ಭಾನುವಾರ, ಜೂನ್ 20, 2021
26 °C
ಕೊರೊನಾ ಸೋಂಕಿನ ವಿರುದ್ಧ ಜಯಿಸಿದವರಿಗೆ ಮತ್ತೊಂದು ಸೋಂಕು ಎದುರಿಸುವ ಸವಾಲು

ದೃಷ್ಟಿಯ ಜತೆ ಜೀವ ಕಸಿಯುವ ಶಿಲೀಂಧ್ರ ಸೋಂಕು

ವರುಣ ಹೆಗಡೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದಲ್ಲೂ ಕೋವಿಡ್‌ನಿಂದ ಚೇತರಿಸಿಕೊಂಡ ಕೆಲವರಿಗೆ ಅತ್ಯಂತ ಅಪಾಯಕಾರಿ ಶಿಲೀಂಧ್ರ ಸೋಂಕು (ಮ್ಯೂಕೋರ್ಮೈಕೋಸಿಸ್ ಅಥವಾ ಬ್ಲಾಕ್ ಫಂಗಸ್) ಕಾಣಿಸಿಕೊಳ್ಳುತ್ತಿದೆ. ಈಗಾಗಲೇ ದೃಷ್ಟಿ ಕಳೆದುಕೊಂಡ ಪ್ರಕರಣಗಳು ಇಲ್ಲಿನ ಮಿಂಟೋ ಸೇರಿದಂತೆ ‍ಪ್ರಮುಖ ಕಣ್ಣಿನ ಆಸ್ಪತ್ರೆಗಳಲ್ಲಿ ವರದಿಯಾಗಿವೆ.

ರೋಗನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡ ಒಂದು ತಿಂಗಳ ಒಳಗಡೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಈ ಸೋಂಕು ಕಣ್ಣು, ಕಿವಿ ಮತ್ತು ಮಿದುಳಿಗೆ ವ್ಯಾಪಿಸಿಕೊಂಡು, ಜೀವಕ್ಕೆ ಅಪಾಯವನ್ನುಂಟು ಮಾಡಲಿದೆ. ಕೋವಿಡ್‌ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಈ ಸಮಸ್ಯೆಗೆ ಒಳಪಡುವವರ ಸಂಖ್ಯೆ ಹೆಚ್ಚಾಗಿದೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಎಂಟು ಪ್ರಕರಣಗಳನ್ನು ಮಿಂಟೊ ಕಣ್ಣಿನ ಆಸ್ಪತ್ರೆಯ ವೈದ್ಯರ ನೆರವಿನಿಂದ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅದರಲ್ಲಿ 6 ಮಂದಿ ಈ ಸೋಂಕಿನಿಂದ  ಮೃತಪಟ್ಟಿದ್ದಾರೆ. ಇಬ್ಬರು ದೃಷ್ಟಿ ಕಳೆದುಕೊಂಡಿದ್ದಾರೆ. ಇದೇ ರೀತಿ, ನಾರಾಯಣ ನೇತ್ರಾಲಯ, ಪೀಪಲ್ ಟ್ರೀ, ಡಾ. ಅಗರ್‌ವಾಲ್ ಕಣ್ಣಿನ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಪ್ರಕರಣಗಳು ವರದಿಯಾಗಿವೆ.

‘ಕೋವಿಡ್‌ ಕಾಣಿಸಿಕೊಳ್ಳುವ ಪೂರ್ವದಲ್ಲಿ ಇದು ಅಷ್ಟಾಗಿ ಗಮನಕ್ಕೆ ಬರುತ್ತಿರಲಿಲ್ಲ. ಗಂಭೀರವಾಗಿ ಅಸ್ವಸ್ಥಗೊಂಡ ಕೊರೊನಾ ಸೋಂಕಿತರಿಗೆ ಸ್ಟೆರಾಯ್ಡ್‌ ಬಳಸುವುದರಿಂದ ದೇಹದಲ್ಲಿನ ಸಕ್ಕರೆ ಅಂಶ ಹೆಚ್ಚಳವಾಗುತ್ತದೆ. ಅದೇ ರೀತಿ, ರೋಗನಿರೋಧಕ ಶಕ್ತಿ ಕಡಿಮೆ ಇದ್ದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.. ಇದನ್ನು ಬೇಗ ಪತ್ತೆ ಮಾಡದಿದ್ದಲ್ಲಿ ವ್ಯಕ್ತಿಯು ದೃಷ್ಟಿ ಕಳೆದುಕೊಳ್ಳುತ್ತಾನೆ. ಚಿಕಿತ್ಸೆ ನೀಡುವುದು ವಿಳಂಬವಾದಲ್ಲಿ ಮಿದುಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಂಡು, ವ್ಯಕ್ತಿ ಮೃತಪಡುವ ಸಾಧ್ಯತೆ ಇರುತ್ತದೆ’ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಗಂಭೀರ ಸಮಸ್ಯೆ: ‘ಮಧುಮೇಹ ಇದ್ದವರಿಗೆ ಈ ಮೊದಲು ಶಿಲೀಂಧ್ರ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಕೋವಿಡ್‌ನಿಂದ ಚೇತರಿಸಿಕೊಂಡ ಎರಡರಿಂದ ನಾಲ್ಕು ವಾರಗಳ ಅವಧಿಯಲ್ಲಿ ಈ ಸೋಂಕು ಪತ್ತೆಯಾಗುತ್ತಿದೆ’ ಎಂದು ಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತಾ ರಾಥೋಡ್ ತಿಳಿಸಿದರು.

‘ಈ ಸಮಸ್ಯೆಯನ್ನು ಕಡೆಗಣಿಸಿದಲ್ಲಿ ಸೋಂಕು, ಮಿದುಳು ಸೇರಿ ಜೀವಕ್ಕೆ ಅಪಾಯ ತಂದೊಡ್ಡಲಿದೆ. ಕಣ್ಣು ನೋವು, ಕೆಂಪಾಗುವುದು, ಕಿವಿಯ ಹಿಂದೆ ಊತ, ಕಣ್ಣು ಗುಡ್ಡೆ ಮುಂದೆ ಬರುವುದು, ಮೂಗು ಕಟ್ಟುವಿಕೆ ಸೇರಿದಂತೆ ವಿವಿಧ ಲಕ್ಷಣಗಳು ಈ ಸೋಂಕು ಇರುವವರಲ್ಲಿ ಕಾಣಿಸಿಕೊಳ್ಳುತ್ತದೆ’ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ಕೆ. ಭುಜಂಗ ಶೆಟ್ಟಿ ವಿವರಿಸಿದರು.

ಚಿಕಿತ್ಸೆಗೆ ಬೇಕಾದ ಔಷಧ ದುಬಾರಿ
‘ನಾಲ್ಕು ಪ್ರಕರಣಗಳಲ್ಲಿ ವ್ಯಕ್ತಿಯ ಕಣ್ಣನ್ನೇ ತೆಗೆಯುವ ಮೂಲಕ ಶಿಲೀಂಧ್ರ ಸೋಂಕಿನಿಂದ ಜೀವ ಉಳಿಸಲಾಯಿತು. ಕೋವಿಡ್‌ ಎರಡನೇ ಅಲೆ ಕಾಣಿಸಿಕೊಂಡ ಬಳಿಕ ಎಂಟು ಪ್ರಕರಣಗಳು ಬಂದಿದ್ದವು. ಈ ಸೋಂಕು ನಿವಾರಣೆಗೆ ಒದಗಿಸುವ ಔಷಧ ದುಬಾರಿಯಾಗಿದ್ದು’ ಎಂದು ಪೀಪಲ್ ಟ್ರೀ ಆಸ್ಪತ್ರೆಯ ಇಎನ್‌ಟಿ ಶಸ್ತ್ರಚಿಕಿತ್ಸಕ ಡಾ. ರವಿ ಸಚ್ಚಿದಾನಂದ ತಿಳಿಸಿದರು.

‘ಲಿಪೋಸೋಮಲ್ ಆಂಫೊಟೆರಿಸಿನ್ ಬಿ ಎಂಬ ಔಷಧವನ್ನು ಸೋಂಕು ನಿವಾರಣೆಗೆ ನೀಡಬೇಕಾಗುತ್ತದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು