ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂದ್ ಬೆಂಬಲಿಸಿ ರೈತರ ಪ್ರತಿಭಟನೆ: ಕಾಂಗ್ರೆಸ್ ಸಾಥ್

Last Updated 8 ಡಿಸೆಂಬರ್ 2020, 9:36 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಸರ್ಕಾರದ ಜನವಿರೋಧಿ ಮಸೂದೆಗಳನ್ನು ವಿರೋಧಿಸಿ ಕರೆ ನೀಡಿರುವ ಬಂದ್ ಬೆಂಬಲಿಸಿ ರೈತ, ಕಾರ್ಮಿಕ, ದಲಿತ ಸಂಘಟನೆಗಳು ನಗರದ ಹಲವೆಡೆ ಪ್ರತಿಭಟನೆ ನಡೆಸಿದವು.

ಕುರುಬೂರು ಶಾಂತಕುಮಾತ್ ಮತ್ತು ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ಐಕ್ಯ ಹೋರಾಟ ಸಮಿತಿಯಿಂದ ಮೌರ್ಯ ವೃತ್ತದಿಂದ ಹೊರಟ ರೈತರು, ಮೈಸೂರು ಬ್ಯಾಂಕ್ ವೃತ್ತದ ತನಕ ಜಾಥಾ ನಡೆಸಿದರು. ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೂ, ರೈತ ಮತ್ತು ದಲಿತ ಸಂಘಟನೆಗಳ ಮುಖಂಡರು ಹೋರಾಟಕ್ಕೆ ಸಾಥ್ ನೀಡಿದ್ದರು. ಜಾಥಾ ಮುಂದುವರಿಸದಂತೆ ಪೊಲೀಸರು ತಡೆದ ಕಾರಣ ರೈತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ರೈತರೊಬ್ಬರು ಪೊಲೀಸರ ಕಾಲಿಗೆ ಎರಗಿ ಜಾಥಾ ಮುಂದುವರಿಸಲು ಅವಕಾಶ ಕೋರಿದರು. ಕೆಲವರು ರಸ್ತೆಯಲ್ಲೇ ಉರುಳು ಸೇವೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ರೈತರೊಬ್ಬರು ಅಸ್ವಸ್ಥಗೊಂಡರು.

ಮತ್ತೊಂದೆಡೆ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಟೌನ್‌ಹಾಲ್‌ನಿಂದ ಸ್ವಾತಂತ್ರ್ಯ ಉದ್ಯಾನದ ತನಕವೂ ರೈತರು ಮೆರವಣಿಗೆ ನಡೆಸಿದರು. ರೈತರ ಈ ಹೋರಾಟ ಬೆಂಬಲಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೋರಾಟದಲ್ಲಿ ಭಾಗವಹಿಸಿದ್ದರು.

‘ರೈತರು ನಡೆಸುತ್ತಿರುವ ಹೋರಾಟದಲ್ಲಿ ಜಾತಿ, ಧರ್ಮ, ಪಕ್ಷದ ಬೇಧವಿಲ್ಲದೆ ಎಲ್ಲರೂ ಬೆಂಬಲ ಪಾಲ್ಗೊತಳ್ಳುತ್ತಿದ್ದು, ಇದು ಸ್ವಾತಂತ್ರ್ಯ ಹೋರಾಟಕ್ಕೆ ಸಮ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

‘ಜನಸಂಖ್ಯೆಯಲ್ಲಿ ಶೇ 78ರಷ್ಟು ರೈತರಿದ್ದಾರೆ. ಅವರಿಗೆ ಮರಣಶಾಸನವಾಗಿರುವ ಕಾಯ್ದೆಗಳನ್ನು ಕೇಂದ್ರ ಸರ್ಕಾರ ತಂದಿದೆ. ಅನ್ನದಾತರ ಬಾಯಿಗೆ ಮಣ್ಣು ಸುರಿಯುವ ಪ್ರಯತ್ನ ಇದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಈ ಕರಾಳ ಕಾಯ್ದೆ ರೂಪಿಸುವಾಗ ರೈತ ಮುಖಂಡರು, ಕಾಂಗ್ರೆಸ್ ಅಥವಾ ಇತರೆ ಯಾವ ಪಕ್ಷದವರ ಸಲಹೆಯನ್ನೂ ಪಡೆದಿಲ್ಲ. ಕೃಷಿ ಮಾರುಕಟ್ಟೆಗಳ ಮೇಲೆ ಖಾಸಗಿ ಕಂಪನಿಗಳ ಕಣ್ಣು ಬಿದ್ದಿದ್ದು, ರೈತರ ಮೇಲೆ ಕಾಯ್ದೆಗಳನ್ನು ಹೇರಿ ಆ ಕಂಪನಿಗಳ ಗುಲಾಮರನ್ನಾಗಿ ಮಾಡಲಾಗುತ್ತಿದೆ. ರೈತರ ಸ್ವಾವಲಂಬಿ ಬದುಕಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ಇದೆ. ಸದನದ ಒಳಗೂ ಹೋರಾಡುತ್ತೆವೆ’ ಎಂದು ಸ್ಪಷ್ಟಪಡಿಸಿದರು.

ಕೆ.ಆರ್‌.ಮಾರುಕಟ್ಟೆ ಸೇರಿ ಎಲ್ಲೆಡೆ ವ್ಯಾಪಾರ ವಹಿವಾಟು, ವಾಹನ ಸಂಚಾರ ಎಂದಿನಂತೆಯೇ ಇತ್ತು. ರೈತರ ಪ್ರತಿಭಟನೆಯಿಂದ ಕೆಲ ರಸ್ತೆಗಳಲ್ಲಿ ಸ್ವಲ್ಪ ಸಮಯ ಸಂಚಾರ ದಟ್ಟಣೆ ಉಂಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT