ಗುರುವಾರ , ಜನವರಿ 21, 2021
20 °C
ಕನ್ನಡ ಕಾಯಕ ವರ್ಷ

ಕನ್ನಡದಲ್ಲೇ ಕಡತ ನಿರ್ವಹಿಸಿ: ಮುಖ್ಯ ಕಾರ್ಯದರ್ಶಿ ಸುತ್ತೋಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕನ್ನಡ ಕಾಯಕ ವರ್ಷ’ ಆಚರಣೆಯ ಅಂಗವಾಗಿ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು ಮತ್ತು ಸಂಸ್ಥೆಗಳು ಸಂಪೂರ್ಣವಾಗಿ ಕನ್ನಡದಲ್ಲೇ ಕಡತ ನಿರ್ವಹಣೆ ಮಾಡಬೇಕು. ಆಡಳಿತಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳೂ ಕನ್ನಡ ಭಾಷೆಯಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್‌ ಅವರು ಶುಕ್ರವಾರ ಸುತ್ತೋಲೆ ಹೊರಡಿಸಿದ್ದಾರೆ.

ತಂತ್ರಜ್ಞಾನದಲ್ಲಿ ಕನ್ನಡವನ್ನು ಸಮರ್ಪಕವಾಗಿ ಬಳಸಲು ಕ್ರಮ ಕೈಗೊಳ್ಳಬೇಕು. ವಿವಿಧ ಇಲಾಖೆಗಳು ರೂಪಿಸುವ ನೀತಿಗಳ ಕರಡು ಮತ್ತು ಅಂತಿಮ ಪ್ರತಿಗಳನ್ನು ಕನ್ನಡದಲ್ಲೂ ಪ್ರಕಟಿಸಬೇಕು. ತಂತ್ರಜ್ಞಾನ ಆಧಾರಿತ ಆಡಳಿತದಲ್ಲಿ ಸಾರ್ವಜನಿಕರಿಗೆ ಕನ್ನಡದಲ್ಲೂ ಎಸ್‌ಎಂಎಸ್‌ ಮತ್ತು ಇ–ಮೇಲ್‌ಗಳನ್ನು ಕಳುಹಿಸಲು ವ್ಯವಸ್ಥೆ ಮಾಡಬೇಕು. ಖಜಾನೆ, ಮಾನವ ಸಂಪನ್ಮೂಲ ನಿರ್ವಹಣೆ (ಎಚ್‌ಆರ್‌ಎಂಎಸ್‌), ಟೆಂಡರ್‌ ತಂತ್ರಾಂಶಗಳು ಮತ್ತು ಸರ್ಕಾರಿ ಆ್ಯಪ್‌ಗಳನ್ನು ಕನ್ನಡದಲ್ಲೂ ಸಿದ್ಧಪಡಿಸಿ, ಬಳಕೆಗೆ ಒದಗಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಿದ್ದಾರೆ.

ಸರ್ಕಾರದ ಇಲಾಖೆಗಳು ಮತ್ತು ಸಂಸ್ಥೆಗಳು ಫೇಸ್‌ಬುಕ್‌, ಟ್ವಿಟ್ಟರ್‌ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲೂ ಕನ್ನಡ ಬಳಕೆ ಮಾಡಬೇಕು. ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರ ಸೇವೆ ಪಡೆಯುವಾಗ ‘ಕನ್ನಡಿಗರನ್ನೇ ಪೂರೈಸುವ’ ಷರತ್ತು ವಿಧಿಸಬೇಕು. ಕಾಯ್ದೆಗಳು, ಮಸೂದೆಗಳು, ಸಚಿವ ಸಂಪುಟದ ಟಿಪ್ಪಣಿ ಮತ್ತು ಅಧಿಸೂಚನೆಗಳನ್ನು ಕಡ್ಡಾಯವಾಗಿ ಕನ್ನಡದಲ್ಲಿ ಪ್ರಕಟಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.

ಹೆದ್ದಾರಿಗಳು ಮತ್ತು ರಸ್ತೆಯ ಮಾರ್ಗಸೂಚಿ ಫಲಕಗಳು, ಮೈಲುಗಲ್ಲುಗಳಲ್ಲಿ ಫಲಕ ಅಳವಡಿಸುವಾಗ ಕನ್ನಡವನ್ನೇ ಪ್ರಧಾನವಾಗಿ ಬಳಸಬೇಕು. ಜಿಲ್ಲೆಯ ಪ್ರಮುಖ ರಸ್ತೆಗಳು, ವೃತ್ತಗಳಿಗೆ ಸಾಹಿತಿಗಳು, ಹಿರಿಯ ಹೋರಾಟಗಾರರ ಹೆಸರು ಇಡಬೇಕು. ಸರ್ಕಾರಿ, ಖಾಸಗಿ ಆಸ್ಪತ್ರೆಗಳು, ನರ್ಸಿಂಗ್‌ ಹೋಂ ಮತ್ತು ಅರೆವೈದ್ಯಕೀಯ ಸಂಸ್ಥೆಗಳು ಕನ್ನಡವನ್ನು ಬಳಕೆ ಮಾಡಬೇಕು ಎನ್ನಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು