ಮಂಗಳವಾರ, ಜೂನ್ 22, 2021
28 °C

Facebook ಸಂವಾದ: ಚುನಾವಣೆಗೆ ಜಾತಿ ಮತ್ತು ಹಣ ಎಷ್ಟು ಮುಖ್ಯ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಒಬ್ಬ ಅಭ್ಯರ್ಥಿ ₹ 70 ಲಕ್ಷದಲ್ಲಿ ಲೋಕಸಭೆ, ₹ 26 ಲಕ್ಷದಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ಈ ಕಾರಣಕ್ಕೆ ಎಲ್ಲರೂ ರಾಮನ ಲೆಕ್ಕ, ಕೃಷ್ಣನ ಲೆಕ್ಕ ಕೊಡುತ್ತಿದ್ದಾರೆ. ಚುನಾವಣೆ ಪದ್ಧತಿಯಲ್ಲಿ ಸುಧಾರಣೆ ಅಗತ್ಯ. . .’

ಹೀಗೆ ಪ್ರತಿಪಾದಿಸಿದವರು ಕಾಂಗ್ರೆಸ್‌ ಪ್ರಮುಖ ವಿ.ಆರ್‌. ಸುದರ್ಶನ್ ಮತ್ತು ಬಿಜೆಪಿ ಪ್ರಮುಖ ಅಶ್ವತ್ಥನಾರಾಯಣ ಗೌಡ.

ಇದಕ್ಕೆ ಧ್ವನಿಗೂಡಿಸಿದ ಜನವಾದಿ ಸಂಘಟನೆಯ ಕೆ.ಎಸ್‌. ವಿಮಲಾ, ‘ಜಾತಿ, ಹಣದಿಂದಲೇ ಚುನಾವಣೆ ಗೆಲ್ಲುವಂಥ ಸ್ಥಿತಿ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲು ಜನಪರ ನಿಲುವುಗಳು ಚುನಾವಣಾ ವಿಷಯ ಆಗಬೇಕು’ ಎಂದು ವಾದಿಸಿದರು.

‘ಪ್ರಜಾವಾಣಿ’ ಸಂವಾದಲ್ಲಿ ಪಾಲ್ಗೊಂಡ ಈ ಮೂವರೂ, ಸದ್ಯದ ರಾಜಕೀಯ ವ್ಯವಸ್ಥೆ, ಪಕ್ಷಗಳ ಧೋರಣೆಗಳ ಬಗ್ಗೆ ವಿಶ್ಲೇಷಿಸಿದರು.

‘ಕುಟುಂಬ ರಾಜಕೀಯ’ ವಿಷಯ ಪ್ರಸ್ತಾಪವಾದಾಗ, ದಿವಂಗತ ಸುರೇಶ ಅಂಗಡಿ ಪತ್ನಿಗೆ ಟಿಕೆಟ್‌ ನೀಡಿರುವುದನ್ನು ಸಮರ್ಥಿಸಿದ ಅಶ್ವತ್ಥನಾರಾಯಣ ಗೌಡ, ಕೆಲವೊಮ್ಮೆ ಅನಿವಾರ್ಯವಾಗುತ್ತದೆ ಎಂದರು. ‘ಕಾಂಗ್ರೆಸ್‌ ಟಿಕೆಟ್‌ ನೀಡಿದರೆ ವಂಶ ಪಾರಂಪರ್ಯ, ಬಿಜೆಪಿ ನೀಡಿದರೆ ಅನಿವಾರ್ಯವೇ?’ ಎಂದು ಸುದರ್ಶನ್‌ ಮರು ಪ್ರಶ್ನೆ ಕೇಳಿದರು.

 * ವಿ.ಆರ್‌. ಸುದರ್ಶನ್, ಸಹ ಅಧ್ಯಕ್ಷ, ಕೆಪಿಸಿಸಿ ಮಾಧ್ಯಮ ಮತ್ತು ಸಂಹನ ವಿಭಾಗ

ಚುನಾವಣೆಗಳಲ್ಲಿ ಜಾತಿ, ಹಣದ ಪ್ರಭಾವ ತಡೆಯುವ ಜವಾಬ್ದಾರಿ ರಾಜಕೀಯ ಪಕ್ಷಗಳು, ಮತದಾರ, ಸರ್ಕಾರ, ಚುನಾವಣಾ ಆಯೋಗ ಹೀಗೆ ಎಲ್ಲರ ಮೇಲಿದೆ. ಈ ಬಗ್ಗೆ ಚರ್ಚೆ ನಡೆಯಬೇಕು. ಜಾತಿ, ಹಣದ ಕೆಟ್ಟ ಪ್ರಭಾವದಿಂದ ಸಂಸದೀಯ ಗುಣಮಟ್ಟ ಕಡಿಮೆಯಾಗುತ್ತಿದೆ.  ಸದ್ಬಾವನೆ, ಸಿದ್ಧಾಂತಗಳ ಮೇಲೆ ಚುನಾವಣೆಗಳು ನಡೆಯಬೇಕು. ಆದರೆ, ಇತ್ತೀಚಿನ ವರ್ಷಗಳಲ್ಲಿ ಆ ಬಗ್ಗೆ ಚರ್ಚಿಸುತ್ತಲೇ ನಗೆಪಾಟಲಿಗೆ ಈಡಾಗುತ್ತಿದ್ದೇವೆ.

ಇತ್ತೀಚಿನ ಚುನಾವಣೆಗಳಲ್ಲಿ ವಿಷಯಗಳು ಮುಖ್ಯ ಆಗುತ್ತಿಲ್ಲ. ಎದುರಾಗಿರುವ ಚುನಾವಣೆಗೆ ನಾವು (ಕಾಂಗ್ರೆಸ್‌) ವ್ಯವಸ್ಥಿತವಾಗಿ ಸಂಘಟಿತರಾಗಿ ಸಿದ್ಧರಾಗಿದ್ದೇವೆ. ಯುದ್ಧಕ್ಕೆ ಹೋಗುವ ಸಂದರ್ಭದಲ್ಲಿ ವಿಶ್ವಾಸ ಇರಬೇಕೆಲ್ಲವೇ? ಮತದಾರರ ನಾಡಿಮಿಡಿತ ಗಮನಿಸಿದರೆ ವಾತಾವರಣ ನಮಗೆ ಪೂರಕವಾಗಿದೆ. ಚುನಾವಣಾ ಪದ್ಧತಿ ಸರಳಗೊಳಿಸಬೇಕಿದೆ. ಜಾತಿ ಮತ್ತು ಹಣ ಕೆಟ್ಟ ರೀತಿಯಲ್ಲಿ ಪ್ರಭಾವ ಬೀರುತ್ತಿದ್ದು  ಫಲಿತಾಂಶವನ್ನು ನಿರ್ಧರಿಸುತ್ತಿದೆ. ಸಮ ಸಮಾಜ ನಿರ್ಮಾಣಕ್ಕೆ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಗತ್ಯವೆಂಬ ಕಾರಣಕ್ಕೆ ಸಿದ್ದರಾಮಯ್ಯ ಅದನ್ನು ಮಾಡಿಸಿದ್ದರು. ಜಾತಿ ವ್ಯವಸ್ಥೆ ಬೇಕು ಎಂದಲ್ಲ. ಸರ್ಕಾರ ಹೊಣೆಗಾರಿಕೆಯಿಂದ ವರ್ತಿಸಿದಷ್ಟೆ ಸಮಾಜಕ್ಕೂ ಹೊಣೆಯಿದೆ. ಸಾರ್ವಜನಿಕ ಹಣ ವೆಚ್ಚ ಮಾಡಿದ ಈ ಸಮೀಕ್ಷೆಯ ಬಗ್ಗೆ ಸದನದಲ್ಲಿ, ಸಂಪುಟದಲ್ಲಿ ಚರ್ಚಿಸಬೇಕು. ಅನುಷ್ಠಾನ ನಂತರದ ವಿಷಯ. ವರದಿಯನ್ನೇ ಬಹಿರಂಗಪಡಿಸುವುದಿಲ್ಲ ಎನ್ನುವುದು ಸರಿಯಲ್ಲ. ಸದನವನ್ನು ರಾಜಕೀಯ ವೇದಿಕೆಯಾಗಿ ಮಾಡುವುದು ಸರಿಯಲ್ಲ ಎಂಬ ವಾದಕ್ಕೆ ನನ್ನ ಸಹಮತವಿದೆ. ಸದನ ನಡೆಯುವ ವೇಳೆ ಸಭಾತ್ಯಾಗ, ಧರಣಿ ಕೆಲವೊಮ್ಮೆ ಅನಿವಾರ್ಯ.

* ಅಶ್ವತ್ಥನಾರಾಯಣ ಗೌಡ, ಪ್ರಧಾನ ಕಾರ್ಯದರ್ಶಿ, ಬಿಜೆಪಿ ರಾಜ್ಯ ಘಟಕ

ವ್ಯವಸ್ಥೆಯಲ್ಲಿ ಸುಧಾರಣೆಯಾದರೆ ಮಾತ್ರ ಚುನಾವಣೆಯಲ್ಲಿ ಜಾತಿ, ಹಣದ ಪ್ರಭಾವ ಕಡಿಮೆ ಮಾಡಲು ಸಾಧ್ಯ. ಈ ವಿಷಯದಲ್ಲಿ ನಮ್ಮ (ಬಿಜೆಪಿ) ನಿಲುವು ಸ್ಪಷ್ಟ. ಜಾತಿ, ಧರ್ಮ ಆಧಾರಿತ ಬಜೆಟ್‌ ಕೂಡಾ ಸರಿಯಲ್ಲ. ಸರ್ಕಾರದ ರೀತಿ, ನೀತಿ, ಸಾಧನೆ, ಅಭಿವೃದ್ಧಿ ವಿಚಾರಗಳು ಚುನಾವಣೆಯ ವಿಷಯಗಳಾಗಬೇಕು. ಉಪ ಚುನಾವಣೆ ನಡೆಯುವ ಮೂರೂ ಕ್ಷೇತ್ರಗಳಲ್ಲಿ ನಮ್ಮ ಪರ ಉತ್ತಮ ವಾತಾವರಣವಿದೆ.

ಜಾತಿ ಸಮೀಕ್ಷೆ ಬಹಿರಂಗ ಪಡಿಸಬೇಕಿತ್ತು. ಸಿದ್ದರಾಮಯ್ಯ ಜಾತಿ ಆಧಾರಿತ ಬಜೆಟ್‌ ಕೊಟ್ಟುಕೊಂಡು ಬಂದವರು. ಸಮೀಕ್ಷೆಯ ವರದಿಯನ್ನು ಅವರು ಸದನದಲ್ಲಿ ಮಂಡಿಸಬೇಕಿತ್ತು. ಸಮ್ಮಿಶ್ರ ಸರ್ಕಾರ ಇದ್ದಾಗಲಾದರೂ ಮಾಡಬೇಕಿತ್ತಲ್ಲ. ಈಗ ಸಿದ್ದರಾಮಯ್ಯ ಎಚ್ಚೆತ್ತುಕೊಂಡಿದ್ದಾರೆ, ವರದಿಯಲ್ಲಿರುವ ಅಂಶಗಳ ಸೋರಿಕೆಯಿಂದ ಗೊಂದಲವಾಗಿದೆ. ಜಾತಿ ವಿಷಯವೂ ಸೇರಿದಂತೆ ಎಲ್ಲ ವಿಷಯಗಳಲ್ಲಿ ಚುನಾವಣಾ ಪ್ರಣಾಳಿಕೆಯಲ್ಲೇ ಪಕ್ಷದ ನಿಲುವು ಸ್ಪಷ್ಟಪಡಿಸಿದ್ದೇವೆ. ಬಜೆಟ್‌, ಮೀಸಲಾತಿ ಬಗ್ಗೆ ಸದನದಲ್ಲಿ ಚರ್ಚೆ ಮಾಡದೆ ಹೊರಗಡೆ ಕಾಂಗ್ರೆಸ್‌ ಮಾತನಾಡುವುದು ಸರಿಯಲ್ಲ.

ಸೆಸ್‌ ಕಡಿಮೆ ಮಾಡಬೇಕು.ಆಗ ಮಾತ್ರ ಬೆಲೆ ಏರಿಕೆ ಕಡಿಮೆ ಆಗಲು ಸಾಧ್ಯ. ಈ ವಿಷಯವನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿದ್ದೇವೆ. ಜಿಎಸ್‌ಟಿ ಬಾಕಿಯನ್ನು ಕೇಂದ್ರ ಇವತ್ತಲ್ಲ, ನಾಳೆ ಕೊಟ್ಟೇ ಕೊಡುತ್ತೆ. ಕಾರ್ಯಕರ್ತರ ಆಧಾರಿತವಾಗಿ  ಪಕ್ಷ ಬೆಳೆಯಬೇಕು, ಕುಟುಂಬ ಆಧಾರಿತವಾಗಿ ಅಲ್ಲ ಎನ್ನುವುದು ವರಿಷ್ಠರ ನಿಲುವು. ಆದರೆ, ಕೆಲವೊಮ್ಮೆ ಅನಿವಾರ್ಯ.ವಿರೋಧ ಪಕ್ಷದ ಅಭ್ಯರ್ಥಿಯನ್ನು ಗಣನೆಗೆ ತೆಗದುಕೊಂಡು ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾದ ಸನ್ನಿವೇಶವೂ ಇರುತ್ತದೆ.

 * ಕೆ.ಎಸ್‌. ವಿಮಲಾ, ಉಪಾಧ್ಯಕ್ಷೆ, ಜನವಾದಿ ಮಹಿಳಾ ಸಂಘಟನೆ

ಹದಗೆಟ್ಟಿರುವ ರಾಜಕಾರಣದ ವ್ಯವಸ್ಥೆಯಲ್ಲಿ ಈ ಉಪ ಚುನಾವಣೆಗಳು ನಡೆಯುತ್ತಿವೆ. ರಾಜಕೀಯ ಪಕ್ಷಗಳು ಮತದಾರರನ್ನು ಭ್ರಮಿತರನ್ನಾಗಿ ಮಾಡಿವೆ. ಪ್ರಜಾತಂತ್ರದ ಜೀವನಾಡಿಯಲ್ಲಿ ಜಾತಿ, ಹಣ ಪ್ರಭಾವ ತುಂಬ ಹೆಚ್ಚಿದೆ. ಅದರ ಆಧಾರದಲ್ಲಿ ತಮ್ಮ ಗೆಲುವು ಖಚಿತ ಎಂದು ಪಕ್ಷಗಳು ಹೇಳಿಕೊಳ್ಳುತ್ತವೆ. ಜಾತಿ ಕಟು ವಾಸ್ತವ. ಅದನ್ನು ಕಹಿ ವಾಸ್ತವ ಮಾಡಬೇಕಿದೆ.

ಆದರೆ, ಚುನಾವಣೆಗಳಲ್ಲಿ ಎಲ್ಲ ಪಕ್ಷಗಳು ಪ್ರಬಲ ಜಾತಿಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದರಿಂದ ಆ ಜಾತಿಯ ಮತಗಳು ಹಂಚಿ ಹೋಗಿ, ಹಣ ಪ್ರಭಾವ ಬೀರುತ್ತದೆ. ಈ ವ್ಯವಸ್ಥೆಯನ್ನು ತಡೆಯಬೇಕಿದೆ. ಚುನಾವಣಾ ಸುಧಾರಣೆ ಎಂದರೆ ಒಂದು ದೇಶ, ಒಂದು ಚುನಾವಣೆ ಅಲ್ಲ.

ಕೇಂದ್ರ ತಂದಿರುವ ಕಾಯ್ದೆಗಳು ರೈತರ ಮರಣ ಶಾಸನವಾಗಿದೆ. ಉಜ್ವಲ ಯೋಜನೆ ಕೊಟ್ಟರೂ ಸಿಲಿಂಡರ್‌ ಖರೀದಿಸಲು ಹಣ ಇಲ್ಲ. ಬೆಲೆ ಏರಿಕೆಯಿಂದ ಜನ ಹೈರಾಣಾಗಿದ್ದಾರೆ. ಬಿ‍ಪಿ, ಶುಗರ್‌ ಮಾತ್ರೆ ತೆಗೆದುಕೊಳ್ಳಲು ಸಾಧ್ಯವಾಗದ ಸ್ಥಿತಿ ಇದೆ. ಅವುಗಳ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ರೈತರಿಗೆ ಭದ್ರತೆ ಇಲ್ಲ.

ನಿರುದ್ಯೋಗ ಕಂಡುಕೇಳರಿಯದಷ್ಟು ಜಾಸ್ತಿಯಾಗಿದೆ. ದೇಶವನ್ನು ಸಂವಿಧಾನದ ಅಡಿಯಲ್ಲಿ ನಡೆಸಿಕೊಂಡು ಹೋಗುತ್ತೇವೆ ಎಂದು ಒಪ್ಪಿಕೊಂಡಿದ್ದೇವೆ. ಬಹುತ್ವ ಭಾರತವನ್ನು ಉಳಿಸಿಕೊಳ್ಳಬೇಕೆಂಬ ಆಶಯಕ್ಕೆ ವಿರುದ್ಧವಾದ ರಾಜಕೀಯ ವ್ಯವಸ್ಥೆ ಜಾರಿಗೊಳಿಸುವ ಹುನ್ನಾರವನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು