ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತಿನಹೊಳೆ- 10 ಟಿಎಂಸಿ ಅಡಿ ನೀರು ಬಳಕೆಗೆ ಅವಕಾಶ’: ಗೋವಿಂದ ಕಾರಜೋಳ ಹೇಳಿಕೆ

ಎತ್ತಿನಹೊಳೆ ಯೋಜನೆ: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿಕೆ
Last Updated 7 ಮಾರ್ಚ್ 2022, 20:30 IST
ಅಕ್ಷರ ಗಾತ್ರ

ಬೆಂಗಳೂರು: ‌‘ಎತ್ತಿನಹೊಳೆ ಯೋಜನೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಬೈರಗೊಂಡ್ಲು ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ 2 ಟಿಎಂಸಿ ಅಡಿ ಆಗಿದ್ದರೂ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ 10 ಟಿಎಂಸಿ ಅಡಿ ನೀರು ಬಳಕೆಗೆ ಅವಕಾಶ ಮಾಡಲಾಗುವುದು’ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ಸಿನ ರಾಜೇಂದ್ರ ರಾಜಣ್ಣ ಪ್ರಸ್ತಾಪಿಸಿದ ಗಮನಸೆಳೆಯುವ ಸೂಚನೆಗೆ ಉತ್ತರಿಸಿದ ಅವರು, ‘ಉದ್ದೇಶಿತ ಯೋಜನೆಯಿಂದ ರಾಮನಗರ, ಕೋಲಾರ, ಚಿಕ್ಕಮಗಳೂರು, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿ ಏಳು ಜಿಲ್ಲೆಗಳಿಗೆ ಅನುಕೂಲವಾಗಲಿದೆ. ಬೈರಗೊಂಡ್ಲು ಜಲಾಶಯದಲ್ಲಿ ಸಂಗ್ರಹ ಪ್ರಮಾಣ ಕಡಿಮೆಯಿದ್ದರೂ ಬಳಕೆ ಪ್ರಮಾಣ ಹೆಚ್ಚಿಸಲು ಎಂಜಿನಿಯರ್‌ಗಳು, ತಂತ್ರಜ್ಞರು ನೀಲನಕ್ಷೆ ಸಿದ್ಧಪಡಿಸಿದ್ದಾರೆ’ ಎಂದರು.

‘ಎತ್ತಿನಹೊಳೆ ಯೋಜನೆ ಸ್ಥಗಿತವಾಗಲಿದೆ ಎಂದು ಆತಂಕಪಡುವ ಅಗತ್ಯವಿಲ್ಲ. ಯೋಜನೆ ಜಾರಿಗೆ ಸರ್ಕಾರ ಬದ್ಧವಾಗಿದೆ. ಆದ್ದರಿಂದಲೇ 2022–23ನೇ ಸಾಲಿನ ಬಜೆಟ್‌ನಲ್ಲಿ ₹ 3 ಸಾವಿರ ಕೋಟಿ ಮೀಸಲಿಡಲಾಗಿದೆ’ ಎಂದರು.

‘ಈ ಯೋಜನೆಗೆ ರೈತರಿಗೆ ಸೇರಿದ 11,745 ಎಕರೆ, ಸರ್ಕಾರದ 992 ಎಕರೆ ಮತ್ತು 118 ಎಕರೆ ಅರಣ್ಯ ಪ್ರದೇಶ ಸೇರಿ ಸುಮಾರು 12,857 ಎಕರೆ ಭೂಮಿಯ ಅವಶ್ಯ ಇದೆ. 2013ರಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಹೊಸ ಕಾಯ್ದೆ ಬಂದಿದ್ದು, ಅದರಂತೆ ಮಾರ್ಗಸೂಚಿ ದರದ ನಾಲ್ಕು ಪಟ್ಟು ಪರಿಹಾರ ಒದಗಿಸಬೇಕು. ಅಲ್ಲದೆ, ಒಂದು ಊರಿಂದ ಮತ್ತೊಂದು ಊರಿಗೆ ಮಾರ್ಗಸೂಚಿ ದರ ಬೇರೆ ಬೇರೆ ಆಗುತ್ತದೆ. ಆದರೆ, ರೈತರು ಒಂದೇ ರೀತಿಯ ಪರಿಹಾರ ಕೇಳುತ್ತಿರುವುದು ಕಗ್ಗಂಟಾಗಿದೆ. ಈಗ ಗೊಂದಲ ಪರಿಹರಿಸಲಾಗುತ್ತಿದೆ’ ಎಂದರು.

‘ಎತ್ತಿನಹೊಳೆ ಯೋಜನೆ ಕಾಮಗಾರಿಗಳಿಗೆ ಅನುದಾನವು ಲಭ್ಯವಿಲ್ಲದ ಪರಿಣಾಮ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಯ ಜನರಿಗೆ ತುಂಬಾ ನಿರಾಸೆ ಉಂಟಾಗಿದೆ’ ಎಂದು ರಾಜೇಂದ್ರ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಕಾಂಗ್ರೆಸ್ಸಿನ ಎಸ್‌. ರವಿ, ‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎತ್ತಿನಹೊಳೆ ಯೋಜನೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ’ ಎಂದು ದೂರಿದರು.

ಅನುದಾನ ಹಾಗೂ ಬಾಕಿ ಮೊತ್ತ ಬಿಡುಗಡೆಯಾಗದೇ ಎತ್ತಿನಹೊಳೆ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಇತ್ತೀಚೆಗೆ ವರದಿ ಪ್ರಕಟವಾಗಿತ್ತು.

‘ನೇಣುಗಂಬ ಏರುವೆ’

‘ಎತ್ತಿನಹೊಳೆ ಯೋಜನೆ ಕೆಲವರ ಪಾಲಿಗೆ ಕಾಮಧೇನು’ ಎಂದು ಆಕ್ರೋಶ ವ್ಯಕ್ತಪಡಿಸಿದ ಜೆಡಿಎಸ್‌ನ ಭೋಜೇಗೌಡ, ‘₹ 50 ಸಾವಿರ ಕೋಟಿ ಮೀಸಲಿಟ್ಟರೂ ಈ ಯೋಜನೆ ಪೂರ್ಣಗೊಳ್ಳುವುದಿಲ್ಲ. ಯೋಜನೆ ಫಲ ನೀಡಿದರೆ ನೇಣುಗಂಬಕ್ಕೆ ಏರುತ್ತೇನೆ’ ಎಂದು ಸದನದಲ್ಲಿ ಪ್ರತಿಜ್ಞೆ ಮಾಡಿದರು.

‘ಈ ಯೋಜನೆಯಿಂದ ಅಧಿಕಾರಿಗಳು ಹಣ ತಿನ್ನುತ್ತಿದ್ದು ಪೂರ್ಣಗೊಳಿಸುವುದಕ್ಕೆ ಸಾಧ್ಯವೇ ಇಲ್ಲ. ಯೋಜನೆ ಜಾರಿ ಮಾಡುತ್ತಿರುವ ಭಾಗಗಳಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ ಶೇ 10ರಷ್ಟು ಕಡಿಮೆ ಆಗುತ್ತಿದೆ. ಹೀಗಾದರೆ‌, ನೀರು ಎಲ್ಲಿಂದ ಲಭ್ಯವಾಗುತ್ತದೆ’ ಎಂದೂ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT