ಮಂಗಳವಾರ, ನವೆಂಬರ್ 24, 2020
19 °C
‘ರಾಷ್ಟ್ರೀಯ ಶಿಕ್ಷಣ ನೀತಿ-2020’: ಅಂತಿಮ ವರದಿ ಸಲ್ಲಿಸಿದ ಕಾರ್ಯಪಡೆ

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಕುರಿತ ವರದಿ: ಶಿಕ್ಷಣ ಆಯೋಗದ ಸ್ಥಾಪನೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲಿ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಜಾರಿಗೊಳಿಸುವ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಎಸ್.ವಿ. ರಂಗನಾಥ್ ನೇತೃತ್ವದಲ್ಲಿ ರಚಿಸಿದ ಕಾರ್ಯಪಡೆಯು ಕರ್ನಾಟಕ ಶಿಕ್ಷಣ ಆಯೋಗ (ಕೆಎಸ್ಎ/ಕೆಇಸಿ), ಅನುಷ್ಠಾನ ಮಿಷನ್ ಹಾಗೂ ಹಲವು ಹೊಸ ಸಂಸ್ಥೆಗಳ ಸ್ಥಾಪನೆ ಸೇರಿ ಅನೇಕ ಸಲಹೆಗಳಿರುವ ಅಂತಿಮ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.

ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಅಂತಿಮ ವರದಿಯನ್ನು ಕಾರ್ಯಪಡೆ ಶನಿವಾರ ಸಲ್ಲಿಸಿದೆ.

ವಿವಿಧ ಇಲಾಖೆಗಳು, ಕಾರ್ಯಗಳು, ಸಂಸ್ಥೆಗಳು ಹಾಗೂ ಘಟಕಗಳ ನಡುವೆ ಸಮನ್ವಯ ಸಾಧಿಸಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಕರ್ನಾಟಕ ಶಿಕ್ಷಣ ಆಯೋಗ ಸ್ಥಾಪಿಸಬೇಕು, ಪ್ರಾಥಮಿಕ-ಪ್ರೌಢ ಹಾಗೂ ಉನ್ನತ ಶಿಕ್ಷಣ ಎರಡೂ ಈ ಆಯೋಗದಡಿ ಕೆಲಸ ಮಾಡಬೇಕು. ವರ್ಷಕ್ಕೆ ಕನಿಷ್ಠ ಎರಡು ಸಲ ಅಥವಾ ಅಗತ್ಯವಿದ್ದರೆ ಅದಕ್ಕಿಂತ ಹೆಚ್ಚು ಬಾರಿ ಈ ಆಯೋಗ ಸಭೆಗಳನ್ನು ನಡೆಸಿ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಸಬೇಕು. ಉನ್ನತ ಶಿಕ್ಷಣ ಸಚಿವರು ಮತ್ತು ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವರು ಇದರ ಉಪಾಧ್ಯಕ್ಷರಾಗಿರಬೇಕು ಎಂದು ಕಾರ್ಯಪಡೆ ಹೇಳಿದೆ.

ವರದಿಯ ಪ್ರಮುಖಾಂಶಗಳು 

l ನಿರ್ದಿಷ್ಟ ಗುರಿಗಳೊಂದಿಗೆ ಅನುಷ್ಠಾನ ಮಿಷನ್ ಸ್ಥಾಪಿಸಬೇಕು. ಪ್ರತಿ ಮೂರು ತಿಂಗಳಿಗೆ ನಿಗದಿ ಮಾಡಲಾದ ಗುರಿಗಳ ಕ್ಯಾಲೆಂಡರ್ ಅನ್ನು ಮೂರು ವರ್ಷಗಳ ಅವಧಿಗೆ ಸಿದ್ಧಪಡಿಸಬೇಕು. ಮೂರು ತಿಂಗಳಿಗೊಮ್ಮೆ ಅನುಷ್ಠಾನ ಪ್ರಗತಿ ಪರಿಶೀಲಿಸಲು ಅನುಷ್ಠಾನ ಕಾರ್ಯಪಡೆ (ಐಟಿಎಫ್) ರಚಿಸಬೇಕು.

l ಸಮಗ್ರ ಶಿಕ್ಷಣ (ಎಸ್‌ಎಸ್‌ಕೆ) ಮತ್ತು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿಯಲ್ಲಿ (ಕೆಎಸ್‌ಎಸ್‌ಇಸಿ) ತಕ್ಷಣವೇ ‘ಅನುಷ್ಠಾನ ನಿಧಿ’ಗೆ ಅನುವು ಮಾಡಿಕೊಡಬೇಕು.

l ರಾಜ್ಯ ಶಾಲಾ ಪ್ರಮಾಣೀಕರಣ ಪ್ರಾಧಿಕಾರ (ಎಸ್ಎಸ್ಎಸ್ಎ) ಮತ್ತು ಕರ್ನಾಟಕ
ಉನ್ನತ ಶಿಕ್ಷಣ ನಿಯಂತ್ರಣ ಮಂಡಳಿ (ಕೆಎಚ್ಇಆರ್‌ಸಿ) ಎಂಬ ನಿಯಂತ್ರಣ ಸಂಸ್ಥೆಗಳನ್ನು ಸ್ಥಾಪಿಸಬೇಕು.

l ಹೊಸ ನೀತಿಯಲ್ಲಿರುವ ಉನ್ನತ ಶಿಕ್ಷಣ ಸಂರಚನೆ ಕಾರ್ಯರೂಪಕ್ಕಿಳಿಸಲು ಹೊಸ ಕೆಎಸ್‌ಯು (ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ) ಕಾಯ್ದೆ ರೂಪಿಸಬೇಕು.

l ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ ಇರುವ ಸಂಸ್ಥೆಗಳ ನಡುವೆ ಪ್ರತ್ಯೇಕ ಅಧಿಕಾರ ವ್ಯಾಪ್ತಿ ನಿಗದಿಗೊಳಿಸಬೇಕು.

l ಕೆಪಿಎಸ್/ ಶಾಲಾ ಸಮುಚ್ಚಯಗಳಲ್ಲಿ ಸೇವಾ ನಿಯಮಗಳು- ಟೆನ್ಯೂರ್ ಶಿಪ್‌ಗಳಿಗೆ ತಿದ್ದುಪಡಿ ತರಬೇಕು. ಶಿಕ್ಷಕರ ವೃತ್ತಿ ಬೆಳವಣಿಗೆ ಹಾಗೂ ಉನ್ನತಿ ಕುರಿತು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು.

l ಗುರುತಿಸಿದ ಕಡೆಗಳಲ್ಲಿ ವಿಶೇಷ ಶೈಕ್ಷಣಿಕ ವಲಯ (ಎಸ್ಇಝಡ್) ಸ್ಥಾಪಿಸಬೇಕು.

l ಆರ್ಥಿಕ- ಸಾಮಾಜಿಕವಾಗಿ ಹಿಂದುಳಿದ (ಎಸ್ಇಡಿ) ಮಕ್ಕಳಿಗಾಗಿ ಲಿಂಗತ್ವ ಮತ್ತು ವಿಶೇಷ ಸಾಮರ್ಥ್ಯವುಳ್ಳವರಿಗೆ (ಅಂಗವಿಕಲರು) ಅನುದಾನ ಸೇರಿದಂತೆ ಸಮಷ್ಟಿ ಶಿಕ್ಷಣಕ್ಕಾಗಿ ಕ್ರಮಗಳನ್ನು ಕೈಗೊಳ್ಳಬೇಕು.

l ಮಗುವಿನ 3ನೇ ವಯಸ್ಸಿನಿಂದ ಬಾಲ್ಯಾರಂಭ ಶಿಕ್ಷಣ ಆರಂಭವಾಗಲಿದೆ. ಒಟ್ಟಾರೆ ಶಾಲಾ ಶಿಕ್ಷಣ 5+3+3+4 (ಬುನಾದಿ ಹಂತ, ಪೂರ್ವಸಿದ್ಧತೆ ಹಂತ, ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣ ಹಂತ) ತರಗತಿಗಳನ್ನು ಒಳಗೊಂಡಿರುತ್ತದೆ. ಒಂದೆಡೆ, 11 ಮತ್ತು 12ನೇ ತರಗತಿಗಳನ್ನು ಪ್ರೌಢ ಶಿಕ್ಷಣ ಹಂತದೊಂದಿಗೆ ಸಂಯೋಜಿಸಲು ಗಮನ ಕೇಂದ್ರೀಕರಿಸಲಾಗುವುದು. ಮತ್ತೊಂದೆಡೆ, ಬುನಾದಿ ಶಿಕ್ಷಣ
5 ವರ್ಷಗಳ ಸಮಗ್ರ ಪಠ್ಯಕ್ರಮ ಹೊಂದಿರು ತ್ತದೆ. ಶಾಲಾ ಮಟ್ಟದಲ್ಲಿ ಬುನಾದಿ ಹಂತ ಮತ್ತು ಪೂರ್ವಸಿದ್ಧತಾ ಮಟ್ಟಗಳಿಗಾಗಿ
ಪಠ್ಯಕ್ರಮ ಹಾಗೂ ಶಿಕ್ಷಣ ಶಾಸ್ತ್ರದ ಪರಿಷ್ಕರಣೆ ಕಾರ್ಯವನ್ನು ಡಿಎಸ್ಇಆರ್‌ಟಿ ಕೈಗೆತ್ತಿಕೊಳ್ಳಬೇಕು.

l ಬಾಲ್ಯಾರಂಭ ಶಿಕ್ಷಣಕ್ಕೆ ಪೂರಕವಾಗಿ ನಲಿ ಕಲಿ ಪಠ್ಯಕ್ರಮ ಪರಿಷ್ಕರಿಸಿ, ರಾಜ್ಯದಾದ್ಯಂತ ‘ಚಿಲಿ ಪಿಲಿ ಪ್ಲಸ್’ ಪಠ್ಯಕ್ರಮ ಆಧಾರಿತವಾಗಿರುತ್ತದೆ.

l ಕರ್ನಾಟಕ ಪಬ್ಲಿಕ್‌ ಸ್ಕೂಲ್‌ (ಕೆಪಿಎಸ್) ಸೇರಿದಂತೆ ಇತರ ವಿಶೇಷ ಶಾಲೆಗಳನ್ನು ಶಾಲಾ ಸಮುಚ್ಚಯ ಕೇಂದ್ರಗಳಾಗಿ ನಿರ್ಮಿಸಬೇಕು.

l ‘ಗುರು ಚೇತನ’ ಯೋಜನೆ ಸದೃಢಗೊಳಿಸಿ, ವಿಶೇಷ ಶಿಕ್ಷಣ ವೃತ್ತಿ ಬೆಳವಣಿಗೆ ವೇದಿಕೆಯಾಗಿ ರೂಪಿಸಬೇಕು.

l ಉನ್ನತ ಶಿಕ್ಷಣ ಸಂಸ್ಥೆಗಳೂ ಆಡಳಿತ ಮಂಡಳಿ ರಚಿಸಬೇಕು

l ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳು ಸಾಂಸ್ಥಿಕ ಅಭಿವೃದ್ಧಿ ಯೋಜನೆಗಳನ್ನು (ಐಡಿಪಿ) ಅಭಿವೃದ್ಧಿಪಡಿಸಬೇಕು

l ಸಂಶೋಧನಾ ಆದ್ಯತೆಯ ವಿಶ್ವವಿದ್ಯಾಲಯಗಳು ಹಾಗೂ ಬೋಧನಾ ಆದ್ಯತೆಯ ವಿಶ್ವವಿದ್ಯಾಲಯಗಳು ಎಂದು ವರ್ಗೀಕರಿಸಬೇಕು.

***

ಹೊಸ ನೀತಿ 2021-22ನೇ ಶೈಕ್ಷಣಿಕ ವರ್ಷದಿಂದ ಹಂತ ಹಂತವಾಗಿ ಜಾರಿಗೆ ಬರಲಿದ್ದು, ಅದಕ್ಕೂ ಮೊದಲು ಎಲ್ಲ ಹಿತಾಸಕ್ತಿದಾರರೊಂದಿಗೆ ವರದಿ ಕುರಿತು ಸಮಾಲೋಚನೆ ನಡೆಸಲಾಗುವುದು
- ಡಾ.ಸಿ.ಎನ್‌. ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು