ಸೋಮವಾರ, ಜೂನ್ 27, 2022
26 °C
ಮಾಸ್ಕ್‌ ಧರಿಸದ ರಾಜಕೀಯ, ಧಾರ್ಮಿಕ ಮುಖಂಡರತ್ತ ಮೊದಲು ಕ್ರಮಕೈಗೊಳ್ಳಿ: ಹೈಕೋರ್ಟ್‌

ಕೋವಿಡ್‌ ನಿಯಮಗಳನ್ನು ಉಲ್ಲಂಘಿಸುವ ರಾಜಕಾರಣಿ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೋವಿಡ್‌ ನಿಯಮಗಳನ್ನು ಉಲ್ಲಂಘಿಸುವ ರಾಜಕೀಯ ಮತ್ತು ಧಾರ್ಮಿಕ ಮುಖಂಡರ ವಿರುದ್ಧ ಮೊದಲ ಹಂತದಲ್ಲಿ ಕ್ರಮ ಜರುಗಿಸಿ’ ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ( ಡಿಜಿಪಿ–ಐಜಿಪಿ) ಹೈಕೋರ್ಟ್‌ ನಿರ್ದೇಶನ ನೀಡಿದೆ.

ಕೋವಿಡ್ ನಿಯಮ ಪಾಲನೆ ಆಗದಿರುವ ಕುರಿತು ಬೆಂಗಳೂರಿನ ಲೆಟ್ಜ್‌ಕಿಟ್‌ ಫೌಂಡೇಷನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ, ‘ಈ ಆದೇಶದ ಸಾರಾಂಶವನ್ನು ಕೂಡಲೇ ಡಿಜಿಪಿ ಅವರಿಗೆ ರವಾನಿಸಬೇಕು. ಲಿಖಿತ ಆದೇಶದ ಪ್ರತಿಗಾಗಿ ಕಾಯಬಾರದು’ ಎಂದೂ ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿತು.

ಮಾಸ್ಕ್ ಧರಿಸದ ಮ‌ತ್ತು ಅಂತರ ಕಾಪಾಡದವರ ವಿರುದ್ಧ ಮುಲಾಜಿಲ್ಲದೆ ಎಫ್‌ಐಆರ್ ದಾಖಲಿಸಿ ಎಂದೂ ಆದೇಶಿಸಿದ ಪೀಠ, ಕೋವಿಡ್ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವ ಪೊಲೀಸರಿಗೂ ಚಾಟಿ ಬೀಸಿತು.

‘ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ–2020ಯ ಸೆಕ್ಷನ್ 5ರ ಪ್ರಕಾರ ನಿಯಮ ಪಾಲಿಸದವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಲು ಅವಕಾಶ ಇದೆ. ಆದರೆ, ಪ್ರಭಾವಿ ರಾಜಕೀಯ ಮುಖಂಡರು ಮತ್ತು ಧಾರ್ಮಿಕ ಮುಖಂಡರು ಎಂಬ ಕಾರಣಕ್ಕೆ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಇಷ್ಟೊಂದು ಕಡಿಮೆ ಸಂಖ್ಯೆಯ ಎಫ್‌ಐಆರ್ ದಾಖಲಾಗಿರುವುದನ್ನು ಗಮನಿಸಿದರೆ ಅದು ಅರ್ಥವಾಗುತ್ತದೆ’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

‘ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಈ ವಿಷಯಗಳಲ್ಲಿ ಮಾದರಿಯಾಗಿ ಇರಬೇಕಿತ್ತು. ಆದರೆ, ಅದು ಆಗುತ್ತಿಲ್ಲ. ಈ ಕಾರಣದಿಂದ ಅವರ ವಿರುದ್ಧವೇ ಕ್ರಮಗಳು ತ್ವರಿತವಾಗಿ ಜಾರಿಯಾಗಬೇಕು’ ಎಂದು ಪೀಠ ತಿಳಿಸಿತು.

‘ಬೆಂಗಳೂರು ನಗರದಲ್ಲಿ ನಡೆದ ರ್‍ಯಾಲಿಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಆಗಿದ್ದು, ಸಂಘಟಕರಿಗೆ ಮಾತ್ರ ದಂಡ ವಿಧಿಸಲಾಗಿದೆ. ಇದು ಕಾಯ್ದೆಯ ನಿಬಂಧನೆಗಳನ್ನು ಅನುಷ್ಠಾನಗೊಳಿಸುವ ಸರಿಯಾದ ಮಾರ್ಗ ಅಲ್ಲ. ರ್‍ಯಾಲಿಗಳಲ್ಲಿ ಭಾಗವಹಿಸಿ ನಿಯಮ ಉಲ್ಲಂಘಿಸಿದ ಪ್ರತಿಯೊಬ್ಬರ ವಿರುದ್ಧವೂ ಪ್ರಕರಣ ದಾಖಲಾಗಬೇಕು’ ಎಂದೂ ಪೀಠ ಹೇಳಿತು.

‘ಈ ಕಾಯ್ದೆಯಡಿ ಇರುವ ಸೆಕ್ಷನ್‌ಗಳ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಇದ್ದಂತಿಲ್ಲ. ಅವರಿಗೆ ತಿಳಿವಳಿಕೆ ನೀಡುವ ಅಗತ್ಯ ಇದೆ. ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಎಲ್ಲ ಪೊಲೀಸ್ ಅಧಿಕಾರಿಗಳಿಗೆ ಡಿಜಿಪಿ ಕೂಡಲೇ ನಿರ್ದೇಶನ ನೀಡಬೇಕು. ದಾಖಲಾಗುವ ಎಫ್‌ಐಆರ್‌ ಮ‌ತ್ತು ಅವುಗಳ ತನಿಖೆಗಳ ಮೇಲ್ವಿಚಾರಣೆ ನಡೆಸಲು ಹಿರಿಯ ಅಧಿಕಾರಿಗಳ ತಂಡಗಳನ್ನು ರಚಿಸಬೇಕು’ ಎಂದು ಪೀಠ ನಿರ್ದೇಶನ ನೀಡಿತು.

‘ಕಾಯ್ದೆಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರು ಹಿಂಜರಿದರೆ ಸರ್ಕಾರ ಅದನ್ನು ಸಹಿಸಬಾರದು. ಈ ಆದೇಶ ಪಾಲನೆ ಮಾಡಿರುವ ಬಗ್ಗೆ ಅನುಸರಣಾ ವರದಿಯನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸಬೇಕು’ ಎಂದು ತಿಳಿಸಿದ ಪೀಠ, ಏ.22ಕ್ಕೆ ವಿಚಾರಣೆ ಮುಂದೂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು