ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ಪೂಜೆಗೆ ಹೊರಟವರು ಸಜೀವ ದಹನ; ಕುಟುಂಬದಲ್ಲಿ ಆಕ್ರಂದನ

ಚಿತ್ರದುರ್ಗದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್‌ ಬೆಂಕಿಗೆ ಆಹುತಿ
Last Updated 12 ಆಗಸ್ಟ್ 2020, 15:37 IST
ಅಕ್ಷರ ಗಾತ್ರ

ವಿಜಯಪುರ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೆ.ಆರ್‌.ಹಳ್ಳಿ ಬಳಿ ಬುಧವಾರ ನಸುಕಿನಲ್ಲಿ ಹೊತ್ತಿ ಉರಿದ ಬಸ್‌ನಲ್ಲಿ ಮೂವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿದಂತೆ ಸಜೀವವಾಗಿ ದಹನವಾದ ಐವರೂ ವಿಜಯಪುರ ಗಣೇಶನಗರದ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ.

ಶೀಲಾ ರವಿ(33) ಮತ್ತು ಕವಿತಾ ವಿನಾಯಕ(29) ಸಹೋದರಿಯರಾಗಿದ್ದಾರೆ. ಸ್ಪರ್ಶಾ(8) ಮತ್ತು ಸಮೃದ್ಧಿ(5)ಶೀಲಾ ಅವರ ಪುತ್ರಿಯರು ಹಾಗೂ ನಿಶ್ಚಿತಾ(3) ಕವಿತಾ ಅವರ ಪುತ್ರಿಯಾಗಿದ್ದಾರೆ.

ಅಕ್ಕ, ತಂಗಿ ಮತ್ತು ಅವರ ಮೂವರು ಮಕ್ಕಳು ತಾವು ಪಯಣಿಸುತ್ತಿದ್ದ ಬಸ್‌ನಲ್ಲಿ ಸಜೀವವಾಗಿ ದಹನವಾದ ವಿಷಯ ಬುಧವಾರ ಬೆಳಿಗ್ಗೆ ತಿಳಿಯುತ್ತಿದ್ದಂತೆ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು.

ಇಲ್ಲಿನ ಗಣೇಶನಗರದಲ್ಲಿ ಇರುವ ತಾಯಿ ಮನೆಯಲ್ಲಿ ಕಳೆದ ಎರಡು ತಿಂಗಳಿಂದ ತಂಗಿದ್ದ ಅಕ್ಕ, ತಂಗಿ ಮತ್ತು ಮೂವರು ಮಕ್ಕಳು, ಮಂಗಳವಾರ ರಾತ್ರಿ ‘ಕುಕ್ಕೆಶ್ರೀ’ ಎಂಬ ಖಾಸಗಿ ಬಸ್‌ನಲ್ಲಿ ಬೆಂಗಳೂರಿಗೆ ಒಟ್ಟಿಗೆ ಪ್ರಯಾಣ ಬೆಳೆಸಿದ್ದರು.

ಬೆಂಗಳೂರಿಗೆ ತೆರಳುವ ಮುನ್ನಾ, ವಿಜಯಪುರ ತಾಲ್ಲೂಕಿನ ಹಿಟ್ಟಿನಹಳ್ಳಿ ಗ್ರಾಮದಲ್ಲಿರುವಶೀಲಾ ಅವರ ಪತಿ ರವಿ ಅವರ ಮನೆಗೂ ಸೋಮವಾರ ಭೇಟಿ ನೀಡಿದ್ದರು.

ಕಳೆದ 15 ವರ್ಷಗಳಿಂದ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಶೀಲಾ ಅವರ ಪತಿ ರವಿ ಅವರ ಬಾಡಿಗೆ ಮನೆಯಲ್ಲಿ ಇದೇ ಶುಕ್ರವಾರ ಪೂಜಾ ಕಾರ್ಯಕ್ರಮ ನಡೆಯುವುದಿದ್ದು, ಅದರಲ್ಲಿ ಪಾಲ್ಗೊಳ್ಳಲು ಎಲ್ಲರೂ ಒಟ್ಟಿಗೆ ತೆರಳಿದ್ದರು ಎಂದು ರವಿ ಅವರ ಸಹೋದರ ಕೃಷ್ಣ ಪಡಕೋಟೆ ತಿಳಿಸಿದರು.

ಕವಿತಾ ಅವರ ಪತಿ ವಿನಾಯಕ ಅವರು ಬೆಂಗಳೂರು ನಿವಾಸಿ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT