ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗವು ಒಮ್ಮೆ ಬರುವುದು ನಮಗೆ.. ಕಂಠೀರವ ಬಳಿ ಅಭಿಮಾನಿಗಳ ಸಾಗರ

ಅಪ್ಪುವನ್ನು ನೆನೆದು ತಾಳ್ಮೆ, ಸಹನೆ ತೋರಿದ ಅಭಿಮಾನಿಗಳು
Last Updated 31 ಅಕ್ಟೋಬರ್ 2021, 22:00 IST
ಅಕ್ಷರ ಗಾತ್ರ

ಬೆಂಗಳೂರು: ಮಾತಿನ ತುಂಬ, ಮನಸ್ಸಿನ ತುಂಬ, ಎದೆಯ ತುಂಬ ಪ್ರೀತಿ ಹೊತ್ತು ನೆಚ್ಚಿನ ಅಪ್ಪುವಿನ ಅಂತಿಮ ದರ್ಶನ ಪಡೆಯಲು ಕಂಠೀರವ ಸ್ಟುಡಿಯೊ ಬಳಿ ಅಭಿಮಾನಿಗಳ ಸಾಗರವೇ ಭಾನುವಾರ ನಸುಕಿನಲ್ಲೇ ಜಮಾಯಿಸಿತ್ತು.

ಅಹಿತಕರ ಘಟನೆಗಳನ್ನು ತಡೆಯುವ ಉದ್ದೇಶದಿಂದ ಮೆರವಣಿಗೆ ಇಲ್ಲದೇ ಪುನೀತ್‌ ಅವರ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೊಗೆ ತರಲಾಗಿತ್ತು. ಇದು ಸರ್ಕಾರ ಹಾಗೂ ಕುಟುಂಬ ಸದಸ್ಯರ ನಿರ್ಣಯವಾಗಿತ್ತು. ಈ ನಿರ್ಧಾರ ಅಭಿಮಾನಿಗಳಲ್ಲಿ ಆಕ್ರೋಶ ತರಿಸಿದರೂ, ಅಪ್ಪುವನ್ನು ನೆನೆದು ಅದನ್ನು ತಣ್ಣಗಾಗಿಸಿದ್ದರು. ಕಂಠೀರವ ಸ್ಟುಡಿಯೊ ಹೊರಗಡೆ ನೆರೆದಿದ್ದ ಸಾವಿರಾರು ಅಭಿಮಾನಿಗಳ ಅಪ್ಪು..ಅಪ್ಪು.. ಎಂಬ ಜೈಕಾರವೇ ಇದಕ್ಕೆ ಸಾಕ್ಷಿಯಾಗಿತ್ತು. ಒಮ್ಮೆಯಾದರೂ ಇದನ್ನು ಕೇಳಿ ಅಪ್ಪು ಎದ್ದು ಬರಬಾರದೇ ಎನ್ನುವ ಆಸೆ ಅಷ್ಟೂ ಜನರಲ್ಲಿತ್ತು.

ಬೇರೆ ದಾರಿಯಿಲ್ಲದೇ ಸ್ಟುಡಿಯೊ ಹೊರಗಡೆ ಅಳವಡಿಸಿದ್ದ ಬೃಹತ್‌ ಎಲ್‌ಇಡಿ ಪರದೆಗಳಲ್ಲಿ ಅಪ್ಪುವಿನ ಅಂತ್ಯಕ್ರಿಯೆಯನ್ನು ನೋಡಿ ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಂಡರು.

ಅದೆಷ್ಟೋ ಅಭಿಮಾನಿಗಳು ಕೊನೆಯ ದರ್ಶನವೂ ಸಿಗಲಿಲ್ಲವಲ್ಲ ಎಂದು ಕಣ್ಣೀರು ಹಾಕಿದರು. ಮೆರವಣಿಗೆಯಲ್ಲಿ ಅಪ್ಪುವಿನ ಮುಖವನ್ನು ಕೊನೆಯ ಬಾರಿ ಒಮ್ಮೆ ನೋಡಬಹುದು ಎಂದು ಆಗಮಿಸಿದ್ದ ಅಭಿಮಾನಿಗಳ ನಿರಾಸೆಯ ಅಳಲನ್ನೂ ಕೇಳಲು ಕಿವಿಯಿಲ್ಲದಾಗಿತ್ತು. ಕುಟುಂಬಸ್ಥರು ಇವತ್ತೇ ಹಾಲು ತುಪ್ಪ ಬಿಡಬಹುದು, ನಂತರ ಸಮಾಧಿ ದರ್ಶನಕ್ಕೆ ಅವಕಾಶ ನೀಡಬಹುದು ಎಂದು ನೂರಾರು ಅಭಿಮಾನಿಗಳು ದೂರದ ಊರಿನಿಂದಲೂ ಭಾನುವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ್ದರು.

‘ಮಂಗಳವಾರದವರೆಗೂ ಯಾರನ್ನೂ ಬಿಡುವುದಿಲ್ಲ’ ಎಂದು ಪೊಲೀಸರು ಗದರಿದರೆ, ಅಪ್ಪು ಪಾರ್ಥಿವ ಶರೀರವನ್ನೇನೋ ನೋಡಲು ಆಗಿಲ್ಲ ಸಮಾಧಿ ನೋಡಾಕ್ಕಾದ್ರೂ ಬಿಡಿ ಎಂದು ಗೋಗರೆದರು. ಈಗ ಸಿಗದ ಯೋಗ ಮುಂದಿನ ದಿನಗಳಲ್ಲಾದರೂ ಸಿಗಲಿ ಎಂದು ಆಶಿಸಿದರು.

ಅಪ್ಪು ಸಂಪಾದಿಸಿದ್ದ ಆಸ್ತಿ ಕಂಠೀರವ ಸ್ಟುಡಿಯೊ ಹೊರಭಾಗದಲ್ಲಿ ಭಾನುವಾರ ಸಂಜೆಯವರೆಗೂ ಜಮಾಯಿಸುತ್ತಿತ್ತು. ಕೆಲ ಕಾಲ ಗೊರಗುಂಟೆಪಾಳ್ಯ–ನಾಯಂಡಹಳ್ಳಿ ಸಂಪರ್ಕಿಸುವ ಹೊರವರ್ತುಲ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ತಮ್ಮ ಅಭಿಮಾನವನ್ನು ಪ್ರದರ್ಶಿಸಿದ ಅಭಿಮಾನಿಗಳು ಪುನೀತ್‌ ಕಟೌಟ್‌ಗೆ ಹಾಲಿನ ಅಭಿಷೇಕವನ್ನೇ ಮಾಡಿ ಜೈಕಾರ ಹಾಕಿದರು. ಎದೆಯ ಮೇಲೆ ಪುನೀತ್‌ ಟ್ಯಾಟೂ ಹಾಕಿಸಿಕೊಂಡಿದ್ದ ವ್ಯಕ್ತಿ ಅದನ್ನು ಅಪ್ಪುಗೆಯಿಂದ ಪ್ರದರ್ಶಿಸಿದಾಗ ನೆರೆದಿದ್ದ ಅಭಿಮಾನಿಗಳು ಆತನ ಎದೆಗೇ ಹಾಲಿನ ಅಭಿಷೇಕ ಮಾಡಿ ತಮ್ಮ ಪ್ರೀತಿಯನ್ನು ಪ್ರದರ್ಶಿಸಿದರು.

ಸರ್ಕಾರಕ್ಕೆ ಶಿವರಾಜ್‌ಕುಮಾರ್‌ ಕೃತಜ್ಞತೆ

‘ಸರ್ಕಾರ, ಪೊಲೀಸ್‌ ಸಿಬ್ಬಂದಿ ಎಲ್ಲ ವ್ಯವಸ್ಥೆಯನ್ನು ಚೆನ್ನಾಗಿ ಮಾಡಿದ್ದರು. ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಧನ್ಯವಾದ. ನಮ್ಮ ಕುಟುಂಬದ ಮೇಲೆ ಇಷ್ಟೊಂದು ಅಭಿಮಾನ ಇಟ್ಟು ಅಚ್ಚುಕಟ್ಟಿನ ವ್ಯವಸ್ಥೆಯನ್ನು ಸರ್ಕಾರ ಮಾಡಿತ್ತು. ಅಪ್ಪಾಜಿ ನಿಧನರಾಗಿದ್ದ ಸಂದರ್ಭದಲ್ಲಿ ಬಹಳ ಕಷ್ಟವಾಗಿತ್ತು. ನಿಮ್ಮ ಅಪ್ಪುವನ್ನು ನೀವು ನೋಡದೆ ಮತ್ತಿನ್ಯಾರು ನೋಡಬೇಕು. ಖಂಡಿತವಾಗಿಯೂ ಹಾಲು–ತುಪ್ಪ ಆದ ಕೂಡಲೇ ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡುವ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಮಾತನಾಡುತ್ತೇನೆ. ಅಭಿಮಾನಿಗಳ ಪ್ರೀತಿ ವಿಶ್ವಾಸಕ್ಕೆ ಎಷ್ಟೇ ಬೆಲೆ ಕಟ್ಟಿದರೂ ಕಡಿಮೆಯೇ. ನಿಮ್ಮ ಪ್ರೀತಿಗೆ ನಾವು ಚಿರಋಣಿ’ ಎಂದು ಹೇಳಿದರು.

‘ನಮ್ಮ ನಕ್ಷತ್ರ ಇಂದು ಗಗನದ ಪಾಲಾಗಿದೆ’

ಪುನೀತ್‌ ರಾಜ್‌ಕುಮಾರ್‌ ಜೊತೆಗೆ ಬಾಲ್ಯದಲ್ಲಿ ಒಟ್ಟಿಗೇ ಆಟವಾಡಿದ್ದ ಸಿಹಿನೆನಪುಗಳಿಂದ ಹಿಡಿದು ಚಿತ್ರರಂಗದಲ್ಲಿ ಜೊತೆಯಾಗಿ ಕಾರ್ಯನಿರ್ವಹಿಸಿದ ಅನುಭವದ ಕುರಿತು ನಟ ಸುದೀಪ್‌ ಶನಿವಾರ ಭಾವುಕರಾಗಿ ಪತ್ರದ ಮುಖೇನ ತಮ್ಮ ನೋವು ಹಂಚಿಕೊಂಡಿದ್ದರು.

ಭಾನುವಾರ ಅಂತ್ಯಕ್ರಿಯೆಯ ಬಳಿಕ ಮತ್ತೆ ನೆಚ್ಚಿನ ಅಪ್ಪುವನ್ನು ನೆನಪಿಸಿಕೊಂಡು ಟ್ವೀಟ್‌ ಮಾಡಿದ್ದಾರೆ ಸುದೀಪ್‌. ಸುದೀಪ್‌ ಭಾವನಾತ್ಮಕ ನುಡಿ ಹೀಗಿದೆ...

‘ಎಲ್ಲವೂ ಮುಗಿಯಿತು. ಮತ್ತೆ ಸಾಮಾನ್ಯ ಬದುಕಿಗೆ ಮರಳಲು ಹಲವು ದಿನಗಳೇ ಬೇಕು. ನೀವು ಅಗಲಿರುವುದು ಕೇವಲ ನಷ್ಟವಷ್ಟೇ ಅಲ್ಲ, ಇಡೀ ಚಿತ್ರರಂಗಕ್ಕೆ ಆದ ಆಘಾತವಿದು. ಇದರಿಂದ ಹೊರಬರಲೇಬೇಕು. ಈ ದಿನ ನಮ್ಮ ಜೀವನದ ಅತ್ಯಂತ ಸುಂದರವಾದ ಒಂದು ಅಧ್ಯಾಯ ಅಂತ್ಯಗೊಂಡಿದೆ’ ಎಂದಿದ್ದಾರೆ.

‘ಅಂತ್ಯಕ್ರಿಯೆಯಲ್ಲಿ ಕುಳಿತಿರುವಾಗ, ಧೃತಿ ಹಾಗೂ ವಂದಿತಾ ಅವರ ಸಂಕಟ, ದುಃಖ ಹಾಗೂ ಮನಃಸ್ಥಿತಿಯ ಬಗ್ಗೆ ಯೋಚಿಸುತ್ತಿದ್ದೆ. ಅಲ್ಲಿ ನೆರೆದಿದ್ದ ಎಲ್ಲ ಹಿರಿಯರ ಸಂಕಟವನ್ನು ಯೋಚಿಸಿದಾಗ ಒಂದು ಕ್ಷಣ ಮನಸ್ಸಿನೊಳಗೆ ಯೋಚನೆಗಳ ಸರಮಾಲೆಯೇ ಹರಿಯಿತು. ಅಪ್ಪು ಯಾವತ್ತೂ ಬಹಳ ಪ್ರೀತಿಸಲ್ಪಡುತ್ತಿದ್ದ ವ್ಯಕ್ತಿಯಾಗಿದ್ದ. ಭಾನುವಾರ ಮುಂಜಾನೆ ಅಪ್ಪುವನ್ನು ಅವರ ಅಪ್ಪ–ಅಮ್ಮನ ಪಕ್ಕದಲ್ಲೇ ಸಮಾಧಿ ಮಾಡಿದ ಬಳಿಕ ನಾನಲ್ಲಿಂದ ಹೊರಟಾಗ ನನ್ನ ಮನಸ್ಸಲ್ಲಿ ಮೂಡಿದ ವಿಚಾರ ಇಷ್ಟೇ. ‘ಪುನೀತ್‌ ರಾಜಗಾಂಭೀರ್ಯದಲ್ಲೇ ಜನಿಸಿ, ಹಾಗೆಯೇ ಬೆಳೆದು, ಅದೇ ರೀತಿ ಬದುಕಿ ಇದೀಗ ಹಾಗೆಯೇ ಹೊರಟಿದ್ದಾರೆ’.

‘ನಮ್ಮ ನಕ್ಷತ್ರ ಇಂದು ಆಕಾಶದ ಪಾಲಾಗಿದೆ. ರಾತ್ರಿ ಆಕಾಶ ನೋಡುವಾಗ ಎಂದಿನಂತೆ ನೀವು ಹೊಳೆಯುತ್ತೀರಿ, ಇತರೆ ನಕ್ಷತ್ರಗಳಿಗಿಂತ ದುಪ್ಪಟ್ಟಾಗಿ’.

ದೊಡ್ಡ ಮನೆಯ ದೊಡ್ಡ ಗುಣ

ನಟ ಶಿವರಾಜ್ ಕುಮಾರ್ ಸರ್ಕಾರಕ್ಕೆ ಹಾಗೂ ವೈಯಕ್ತಿಕವಾಗಿ ಮುಖ್ಯಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿದ ಕುರಿತು ಮಾತನಾಡಿದ ಸಿ.ಎಂ ಬಸವರಾಜ ಬೊಮ್ಮಾಯಿ ಅವರು, ‘ಇಂಥ ಘಟನೆಗಳು ಜರುಗಿದಾಗ ಶಾಂತಿ ಸುವ್ಯವಸ್ಥೆ ಕಾಪಾಡುವುದು, ವ್ಯವಸ್ಥಿತವಾಗಿ ಜನರಿಗೆ ಅನುಕೂಲ ಕಲ್ಪಿಸುವುದು, ಸುಸೂತ್ರವಾಗಿ ಎಲ್ಲವನ್ನೂ ನಡೆಸಿಕೊಡುವುದು ಸರ್ಕಾರದ ಕರ್ತವ್ಯ . ಆ ಜವಾಬ್ದಾರಿಯನ್ನು ನಿರ್ವಹಿಸಿದ್ದೇವೆ ಎಂದರು. ಸರ್ಕಾರಕ್ಕೆ ಅವರ ಕೃತಜ್ಞಾಪೂರ್ವಕ ಮಾತುಗಳು ದೊಡ್ಡ ಮನೆಯ ದೊಡ್ಡ ಗುಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT