ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಹ: ಕೃಷ್ಣೆ ಆರ್ಭಟ ಹೆಚ್ಚಳ; ರಾಷ್ಟ್ರೀಯ ಹೆದ್ದಾರಿಗೆ ತೀವ್ರ ಹಾನಿ

ಘಟಪ್ರಭಾ, ಮಲಪ್ರಭಾ ನದಿಗಳಲ್ಲಿ ಯಥಾಸ್ಥಿತಿ
Last Updated 27 ಜುಲೈ 2021, 19:31 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಮಂಗಳವಾರವೂ ಮುಂದುವರಿದಿದೆ. ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಲ್ಲಿ ಪ್ರವಾಹದ ತೀವ್ರತೆ ಸೋಮವಾರದಂತೆ ಯಥಾ ಸ್ಥಿತಿಯೇ ಇದೆ.

ಕೋಯ್ನಾ ಜಲಾಶಯದಿಂದ ನೀರು ಬಿಟ್ಟಿರುವ ಕಾರಣ ಕೃಷ್ಣೆಯಲ್ಲಿ ನೀರಿನ ಹರಿವು ಏರಿಕೆಯಾಗಿದೆ. ಜಮಖಂಡಿ ತಾಲ್ಲೂಕಿನ 18 ಗ್ರಾಮಗಳಿಗೆ ಪ್ರವಾಹದ ನೀರು ನುಗ್ಗಿದೆ. ಶೂರ್ಪಾಲಿ ಗ್ರಾಮದ ಲಕ್ಷ್ಮೀ–ನರಸಿಂಹಸ್ವಾಮಿ ದೇವಸ್ಥಾನ ಜಲಾವೃತವಾಗಿದೆ.

ನೆರೆ ಸಂತ್ರಸ್ತರ ನೆರವಿಗೆ 42 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಡಳಿತ ಹೇಳಿದ್ದರೂ, ಪ್ರವಾಹದಿಂದ ತೀವ್ರ ಪರಿಣಾಮಕ್ಕೆ ಗುರಿಯಾಗಿರುವ ಜಮಖಂಡಿ ತಾಲ್ಲೂಕಿನಲ್ಲಿ ಹಿರೇಪಡಸಲಗಿ, ಆಲಗೂರು ಮತ್ತು ಸಾವಳಗಿ ಬಳಿಯ ನಾಕೂರು ಪುನರ್ವಸತಿ ಕೇಂದ್ರದಲ್ಲಿ ಮಾತ್ರ ಕಾಳಜಿ ಕೇಂದ್ರಗಳು ಚಾಲನೆಯಲ್ಲಿರುವುದು ‘ಪ್ರಜಾವಾಣಿ’ ಭೇಟಿ ನೀಡಿದಾಗ ಕಂಡುಬಂದಿತು.

ಘಟಪ್ರಭಾ ನದಿ ನೀರು ಮುಧೋಳ ತಾಲ್ಲೂಕಿನ ಆಲಗುಂಡಿ ಗ್ರಾಮಕ್ಕೆ ನುಗ್ಗಿದೆ. ಹೊಲ–ಕಬ್ಬಿನ ಗದ್ದೆಗಳು ಮುಳುಗಿವೆ. ನೀರು ಪ್ರಮಾಣ ಹೆಚ್ಚಾದಂತೆ ಗ್ರಾಮಸ್ಥರೂ ಮನೆ ಖಾಲಿ ಮಾಡಿದ್ದಾರೆ.

ಮಲಪ್ರಭಾ ನದಿ ಪ್ರವಾಹದಿಂದ ಹುಬ್ಬಳ್ಳಿ–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218ಕ್ಕೆ ಭಾರೀ ಹಾನಿಯಾಗಿದೆ. ಬಾದಾಮಿ ತಾಲ್ಲೂಕಿನ ಗೋವನಕೊಪ್ಪ–ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಕೊಣ್ಣೂರು ಸಂಪರ್ಕಿಸುವ ರಸ್ತೆಯ ಮೇಲೆ ಇನ್ನೂ ನೀರು ಹರಿಯುತ್ತಿದೆ. ಹೊರ ರಾಜ್ಯದ ಸರಕು ಸಾಗಣೆ ಲಾರಿಗಳುಹೆದ್ದಾರಿಯಲ್ಲಿ ಸಾಲುಗಟ್ಟಿವೆ.

ಸವದಿ– ರೈತ ಶವವಾಗಿ ಪತ್ತೆ: ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ ಬಂದು ಸೇರುತ್ತಿರುವ ನೀರಿನ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿಲ್ಲ. ಆ ರಾಜ್ಯದ ರಾಜಾಪುರ ಬ್ಯಾರೇಜ್‌ನಿಂದ 3.40 ಲಕ್ಷ ಕ್ಯುಸೆಕ್ ನೀರು ಬಿಡಲಾಗಿದೆ. ಇದೂ ಸೇರಿದಂತೆ 3.91 ಲಕ್ಷ ಕ್ಯುಸೆಕ್‌ ನೀರು ಬೆಳಗಾವಿ ಜಿಲ್ಲೆಯಲ್ಲಿ ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣೆಗೆ ಸೇರುತ್ತಿದೆ. ಚಿಕ್ಕೋಡಿ, ಅಥಣಿ, ಕಾಗವಾಡ, ರಾಯಬಾಗ ತಾಲ್ಲೂಕುಗಳಲ್ಲಿನ ಸೇತುವೆಗಳು ಮುಳುಗಡೆ ಸ್ಥಿತಿಯಲ್ಲೆ ಇವೆ.

ಅಥಣಿ ತಾಲ್ಲೂಕಿನ ಸವದಿ ಗ್ರಾಮದ ಬಳಿ ಕೃಷ್ಣಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ರೈತ ರಾಮನಗೌಡ ಪಾಟೀಲ (55) ಅವರು ಶವವಾಗಿ ಮಂಗಳವಾರ ಪತ್ತೆಯಾಗಿದ್ದಾರೆ‌. ಘಟಪ್ರಭಾ ಮತ್ತು ಮಲಪ್ರಭಾ ಜಲಾಶಯಗಳಿಂದ ಹೊರಹರಿವಿನ ಪ್ರಮಾಣ ಇಳಿಸಿದ್ದು, ಇದರಿಂದ ಜಿಲ್ಲೆಯಲ್ಲಿ ನದಿ ತೀರದ ಜನರಲ್ಲಿ ಉಂಟಾಗಿದ್ದ ಆತಂಕ ಕೊಂಚ ಕಡಿಮೆಯಾಗಿದೆ.

ಹೊಸ ಮನೆಯೂ ನೆರೆ ಪಾಲು!

ಬಾದಾಮಿ ತಾಲ್ಲೂಕಿನ ಬೀರನೂರಿನ ವೃದ್ಧೆ ಶಾಂತವ್ವ ಮುಷ್ಠಿಗೇರಿ ಮನೆ 2019ರಲ್ಲಿ ಮಲಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ ಕುಸಿದುಬಿದ್ದಿತ್ತು. ಅವರಿಗೆ₹5 ಲಕ್ಷ ವೆಚ್ಚದಲ್ಲಿ ಸರ್ಕಾರ ಅದೇ ಜಾಗದಲ್ಲಿ ಮನೆ ನೀಡಿದೆ. ತಿಂಗಳ ಹಿಂದಷ್ಟೇ ಮನೆಗೆ ಬಂದಿದ್ದರು. ಈಗ ಹೊಸ ಮನೆಯೂ ಮಲಪ್ರಭೆ ಪ್ರವಾಹಕ್ಕೆ ಸಿಲುಕಿದೆ. ‘ಕಂಡಾಪಟ್ಟಿ ರೊಕ್ಕ ನೀರಾಗ ಹಾಕಿದಂಗ ಆಗೈತಿ. ಸರ್ಕಾರದ ರೊಕ್ಕ ಹೊಳ್ಳಿ ಹೋಕ್ತಾದ ಅಂತಿದ್ರು. ಅದಕ್ಕ ಮನಿ ಕಟ್ಟಾಕ ಒಪ್ಕೊಂಡೀನಿ. ಈಗ ಮತ್ತ ಬೀದ್ಯಾಗ ನಿಂತೀನಿ‘ ಎಂದು ಶಾಂತವ್ವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT