ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕಾ ಕ್ಷೇತ್ರಕ್ಕೆ ₹ 20 ಸಾವಿರ ಕೋಟಿ ಪ್ಯಾಕೇಜ್‌ಗೆ ಆಗ್ರಹ

ಎಫ್‌ಕೆಸಿಸಿಐ ನಿಯೋಗದಿಂದ ಕೈಗಾರಿಕಾ ಸಚಿವರಿಗೆ ಬೇಡಿಕೆ ಪತ್ರ ಸಲ್ಲಿಕೆ
Last Updated 1 ಜೂನ್ 2021, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೆ (ಎಂಎಸ್‌ಎಂಇ) ₹ 20,000 ಕೋಟಿ ಮೊತ್ತದ ಪರಿಹಾರ ಪ್ಯಾಕೇಜ್‌ ನೀಡುವಂತೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‌ಕೆಸಿಸಿಐ) ಕೈಗಾರಿಕಾ ಸಚಿವರ ಜಗದೀಶ ಶೆಟ್ಟರ್‌ ಅವರನ್ನು ಆಗ್ರಹಿಸಿದೆ.

ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕ್ಕಲ್‌ ಎಂ. ಸುಂದರ್‌ ನೇತೃತ್ವದ ನಿಯೋಗ ಮಂಗಳವಾರ ಕೈಗಾರಿಕಾ ಸಚಿವರನ್ನು ಭೇಟಿ ಮಾಡಿ ಬೇಡಿಕೆ ಪತ್ರ ಸಲ್ಲಿಸಿದೆ.

‘ಸರಕು ಮತ್ತು ಸೇವಾ ತೆರಿಗೆ ರೂಪದಲ್ಲಿ ₹ 84,000 ಕೋಟಿ ಮತ್ತು ₹ 1.20 ಲಕ್ಷ ಕೋಟಿ ಆದಾಯ ತೆರಿಗೆ ಸೇರಿದಂತೆ ₹ 2.04 ಲಕ್ಷ ಕೋಟಿ ತೆರಿಗೆ ಪಾವತಿಸುತ್ತಿರುವ ಕೈಗಾರಿಕಾ ಕ್ಷೇತ್ರವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರುಮಾಡಲು ತಕ್ಷಣವೇ ಪ್ಯಾಕೇಜ್‌ ಪ್ರಕಟಿಸಬೇಕು’ ಎಂದು ಒತ್ತಾಯಿಸಿದೆ.

‘ಕನಿಷ್ಠ ವಿದ್ಯತ್‌ ಶುಲ್ಕದ ಬಾಬ್ತು ₹ 360 ಕೋಟಿ ವಿನಾಯ್ತಿ ಬಿಬಿಎಂಪಿ ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳಿಗೆ ಪಾವತಿಸಬೇಕಾದ ಆಸ್ತಿ ತೆರಿಗೆ ಹಾಗೂ ಉದ್ಯಮ ಪರವಾನಗಿ ಶುಲ್ಕದಲ್ಲಿ ಶೇ 20ರಷ್ಟು (₹ 8,000 ಕೋಟಿ) ರಿಯಾಯ್ತಿ ನೀಡಬೇಕು. ಕೈಗಾರಿಕೆಗಳ ನೌಕರರ ಮೂರು ತಿಂಗಳ ವೇತನದ ಬಾಬ್ತು ₹ 6,000 ಕೋಟಿಯ ನೆರವು ನೀಡಬೇಕು. ಬ್ಯಾಂಕ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಪಡೆದಿರುವ ಸಾಲದ ಮೇಲಿನ ಅರ್ಧ ವರ್ಷದ ಬಡ್ಡಿಯ ಮೊತ್ತ ₹ 7,190 ಕೋಟಿಯನ್ನೂ ಸರ್ಕಾರ ಭರಿಸಬೇಕು’ ಎಂಬ ಬೇಡಿಕೆಯನ್ನು ಎಫ್‌ಕೆಸಿಸಿಐ ಮುಂದಿಟ್ಟಿದೆ.

ಬೇಡಿಕೆ ಪಟ್ಟಿಯಲ್ಲಿರುವ ಎಲ್ಲವೂ ಸೇರಿದರೆ ₹ 21,550 ಕೋಟಿ ಮೊತ್ತ ಬೇಕಾಗುತ್ತದೆ. ₹ 20,000 ಕೋಟಿಯಷ್ಟಾದರೂ ಪರಿಹಾರ ನೀಡಬೇಕು. ಕೈಗಾರಿಕೆಗಳ ನೌಕರರು, ಕಾರ್ಮಿಕರಿಗೆ ಆದ್ಯತೆ ಮೇಲೆ ಕೋವಿಡ್‌ ಲಸಿಕೆ ನೀಡಬೇಕು. ಲಸಿಕೆ ಪಡೆದಿರುವ ನೌಕರರು ಕೆಲಸಕ್ಕೆ ಹಾಜರಾಗಲು ಅವಕಾಶ ನೀಡಬೇಕು ಎಂದು ಸಂಸ್ಥೆ ಒತ್ತಾಯಿಸಿದೆ.

ಎಫ್‌ಕೆಸಿಸಿಐ ಉಪಾಧ್ಯಕ್ಷ ಉಲ್ಲಾಸ್‌ ಕಾಮತ್‌, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ.ಬಿ. ಅರಸಪ್ಪ ನಿಯೋಗದಲ್ಲಿದ್ದರು.

ಲಾಕ್‌ಡೌನ್‌ನಿಂದ ಹೊರಗಿಡಲು ಮನವಿ

‘ಕೈಗಾರಿಕೆಗಳನ್ನು ಲಾಕ್‌ಡೌನ್‌ನಿಂದ ಹೊರಗಿಡಬೇಕು ಮತ್ತು ತಯಾರಿಕಾ ವಲಯದ ಉದ್ದಿಮೆಗಳಿಗೆ ಆಮ್ಲಜನಕ ಪೂರೈಸಬೇಕು’ ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಕಾಶ್‌ ಸಿ. ನೇತೃತ್ವದ ನಿಯೋಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದೆ.

ಮೂರು ತಿಂಗಳ ಅವಧಿಯ ನಿಗದಿತ ವಿದ್ಯುತ್‌ ಶುಲ್ಕವನ್ನು ಮನ್ನಾ ಮಾಡಬೇಕು ಮತ್ತು ಪೀಣ್ಯ ಕೈಗಾರಿಕಾ ಪ್ರದೇಶದ ಕಾರ್ಮಿಕರಿಗೆ ಆದ್ಯತೆ ಮೇಲೆ ಕೋವಿಡ್‌ ಲಸಿಕೆ ನೀಡಬೇಕು ಎಂದು ಮನವಿ ಮಾಡಿದೆ.

ಸಂಘದ ಗೌರವ ಕಾರ್ಯದರ್ಶಿ ಶಾಮಚಂದ್ರನ್‌ ಮತ್ತು ಉದ್ಯಮಿ ಮಲ್ಲಿಕಾರ್ಜುನಯ್ಯ ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT