ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ದಾಳಿ: ಅರಣ್ಯ ಇಲಾಖೆ ಅಧಿಕಾರಿಗಳ ಭೇಟಿ, ಶಾಶ್ವತ ಪರಿಹಾರಕ್ಕೆ ಆಗ್ರಹ

ಸಿದ್ದಾಪುರ: ಕಾರ್ಮಿಕ ಸಾವು
Last Updated 26 ಫೆಬ್ರುವರಿ 2021, 12:20 IST
ಅಕ್ಷರ ಗಾತ್ರ

ಸಿದ್ದಾಪುರ: ಸಮೀಪ ಬೀಟಿಕಾಡುವಿನಲ್ಲಿ ಕಾಡಾನೆ ದಾಳಿಯಿಂದ ಕಾರ್ಮಿಕ ಮೃತಪಟ್ಟ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಿ.ಬಿ.ಟಿ.ಸಿ ಸಂಸ್ಥೆಗೆ ಸೇರಿದ ಬೀಟಿಕಾಡು ತೋಟದ ಕಾಫಿ ಕಣದಲ್ಲಿ ಕಾವಲು ಕಾಯುತ್ತಿದ್ದ ಆನಂದಪುರದ ನಿವಾಸಿ ಏಲುಮಲೈ ಎಂಬವರ ಪುತ್ರ ಸಂದೀಪ್ (22) ಅವರನ್ನು ಕಾಡಾನೆ ತುಳಿದುಹಾಕಿ ಸಾಯಿಸಿತ್ತು. ಮತ್ತೊಬ್ಬ ಕಾರ್ಮಿಕ ರಾಜು ಅಪಾಯದಿಂದ ಪಾರಾಗಿದ್ದರು.

ವಿರಾಜಪೇಟೆಯ ಧನು ಸೆಕ್ಯೂರಿಟಿ ಎಂಬ ಖಾಸಗಿ ಸಂಸ್ಥೆ ವತಿಯಿಂದ ಕಾಫಿ ತೋಟದಲ್ಲಿ ಸಂದೀಪ್‌ ಕಾವಲು ಕಾಯುವ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಮಿಕ ಮುಖಂಡ ಮಹದೇವ್ ನೇತೃತ್ವದಲ್ಲಿ ಕಾರ್ಮಿಕರು, ಮೃತ ಸಂದೀಪ್ ಕುಟುಂಬಕ್ಕೆ ಬಿ.ಬಿ.ಟಿ.ಸಿ ಹಾಗೂ ಧನು ಸೆಕ್ಯೂರಿಟಿ ಸಂಸ್ಥೆಗಳು ಪರಿಹಾರ ಒದಗಿಸಬೇಕೆಂದು ಒತ್ತಾಯಿಸಿದರು.

ಮೃತ ಸಂದೀಪ್‌ ಕುಟುಂಬಕ್ಕೆಬಿ.ಬಿ.ಟಿ.ಸಿ ಸಂಸ್ಥೆಯಿಂದ ₹ 2 ಲಕ್ಷ ಹಾಗೂ ಧನು ಸೆಕ್ಯೂರಿಟಿ ಖಾಸಗಿ ಸಂಸ್ಥೆಯಿಂದ ₹ 1 ಲಕ್ಷ ಧನ ಸಹಾಯ ನೀಡುವುದಾಗಿ ಭರವಸೆ ನೀಡಿದರು.

ಶಾಶ್ವತ ಯೋಜನೆ ರೂಪಿಸಲು ಆಗ್ರಹ:ಕಾರ್ಮಿಕ ಮುಖಂಡ ಮಹದೇವ್ ಮಾತನಾಡಿ, ಸಿದ್ದಾಪುರ ಸುತ್ತಮುತ್ತಲ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. 40ಕ್ಕೂ ಅಧಿಕ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿವೆ. ಹಾವಳಿಯಿಂದಾಗಿ ಕಾರ್ಮಿಕರು ಭಯದ ವಾತಾವರಣದಲ್ಲಿ ಕೆಲಸ ಮಾಡಬೇಕಾಗಿದೆ. ಸರ್ಕಾರ ಕಾಡಾನೆ ಹಾವಳಿ ನಿಯಂತ್ರಿಸಲು ಶಾಶ್ವತ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.

ಅರಣ್ಯ ಇಲಾಖೆಯಿಂದ ಪರಿಹಾರ: ಸಂದೀಪ್ ಕುಟುಂಬಕ್ಕೆ ಅರಣ್ಯ ಇಲಾಖೆ ವತಿಯಿಂದ ತುರ್ತು ಪರಿಹಾರವಾಗಿ ₹ 2 ಲಕ್ಷದ ಚೆಕ್‍ ಅನ್ನು ನೀಡಲಾಯಿತು. ಈ ಸಂದರ್ಭದಲ್ಲಿ ವಿರಾಜಪೇಟೆ ತಾಲ್ಲೂಕು ಬಿ.ಸಿ.ಎಫ್ ಚಕ್ರಪಾಣಿ, ಎಸಿಎಫ್ ರೋಶಿನಿ, ವಲಯ ಅರಣ್ಯ ಅಧಿಕಾರಿ ಕಳ್ಳೀರ ದೇವಯ್ಯ, ಉಪ ವಲಯ ಅರಣ್ಯಾಧಿಕಾರಿ ಸಂಜೀತ್ ಸೋಮಯ್ಯ ಹಾಗೂ ಸಿಬ್ಬಂದಿ ಇದ್ದರು. ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡರು.

ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮೃತ ಸಂದೀಪ್ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಬಳಿಕ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲಾಗುವುದು. ಕಾಫಿ ತೋಟದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟಲು ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದರು.

ಕಾಂಗ್ರೆಸ್ ಮುಖಂಡರಾದ ತೀತಿರ ಧರ್ಮಜ ಉತ್ತಪ್ಪ, ಅಂಕಿತ್ ಪೊನ್ನಣ್ಣ, ಗಣಪತಿ, ನವೀನ್, ಕುಸುಮಾ ಜೋಯಪ್ಪ, ಎ.ಜೆ ಬಾಬು ಇನ್ನಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT