ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನುವಂಶಿಕ ವೈವಿಧ್ಯತೆ ರಕ್ಷಿಸಿಕೊಂಡ ಕೃಷ್ಣಮೃಗಗಳು

Last Updated 12 ಜನವರಿ 2023, 19:39 IST
ಅಕ್ಷರ ಗಾತ್ರ

ಬೆಂಗಳೂರು: ಅರಣ್ಯಪ್ರದೇಶದ ವಿಸ್ತೀರ್ಣ ತಗ್ಗುತ್ತಿರುವುದು ಮತ್ತು ತಮ್ಮ ಆವಾಸ ಸ್ಥಾನದಲ್ಲಿ ಮಾನವ ಒತ್ತುವರಿಯ ಮಧ್ಯೆಯೂ ಕೃಷ್ಣಮೃಗಗಳು ಆನುವಂಶಿಕ ವೈವಿಧ್ಯತೆ ಕಾಪಾಡಿಕೊಂಡಿರುವುದು ಮಾತ್ರವಲ್ಲದೇ, ಇತ್ತೀಚಿನ ದಿನಗಳಲ್ಲಿ ಅವುಗಳ ಸಂಖ್ಯೆಯೂ ಕ್ರಮೇಣ ವೃದ್ಧಿಸಿದೆ.

ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನಗಳ ಕೇಂದ್ರ ನಡೆಸಿರುವ ಅಧ್ಯಯನದಿಂದ ಈ ಅಂಶ ಗೊತ್ತಾಗಿದೆ.

ಗಂಡು ಕೃಷ್ಣಮೃಗಗಳು ನಿರೀಕ್ಷಿಸಿದ್ದಕ್ಕಿಂತಲೂ ಒಂದೇ ಕಡೆ ಗುಂಪಾಗಿ ಇರದೇ ದೂರ ದೂರಕ್ಕೂ ಚದುರಿ ಹೋಗಿವೆ. ಆದರೆ, ಹೆಣ್ಣು ಕೃಷ್ಣಮೃಗಗಳು ಬಹುತೇಕ ತಮ್ಮ ಆವಾಸ ಸ್ಥಾನದ ವಲಯದ ವ್ಯಾಪ್ತಿಯಲ್ಲೇ ವಾಸವಾಗಿರುವುದು ಕಂಡು ಬಂದಿದೆ. ಗಂಡುಗಳು ಚದುರಿ ಹೋಗಿರುವುದರಿಂದ ವಂಶವಾಹಿಯ ಹರಿವು ಕೂಡ ಅಬಾಧಿತವಾಗಿದೆ. ಅಲ್ಲದೇ, ಇವುಗಳಲ್ಲಿ ಮೈಟೊಕಾಂಡ್ರಿಯದ ಗುರುತುಗಳು ಅಂದರೆ ಕೋಶಗಳಲ್ಲಿನ ರಚನೆಯೂ ವಿಶಿಷ್ಟವಾಗಿದ್ದವು ಎಂದು ಐಐಎಸ್‌ಸಿ ಪರಿಸರ ವಿಜ್ಞಾನಗಳ ಕೇಂದ್ರದ ಪ್ರೊ.ಪ್ರವೀಣ್ ಕಾರಂತ್ ಹೇಳಿದ್ದಾರೆ.

ತಮ್ಮ ಆವಾಸ ಸ್ಥಾನಗಳಲ್ಲಿ ಮಾನವರ ಅತಿಕ್ರಮಣದ ಆತಂಕದ ಮಧ್ಯೆಯೂ ಕೃಷ್ಣಮೃಗಗಳು ಬದುಕುಳಿದ ರಹಸ್ಯವನ್ನು ಅನಾವರಣಗೊಳಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಡಿಎನ್‌ಎ ಮತ್ತು ಕರುಳಿನೊಳಗಿರುವ ಸೂಕ್ಷ್ಮಜೀವಿಗಳಲ್ಲಾಗಿರುವ ಬದಲಾವಣೆಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಇವುಗಳ ರಕ್ಷಣೆಗೆ ಈ ಅಧ್ಯಯನವು ಒಳನೋಟ ನೀಡಬಲ್ಲದು ಎಂದು ಕಾರಂತ್ ಅಭಿಪ್ರಾಯಪಟ್ಟಿದ್ದಾರೆ.

‘ಅಧ್ಯಯನಕ್ಕಾಗಿ ಕೃಷ್ಣಮೃಗಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಯಿತು. ದೇಶದ ಉತ್ತರ ಮತ್ತು ದಕ್ಷಿಣ ಭಾಗದ ಗುಂಪುಗಳನ್ನಾಗಿ ಮಾಡಲಾಯಿತು. ಪೂರ್ವದ ವಿಭಾಗ ಭೌಗೋಳಿಕವಾಗಿ ಉತ್ತರಕ್ಕೆ ಹತ್ತಿರವಿದ್ದರೂ, ಅಲ್ಲಿ ದಕ್ಷಿಣ ಭಾಗದ ಕೃಷ್ಣಮೃಗಗಳ ತಳಿಗಳು ಸಾಕಷ್ಟು ಕಂಡುಬಂದಿವೆ. ಈ ಫಲಿತಾಂಶ ಅಚ್ಚರಿಯದಾಗಿತ್ತು. ಅಲ್ಲದೇ ಗಂಡು ಹೆಚ್ಚು ಚದುರಿ ಹೋಗಿದ್ದರೆ, ಹೆಣ್ಣು ತಮ್ಮ ಆವಾಸ ಸ್ಥಾನಗಳಲ್ಲೇ ಇದ್ದವು’ ಎಂದರು.

ಎಂಟು ರಾಜ್ಯಗಳ 12 ವಿವಿಧ ಸ್ಥಳಗಳಲ್ಲಿ ಕೃಷ್ಣಮೃಗಗಳ ಸಗಣಿಯ ಮೂಲಕ ಡಿಎನ್‌ಎ ಸಂಗ್ರಹಿಸಿ, ಡಿಎನ್‌ಎ ಅನುಕ್ರಮಣಿಕೆ ಮಾಡಿ ವಿಶ್ಲೇಷಣೆ ನಡೆಸಲಾಯಿತು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT