ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪರಿಶಿಷ್ಟರ ಮೀಸಲು ಹೆಚ್ಚಳ: ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ

Published : 10 ಫೆಬ್ರುವರಿ 2023, 3:55 IST
ಫಾಲೋ ಮಾಡಿ
Comments

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲು ಪ್ರಮಾಣವನ್ನು ಹೆಚ್ಚಿಸಿ ಈಗಾಗಲೇ ತೆಗೆದುಕೊಂಡಿರುವ ನಿರ್ಣಯವನ್ನು ಸಂವಿಧಾನದ 9 ನೇ ಪರಿಚ್ಛೇದಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿದೆ.

ಸರ್ಕಾರದ ಕ್ರಮದಿಂದ ಉದ್ಯೋಗ ಮತ್ತು ಶಿಕ್ಷಣದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಪರಿಶಿಷ್ಟ ಜಾತಿಗೆ ಶೇ 15 ರಿಂದ ಶೇ 17, ಪರಿಶಿಷ್ಟ ಪಂಗಡಕ್ಕೆ ಶೇ 3 ರಿಂದ ಶೇ 7 ರಷ್ಟು ಹೆಚ್ಚಳವಾಗಲಿದೆ.

ಈ ಕ್ರಮಕ್ಕೆ ಸಾಂವಿಧಾನಿಕ ರಕ್ಷಣೆ ಪಡೆಯಲು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸುವುದು ಅಗತ್ಯವಾಗಿದೆ. ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಕೇಂದ್ರಕ್ಕೆ ಶಿಫಾರಸು ಕಳಿಸಲು ವಿರೋಧ ಪಕ್ಷಗಳು ಸರ್ಕಾರವನ್ನು ಒತ್ತಾಯಿಸಿದ್ದವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಅದಕ್ಕೆ ಸಮ್ಮತಿಯನ್ನು ನೀಡಿದ್ದರು.

ಬೆಳಗಾವಿ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಪ್ರಮಾಣವನ್ನು ಒಟ್ಟಾರೆ ಶೇ 6 ರಷ್ಟು ಹೆಚ್ಚಿಸುವ ಮಸೂದೆಗೆ ಸರ್ವಾನುಮತದ ಒಪ್ಪಿಗೆ ನೀಡಿದ್ದವು. ಇದಕ್ಕೂ ಮೊದಲೇ ಸುಗ್ರೀವಾಜ್ಞೆಯ ಮೂಲಕ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿತ್ತು. ಇದರಿಂದ ಇವೆರಡೂ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ 24 ರಷ್ಟು ಮೀಸಲಾತಿ ಸಿಗುತ್ತದೆ.

2019ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಸರ್ಕಾರಿ, ಸಾರ್ವಜನಿಕ ಉದ್ಯಮಗಳಲ್ಲಿ ಉದ್ಯೋಗಗಳಿಗೆ ಮೀಸಲಾತಿ ಪ್ರಮಾಣ ಹೆಚ್ಚಿಸುವ ಸಂಬಂಧ ವರದಿ ನೀಡಲು ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲಾಗಿತ್ತು. ಆಯೋಗವು ತನ್ನ ವರದಿಯಲ್ಲಿ ಒಟ್ಟು ಶೇ 6 ರಷ್ಟು ಹೆಚ್ಚಿಸಲು ಶಿಫಾರಸು ಮಾಡಿತ್ತು.

ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸುವುದರಿಂದ ಮೀಸಲಾತಿ ಪ್ರಮಾಣ ಹೆಚ್ಚಿರುವುದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದರೂ ಕಾನೂನಿನ ಬಲ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT