ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಚತುರ್ಥಿ ಸೇರಿದಂತೆ ಹಬ್ಬಗಳ ಸಾರ್ವಜನಿಕ ಆಚರಣೆಗೆ ನಿಷೇಧ

ಮೊಹರಂ ಆಚರಣೆಗೂ ಕಠಿಣ ಕಟ್ಟುಪಾಡು l ಮನೆ, ದೇವಸ್ಥಾನಕ್ಕೆ ಗಣೇಶ ಚತುರ್ಥಿ ಸೀಮಿತ
Last Updated 13 ಆಗಸ್ಟ್ 2021, 1:36 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ಮೊಹರಂ, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದುರ್ಗಾಪೂಜೆ ಮೊದಲಾದ ಹಬ್ಬಗಳಲ್ಲಿ ಸಾರ್ವಜನಿಕರು ಒಗ್ಗೂಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಆಚರಣೆ ಮಾಡುವುದನ್ನು ನಿಷೇಧಿಸಿರುವ ರಾಜ್ಯ ಸರ್ಕಾರ ಗುರುವಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಕೋವಿಡ್‌ ಮೂರನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದೆ. ಹಬ್ಬದ ಸಡಗರದಲ್ಲಿರುವ ಜನರು ಮೈಮರೆತು ಗುಂಪುಗೂಡುವುದರಿಂದ ಕೊರೊನಾ ಸೋಂಕು ಮತ್ತೊಮ್ಮೆ ತೀವ್ರವಾಗಿ ಹರಡುವ ಸಾಧ್ಯತೆ ಇದೆ. ಈ ಸೋಂಕಿನ ಸರಪಳಿ ಮುರಿಯಲು ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.

ಗಣೇಶ ಚತುರ್ಥಿಯನ್ನು ಸರಳವಾಗಿ ತಮ್ಮ ತಮ್ಮ ಮನೆಗಳಲ್ಲಿ ಆಚರಿಸಬೇಕು. ಇದನ್ನು ಹೊರತುಪಡಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಚಪ್ಪರ, ಪೆಂಡಾಲ್‌, ಶಾಮಿಯಾನ, ವೇದಿಕೆ ನಿರ್ಮಿಸಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವುದನ್ನು, ಮೆರವಣಿಗೆಯಲ್ಲಿ ಮೂರ್ತಿ ವಿಸರ್ಜಿಸುವುದನ್ನು ನಿರ್ಬಂಧಿಸಲಾಗಿದೆ.

ಅದೇ ರೀತಿ ಮೊಹರಂ ದಿನ ಸಾರ್ವಜನಿಕ ಸ್ಥಳಗಳಲ್ಲಿ ಆಲಂಗಳು/ಪಂಜಾವನ್ನು ಸ್ಥಾಪಿಸುವುದು ಮತ್ತು ತಾಜಿಯಾವನ್ನು ನಿರ್ಬಂಧಿಸಲಾಗಿದೆ. ಮೊಹರಂ ಪ್ರಾರ್ಥನಾ ಸಭೆ ಮತ್ತು ಮೆರವಣಿಗೆಯನ್ನು ನಿಷೇಧಿಸಲಾಗಿದೆ. ಮೊಹರಂ ಸಂಬಂಧಿತ ಆಚರಣೆಗಳಲ್ಲಿ ಭಾಗವಹಿಸುವವರು ಸಾಮಾಜಿಕ ಅಂತರದೊಂದಿಗೆ ಕನಿಷ್ಠ ಸಂಖ್ಯೆಯಲ್ಲಿ ಭಾಗವಹಿಸಬಹುದು ಎಂದು ಆದೇಶ ತಿಳಿಸಿದೆ.

ಪೂಜಾ ಮತ್ತು ಪ್ರಾರ್ಥನಾ ಸ್ಥಳಗಳನ್ನು ಕೋವಿಡ್‌ ಷರತ್ತಿಗೆ ಒಳಪಟ್ಟು ತೆರೆದು, ಧಾರ್ಮಿಕ ಕೈಂಕರ್ಯ ನಡೆಸಬೇಕು. ಆದರೆ ಜಾತ್ರೆಗಳು, ದೇವಾಲಯದ ಹಬ್ಬಗಳು, ಮೆರವಣಿಗೆ ಮತ್ತು ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ.

ಅಲ್ಲದೆ, ಸಾಮಾಜಿಕ, ರಾಜಕೀಯ, ಕ್ರೀಡಾ, ಮನೋರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ನಡೆಸುವುದು, ಬೃಹತ್‌ ಸಭೆ ಸಮಾರಂಭಗಳನ್ನು ನಡೆಸುವುದನ್ನೂ ನಿಷೇಧಿಸಲಾಗಿದೆ.

ಮೂರನೇ ಅಲೆಯ ಭೀತಿ: ನೆರೆಯ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಕೋವಿಡ್‌ ಮೂರನೇ ಅಲೆ ಕಾಣಿಸಿಕೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ದೃಢ ಪ್ರಕರಣಗಳು ವರದಿಯಾಗುತ್ತಲೇ ಇವೆ. ರಾಜ್ಯದಲ್ಲಿ ಕೋವಿಡ್ ಮೂರನೇ ಅಲೆಯ ಸಂಭಾವ್ಯ ಅಪಾಯವನ್ನು ತಡೆಗಟ್ಟಬೇಕಾದರೆ ಹಬ್ಬಗಳಲ್ಲಿ ಸಾರ್ವಜನಿಕರು ಒಟ್ಟುಗೂಡುವುದನ್ನು ತಡೆಯಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ.

ಇದನ್ನು ಆಧರಿಸಿ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್‌, ಇದೇ 12ರಂದು ಮಾರ್ಗಸೂಚಿ ಹೊರಡಿಸಿದ್ದಾರೆ.

ಈಗಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದರೆ, ಎರಡನೇ ಅಲೆಯ ಸಂದರ್ಭದಲ್ಲಿ ಆದ ಅನಾಹುತಕ್ಕಿಂತಲೂ ಭೀಕರವಾಗಬಹುದು. ಸಾರ್ವಜನಿಕರೂ ಇದನ್ನು ಗಮನದಲ್ಲಿಟ್ಟುಕೊಂಡು ವಿವೇಕದಿಂದ ವರ್ತಿಸಬೇಕು ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಣೇಶ ಹಬ್ಬದ ನಿರ್ಬಂಧಗಳು:

* ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಕೂಡದು

*ಗಣೇಶ ಮೂರ್ತಿಗಳನ್ನು ತರುವಾಗ, ವಿಸರ್ಜಿಸು
ವಾಗ ಯಾವುದೇ ರೀತಿಯ ಮೆರವಣಿಗೆ, ಮನೋರಂಜನಾ ಕಾರ್ಯಕ್ರಮ ಆಯೋಜಿಸುವಂತಿಲ್ಲ

*ಪಾರಂಪರಿಕ ಗೌರಿ–ಗಣೇಶ ಮೂರ್ತಿ ಪೂಜಿಸುವವರು ಅವುಗಳನ್ನು ಮನೆಯಲ್ಲೇ ವಿಸರ್ಜಿಸಬೇಕು. ಅಥವಾ ಅತಿ ಸಮೀಪ ಮಾರ್ಗಗಳನ್ನು ಬಳಸಿಕೊಂಡು ಬಿಬಿಎಂಪಿ,ಪಾಲಿಕೆ, ಜಿಲ್ಲಾಡಳಿತ,ಸ್ಥಳೀಯ ಆಡಳಿತಗಳು ವ್ಯವಸ್ಥೆ ಮಾಡಿದ ಹೊಂಡ, ಕಲ್ಯಾಣಿ, ಮೊಬೈಲ್‌ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಬಹುದು.

* ಗಣೇಶ ಚತುರ್ಥಿ ಆಚರಿಸುವ ದೇವಸ್ಥಾನಗಳಲ್ಲಿ ದಿನ ನಿತ್ಯ, ಸ್ಯಾನಿಟೈಸೇಷನ್‌ ಮಾಡಬೇಕು. ಸಾರ್ವಜನಿಕ ದರ್ಶನಕ್ಕೆ ಬರುವ ಭಕ್ತರಿಗೆ ಸ್ಯಾನಿಟೈಸ್‌ ಮತ್ತು ಥರ್ಮಲ್‌ ಸ್ಕ್ಯಾನಿಂಗ್‌ ಕಡ್ಡಾಯ

ಮೊಹರಂ ನಿರ್ಬಂಧಗಳು:

* ಪಂಜಾ, ಆಲಂ ಮತ್ತು ತಾಜಿಯತ್‌ಗಳನ್ನು ಸಾರ್ವಜನಿಕರು ಮುಟ್ಟದೇ ದೂರದಿಂದ ನೋಡಬೇಕು

*ಖಬರಸ್ಥಾನ ಸೇರಿ ಯಾವುದೇ ಖಾಲಿ ಜಾಗಗಳಲ್ಲಿ ಸಭೆ ಏರ್ಪಡಿಸುವುದು ನಿಷೇಧಿಸಲಾಗಿದೆ. ಕೇವಲ ದಫನ್‌ ಮಾಡುವವರಿಗೆ ಅವಕಾಶವಿದೆ. ಮೊಹರಂ ಸಂಬಂಧಿಸಿದ ಆಚರಣೆಗಳಿಗೆ ಅವಕಾಶ ಇರುವುದಿಲ್ಲ

* ಪ್ರಾರ್ಥನಾ ಸ್ಥಳಗಳಲ್ಲಿ ಮುಖಗವುಸು ಕಡ್ಡಾಯವಾಗಿ ಧರಿಸಬೇಕು

*60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು

* ಕೋವಿಡ್‌ ಮಾರ್ಗಸೂಚಿ ಪಾಲಿಸಿ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಬಹುದು. ಒಂದು ವೇಳೆ ಹೆಚ್ಚು ಜನ ಬಂದರೆ, ಎರಡು ಅಥವಾ ಹೆಚ್ಚಿನ ಪಾಳಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ವ್ಯವಸ್ಥೆ ಮಾಡಬೇಕು

* ಸಭಾಂಗಣ, ಶಾದಿ ಮಹಲ್‌, ಸಮುದಾಯಭವನಗಳಲ್ಲಿ ಮೊಹರಂ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ

* ಮಸೀದಿಗಳಲ್ಲಿ ಪ್ರಾರ್ಥನೆಗೆ ಬರುವವರು ತಮ್ಮ ಮನೆಗಳಿಂದ ಮುಸಲ್ಲಾವನ್ನು ತರಬೇಕು. ಹಸ್ತ ಲಾಘವ ಮತ್ತು ಆಲಿಂಗವನ್ನು ಮಾಡುವಂತಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT