳಿಗ್ಗೆಯಿಂದ ನಾಲ್ಕು ಕಡೆಗಳಲ್ಲಿ ಶೋಧ ಆರಂಭಿಸಿತು. ‘ಚಿಲುಮೆ’ಯ ಹಣಕಾಸು ವಿಭಾಗದ ಮುಖ್ಯಸ್ಥ ಸುಧಾಕರ್, ‘ಕೇಸ್ ವರ್ಕರ್’ ರಕ್ಷಿತ್, ಮತಗಟ್ಟೆ ಅಧಿಕಾರಿಗಳು ಎಂದು ಹೇಳಿಕೊಂಡಿದ್ದ ರೇಣುಕಾ ಪ್ರಸಾದ್ ಹಾಗೂ ಧರ್ಮೇಶ್ ಎಂಬುವವರನ್ನು ವಶಕ್ಕೆ ಪಡೆಯಲಾಗಿತ್ತು. ಸಂಸ್ಥೆಯ ಮುಖ್ಯಸ್ಥ ಕೃಷ್ಣಪ್ಪ ರವಿಕುಮಾರ್, ನಿರ್ದೇಶಕ ಕೆ.ಎಂ. ಲೋಕೇಶ್‌ ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.

ಮಲ್ಲೇಶ್ವರದ 17ನೇ ಅಡ್ಡರಸ್ತೆಯ ಕಚೇರಿಯಲ್ಲಿದ್ದ ಕಂಪ್ಯೂಟರ್‌ ಸೇರಿದಂತೆ ಹಲವು ದಾಖಲೆ ವಶಕ್ಕೆ ಪಡೆಯಲಾಗಿದೆ. ಎಫ್‌ಐಆರ್‌ ದಾಖಲಾದ ಮೇಲೆ ಕಂಪ್ಯೂಟರ್‌ನಲ್ಲಿ ಸಂಗ್ರಹಿಸಿದ್ದ ಎಲ್ಲ ಮಾಹಿತಿ ಅಳಿಸಿ ಹಾಕಲಾಗಿದ್ದು, ಜಪ್ತಿ ಮಾಡಿರುವ ಪರಿಕರಗಳನ್ನು ಸೈಬರ್‌ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

‘ಕೃಷ್ಣಪ್ಪ ರವಿಕುಮಾರ್‌ ಈ ಪ್ರಕರಣದ ಸೂತ್ರಧಾರಿಯಾಗಿದ್ದು, ರೇಣುಕಾ ಪ್ರಸಾದ್, ಧರ್ಮೇಶ್‌ ಆತನ ಸಂಪರ್ಕದಲ್ಲಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮಹದೇವಪುರ, ಮಲ್ಲೇಶ್ವರ, ಚಿಕ್ಕಪೇಟೆ ಹಾಗೂ ಬಸವನಗುಡಿಯಲ್ಲಿ ಚಿಲುಮೆಗೆ ಸೇರಿದ ಕಚೇರಿಗಳಿದ್ದು, ಎಫ್‌ಐಆರ್‌ ದಾಖಲಾದ ಕೂಡಲೇ ನಾಲ್ಕೂ ಕಚೇರಿಗಳಿಗೂ ಸಂಸ್ಥೆಯವರೇ ಬೀಗ ಹಾಕಿದ್ದರು. ಮಲ್ಲೇಶ್ವರದಲ್ಲಿನ ಕಚೇರಿಯ ಬೀಗವನ್ನು ಶುಕ್ರವಾರ ಒಡೆದ ಪೊಲೀಸರು, ಶೋಧ ನಡೆಸಿದರು.

ಮತ್ತೊಂದೆಡೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬೂತ್‌ಮಟ್ಟದ ಅಧಿಕಾರಿಗಳು ಹಾಗೂ ಚುನಾವಣೆ ಶಾಖೆಯ ಸಿಬ್ಬಂದಿಯನ್ನು ಪ್ರತ್ಯೇಕ ಪೊಲೀಸ್ ತಂಡಗಳು ವಿಚಾರಣೆ ನಡೆಸಿವೆ.

‘ತನಿಖೆಯ ಬಳಿಕ ಸತ್ಯಾಂಶ ಹೊರಬರಲಿದೆ. ಸಂಸ್ಥೆಯ ನಿರ್ದೇಶಕರು ಕಚೇರಿ ಖಾಲಿ ಮಾಡಿದ್ದಾರೆ. ತನಿಖಾಧಿಕಾರಿಗಳು ಚಿಲುಮೆ ಕಚೇರಿಗೆ ಭೇಟಿ ನೀಡಿದ್ದಾರೆ. ಕಚೇರಿ ಕಾವಲಿಗೆ ಪೊಲೀಸ್ ಸಿಬ್ಬಂದಿ ಸಹ ನಿಯೋಜಿಸಲಾಗಿದೆ’ ಎಂದು ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.

‘ಪರಿಷ್ಕರಣೆ: ರಾಕಿಭಾಯ್ ಸೇಡಿನ ಕತೆಯಲ್ಲ’
‘ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ‘ಕೆಜಿಎಫ್’ ಚಿತ್ರದ ರಾಕಿಭಾಯ್‌ನ ಸೇಡಿನ ಕತೆಯೂ ಅಲ್ಲ, ‘ಕಾಂತಾರ’ ಚಿತ್ರದ ಗುಳಿಗ-ಪಂಜುರ್ಲಿಯ ದಂತಕತೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ, ಅದನ್ನೇ ಮಾಡಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುಟುಕಿದ್ದಾರೆ.

ಈ ಕುರಿತು ಶುಕ್ರವಾರ ಟ್ವೀಟ್‌ ಮಾಡಿರುವ ಅವರು, ‘ಮತದಾರರ ಪಟ್ಟಿ ಪರಿಷ್ಕರಣೆ ಹಗರಣದ ರೂವಾರಿಗಳನ್ನು ರಕ್ಷಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯತ್ನಿಸುತ್ತಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಹಗರಣವನ್ನು ಮುಖ್ಯಮಂತ್ರಿಯವರು ಜಾತಿ ಗಣತಿಗೆ ಹೋಲಿಸಿದ್ದಾರೆ. ಒಂದು ಸಂಸ್ಥೆಯ ಹಿನ್ನೆಲೆಯನ್ನೂ ಪರಿಶೀಲಿಸದೆ ಮತದಾರರ ಪಟ್ಟಿ ಪರಿಷ್ಕರಣೆಗೆ ನೀಡಿರುವ ಅನುಮತಿಗೂ, ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ನಡೆಸಿರುವ ಜಾತಿ ಗಣತಿಗೂ ಏನು ಸ್ವಾಮಿ ಸಂಬಂಧ’ ಎಂದು ಪ್ರಶ್ನಿಸಿದ್ದಾರೆ.

‘ಉಚಿತವಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಿರುವ ಚಿಲುಮೆ ಸಂಸ್ಥೆಯ ಹಿನ್ನೆಲೆ, ಮಾಲೀಕರು, ಹಣಕಾಸು ಸಾಮರ್ಥ್ಯ ಮತ್ತು ಮೂಲದ ಕುರಿತು ತನಿಖೆಯಾಗಲಿ. ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿಯನ್ನು ದೂರು ಬಂದ ಬಳಿಕ ಬಿಬಿಎಂಪಿ ರದ್ದುಪಡಿಸಿರುವುದನ್ನು ಸ್ವಾಗತಿಸುತ್ತೇನೆ. ಅನುಮತಿ ರದ್ದತಿ ಮಾಡಿರುವ ಅಪರಾಧಕ್ಕೆ ಶಿಕ್ಷೆ ಅಲ್ಲ, ಗುತ್ತಿಗೆಯನ್ನು ರದ್ದುಗೊಳಿಸುವ ಮೂಲಕ ಆಗಿರುವ ಅಪರಾಧವನ್ನು ಇಲಾಖೆ ಒಪ್ಪಿಕೊಂಡಂತಾಗಿಲ್ಲವೆ’ ಎಂದು ಕೇಳಿದ್ದಾರೆ.

‘ಜಾತಿ ಗಣತಿ ದುರ್ಬಳಕೆ ಮಾಡಿದ್ದ ಕಾಂಗ್ರೆಸ್‌’
‘ಹಿಂದುಳಿದ ವರ್ಗಗಳ ಆಯೋಗದ ಮೂಲಕ₹ 130 ಕೋಟಿ ವೆಚ್ಚದಲ್ಲಿ ನಡೆಸಿದ್ದ ಜಾತಿ ಗಣತಿ ವರದಿಯನ್ನು ಕಾಂಗ್ರೆಸ್‌ ಪಕ್ಷ ದುರ್ಬಳಕೆ ಮಾಡಿಕೊಂಡಿತ್ತು’ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಆರೋಪಿಸಿದರು.

‘ಜಾತಿ ಗಣತಿ ವರದಿಯನ್ನು ಸರ್ಕಾರ ಸ್ವೀಕರಿಸಿರಲಿಲ್ಲ. ಆದರೆ, ಕಾಂಗ್ರೆಸ್‌ ನಾಯಕರು ಈ ವರದಿಯನ್ನು ತಮ್ಮ
ಪಕ್ಷದ ಅಭ್ಯರ್ಥಿಗಳೊಂದಿಗೆ ಹಂಚಿಕೊಂಡಿದ್ದರು. ನನ್ನ ಬಳಿ ಈ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಜಾತಿ ಗಣತಿ ವರದಿಯನ್ನು ದುರ್ಬಳಕೆ ಮಾಡಿಕೊಂಡ ಹೊಣೆಯನ್ನು ಕಾಂಗ್ರೆಸ್‌ ನಾಯಕರು ಹೊರುತ್ತಾರೆಯೆ’ ಎಂದು ಪ್ರಶ್ನಿಸಿದರು.

ಪ್ರಾದೇಶಿಕ ಆಯುಕ್ತರಿಂದ ತನಿಖೆಗೆ ಆದೇಶ
‘ಮತದಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಅಕ್ರಮ ನಡೆದಿದೆ ಎಂಬ ದೂರುಗಳ ಕುರಿತು ಬೆಂಗಳೂರು ಪ್ರಾದೇಶಿಕ ಆಯುಕ್ತರಿಂದ ಸಮಗ್ರ ತನಿಖೆಗೆ ಆದೇಶಿಸಲಾಗಿದೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ ಮೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮತದಾರರ ಜಾಗೃತಿ ಕಾರ್ಯಕ್ರಮ ಮತ್ತು ಪಟ್ಟಿ ಪರಿಷ್ಕರಣೆ ಕುರಿತು ಜಿಲ್ಲಾ ಚುನಾವಣಾಧಿಕಾರಿ ಹಂತದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ದೂರಿನಲ್ಲಿರುವ ಆರೋಪಗಳ ಕುರಿತು ಸಮಗ್ರವಾಗಿ ತನಿಖೆ ನಡೆಸಿ, ಆದಷ್ಟು ಬೇಗ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರಿಗೆ ಸೂಚಿಸಲಾಗಿದೆ. ಯಾರೇ ತಪ್ಪು ಮಾಡಿರುವುದು ಕಂಡುಬಂದರೂ ಕಠಿಣ ಕ್ರಮ ಜರುಗಿಸಲಾಗುವುದು’ ಎಂದರು.

ಆಯೋಗವೇ ಶಾಮೀಲಾಗಿರುವ ಅನುಮಾನ: ಡಿಕೆಶಿ
ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ಮಾಹಿತಿ ನೀಡಿದ ಬಳಿಕವೇ ಚಿಲುಮೆ ಸಂಸ್ಥೆಗೆ ಮತದಾರರ ಜಾಗೃತಿ ಅಭಿಯಾನ ನಡೆಸಲು ಆದೇಶ ನೀಡಲಾಗಿತ್ತು. ಅಕ್ರಮ ನಡೆಸಿದ ಸಂಸ್ಥೆಯ ವಿರುದ್ಧ ಚುನಾವಣಾ ಆಯೋಗ ಏಕೆ ಕ್ರಮ ಕೈಗೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮತದಾರರ ಮಾಹಿತಿ ಕಳವು ಪ್ರಕರಣದ ಸೂತ್ರಧಾರರಾಗಿರುವ ಸಂಸ್ಥೆಯ ನಿರ್ದೇಶಕ ರವಿಕುಮಾರ್‌ ವಿರುದ್ಧ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಮತಗಟ್ಟೆ ಹಂತದಲ್ಲಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಅಕ್ರಮದಲ್ಲಿ ಭಾಗಿಯಾದ ಎಲ್ಲರನ್ನೂ 24 ಗಂಟೆಯೊಳಗೆ ಬಂಧಿಸಬೇಕು. ಇಲ್ಲವಾದಲ್ಲಿ ಚುನಾವಣಾ ಆಯೋಗವೇ ಅಕ್ರಮದಲ್ಲಿ ಭಾಗಿಯಾದ ಅನುಮಾನ ಬರುತ್ತದೆ’ ಎಂದರು.

ಮತದಾರರ ಜಾಗೃತಿ ಹೆಸರಿನಲ್ಲಿ ಮಾಹಿತಿ ಕಳವು ಮಾಡಿರುವುದರ ಜತೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಮಂದಿಯ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವ ದೂರುಗಳು ಕೇಳಿಬರುತ್ತಿವೆ. ಈ ತಂಡದಲ್ಲಿದ್ದ ಕೆಲವರು ರಾಜಕಾರಣಿಗಳನ್ನು ಸಂಪರ್ಕಿಸಿ ಚುನಾವಣೆಯಲ್ಲಿ ಗೆಲ್ಲಿಸುವ ಆಮಿಷವೊಡ್ಡಿ, ಕೋಟ್ಯಂತರ ರೂಪಾಯಿಗೆ ಬೇಡಿಕೆ ಇಟ್ಟಿರುವ ಮಾಹಿತಿ ಇದೆ. ಈ ಎಲ್ಲ ಆರೋಪಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

*

ಬಿಜೆಪಿಯು ಖಾಸಗಿ ಕಂಪನಿಯ ಮೂಲಕ ಮತದಾರರ ದತ್ತಾಂಶ ಸಂಗ್ರಹಿಸುತ್ತಿದೆ. ಸರ್ಕಾರಿ ನೌಕರರ ಹೆಸರಿನಲ್ಲೇ ಮನೆಗಳಿಗೆ ಭೇಟಿ ಕೊಟ್ಟಿರುವ ಮಾಹಿತಿ‌ ಇದೆ. ಈ ನಡವಳಿಕೆಯೂ ಸಂಶಯ ಮೂಡಿಸುತ್ತದೆ.
–ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT