ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಕಲಿ’ಗೇ ಬಡ್ತಿ: ಈಗ ಎಫ್‌ಐಆರ್‌’

ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಕರಾಮತ್ತು
Last Updated 21 ಅಕ್ಟೋಬರ್ 2020, 21:30 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬಡ್ತಿಗೆ ‘ಅರ್ಹತೆ’ ಗಿಟ್ಟಿಸಿಕೊಳ್ಳಲು ನಕಲಿ ಪದವಿ ಪ್ರಮಾಣ ಪತ್ರ ಸಲ್ಲಿಸಿರುವುದು ಗೊತ್ತಿದ್ದರೂ ‘ಷರತ್ತುಬದ್ಧ’ ಮುಂಬಡ್ತಿ ಕರುಣಿಸಿದ್ದ ರಾಜ್ಯ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ, ಈ ಅಧಿಕಾರಿಗಳ ಮೇಲೆ ಎಫ್‌ಐಆರ್‌ ದಾಖಲಿಸಲು ಮುಂದಾಗಿದೆ!

ನಿರ್ದೇಶನಾಲಯದಲ್ಲಿ ಸಹಾಯಕ ಸಾಂಖ್ಯಿಕ ಅಧಿಕಾರಿ (ಎಎಸ್‌ಒ) ವೃಂದದಿಂದ ಸಹಾಯಕ ನಿರ್ದೇಶಕ (ಎಡಿ) ಹುದ್ದೆಗೆ ಬಡ್ತಿ ನೀಡಲು ಸಿದ್ಧಪಡಿಸಿದ್ದ 140 ಅಧಿಕಾರಿಗಳ ಪಟ್ಟಿಯಲ್ಲಿ, 37 ಮಂದಿಯ ಪದವಿ ಪ್ರಮಾಣಪತ್ರಗಳ ಬಗ್ಗೆ ಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಸಭೆಯಲ್ಲಿ ಅನುಮಾನ ವ್ಯಕ್ತವಾಗಿತ್ತು. ಆದರೂ, ‘ಮುಂಬಡ್ತಿಗೆ ಸಲ್ಲಿಸಿದ ಪದವಿ ಅಂಕಪಟ್ಟಿಗಳು ನೈಜ ಅಲ್ಲವೆಂದು ಕಂಡುಬಂದರೆ, ಅಂಥವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಸೂಕ್ತ ಶಿಸ್ತು ಕ್ತಮ ಕೈಗೊಳ್ಳಲಾಗುವುದು’ ಎಂದು ಷರತ್ತು ವಿಧಿಸಿ ಬಡ್ತಿ ನೀಡಲಾಗಿತ್ತು.

ಈ ಪಟ್ಟಿಯಲ್ಲಿ ಬಡ್ತಿ ಪಡೆದವರ ಪೈಕಿ, ಸಿಕ್ಕಿಂನ ಇಐಐಎಲ್‌ಎಂ (ಈಸ್ಟರ್ನ್‌ ಇನ್‌ಸ್ಟಿಟ್ಯೂಟ್ ಆಫ್‌ ಇಂಟಿಗ್ರೇಟೆಡ್‌ ಲರ್ನಿಂಗ್‌ ಇನ್‌ ಮ್ಯಾನೇಜ್‌ಮೆಂಟ್‌) ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದಲ್ಲಿ ಪದವಿ ಪಡೆದ ಏಳು ಮಂದಿಯ ಪ್ರಮಾಣಪತ್ರ ನಕಲಿ ಎನ್ನುವುದು ಸಾಬೀತಾಗಿದೆ. ‘ಈ ವಿಶ್ವವಿದ್ಯಾಲಯದ ದೂರ ಶಿಕ್ಷಣ ಪದವಿಯನ್ನು ಯುಜಿಸಿ ಅಂಗೀಕರಿಸಿಲ್ಲ’ ಎಂದು ಸಿಕ್ಕಿಂ ರಾಜ್ಯದ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ದೃಢಪಡಿಸಿದೆ. ಹೀಗಾಗಿ, ಈಗಾಗಲೇ ಇಬ್ಬರ ಮೇಲೆ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ, ನಿರ್ದೇಶಕರು ಸೂಚಿಸಿದ್ದಾರೆ.

ಬಡ್ತಿ ಪಡೆದಿರುವ ಇನ್ನೂ ಐದು ಮಂದಿ ಅದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆಇಲಾಖಾ ಪದೋನ್ನತಿ ಸಮಿತಿ (ಡಿಪಿಸಿ) ಸದಸ್ಯರೂ ಆಗಿರುವ ನಿರ್ದೇಶನಾಲಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಧಿಕಾರಿ ಮತ್ತು ನೌಕರರ ಸಂಘದ ಅಧ್ಯಕ್ಷ ಡಿ. ಚಂದ್ರಶೇಖರಯ್ಯ ಅವರು ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಏಳೂ ಮಂದಿ ಇಐಐಎಲ್‌ಎಂ ವಿಶ್ವವಿದ್ಯಾಲಯದಿಂದ 2012ರಿಂದ 2014ರ ಮಧ್ಯೆ ಅರ್ಥಶಾಸ್ತ್ರ ವಿಷಯದಲ್ಲಿ ಪದವಿ ಪಡೆದಿದ್ದಾರೆ.

‘ಪ್ರಥಮ ವರ್ಷದ ಪದವಿಯನ್ನು 2004–05ರಲ್ಲಿ, ದ್ವಿತೀಯ ಮತ್ತು ತೃತೀಯ ವರ್ಷದ ಪದವಿಯನ್ನು 2015–2017ರಲ್ಲಿ ಪೂರ್ಣಗೊಳಿಸಿದ (11 ವರ್ಷಗಳ ಅಂತರ) ನೌಕರರೊಬ್ಬರಿಗೆ ಸಾಂಖ್ಯಿಕ ನಿರೀಕ್ಷಕ ಹುದ್ದೆಯಿಂದ ಸಹಾಯಕ ಸಾಂಖ್ಯಿಕ ಅಧಿಕಾರಿಯಾಗಿ ಬಡ್ತಿ ನೀಡಲಾಗಿದೆ. ಈ ಪದವಿ ಪ್ರಮಾಣಪತ್ರವೂ ನಕಲಿಯಾಗಿರುವ ಸಾಧ್ಯತೆ ಇದೆ’ ಎಂದೂ ಪತ್ರದಲ್ಲಿ ಚಂದ್ರಶೇಖರಯ್ಯ ತಿಳಿಸಿದ್ದಾರೆ.

ನಕಲಿ ಪದವಿ ಪ್ರಮಾಣಪತ್ರ ಸಲ್ಲಿಸಿದವರು– ಅಶೋಕ, ಪ್ರಶಾಂತ್‌ (ಇಬ್ಬರ ಮೇಲೂ ಎಫ್‌ಐಆರ್‌ ದಾಖಲಿಸಲು ಸೂಚಿಸಲಾಗಿದೆ), ಸತೀಶ್‌ ಕೆ. ನಾಯಕ್‌, ಎಂ.ಡಿ. ಅಬ್ಸುಲ್‌ ರಹೀಂ, ರಾಜಕುಮಾರ್‌, ಸಂತೋಷ್‌, ಬಿರಾದರ್‌ ಬಾಲಗಿ.

ಭಯದಿಂದ ‘ಬಡ್ತಿ’ ನಿರಾಕರಣೆ!

‘ಪದವಿ ಪ್ರಮಾಣಪತ್ರಗಳ ನೈಜತೆ ತಿಳಿಯಲು ಆಯಾ ವಿಶ್ವವಿದ್ಯಾಲಯಗಳಿಗೆ ನಿರ್ದೇಶನಾಲಯ ಪತ್ರ ಬರೆದಿದೆ. ಈ ಬೆನ್ನಲ್ಲೇ, ಐವರು ತಮಗೆ ಬಡ್ತಿ ಬೇಡವೆಂದು ನಿರಾಕರಿಸಿದ್ದಾರೆ. ಈ ಪೈಕಿ, ಒಬ್ಬರು ನಿವೃತ್ತಿಯ ಅಂಚಿನಲ್ಲಿರುವ ಕಾರಣಕ್ಕೆ ಬೇಡ ಎಂದಿದ್ದಾರೆ. ಉಳಿದವರು ಯಾವುದೇ ಕಾರಣ ಉಲ್ಲೇಖಿಸಿಲ್ಲ. ಬಡ್ತಿ ಪಡೆದಿರುವ ಇನ್ನೊಬ್ಬರು ಹಾಲಿ ಹುದ್ದೆಯಿಂದ ಬಿಡುಗಡೆ ಹೊಂದದೆ, ಬಡ್ತಿಯನ್ನೂ ನಿರಾಕರಿಸದೆ, ಪದವಿ ಪ್ರಮಾಣ ಪತ್ರದ ‘ನೈಜತೆ’ಯ ವರದಿಗಾಗಿ ಕಾಯುತ್ತಿದ್ದಾರೆ. ನಕಲಿ ಎಂದು ಸಾಬೀತಾಗಬಹುದೆಂಬ ಭಯದಿಂದ ಬಡ್ತಿ ನಿರಾಕರಿಸಿದ್ದಾರೆ’ ಎಂದು ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT