ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಜನರಿಗೆ ವಿದ್ಯುತ್‌ ದರ ಏರಿಕೆ ಬರೆ

ಪ್ರತಿ ಯೂನಿಟ್‌ಗೆ 20 ಪೈಸೆಯಿಂದ 50ಪೈಸೆವರೆಗೆ ಹೆಚ್ಚಳ: ಸರಾಸರಿ 40 ಪೈಸೆ ಏರಿಕೆ
Last Updated 4 ನವೆಂಬರ್ 2020, 20:11 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ರಾಜ್ಯದ ಎಲ್ಲಾ ವಿದ್ಯುತ್‌ ಕಂಪನಿಗಳ ವಿದ್ಯುತ್‌ ದರವನ್ನು ಸರಾಸರಿ ಶೇ 5.4 ರಂತೆ, ಪ್ರತಿ ಯೂನಿಟ್‌ಗೆ 40 ಪೈಸೆ ಹೆಚ್ಚಳ ಮಾಡಿದ್ದು, ಪರಿಷ್ಕೃತ ದರ ನ.1 ರಿಂದಲೇ ಅನ್ವಯವಾಗಲಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಆರ್‌ಇಸಿ) ಎಲ್ಲ ಎಸ್ಕಾಂಗಳು, ಮಂಗಳೂರು ವಿಶೇಷ ಆರ್ಥಿಕ ವಲಯ, ಮಂಗಳೂರು ಮತ್ತು ಬೆಳಗಾವಿ ಜಿಲ್ಲೆಯ ವಿಶೇಷ ಆರ್ಥಿಕ ವಲಯಗಳ ಗ್ರಾಹಕರಿಗೂ ಅನ್ವಯವಾಗುವಂತೆ ವಿದ್ಯುತ್‌ ದರ ಪರಿಷ್ಕರಿಸಿದೆ.

ಕೋವಿಡ್‌–19 ಸಂಕಷ್ಟದ ಕಾರಣ, ಈ ವರ್ಷ ಆಯೋಗವು ಪರಿಷ್ಕೃತ ದರಗಳನ್ನು ಏಪ್ರಿಲ್‌ ತಿಂಗಳ ಬದಲಿಗೆ
ನ. 1 ಅಥವಾ ಅದರ ನಂತರದ ಮೊದಲ ಮೀಟರ್‌ ಓದುವ ದಿನಾಂಕದಿಂದ ಬಳಕೆ ಮಾಡಿದ ವಿದ್ಯುಚ್ಛಕ್ತಿಗೆ ಅನ್ವಯ
ವಾಗುವಂತೆ ಆರ್ಥಿಕ ವರ್ಷ 2021 ರಲ್ಲಿ ಐದು ತಿಂಗಳ ಅವಧಿಗೆ ಮಾತ್ರ ಪರಿಷ್ಕೃತ ದರವನ್ನು ವಸೂಲಿ ಮಾಡಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ತಿಳಿಸಿದೆ.

ವಿದ್ಯುತ್‌ ಬೇಡಿಕೆ ಹೆಚ್ಚಿರುವುದು ಮತ್ತು ವಿದ್ಯುತ್‌ ದರ ಹೆಚ್ಚಳವಾಗಿರುವ ಕಾರಣ ಎಸ್ಕಾಂಗಳು ಪ್ರತಿ ಯೂನಿಟ್‌ಗೆ ಸರಾಸರಿ ₹1.26 ರಂತೆ ಏರಿಕೆ ಮಾಡಲು ಬೇಡಿಕೆ ಸಲ್ಲಿಸಿದ್ದವು. ಆದರೆ, ಕೆಆರ್‌ಇಸಿ ಸರಾಸರಿ 40 ಪೈಸೆ ಹೆಚ್ಚಳಕ್ಕೆ ಮಾತ್ರ ಅನುಮೋದನೆ ನೀಡಿದೆ. ಇತರ ಎಸ್ಕಾಂಗಳಲ್ಲಿ ದರ ಪರಿಷ್ಕರಣೆಯಲ್ಲಿ ಏಕರೂಪತೆ ಇದ್ದರೂ ವಿದ್ಯುತ್‌ ಬಳಕೆ ಹೆಚ್ಚಾಗಿರುವ ಬೆಸ್ಕಾಂ ವ್ಯಾಪ್ತಿಯಲ್ಲಿ ಕೊಂಚ ವ್ಯತ್ಯಾಸದ ಹೆಚ್ಚಳ ಮಾಡಿರುವುದು ಗಮನಾರ್ಹ.

ಸ್ಲಾಬ್‌ಗಳ ಪರಿಷ್ಕರಣೆಯಲ್ಲಿ ಎಲ್ಲ ವರ್ಗದ ಗ್ರಾಹಕರು ಅಂದರೆ, ಗೃಹ, ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಪ್ರತಿ ಯೂನಿಟ್‌ಗೆ 20 ಪೈಸೆಯಿಂದ 25 ಪೈಸೆಯವರೆಗೆ ಹೆಚ್ಚಿಸಲು ಆಯೋಗ ಒಪ್ಪಿಗೆ ನೀಡಿದೆ. ಆದರೆ, ಇದು ಬೆಂಗಳೂರು ಮೆಟ್ರೊ ಮತ್ತು ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ ಚಾರ್ಜಿಂಗ್‌ ಕೇಂದ್ರಗಳಿಗೆ ಅನ್ವಯವಾಗು ವುದಿಲ್ಲ. ತಾತ್ಕಾಲಿಕ ವಿದ್ಯುತ್ ಅಳವಡಿಕೆಯ ಬಳಕೆದಾರರಿಗೆ ಹೆಚ್ಚಿನ ಏರಿಕೆ ಮಾಡಲಾಗಿದ್ದು, ಪ್ರತಿ ಯೂನಿಟ್‌ಗೆ 50 ಪೈಸೆ ನಿಗದಿ ಮಾಡಲಾಗಿದೆ.

ಬೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಬಳಕೆದಾರರು ಈವರೆಗೆ 30 ಯೂನಿಟ್‌ಗಳಿಗೆ ₹ 3.75 ಪಾವತಿಸುತ್ತಿದ್ದು, ಇನ್ನು ಮುಂದೆ ಪ್ರತಿ ಯೂನಿಟ್‌ಗೆ ₹ 4 ಪಾವತಿಸಬೇಕಾಗುತ್ತದೆ. ಅದೇ ರೀತಿ ಈ ಹಿಂದೆ ತಿಂಗಳಿಗೆ 100 ಯೂನಿಟ್‌ಗಳಷ್ಟು ವಿದ್ಯುತ್‌ ಬಳಸುತ್ತಿದ್ದವರು ಪ್ರತಿ ಯೂನಿಟ್‌ಗೆ ₹5.20 ಪಾವತಿಸಬೇಕಾಗುತ್ತಿತ್ತು. ಇನ್ನು ಮುಂದೆ ಪ್ರತಿ ಯುನಿಟ್‌ಗೆ ₹ 5.45 ಪಾತಿಸಬೇಕು.

ಇತರ ಎಸ್ಕಾಂಗಳಲ್ಲಿ ಗ್ರಾಹಕರು 30 ಯೂನಿಟ್‌ಗಳವರೆಗೆ ಪ್ರತಿ ಯುನಿಟ್‌ಗೆ ₹3.70 ಪಾವತಿಸುತ್ತಿದ್ದವರು, ಇನ್ನು ಮುಂದೆ ₹3.95 ಪಾವತಿಸಬೇಕು.

ಗ್ರಾಹಕರ ಮೇಲಾಗುವ ಹೊರೆ ಎಷ್ಟು?: ಯಾವುದೇ ಒಂದು ಮನೆಯಲ್ಲಿ ತಿಂಗಳಿಗೆ 100 ಯೂನಿಟ್‌ ಬಳಸುತ್ತಿದ್ದರೆ ಈ ಹಿಂದೆ ಅವರಿಗೆ ₹700 ರಿಂದ ₹800 ಬಿಲ್‌ ಬರುತ್ತಿತ್ತು. ಇನ್ನು ಮುಂದೆ ಅದು ₹900 ರಿಂದ ₹1,100 ಆಗಬಹುದು. ಇದು ಆಯಾ ಗ್ರಾಹಕರ ಮೇಲೆ ವಿಧಿಸಲಾಗುವ ನಿಶ್ಚಿತ ದರಕ್ಕೆ ಅನುಗುಣವಾಗಿ ಬಿಲ್‌ ಪ್ರಮಾಣವೂ ವ್ಯತ್ಯಾಸವಾಗುತ್ತದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ.

ಉದ್ಯಮಗಳಿಗೆ ಎಷ್ಟು ಹೆಚ್ಚಳ: ಎಲ್ಲ ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ (ಎಲ್‌ಟಿ.ಎಚ್‌ಟಿ ಟ್ರಾನ್ಸ್‌ಮಿಷನ್‌) ಪ್ರತಿ ಯೂನಿಟ್‌ ಮೇಲೆ 25 ಪೈಸೆ ಹೆಚ್ಚಿಸಲು ಒಪ್ಪಿಗೆ ನೀಡಿದೆ. ಇದು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನ್ವಯವಾಗುತ್ತದೆ. ನೀರು ಸರಬ ರಾಜು ಶುಲ್ಕದ ಮೇಲೂ 25 ಪೈಸೆ ಹೆಚ್ಚಿಸಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ನೀರು ಬಳಕೆಯ ಶುಲ್ಕವೂ ಹೆಚ್ಚಲಿದೆ. ಬೀದಿ ದೀಪಗಳಿಗೆ ಎಲ್‌ಇಡಿ ಬಳಸುವ ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳಿಗೆ ರಿಯಾಯ್ತಿ ನೀಡಲಾಗಿದೆ.

ಪ್ರತಿವರ್ಷ ಏಪ್ರಿಲ್‌ ಮೊದಲ ದಿನ ದಿಂದಲೇ ಪರಿಷ್ಕೃತ ವಿದ್ಯುತ್‌ ದರವನ್ನು ಜಾರಿ ತರಲಾಗುತ್ತಿತ್ತು. ಕೋವಿಡ್‌ ಮತ್ತು ಆರ್ಥಿಕ ಸಂಕಷ್ಟದ ಕಾರಣ ಪರಿಷ್ಕರಣ ಆದೇಶ ಹೊರಡಿಸಲು ಸಾಧ್ಯವಾಗಲಿಲ್ಲ. ಶಿರಾ ಮತ್ತು ಆರ್‌.ಆರ್‌.ನಗರ ಉಪಚುನಾವಣೆ ಘೋಷಣೆಯಿಂದ ನೀತಿ ಸಂಹಿತೆ ಜಾರಿಗೆ ಬಂದಿತ್ತು. ಆದ್ದರಿಂದ ಪರಿಷ್ಕರಣೆ ಘೋಷಿಸಲು ಸಾಧ್ಯವಾಗಲಿಲ್ಲ ಎಂದು ಕೆಇಆರ್‌ಸಿ ತಿಳಿಸಿದೆ.

10 ಎಚ್‌ಪಿ ಪಂಪ್‌ಸೆಟ್‌ಗಳಿಗೆ ಉಚಿತ

ಕೃಷಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು 10 ಎಚ್‌ಪಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್‌ ನೀಡುವುದನ್ನು ಮುಂದುವರಿಸಲಾಗಿದೆ. 10 ಎಚ್‌ಪಿ ಮೇಲ್ಪಟ್ಟ ಪಂಪ್‌ಸೆಟ್‌, ಸ್ಪ್ರಿಂಕ್ಲರ್‌ ಇತ್ಯಾದಿಗಳ ದರ ಪರಿಷ್ಕರಿಸಲಾಗಿದೆ. ಇದಕ್ಕೆ ನಿಶ್ಚಿತ ಶುಲ್ಕ ₹ 80 ತಿಂಗಳಿಗೆ, ವಿದ್ಯುತ್‌ ಶುಲ್ಕ 375 ಪೈಸೆ ನಿಗದಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT