ಭಾನುವಾರ, ಸೆಪ್ಟೆಂಬರ್ 26, 2021
22 °C

ಪ್ರಜಾವಾಣಿ ಸಂವಾದ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಮತ್ತು ಮಹಿಳಾ ಪ್ರಾತಿನಿಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ತಯಾರಿ ನಡೆಯುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೊಸ ಸಂಪುಟದಲ್ಲಿ ಯಾರಿಗೆ ಅವಕಾಶ ಸಿಗಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಮಹಿಳೆಯರಿಗೆ ಪ್ರಾತಿನಿಧ್ಯ ಸಿಗಲಿದೆಯೇ, ಸಿಕ್ಕರೂ ಸಾಂಕೇತಿಕವೇ?

‘ಪ್ರಜಾವಾಣಿ’ ಸೋಮವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಆರ್‌.ಪ್ರಮೀಳಾ ನಾಯ್ಡು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆರ್. ಮಂಜುಳಾ ನಾಯ್ಡು, ಸಿಪಿಐ ರಾಜ್ಯ ಸಮಿತಿ ಸದಸ್ಯೆ ಜ್ಯೋತಿ ಅನಂತಸುಬ್ಬರಾವ್, ಹಿರಿಯ ಪತ್ರಕರ್ತೆ ಸಿ.ಜಿ. ಮಂಜುಳಾ ಅವರು ಹಂಚಿಕೊಂಡ ಅಭಿಪ್ರಾಯಗಳ ಸಂಕ್ಷಿಪ್ತ ವಿವರ ಇಲ್ಲಿದೆ.

‘ಮಹಿಳೆಯರಿಗೂ ಸಾಮರ್ಥ್ಯ ಇದೆ’

ಮಹಿಳೆಯರೂ ಸಮರ್ಥವಾಗಿ ಅಧಿಕಾರ ನಿಭಾಯಿಸಬಲ್ಲರು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ ಶೇ 33 ಅಲ್ಲ, ಶೇ 50ರಷ್ಟು ಆಗಬೇಕು. ಮಹಿಳಾ ಮೀಸಲಾತಿ ಬಗ್ಗೆ ಪಕ್ಷಾತೀತವಾಗಿ ಎಲ್ಲರೂ ಹೋರಾಟ ಮಾಡಬೇಕಿದೆ. ಎಲ್ಲಾ ಪಕ್ಷದ ಮಹಿಳಾ ಘಟಕಗಳ ಪ್ರತಿನಿಧಿಗಳು, ಮಹಿಳಾ ಹೋರಾಟಗಾರರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುವುದು. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾಯಿತಿ ಮಹಿಳಾ ಪ್ರತಿನಿಧಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ರಾಜ್ಯ ಮಹಿಳಾ ಆಯೋಗದಿಂದ ಆಯೋಜನೆ  ಮಾಡಲಾಗುವುದು. ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಸಿಗಬೇಕು.

–ಆರ್‌.ಪ್ರಮೀಳಾ ನಾಯ್ಡು, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ

***
‘ಎಲ್ಲಾ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಲಿ’

ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ನಾಲ್ವರು ಮಹಿಳಾ ಸಚಿವರಿದ್ದರು. ಬಳಿಕ ಅಷ್ಟು ಸ್ಥಾನವೂ ಬೇರೆ ಅವಧಿಗಳಲ್ಲಿ ಸಿಕ್ಕಿಲ್ಲ. ಕೇಂದ್ರದಲ್ಲಿ 66 ಸಚಿವರಿದ್ದು, 11 ಮಹಿಳೆಯರಿಗೆ ಅವಕಾಶ ದೊರೆತಿದೆ. ಅಂದರೆ ಶೇ 14ರಷ್ಟು ಮಾತ್ರ. ಬಿಜೆಪಿಯ ನಾರಿಶಕ್ತಿ ಎಂದರೆ ಇದೆನಾ? ದೇಶದ ಒಟ್ಟು 4,128 ವಿಧಾನಸಭಾ ಕ್ಷೇತ್ರಗಳ ಪೈಕಿ 364 ಕ್ಷೇತ್ರಗಳಲ್ಲಿ ಮಹಿಳಾ ಶಾಸಕರಿದ್ದಾರೆ. ರಾಜ್ಯದಲ್ಲಿ ಶೇ 2ರಿಂದ 3ರಷ್ಟು ಮಾತ್ರ ಸ್ಥಾನ ಸಿಕ್ಕಿದೆ. ಕೆಲ ರಾಜ್ಯಗಳಲ್ಲಿ ಒಬ್ಬರೂ ಇಲ್ಲ. ರಾಜಕೀಯ ಪಕ್ಷದಲ್ಲಿ ಮಹಿಳಾ ಘಟಕಗಳು ಸಾಂಕೇತಿಕವಾಗಿ ಇವೆ. ಎಲ್ಲಾ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಮಹಿಳೆಯರಿಗೆ ಟಿಕೆಟ್ ನೀಡಿದರೆ ಗೆಲ್ಲುವುದಿಲ್ಲ ಎಂಬುದು ನೆಪವಷ್ಟೆ. ಮಹಿಳೆಯರಲ್ಲೂ ರಾಜಕೀಯ ಆಸಕ್ತಿಗಳು ಬೆಳೆಯುತ್ತಿವೆ. ಅವರ ಆತ್ಮಸ್ಥೈರ್ಯ ಕಸಿಯುವ ಪ್ರಯತ್ನವನ್ನು ಪುರುಷ ಪ್ರಧಾನ ವ್ಯವಸ್ಥೆ ಮಾಡುತ್ತಿದೆ. ಬೀಜಿಂಗ್ ಮಹಿಳಾ ಸಮ್ಮೇಳನದ ಆಶಯದಂತೆ ನಿಜವಾದ ಪ್ರಜಾಪ್ರಭುತ್ವ ಎನಿಸಿಕೊಳ್ಳಬೇಕಿದ್ದರೆ ಮಹಿಳಾ ಪ್ರಾತಿನಿಧ್ಯ ಮುನ್ನೆಲೆಗೆ ಬರಬೇಕು.

–ಸಿ.ಜಿ. ಮಂಜುಳಾ, ಹಿರಿಯ ಪತ್ರಕರ್ತೆ

***

‘ಮೀಸಲಾತಿ ಮಸೂದೆ ಅಂಗೀಕಾರವಾಗಬೇಕು’

ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಶೇ 33ರಷ್ಟು ನೀಡುವ ಉದ್ದೇಶದಿಂದ ರೂಪಿಸಿದ ಮಸೂದೆ ಜಾರಿಯಾಗದೆ ನನೆಗುದಿಗೆ ಬಿದ್ದಿದೆ. ಮಹಿಳಾ ಪ್ರಾತಿನಿಧ್ಯಕ್ಕೆ ಪಕ್ಷದೊಳಗೂ ಸಾಕಷ್ಟು ಹೋರಾಟಗಳನ್ನು ನಾವು ಮಾಡಿಕೊಂಡು ಬಂದಿದ್ದೇವೆ. 2013ರ ವಿಧಾನಸಭೆ ಚುನಾವಣೆಯಲ್ಲಿ 7 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. 2018ರಲ್ಲಿ ಅದು 15ಕ್ಕೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ 30 ಸ್ಥಾನಗಳಿಗೆ ಹೋರಾಟ ಮಾಡುತ್ತೇವೆ. ಎಲ್ಲಾ ರಾಜಕೀಯ ಪಕ್ಷಗಳ ಮನಸ್ಥಿತಿ ಬದಲಾಗಬೇಕು. ಬಿಜೆಪಿ ಈಗ ಬಹುಮತ ಹೊಂದಿದೆ. ಸಂಸತ್‌ನಲ್ಲಿ ನನೆಗುದಿಗೆ ಬಿದ್ದಿರುವ ಮಹಿಳೆಯರಿಗೆ ರಾಜಕೀಯದಲ್ಲಿ ಮೀಸಲಾತಿ ನೀಡುವ ಮಸೂದೆಯನ್ನು ಅಂಗೀಕರಿಸಬೇಕು. ಪ್ರಸ್ತುತ ರಾಜ್ಯ ಸಚಿವ ಸಂಪುಟದಲ್ಲಿ ಕನಿಷ್ಠ ಮೂವರು ಮಹಿಳೆಯರಿಗೆ ಸ್ಥಾನ ನೀಡಬೇಕು.

– ಆರ್. ಮಂಜುಳಾ ನಾಯ್ಡು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

***

‘ಮೀಸಲಾತಿ ಭಿಕ್ಷೆ ಅಥವಾ ದಾನವಲ್ಲ’

ಮಹಿಳೆಯರಿಗೆ ಮೀಸಲಾತಿ ನೀಡುವುದು ಭಿಕ್ಷೆ ಅಥವಾ ದಾನ ಅಲ್ಲ. ಅದು ಸಾಂವಿಧಾನಿಕವಾಗಿ ಮತ್ತು ಹುಟ್ಟಿನಿಂದ ಬಂದಿರುವ ಹಕ್ಕು. ಪುರುಷ ಪ್ರಧಾನ ವ್ಯವಸ್ಥೆಯು ರಾಜಕೀಯ ಪ್ರಾತಿನಿಧ್ಯ ಕೊಡುತ್ತಿಲ್ಲ. 25 ವರ್ಷದಿಂದ ಮೀಸಲಾತಿ ಕೇಳುತ್ತಿದ್ದೇವೆ. ಮಹಿಳೆಯರು ಮನೆಯಲ್ಲೇ ಇರಬೇಕು ಎಂದು ಬಯಸುವ ಆರ್‌ಎಸ್‌ಎಸ್‌ ಅಡಿಯಲ್ಲಿ ಇರುವ ಬಿಜೆಪಿ ಪಕ್ಷದಿಂದ ಮಹಿಳೆಯರ ಮೀಸಲಾತಿ ಬಯಕೆ ಈಡೇರುವುದು ಕಷ್ಟ. ತೋಳ್ಬಲ, ಜಾತಿ, ಧರ್ಮದ ಆಧಾರದಲ್ಲಿ ಚುನಾವಣಾ ವ್ಯವಸ್ಥೆ ನಿಂತಿದೆ. ಕಮ್ಯುನಿಸ್ಟ್ ಪಕ್ಷಗಳು ಕೂಡ ಈ ವಿಷಯದಲ್ಲಿ ಸುಧಾರಣೆ ಆಗಬೇಕು. ಕೇರಳದಲ್ಲಿನ 21 ಸಚಿವರಲ್ಲಿ ಮೂವರು ಮಾತ್ರ ಮಹಿಳೆಯರಿದ್ದಾರೆ. ಕಮ್ಯುನಿಸ್ಟ್‌ ಪಕ್ಷಗಳಲ್ಲಿ ಇರುವವರು ಕೂಡ ಇದೇ ಸಮಾಜದಿಂದ ಬಂದವರೇ ಆಗಿದ್ದಾರೆ. ಬೇರೆ ಪಕ್ಷಗಳಲ್ಲಿ ಚುನಾವಣೆಗೆ ನಿಲ್ಲಲು ಟಿಕೆಟ್ ಖರೀದಿಸಬೇಕಾದ ಸ್ಥಿತಿ ಇದೆ. ಇವೆಲ್ಲವುಗಳ ವಿರುದ್ಧ ಹೋರಾಟಗಳು ನಡೆಯಬೇಕಿದೆ.

–ಜ್ಯೋತಿ ಅನಂತಸುಬ್ಬರಾವ್, ಸಿಪಿಐ ರಾಜ್ಯ ಸಮಿತಿ ಸದಸ್ಯೆ

ಪೂರ್ಣ ಸಂವಾದ ವೀಕ್ಷಿಸಲು: https://www.facebook.com/prajavani.net/videos

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು