ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರಿಗೆ ಉಚಿತ ಮರಳು: ಸಚಿವ ಮುರುಗೇಶ ನಿರಾಣಿ

Last Updated 10 ಫೆಬ್ರುವರಿ 2021, 11:54 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಸಾರ್ವಜನಿಕರು ಸ್ವಂತ ಬಳಕೆಗೆ ಉಚಿತವಾಗಿ ಮರಳು ತೆಗೆಯಲು ಅವಕಾಶ ನೀಡುವ ಉದ್ದೇಶದಿಂದ ಹೊಸ ಮರಳು ನೀತಿ ಪ್ರಕಟಿಸಲಾಗುವುದು ಎಂದು ಗಣಿಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು.

ಇದರಿಂದ ಗ್ರಾಮೀಣ ಪ್ರದೇಶದಲ್ಲಿ ಆಶ್ರಯ ಮತ್ತು ಇತರ ಸಣ್ಣಪುಟ್ಟ ವಸತಿ ಯೋಜನೆಗಳಿಗೆ ಅನುಕೂಲವಾಗುತ್ತದೆ ಎಂದು ಅವರು ವಿಕಾಸಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿಯೊಬ್ಬರಿಗೂ ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ಮರಳು ಸಿಗಬೇಕು. ಗಣಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳಿಂದ ಕಿರುಕುಳ ಆಗುತ್ತಿರುವ ಕಿರುಕುಳವನ್ನು ತಪ್ಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.

ಈ ರೀತಿ ತೆಗೆದ ಮರಳನ್ನು ಸ್ವಂತ ಮನೆ ಅಥವಾ ಕಟ್ಟಡಗಳಿಗೆ ಮಾತ್ರ ಉಪಯೋಗಿಸಬೇಕು. ಅದನ್ನು ಮಾರಾಟ ಮಾಡುವಂತಿಲ್ಲ. ಜಿಲ್ಲೆಯ ವ್ಯಾಪ್ತಿಯಲ್ಲಿ ಎತ್ತಿನ ಬಂಡಿ, ಟಾಮ್ ಟಾಮ್, ದ್ವಿಚಕ್ರ ವಾಹನ ಮತ್ತು ಕತ್ತೆಗಳ ಮೇಲೆ ಮಾತ್ರ ಸಾಗಿಸಬಹುದು. ಹೊರ ಜಿಲ್ಲೆಗಳಿಗೆ ಸಾಗಿಸುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದರು.

ಮರಳು ಗಣಿಗಾರಿಕೆಗೆ ನಿಗದಿ ಮಾಡಿದ ಪ್ರದೇಶ ಬಿಟ್ಟು ಬೇರೆ ಕಡೆಯಲ್ಲಿ ಮರಳು ಪಡೆಯಬಹುದು. ಹಳ್ಳ, ತೊರೆಗಳಿಂದ ಮರಳು ತೆಗೆಯಬಹುದು. ಆದರೆ ಮರಳನ್ನು ಸಂಗ್ರಹಿಸಿಡುವಂತಿಲ್ಲ ಮತ್ತು ಮಾರುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದರು.

ಸಣ್ಣ ರೈತರು, ಜನಸಾಮಾನ್ಯರಿಗೆ ಮರಳು ಸಿಗುತ್ತಿರಲಿಲ್ಲ. ಗ್ರಾಮೀಣ ಭಾಗದಲ್ಲಿ ಆಶ್ರಯ ಮನೆಗಳಿಗೂ ಸಿಗುತ್ತಿರಲಿಲ್ಲ. ಇಲ್ಲಿಯವರೆಗೆ ಎಲ್ಲದಕ್ಕೂ ಕಡಿವಾಣವಿತ್ತು. ಇದನ್ನು ತಪ್ಪಿಸುವುದಕ್ಕಾಗಿ ಸರಳ ನೀತಿ ತರಲಾಗುತ್ತಿದೆ ಎಂದರು.

183 ಬ್ಲಾಕ್‌ಗಳಲ್ಲಿ ಮರಳು ತೆಗೆಯಲು ಅವಕಾಶ: ರಾಜ್ಯದಲ್ಲಿ ಒಟ್ಟು 183 ಬ್ಲಾಕ್‌ಗಳಲ್ಲಿ ಮರಳು ತೆಗೆಯಲು ಅವಕಾಶ ನೀಡಲಾಗುವುದು. ಪ್ರತಿ ಟನ್‌ ಮರಳು ತೆಗೆಯಲು ₹300 ನಿಗದಿ ಮಾಡಲಾಗುವುದು. ಟಿಪ್ಪರ್‌, ಲಾರಿ ಸೇರಿದಂತೆ ಮತ್ತಿತರ ವಾಹನಗಳಲ್ಲಿ ಸಾಗಣೆ ಮಾಡಬಹುದು. ಇದರ ಮೇಲೆ ರಾಜಧನ ವಿಧಿಸಲಾಗುವುದು. ತಮ್ಮ ಜಿಲ್ಲೆಯಲ್ಲೇ ಮಾರಾಟ ಮಾಡಬಹುದು. ಆದರೆ, ಹೊರ ದೇಶಗಳಿಗೆ ಸಾಗಿಸುವಂತಿಲ್ಲ ಎಂದರು.

ಹೊಸ ಮರಳು ನೀತಿ ಜಾರಿ ಮಾಡಲು ಕರಡು ನೀತಿಯನ್ನು ಸಿದ್ಧಪಡಿಸಲಾಗಿದೆ. ಅಧಿಕಾರಿಗಳ ಜತೆ ಮತ್ತೊಮ್ಮೆ ಚರ್ಚಿಸಿ ಪ್ರಕಟಿಸಲಾಗುವುದು. ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಸೇರಿ ಪ್ರತಿಯೊಂದು ಭಾಗಕ್ಕೂ ಪ್ರತ್ಯೇಕ ಮರುಳು ನೀತಿ ಇದೆ. ಈಗಾಗಲೇ ಒಂದು ಕರಡು ತಂದಿದ್ದೇವೆ. ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಬಗ್ಗೆ ಹೊಸ ನೀತಿ ಜಾರಿ ತರಲಾಗುವುದು ಎಂದು ಅವರು ಹೇಳಿದರು.

ಆಂಧ್ರಪ್ರದೇಶದಲ್ಲಿ ಮರಳು ನೀತಿಯ ಬಗ್ಗೆ ಅಧ್ಯಯನ ನಡೆಸಲು ಒಂದು ಸಮಿತಿಯನ್ನು ಅಲ್ಲಿಗೆ ಕಳಿಸಲಾಗುವುದು. ಆ ಸಮಿತಿ ವರದಿ ನೀಡಲಿದೆ. ಎಲ್ಲರಿಗೂ ಸುಲಭವಾಗಿ ಮರಳು ಸಿಗಬೇಕು. ನೈಸರ್ಗಿಕವಾಗಿಯೂ ಅಪಾಯ ಆಗಬಾರದು. ಮರಳು ಮಾಫಿಯಾಕ್ಕೂ ಕಡಿವಾಣ ಹಾಕಬೇಕಾಗಿದೆ. ತಾಂತ್ರಿಕವಾಗಿ ಹೇಗೆ ಮಾಡಬಹುದು ಎಂಬ ಬಗ್ಗೆ ನಿಯಮಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದರು.

ಗಣಿ ಇಲಾಖೆ ಕಳೆದ ವರ್ಷ ₹3,700 ಕೋಟಿ ರಾಜಸ್ವ ಸಂಗ್ರಹದ ಗುರಿಯನ್ನು ಹಾಕಿಕೊಂಡಿತ್ತು. ರಾಜಸ್ವ ಸಂಗ್ರಹವನ್ನು ದ್ವಿಗುಣಗೊಳಿಸುವ ಉದ್ದೇಶವನ್ನೂ ಹೊಂದಲಾಗಿದೆ. ಅಲ್ಲದೆ, ಸ್ಥಗಿತಗೊಂಡಿರುವ ಗಣಿಗಳನ್ನು ಪುನರಾರಂಭ ಮಾಡುವ ಬಗ್ಗೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ. ಮುಚ್ಚಿರುವ ಗಣಿಗಳ ಸಂಖ್ಯೆ ಎಷ್ಟು ಎಂಬ ಮಾಹಿತಿಯನ್ನು ನೀಡಲು ಹೇಳಿದ್ದೇನೆ. ಎಲ್ಲ ಗಣಿಗಳನ್ನು ಪುನರ್‌ ಆರಂಭಿಸಲು ಉದ್ದೇಶಿಸಲಾಗಿದೆ. ಇದರಿಂದ ಮರಳು ಮತ್ತು ಜಲ್ಲಿಯ ಕೊರತೆ ಆಗುವುದಿಲ್ಲ ಎಂದು ನಿರಾಣಿ ಹೇಳಿದರು.

ಅರಣ್ಯ, ಕಂದಾಯ ಮತ್ತು ಇತರ ಇಲಾಖೆಗಳನ್ನು ಒಟ್ಟಿಗೆ ಸೇರಿಸಿ ಗಣಿ ಸಮಸ್ಯೆಗೆ ಸಂಬಂಧಿಸಿದಂತೆ ಪರಿಹರಿಸುತ್ತೇವೆ. ಗಣಿ ಇಲಾಖೆಯಲ್ಲಿ ಸಾವಿರಾರು ಪ್ರಕರಣಗಳಿವೆ. ಎಲ್ಲವನ್ನೂ ಪರಿಶೀಲನೆ ಮಾಡಿ ತ್ವರಿತವಾಗಿ ವಿಲೇವಾರಿ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಶೀಘ್ರವೇ ಗಣಿ ಅದಾಲತ್ ಜಾರಿಗೆ ತರುತ್ತೇವೆ. ಈ ಅದಾಲತ್‌ ಮೂಲಕ ನನೆಗುದಿಗೆ ಬಿದ್ದಿರುವ ಅರ್ಜಿಗಳನ್ನು ಇತ್ಯರ್ಥ ಮಾಡಲು ತೀರ್ಮಾನಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT