ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಟ್ಟ ಕನ್ನಡ ಗ್ರಂಥಾಲಯ ಮತ್ತೆ ಕಟ್ಟಲು ಪಣ: ₹6 ಲಕ್ಷ ನಿಧಿ ಸಂಗ್ರಹ

ಘಟನೆಗೆ ಖಂಡನೆ * ಶಿಕ್ಷಣ ಸಚಿವರ ಪೋಸ್ಟ್‌ಗೆ ಟೀಕೆ–ಮೆಚ್ಚುಗೆ
Last Updated 10 ಏಪ್ರಿಲ್ 2021, 22:26 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಉದಯಗಿರಿಯ ಶಾಂತಿನಗರದಲ್ಲಿ, ಸೈಯದ್‌ ಇಸಾಕ್‌ ಎಂಬುವವರು ನಡೆಸುತ್ತಿದ್ದ ಕನ್ನಡ ಗ್ರಂಥಾಲಯಕ್ಕೆ ಬೆಂಕಿ ಹಚ್ಚಿರುವ ಘಟನೆಗೆ, ಶನಿವಾರ ರಾಜ್ಯದಾದ್ಯಂತ ಖಂಡನೆ ವ್ಯಕ್ತವಾಗಿದೆ.

ಇದರೊಂದಿಗೆ, ಇಸಾಕ್ ಅವರಿಗೆ ನೆರವಿನ ಭರವಸೆಯ ಮಹಾಪೂರವೂ ಹರಿದುಬಂದಿದೆ. ಗ್ರಂಥಾಲಯ ಮರು ನಿರ್ಮಾಣಕ್ಕಾಗಿ ಆರಂಭಿಸಿರುವ ಆನ್‌ಲೈನ್‌ ಕ್ರೌಡ್‌ಫಂಡಿಂಗ್ ಅಭಿಯಾನಕ್ಕೆ ಭರಪೂರ ಸ್ಪಂದನೆ ವ್ಯಕ್ತವಾಗಿದ್ದು, 5 ತಾಸಿನಲ್ಲಿ ₹ 6 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ.‌ ಹಣಕಾಸು, ಪುಸ್ತಕ ನೆರವು ನೀಡುವ ಭರವಸೆಗಳು ವ್ಯಕ್ತವಾಗಿವೆ.

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಅವರು ಇಸಾಕ್‌ ಅವರ ನೆರವಿಗೆ ನಿಲ್ಲುವುದಾಗಿ ಧೈರ್ಯ ತುಂಬಿದರೆ; ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬೆಂಕಿ ಇಟ್ಟವರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.

ಸಚಿವ ಸುರೇಶ್‌ಕುಮಾರ್ ಅವರು, ಫೇಸ್‌ಬುಕ್‌ನಲ್ಲಿ ಘಟನೆಯನ್ನು ಪ್ರಸ್ತಾಪಿಸಿ, ‘ದುಷ್ಕರ್ಮಿಗಳು ಸುಮಾರು 11 ಸಾವಿರ ಪುಸ್ತಕಗಳನ್ನು ಭಸ್ಮ ಮಾಡಿದ್ದಾರೆ. ಇದರಲ್ಲಿ ಮೂರು ಸಾವಿರ ಭಗವದ್ಗೀತೆ ಪ್ರತಿಗಳು ಇದ್ದವಂತೆ. ಇಸಾಕ್‌ ಅವರಿಗೆ ಅಗತ್ಯ ನೆರವು–ಸಾಂತ್ವನ ನೀಡುವುದು ನಮ್ಮೆಲ್ಲರ ಕರ್ತವ್ಯ. ನಾನು ಅವರಿಗೆ ಸಹಾಯ ಮಾಡುವುದಾಗಿ ಹಾಗೂ ಶೀಘ್ರದಲ್ಲಿಯೇ ಭೇಟಿ ಮಾಡುವುದಾಗಿ ತಿಳಿಸಿದ್ದೇನೆ’ ಎಂದು ಬರೆದುಕೊಂಡಿದ್ದರು. ಅವರ ಈ ಸಂದೇಶಕ್ಕೆ ಮೆಚ್ಚುಗೆ, ಸಹಮತದೊಂದಿಗೆ ವ್ಯಾಪಕ ಟೀಕೆಯೂ ವ್ಯಕ್ತವಾಗಿದೆ.

‘ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಗೆ ಬೆಂಕಿ ಇಟ್ಟವರಿಗೇ ಇನ್ನೂ ಶಿಕ್ಷೆಯಾಗಿಲ್ಲ. ಇನ್ನು, ಇಂಥವರಿಗೆ ಸರ್ಕಾರ ನ್ಯಾಯ ಒದಗಿಸುತ್ತದೆಯೇ?’, ‘‘ಅದರಲ್ಲಿ ಭಗವದ್ಗೀತೆ ಪುಸ್ತಕಗಳು ಇದ್ದವಂತೆ’’ ಎಂಬ ನಿಮ್ಮ ವಿಶೇಷ ಒಲವು ಮಾತ್ರ ಬ್ರಾಹ್ಮಣ್ಯವನ್ನು ಕಾಣಿಸಿತು. ಪುಸ್ತಕಗಳು ಎಂದರೆ ಪುಸ್ತಕಗಳಷ್ಟೇ ಅಲ್ಲವೇ? ನಿಮ್ಮ ಆತಂಕ ಯಾವುದರ ಮೇಲಿತ್ತು ಎಂಬುದು ಅರ್ಥವಾಯಿತು’ ಎಂದು ಕೆಲವರು ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಈ ಅಕ್ಷರ ವಿರೋಧಿ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಲು ಕ್ರಮ ಕೈಗೊಳ್ಳುವುದರ ಜೊತೆಗೆ ಸೈಯದ್ ಅವರಿಗೆ ಸೂಕ್ತ ಪರಿಹಾರವನ್ನೂ ನೀಡಬೇಕು’‌ ಎಂದು ಒತ್ತಾಯಿಸಿದ್ದಾರೆ.

ಇಸಾಕ್‌ ಅವರ ಮನೆಗೆ ತೆರಳಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು, ಸಂವಿಧಾನ, ಭಗವದ್ಗೀತೆ, ಕುರಾನ್ ಹಾಗೂ ಬೈಬಲ್‌ನ ಪ್ರತಿಗಳನ್ನು ನೀಡಿ, ಗ್ರಂಥಾಲಯದ ಮರುನಿರ್ಮಾಣದ ಭರವಸೆ ನೀಡಿದರು.

ಗ್ರಂಥಾಲಯವನ್ನು ಸುಟ್ಟಿದ್ದಾರೆಯೇ ಹೊರತು, ಸಹಾಯ ಮಾಡುವ ಕನ್ನಡಿಗರ ಮನಸ್ಸನ್ನು ಸುಟ್ಟಿಲ್ಲ. ಸುಟ್ಟ ಜಾಗದಲ್ಲೇ ಮತ್ತೆ ಗ್ರಂಥಾಲಯ ಎದ್ದು ನಿಲ್ಲಬೇಕು. ಅದಕ್ಕಾಗಿ, ತಾವು ₹ 1 ಲಕ್ಷ ಮೌಲ್ಯದ ಪುಸ್ತಕ ಕೊಡಲು ಸಿದ್ಧವಿರುವುದಾಗಿ ವಿಜಯಪುರದ ಚಾಣಕ್ಯ ಕರಿಯರ್‌ ಅಕಾಡೆಮಿಯ ಎನ್.ಎಂ.ಬಿರಾದಾರ ಹೇಳಿದ್ದಾರೆ.

ಆರೋಪಿಗಳ ಪತ್ತೆಗೆ ತಂಡ ರಚನೆ: ಉದಯಗಿರಿ ಠಾಣೆ ಪೊಲೀಸರು, ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ತಂಡ ರಚಿಸಿದ್ದಾರೆ. ಈಗಾಗಲೆ ಹಲವು ಸುಳಿವು ಸಿಕ್ಕಿವೆ’ ಎಂದು ಮೂಲಗಳು ತಿಳಿಸಿವೆ. ‘ಕಿಡಿಗೇಡಿಗಳು ಬೆಂಕಿ ಇಟ್ಟಿದ್ದರಿಂದ, 11 ಸಾವಿರ ಪುಸ್ತಕಗಳು ಭಸ್ಮವಾಗಿದ್ದಾಗಿ ಸೈಯದ್ ಇಸಾಕ್ ಅವರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

5 ತಾಸಿನಲ್ಲಿ ಸಂಗ್ರಹವಾಯಿತು ₹ 6 ಲಕ್ಷ!‌
ಮೈಸೂರಿನ ಇನ್ಫೊಸಿಸ್‌ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ಫತೇನ್‌ ಮಿಸ್ಬಾ, ಆನ್‌ಲೈನ್‌ನಲ್ಲಿ ಆರಂಭಿಸಿರುವ ಕ್ರೌಡ್‌ಫಂಡಿಂಗ್ ಅಭಿಯಾನಕ್ಕೆ ನಿರೀಕ್ಷೆ ಮೀರಿ ಸ್ಪಂದನೆ ವ್ಯಕ್ತವಾಗಿದೆ. ಐದು ತಾಸಿನಲ್ಲಿ ₹ 6 ಲಕ್ಷ ಹಣ ಸಂಗ್ರಹವಾಗಿದೆ. 396 ಮಂದಿ ದೇಣಿಗೆ ನೀಡಿದ್ದಾರೆ.‌

ಆನ್‌ಲೈನ್‌ ಕ್ರೌಡ್‌ಫಂಡಿಂಗ್‌ನಲ್ಲೇ ಇದು ದಾಖಲೆ ನಿರ್ಮಿಸಿದೆ ಎನ್ನುತ್ತಾರೆ ಮಿಸ್ಬಾ.

‘ಎಡಿಜಿಪಿ ಭಾಸ್ಕರ್‌ರಾವ್ ಅವರು ಕರೆ ಮಾಡಿ ಗ್ರಂಥಾಲಯಕ್ಕೆ ಬೆಂಕಿ ಬಿದ್ದಿರುವ ಕುರಿತು ಮಾಹಿತಿ ನೀಡಿ, ನೆರವು ನೀಡಿ ಎಂದು ಹೇಳಿದರು. ನಂತರ, ನಾನು ಗ್ರಂಥಾಲಯದ ಮರುನಿರ್ಮಾಣ ಹಾಗೂ ಅವರು ವಾಸಿಸುವ ಪ್ರದೇಶದ ಅಭಿವೃದ್ಧಿಗೆ ‘ಕೆಟೊ’ ವೆಬ್‌ಸೈಟ್‌ನಲ್ಲಿ ಫಂಡ್‌ ರೈಸಿಂಗ್ ಆರಂಭಿಸಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾಲಿಕೆ ಅಥವಾ ‘ಮುಡಾ’ ನಿರ್ದಿಷ್ಟ ಸ್ಥಳ ನೀಡಿದರೆ ಸಾಕು, ಕಟ್ಟಡವೊಂದನ್ನು ನಿರ್ಮಿಸಿ ಕನ್ನಡ ಗ್ರಂಥಾಲಯವನ್ನು ಮರು ಸ್ಥಾಪಿಸಲಾಗುವುದು’ ಎಂದು ಹೇಳಿದರು. ಮಿಸ್ಬಾ ಅವರು ಈಗಾಗಲೇ ವಿವಿಧ ಉದ್ದೇಶಗಳಿಗೆ ಆನ್‌ಲೈನ್‌ನಲ್ಲಿ ಫಂಡ್‌ ರೈಸಿಂಗ್‌ ಮಾಡಿದ್ದರು.

*
ಕನ್ನಡದ ಜನತೆಯ ಪ್ರೀತಿ, ಗೌರವಗಳಿಗೆ ನಾನು ಚಿರಋಣಿ. ಇದೇ ಸ್ಥಳದಲ್ಲಿ ಮತ್ತೊಂದು ಗ್ರಂಥಾಲಯ ನಿರ್ಮಿಸುವೆ.
–ಸೈಯದ್ ಇಸಾಕ್, ದಹಿಸಿದ ಕನ್ನಡ ಗ್ರಂಥಾಲಯದ ಮಾಲೀಕ

*
ಸೈಯದ್ ಇಸಾಕ್ ಅವರು ನಡೆಸುತ್ತಿದ್ದ ಗ್ರಂಥಾಲಯ ಯಾರ ಜಾಗದಲ್ಲಿತ್ತು ಎಂಬುದರ ಕುರಿತು ಪರಿಶೀಲಿಸಲಾಗುವುದು -ಡಿ.ಬಿ.ನಟೇಶ್‌, ಮುಡಾ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT