ಶುಕ್ರವಾರ, ಸೆಪ್ಟೆಂಬರ್ 17, 2021
26 °C
ಲಾಕ್‌ಡೌನ್‌ ಅವಧಿಯಲ್ಲಿ ಹೆಚ್ಚಳ

ಬಾಲೆಯರು ಬಾಲ್ಯದಿಂದ ಬೆಂಕಿಗೆ: ನಾಲ್ಕು ತಿಂಗಳಲ್ಲಿ 107 ಬಾಲ್ಯವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಾಗಿದೆ. ಲಾಕ್‌ಡೌನ್‌ನ ನಿರ್ಬಂಧಗಳಿಂದ ಉಂಟಾದ ಸ್ತಬ್ಧತೆಯ ಲಾಭ ಪಡೆದು ಹಲವು ಹೆಣ್ಣು ಮಕ್ಕಳಿಗೆ ಮದುವೆ ಮಾಡಲಾಗಿದೆ. ಲಾಕ್‌ಡೌನ್‌ಗಿಂತ ಹಿಂದಿನ ಅವಧಿಗೆ ಹೋಲಿಸಿದರೆ ಲಾಕ್‌ಡೌನ್‌ ದಿನಗಳಲ್ಲಿ ನಡೆದ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚು ಎಂದು ಅಂಕಿ ಅಂಶಗಳು ಹೇಳುತ್ತವೆ.

ಬಾಲ್ಯ ವಿವಾಹ ಮಾಡಿಯೇ ತೀರಬೇಕು ಎಂದು ಹಟಕ್ಕೆ ಬಿದ್ದವರು ವಿವಿಧ ರೀತಿಯ ತಂತ್ರ, ಕುತಂತ್ರಗಳನ್ನು ಹೆಣೆದ ವರದಿಗಳು ರಾಜ್ಯದ ವಿವಿಧೆಡೆಯಿಂದ ಬಂದಿವೆ.  ಮದುವೆ ಒಲ್ಲದ ಬಾಲಕಿಯರೇ ಅದರಿಂದ ತಪ್ಪಿಸಿಕೊಂಡ ಕತೆಗಳು ಅಲ್ಲೊಂದು ಇಲ್ಲೊಂದು ವರದಿಯಾಗಿವೆ.

ಹಿಂದಿನ ಒಂದು ವರ್ಷದ ಅವಧಿಯಲ್ಲಿ 156 ಬಾಲ್ಯವಿವಾಹ ನಡೆದಿದ್ದರೆ, ಲಾಕ್‌ಡೌನ್‌ನ ನಾಲ್ಕೇ ತಿಂಗಳಲ್ಲಿ 107  ಬಾಲ್ಯ ವಿವಾಹಗಳಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಹಿತಿ ನೀಡಿದೆ. ಆದರೆ, ಇಲಾಖೆಯ ಗಮನಕ್ಕೆ ಬಾರದೆ ನಡೆದಿರುವ ವಿವಾಹಗಳ ಸಂಖ್ಯೆ ಇನ್ನೂ ಹೆಚ್ಚು ಎನ್ನುತ್ತದೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ.

‘ಆಡಳಿತ ಯಂತ್ರ ಕೊರೊನಾ ನಿರ್ವಹಣೆಯಲ್ಲಿ ನಿರತವಾಗಿದ್ದಾಗ, ಯಾರೂ ಗಮನಿಸುವುದಿಲ್ಲ ಎಂಬ ಕಾರಣಕ್ಕೆ ಅನೇಕ ಬಾಲ್ಯವಿವಾಹಗಳು ನಡೆದಿವೆ. ಮಧ್ಯರಾತ್ರಿ, ಬೆಳಗಿನ ಜಾವ ಎಲ್ಲ ಮದುವೆ ಮಾಡಿದ್ದಾರೆ. ಕಳೆದ ಮಾರ್ಚ್‌ನಿಂದ ಜೂನ್‌ವರೆಗೆ ಆಯೋಗಕ್ಕೆ 550ಕ್ಕೂ ಹೆಚ್ಚು ದೂರುಗಳು ಬಂದಿವೆ. ಬಹುತೇಕ ಮದುವೆಗಳನ್ನು ತಡೆದಿದ್ದೇವೆ’ ಎನ್ನುತ್ತಾರೆ ಆಯೋಗದ ಅಧ್ಯಕ್ಷ ಡಾ. ಅಂತೋನಿ ಸೆಬಾಸ್ಟಿಯನ್. 

‘ಮೈಸೂರು, ಬಳ್ಳಾರಿ, ಬಾಗಲಕೋಟೆ, ಧಾರವಾಡ, ಬೆಳಗಾವಿ ಭಾಗದಲ್ಲಿ ಹೆಚ್ಚು ಬಾಲ್ಯವಿವಾಹಗಳಾಗಿವೆ’ ಎಂದು ಅವರು ಹೇಳುತ್ತಾರೆ. 

ಯಾವುದೇ ವಿದ್ಯಾರ್ಥಿನಿ ನಿರಂತರ ವಾಗಿ ಶಾಲೆಗೆ ಗೈರಾದರೆ ಸ್ನೇಹಿತರಿಗೆ, ಶಿಕ್ಷಕರಿಗೆ ಗೊತ್ತಾಗುತ್ತಿತ್ತು. ಈಗ ಶಾಲೆಗಳು ಇಲ್ಲದ ಕಾರಣ ಮಾಹಿತಿಯೂ ಸಿಗುವುದಿಲ್ಲ. ಮದುವೆಯಾದರೂ ತಿಳಿಯುವುದಿಲ್ಲ ಎಂಬುದು ಬಾಲ್ಯ ವಿವಾಹ ಹೆಚ್ಚಲು ಒಂದು ಕಾರಣ ಎಂದು ಅವರು ಹೇಳುತ್ತಾರೆ. 

‘ದೂರು ಹೆಚ್ಚಾದರೆ, ವಿವಾಹ ಹೆಚ್ಚಾದಂತಲ್ಲ’ 

‘ಲಾಕ್‌ಡೌನ್‌ ಸಂದರ್ಭದಲ್ಲಿ ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ಹೆಚ್ಚು ದೂರುಗಳು ಬಂದಿರುವುದು ನಿಜ. ಆದರೆ, ದೂರುಗಳು ಹೆಚ್ಚಾದ ಮಾತ್ರಕ್ಕೆ ವಿವಾಹಗಳೂ ಜಾಸ್ತಿ ಆಗಿವೆ ಎಂದರ್ಥವಲ್ಲ’ ಎನ್ನುತ್ತಾರೆ ಇಲಾಖೆಯ ನಿರ್ದೇಶಕ ಕೆ.ಎ. ದಯಾನಂದ. 

‘ಬಾಲ್ಯವಿವಾಹದ ವಿರುದ್ಧ ದೊಡ್ಡಮಟ್ಟದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ರಾಜ್ಯಮಟ್ಟದ ಸಹಾಯವಾಣಿ ಸಂಖ್ಯೆ 181 ಬಗ್ಗೆ ಹೆಚ್ಚು ಪ್ರಚಾರ ಮಾಡುತ್ತಿರುವುದರಿಂದ ದೂರುಗಳ ಸಂಖ್ಯೆ ಜಾಸ್ತಿಯಾಗಿದೆ’ ಎಂದು ಅವರು ಹೇಳುತ್ತಾರೆ.

‘ಲಾಕ್‌ಡೌನ್‌ ಸಂದರ್ಭದಲ್ಲಿಯೇ ಹೆಚ್ಚು ಅಧಿಕಾರಿಗಳು ಸಾರ್ವಜನಿಕರ ಸಂಪರ್ಕಕ್ಕೆ ಬಂದಿದ್ದಾರೆ. ಆಶಾ ಕಾರ್ಯಕರ್ತೆಯರು ಈ ಸಂದರ್ಭದಲ್ಲಿ ಮನೆ ಮನೆಗೆ ತೆರಳಿದ್ದಾರೆ. ಈಗ ಬಹುತೇಕರ ಕೈಯಲ್ಲಿ ಮೊಬೈಲ್‌ ಫೋನ್‌ಗಳಿರುವುದರಿಂದ ತಕ್ಷಣಕ್ಕೆ ಮಾಹಿತಿ ನೀಡುತ್ತಾರೆ. ಪ್ರಕರಣಗಳ ಸಂಖ್ಯೆ ಇದ್ದಷ್ಟೇ ಇದ್ದರೂ, ದೂರುಗಳ ಸಂಖ್ಯೆ ಜಾಸ್ತಿಯಾಗಿರುವುದರಿಂದ ಬಾಲ್ಯವಿವಾಹಗಳ ಕುರಿತು ಹೆಚ್ಚು ಚರ್ಚೆ ನಡೆಯುತ್ತಿದೆ’ ಎಂದರು.

‘ಮೊದಲು ಸಕ್ಷಮ ಪ್ರಾಧಿಕಾರದ ಅಧಿಕಾರಿಗಳ ಸಂಖ್ಯೆಯೂ ಕಡಿಮೆ ಇತ್ತು. ಈಗ ಮುಖ್ಯಶಿಕ್ಷಕರು, ಪಿಡಿಒ, ಇಲಾಖೆಯ ಸೂಪರ್‌ವೈಸರ್, ಇನ್‌ಸ್ಪೆಕ್ಟರ್, ಕಾನ್‌ಸ್ಟೆಬಲ್, ತಹಶೀಲ್ದಾರ್‌ ಸೇರಿದಂತೆ ಎಲ್ಲರಿಗೂ ಹೊಣೆ ನೀಡಲಾಗಿದೆ. ರಾಜ್ಯದಲ್ಲಿ ಈಗ ಒಟ್ಟು 5,800 ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು ಇದ್ದಾರೆ’ ಎಂದು ಅವರು ತಿಳಿಸಿದರು. 

ಕಣ್ಣಿಗೆ ಮಣ್ಣೆರಚಲು ವಧುವೇ ಬದಲು!

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಜೂನ್‌ನಲ್ಲಿ ನಡೆದ ಬಾಲ್ಯವಿವಾಹ ಪ್ರಕರಣವೊಂದರಲ್ಲಿ ಅಧಿಕಾರಿಗಳ ಕಣ್ತಪ್ಪಿಸುವುದಕ್ಕಾಗಿ ಪೋಷಕರು ಹಾಗೂ ಸಂಬಂಧಿಕರು ವಧುವನ್ನೇ ಬದಲಾಯಿ
ಸಿದ್ದರು. 

ಚಾಮರಾಜನಗರ ತಾಲ್ಲೂಕಿನ ಗ್ರಾಮವೊಂದರ 16 ವರ್ಷದ ಬಾಲಕಿಗೆ, ಆಕೆಯ ಪೋಷಕರು ಮದುವೆ ನಿಶ್ಚಯಿಸಿದ್ದರು. ಮಕ್ಕಳ ಸಹಾಯವಾಣಿಗೆ (1098) ಕರೆಮಾಡಿದ್ದ ವ್ಯಕ್ತಿಯೊಬ್ಬರು, ಮದುವೆ ನಡೆಯುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು. 

ಈ ಮಾಹಿತಿ ಆಧಾರದಲ್ಲಿ, ಸಹಾಯವಾಣಿ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮದುವೆ ನಡೆಯುತ್ತಿದ್ದ ಮನೆಗೆ ಭೇಟಿ ನೀಡಿದ್ದರು.  ಈ ಸಂದರ್ಭದಲ್ಲಿ ಮನೆಯವರು, ‘ಬಾಲ್ಯ ವಿವಾಹ ನಡೆಯುತ್ತಿಲ್ಲ’ ಎಂದು ಸಮಜಾಯಿಷಿ ನೀಡಿ, ಬೇರೆ ಯುವತಿಯೊಬ್ಬಳನ್ನು ತೋರಿಸಿ, ಆಕೆಯೇ ಮದುಮಗಳು ಎಂದು ಬಿಂಬಿಸಿದ್ದರು.  ಅಧಿಕಾರಿಗಳು ವಿಚಾರಣೆ ಮಾಡಿದಾಗ ಭಯಗೊಂಡ ಯುವತಿ ಉತ್ತರಿಸಲು ತಡವರಿಸಿದಳು. ‘ಮದುವೆ ನನಗೆ ಅಲ್ಲ, ಬೇರೆ ಹುಡುಗಿ ಇದ್ದಾಳೆ’ ಎಂದು ಒಪ್ಪಿಕೊಂಡಳು. ಬಾಲಕಿ ವಧು ಮನೆಯಲ್ಲೇ ಇದ್ದಳು. ಆಕೆಗೆ ಮದುಮಗಳ ಅಲಂಕಾರವನ್ನೂ ಮಾಡಲಾಗಿತ್ತು.  

ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳ ತಂಡವು ಪೋಷಕರಿಗೆ ಎಚ್ಚರಿಕೆ ನೀಡಿತಲ್ಲದೇ ಮದುವೆಯನ್ನು ನಿಲ್ಲಿಸುವಲ್ಲಿ ಯಶಸ್ವಿಯಾಯಿತು.

ಮದುವೆ ಧಿಕ್ಕರಿಸಿದ ಐಎಎಸ್‌ ಕನಸಿನ ಬಾಲಕಿ

ಹೊಸಪೇಟೆ: ಐಎಎಸ್‌ ಅಧಿಕಾರಿ ಆಗಬೇಕೆಂಬ ಕನಸು ಹೊತ್ತ ಬಾಲಕಿಗೆ ಪೋಷಕರು ಒತ್ತಾಯಪೂರ್ವಕವಾಗಿ ಮದುವೆ ಮಾಡಲು ಮುಂದಾದಾಗ ಆಕೆ ಮನೆಯನ್ನೇ ತೊರೆದು ಗುರಿಯೆಡೆಗೆ ಹೆಜ್ಜೆ ಹಾಕಿದ ಕಥೆಯಿದು.

ಕಂಪ್ಲಿ ಸಮೀಪದ ಹರಳಹಳ್ಳಿ ತಾಂಡದ 17 ವರ್ಷದ ಬಾಲಕಿ ಪಿಯುಸಿ ಪರೀಕ್ಷೆಯಲ್ಲಿ ಶೇ 83ರಷ್ಟು ಅಂಕ ಗಳಿಸಿದ್ದಾರೆ. ಏಪ್ರಿಲ್‌ನಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಐದು ವಿಷಯಗಳನ್ನು ಚೆನ್ನಾಗಿ ಬರೆದಿದ್ದರು. ಇಂಗ್ಲಿಷ್‌ ವಿಷಯದ ಪರೀಕ್ಷೆ ಬರೆಯಬೇಕೆಂದಾಗ ಲಾಕ್‌ಡೌನ್‌ ಆಗಿತ್ತು. 

ಆಕೆಯ ಪೋಷಕರು ಈ ಸಮಯದಲ್ಲೇ ಮಗಳ ಮದುವೆ ಮಾಡಿ ತಮ್ಮ ಕರ್ತವ್ಯ ನಿಭಾಯಿಸಲು ಮುಂದಾಗಿದ್ದರು. ಮದುವೆಯಾಗುವಂತೆ ಮಗಳ ಮೇಲೆ ಒತ್ತಡ ಹೇರುತ್ತಿದ್ದರು. ಅವರ ಮಾತಿಗೆ ಮಗಳು ಸುತಾರಾಂ ಒಪ್ಪಲಿಲ್ಲ. ಯಾವಾಗ ಅವರಿಂದ ಒತ್ತಡ ಹೆಚ್ಚಾಯಿತೋ, ‘ಇನ್ನೊಂದು ವಿಷಯದ ಪರೀಕ್ಷೆ ಬರೆದ ನಂತರ ಮದುವೆ ಆಗುವೆ’ ಎಂದು ಬಾಲಕಿ ಹೇಳಿದ್ದರು. ಅದಕ್ಕೆ ಪೋಷಕರು ಒಪ್ಪಿದ್ದರು.

ಜೂನ್‌ 18ರಂದು ಇಂಗ್ಲಿಷ್‌ ಪರೀಕ್ಷೆ ಬರೆದ ಆಕೆ ಬಳಿಕ ಮನೆಗೆ ಹಿಂತಿರುಗಲಿಲ್ಲ. ಈ ವಿಷಯ ‘ಚೈಲ್ಡ್‌ಲೈನ್‌’ ಸಂಸ್ಥೆಯ ಗಮನಕ್ಕೆ ಬಂದಾಗ, ಅವರು ಬಾಲಕಿಯ ನೆರವಿಗೆ ಧಾವಿಸಿದ್ದಾರೆ. ನಂತರ ಆಕೆಗೆ ಮಕ್ಕಳ ಬಾಲಮಂದಿರದಲ್ಲಿ ಇರಲು ವ್ಯವಸ್ಥೆ ಮಾಡಿಸಿದ್ದಾರೆ.

‘ನನಗೆ ಐಎಎಸ್‌ ಅಧಿಕಾರಿ ಆಗುವ ಆಸೆಯಿದೆ. ಈಗಲೇ ಮದುವೆಯಾಗುವುದು ಇಷ್ಟವಿಲ್ಲ. ಆದರೂ ಒತ್ತಾಯದಿಂದ ಮದುವೆ ಮಾಡಿಸುತ್ತಿದ್ದಾರೆ’ ಎಂದು ಬಾಲಕಿ ನಮ್ಮ ಬಳಿ ಹೇಳಿದರು. ಆ ಬಗ್ಗೆ ಠಾಣೆಗೆ ದೂರು ಕೊಟ್ಟೆವು. ನಂತರ ಪೋಷಕ
ರನ್ನು ಕರೆಸಿ, 18 ವರ್ಷ ತುಂಬುವವರೆಗೂ ಮದುವೆ ಮಾಡುವುದಿಲ್ಲ ಎಂದು ಬಾಂಡ್‌ ಬರೆಸಿಕೊಳ್ಳಲಾಯಿತು’ ಎಂದು ‘ಚೈಲ್ಡ್‌ಲೈನ್‌’ ಸಂಯೋಜಕ ಚಿದಾನಂದ ಹೇಳಿದ್ದಾರೆ.

ಬಾಲ್ಯ ವಿವಾಹದ ಸುತ್ತ ಬಡತನ

ಶಿವಮೊಗ್ಗ: ‘ಮಗಳು ಚಿಕ್ಕವಳಿದ್ದಾಗಲೇ ಗಂಡ ಹೋದರು. ಪುಟ್ಟ ಮಗುವನ್ನು ಕಂಕುಳಲ್ಲಿ ಇಟ್ಟುಕೊಂಡೇ ಕೂಲಿ ಮಾಡಿದೆ. ಅವಳನ್ನು ಸಲಹಿದೆ. ಈಗ ಬೆಳೆದು ನಿಂತಿದ್ದಾಳೆ. ಮನೆಯಲ್ಲೇ ಬಿಟ್ಟು ಹೋಗಲು ಭಯವಾಗುತ್ತದೆ. ನಮಗ್ಯಾರೂ ದಿಕ್ಕಿಲ್ಲ. ಹೇಗೋ ಮದುವೆ ಮಾಡುತ್ತಿದ್ದೇವೆ ಬಿಟ್ಟು ಬಿಡಿ...’

ಇದು ತೀರ್ಥಹಳ್ಳಿ ತಾಲ್ಲೂಕಿನ ಪುಟ್ಟಹಳ್ಳಿಯಲ್ಲಿ ಬಾಲ್ಯ ವಿವಾಹ ತಡೆಯಲು ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ತಂಡ ಭೇಟಿ ನೀಡಿದಾಗ ವಧುವಿನ ತಾಯಿ ಕಾಲಿಗೆ ಬಿದ್ದು ಬೇಡಿಕೊಂಡ ಪರಿ.

ಶಿವಮೊಗ್ಗ ನಗರದ ಸಮೀಪದಲ್ಲೇ ಇರುವ ಹಳ್ಳಿಯಲ್ಲಿ ಬಾಲ್ಯ ವಿವಾಹ ನಡೆಯುತ್ತಿರುವ ಸ್ಥಳಕ್ಕೆ ತೆರಳಿ ಮಧುವನ್ನು ರಕ್ಷಿಸಿ, ಸಾಂತ್ವನ ಕೇಂದ್ರದಲ್ಲಿ ರಕ್ಷಣೆ ನೀಡಲಾಗಿತ್ತು. ಸೀದಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಕಚೇರಿಗೇ ಬಂದ ಸಂಬಂಧಿಕರ ಗುಂಪು ತಮ್ಮ ಗ್ರಾಮದಲ್ಲಿ ಬಾಲಕಿಯರ ಮೇಲೆ ನಡೆದ ದೌರ್ಜನ್ಯ, ಅಪಹರಣ ಪ್ರಕರಣಗಳ ಪಟ್ಟಿಯನ್ನೇ ಎದುರಿಗಿಟ್ಟು, 18 ಆಗುವವರೆಗೂ ತಮ್ಮ ಹೆಣ್ಣು ಮಕ್ಕಳು ಸುರಕ್ಷಿತ ಎಂಬ ಖಾತ್ರಿ ನೀಡಿ ಎಂದು ಪಟ್ಟುಹಿಡಿದಿದ್ದರು. 

‘ಅತಿ ಹೆಚ್ಚು ಬಾಲ್ಯ ವಿವಾಹಗಳು ನಡೆಯುವುದು 14ರಿಂದ 18ರ ಮಧ್ಯೆ. ಅವರಲ್ಲಿ ಪ್ರೌಢಶಾಲೆ ಹಂತದಲ್ಲೇ ಶಾಲೆ ತೊರೆದ ಮಕ್ಕಳು ಹೆಚ್ಚು. ಹಾಗಾಗಿ, ಶಾಲೆ ತೊರೆದ ಮಕ್ಕಳ ಮೇಲೆ ನಿಗಾ ಇರಿಸಬೇಕು. 18 ತುಂಬುವವರೆಗೂ  ಎಲ್ಲ ಬಾಲಕಿಯರ ಮಾಹಿತಿ ಸಂಗ್ರಹ ಅವಶ್ಯ’ ಎನ್ನುತ್ತಾರೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಖಾ.

ಮದುವೆಯಾದ ಬಾಲಕಿಗೆ ಗರ್ಭಪಾತ

ಚಿತ್ರದುರ್ಗ: ಲಾಕ್‌ಡೌನ್‌ ಸಂದರ್ಭದಲ್ಲಿ ವಿವಾಹವಾಗಿದ್ದ ಬಾಲಕಿ ಗರ್ಭಪಾತಕ್ಕೆ ಒಳಗಾಗಿದ್ದು, ದ್ವಿತೀಯ ಪಿಯು ವ್ಯಾಸಂಗದತ್ತ ಮುಖಮಾಡಿದ್ದಾಳೆ.

‘ಹೊಟ್ಟೆಯಲ್ಲಿರುವ ಮಗು ಬೇಡ. ಅದನ್ನು ತೆಗೆದುಹಾಕಿದರೆ ಶಿಕ್ಷಣ ಮುಂದುವರಿಸಲು ಅನುಕೂಲವಾಗುತ್ತದೆ...’ ಎಂದು ಕೋರ್ಟ್‌ ಮೆಟ್ಟಿಲೇರಿದ್ದ 17 ವರ್ಷದ ಬಾಲಕಿಗೆ ತಿಂಗಳ ಹಿಂದೆ ಗರ್ಭಪಾತವಾಗಿದೆ. ಬಾಲಕಿ ಮನೆಗೆ ಮರಳಿದ್ದು, ಮಾಡಿದ ತಪ್ಪಿಗೆ ಪೋಷಕರು ಪರಿತಪಿಸುತ್ತಿದ್ದಾರೆ.

ಚಿತ್ರದುರ್ಗ ನಗರದ ಬಡಾವಣೆಯೊಂದರ ಬಾಲಕಿ ಪ್ರಥಮ ಪಿಯು ಪರೀಕ್ಷೆ ಬರೆದು ಮನೆಯಲ್ಲಿದ್ದರು. ಶಿಕ್ಷಣ ಮುಂದುವರಿಸಿ ಉದ್ಯೋಗ ಹಿಡಿಯುವ ಕನಸು ಕಂಡಿದ್ದ ಬಾಲಕಿಗೆ ಲಾಕ್‌ಡೌನ್‌ ಮುಳುವಾಗಿತ್ತು. ಪೋಷಕರು ಬಾಲಕಿಗೆ ಒತ್ತಾಯಪೂರ್ವಕವಾಗಿ ವಿವಾಹ ಮಾಡಿ ಕೈತೊಳೆದುಕೊಂಡಿದ್ದರು.

ಕೆಲ ದಿನಗಳ ಬಳಿಕ ಬಾಲ್ಯ ವಿವಾಹದ ಬಗ್ಗೆ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ಸಿಕ್ಕಿತ್ತು. ಬಾಲಕಿಯನ್ನು ರಕ್ಷಿಸಿ ಬಸವೇಶ್ವರ ವಿದ್ಯಾಸಂಸ್ಥೆಯಲ್ಲಿ ಆಶ್ರಯ ಕಲ್ಪಿಸಿದ್ದರು. ಅದಾಗಲೇ ಗರ್ಭಿಣಿಯಾಗಿದ್ದ ಬಾಲಕಿ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯದ ಅನುಮತಿ ಸಿಗುವ ಮೊದಲೇ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ ಬಾಲಕಿಗೆ ಗರ್ಭಪಾತವೂ ಆಯಿತು.

ಮೊಳಕಾಲ್ಮುರು ತಾಲ್ಲೂಕಿನ ರಾಂಪುರದ ಖಾಸಗಿ ಶಾಲೆಯೊಂದರ 14 ಹೆಣ್ಣುಮಕ್ಕಳು ಬಾಲ್ಯ ವಿವಾಹವಾಗಿದ್ದಾರೆ. ಈ ಬಗ್ಗೆ ಮಕ್ಕಳ ಸಹಾಯವಾಣಿಗೆ ದೂರು ಬಂದಿದೆ. ಬಾಲ್ಯ ವಿವಾಹವಾದ ಬಹುತೇಕ ಎಲ್ಲರೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರು. ಇವರ ಪತ್ತೆ ಕಾರ್ಯ ನಡೆದಿದೆಯಾದರೂ ಬಾಲ್ಯ ವಿವಾಹ ನಿರೂಪಿಸುವ ಸಾಕ್ಷ್ಯಗಳು ಮಾತ್ರ ಲಭ್ಯವಾಗಿಲ್ಲ ಎಂಬುದು ಮಕ್ಕಳ ರಕ್ಷಣಾ ಘಟಕದ ವಿವರಣೆ.

ನಾಲ್ಕು ಲವ್‌, ಮನೆಯವರಿಂದ ಒಂದು ಮದುವೆ

ದಾವಣಗೆರೆ: ಲಾಕ್‌ಡೌನ್‌ ಆದಾಗಿನಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 42 ಬಾಲ್ಯವಿವಾಹಗಳನ್ನು ಅಧಿಕಾರಿಗಳು ತಪ್ಪಿಸಿದ್ದಾರೆ. ಅಧಿಕಾರಿಗಳು ತಲುಪುವ ಹೊತ್ತಿಗೆ ಒಂದು ಮದುವೆ ನಡೆದುಹೋಗಿದೆ. ಇದಲ್ಲದೇ 18 ವರ್ಷದ ಒಳಗಿನ ನಾಲ್ವರು ಹುಡುಗಿಯರು ಪ್ರೀತಿಸಿ ಮನೆ ತೊರೆದು ಮದುವೆಯಾಗಿದ್ದಾರೆ.

ದಾವಣಗೆರೆ ತಾಲ್ಲೂಕಿನ ಜರಿಕಟ್ಟೆಯ 17 ವರ್ಷದ ಬಾಲಕಿಗೆ ಮನೆಯವರು ಅದೇ ಊರಿನ ಯುವಕನ ಜತೆಗೆ ಮದುವೆ ನಿಶ್ಚಯಿಸಿದ್ದರು. ಮದುವೆ ದಿನ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಿಡಿಪಿಒ, ಮಕ್ಕಳ ರಕ್ಷಣಾ ಘಟಕ, ಪೊಲೀಸ್‌ ಸಿಬ್ಬಂದಿ ಹೋಗಿದ್ದರು. ಆದರೆ ಅಧಿಕಾರಿಗಳು ತಲುಪುವ ಮೊದಲೇ ಬೆಳಿಗ್ಗೆ 8.30ಕ್ಕೆ ಮದುವೆ ಮುಗಿದುಹೋಗಿತ್ತು. ಎರಡೂ ಕಡೆಯ ಹೆತ್ತವರ ಮೇಲೆ ಪ್ರಕರಣ ದಾಖಲಿಸಿ ಆ ಬಾಲಕಿಯನ್ನು ಬಾಲಮಂದಿರಕ್ಕೆ ಕರೆದುಕೊಂಡು ಬರಲಾಗಿತ್ತು.

ಲವ್‌ ಮ್ಯಾರೇಜ್‌: ಮುದಹದಡಿಯ 17 ವರ್ಷದ ಬಾಲಕಿ, ಭಾರತ್‌ ಕಾಲೊನಿಯ 17 ವರ್ಷದ ಬಾಲಕಿ ಬೇರೆ ಬೇರೆ ಕಾಲೇಜಿನಲ್ಲಿ ಪ್ರಥಮ ಪಿಯು ಓದುತ್ತಿದ್ದರು. ಇಬ್ಬರೂ ತಮ್ಮ ಮನೆ ಬಳಿಯ ಯುವಕರೊಂದಿಗೆ ಪರಾರಿಯಾಗಿದ್ದರು. ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು. ಪೊಲೀಸರು ಪತ್ತೆಹಚ್ಚುವ ವೇಳೆ ಮದುವೆ ನಡೆದಿತ್ತು. ಇದೇ ರೀತಿ ಹರಿಹರ ತಾಲ್ಲೂಕಿನ ಭಾನುವಳ್ಳಿಯ 17 ವರ್ಷದ 10 ತಿಂಗಳ ಬಾಲಕಿ, ದಾವಣಗೆರೆ ತಾಲ್ಲೂಕಿನ ಕುಕ್ಕವಾಡದ 17 ವರ್ಷದ ಬಾಲಕಿ ಪ್ರೌಢಶಾಲೆ ಮಟ್ಟದಲ್ಲೇ ತರಗತಿ ತೊರೆದು ಮನೆಯಲ್ಲಿದ್ದರು. ಅವರೂ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು, ಬಳಿಕ ಪೊಲೀಸರು ಪತ್ತೆಹಚ್ಚುವ ವೇಳೆಗೆ ಮದುವೆ ನಡೆದು ಹೋಗಿತ್ತು.

ಬಾಲ್ಯ ವಿವಾಹ: ಗದಗ ಜಿಲ್ಲೆಯಲ್ಲಿ ಕ್ಷಿಪ್ರ ಕಾರ್ಯಾಚರಣೆ

ಗದಗ: ‘ಬಾಲ್ಯ ವಿವಾಹದ ಬಗ್ಗೆ ನಮಗೆ ಮೊದಲೇ ಮಾಹಿತಿ ಸಿಗುತ್ತದೆ. 1098 ಚೈಲ್ಡ್‌ ಲೈನ್‌ನಿಂದಲೂ ದೂರುಗಳು ಬರುತ್ತವೆ. ಜತೆಗೆ ಇಲಾಖೆ ವತಿಯಿಂದ ಸಮಿತಿಗಳನ್ನು ರಚಿಸಿದ್ದೇವೆ. ಅದರಲ್ಲಿ ಅಂಗನವಾಡಿ ಶಿಕ್ಷಕಿಯರು, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ಪಿಡಿಒ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರಾಗಿರುತ್ತಾರೆ. ಇವರೆಲ್ಲರೂ ಸ್ಥಳೀಯ ಅಧಿಕಾರಿಗಳು. ಪ್ರತಿ ಮೂರು ತಿಂಗಳಿಗೊಮ್ಮೆ ಕಮಿಟಿ ವತಿಯಿಂದ ಸಭೆ ನಡೆಸುತ್ತೇವೆ. ಆಗ ಮಾಹಿತಿ ಲಭಿಸುತ್ತದೆ’ ಎನ್ನುತ್ತಾರೆ ಗದಗ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಅವಿನಾಶ್‌ ಎಸ್‌.ಗೋಟಕಿಂಡಿ. 

‘ಒಂದು ವೇಳೆ ನಮ್ಮೆಲ್ಲರ ಕಣ್ತಪ್ಪಿಸಿ ಮದುವೆ ಮಾಡಿದ್ದರೂ ಆ ಮಾಹಿತಿ ಕೂಡ ನಮಗೆ ಸಿಗುತ್ತದೆ. ಅಂತಹ ಸಂದರ್ಭದಲ್ಲಿ ಮೊದಲಿಗೆ ಎಫ್‌ಐಆರ್‌ ಮಾಡಿಸುತ್ತೇವೆ. ನಂತರ, ಆ ಹುಡುಗಿಯನ್ನು ರಕ್ಷಣೆ ಮಾಡಿ, ಅವಳನ್ನು ಬಾಲಕಿಯರ ಬಾಲಮಂದಿರಕ್ಕೆ ಸೇರಿಸುತ್ತೇವೆ. ಆಕೆಗೆ 18 ವರ್ಷ ತುಂಬಿದ ನಂತರವಷ್ಟೇ ಮನೆಗೆ ಕಳುಹಿಸುತ್ತೇವೆ’ ಎನ್ನುತ್ತಾರೆ ಅವರು.

ವಿವಾಹದ ಚಿತ್ರ ಆಧರಿಸಿ ದೂರು!

ತುಮಕೂರು: ಮಧುಗಿರಿ ತಾಲ್ಲೂಕಿನ ಒಂದು ಹಳ್ಳಿ. ಗ್ರಾಮದ ಆಂಜನೇಯ ದೇಗುಲದಲ್ಲಿ ಬೆಳಗಿನ ಜಾವ 5 ಗಂಟೆಗೆ ಬಾಲಕಿಯ ವಿವಾಹ ನಡೆಯಬೇಕಿತ್ತು. ಬೆಳಗ್ಗೆ ಬಾಲ್ಯ ವಿವಾಹ ನಡೆಯುತ್ತದೆ ಎನ್ನುವ ಮಾಹಿತಿ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಹಿಂದಿನ ರಾತ್ರಿ 10 ಗಂಟೆ ಸುಮಾರಿಗೆ ದೊರೆಯಿತು. ಅಧಿಕಾರಿಗಳು ಸ್ಥಳಕ್ಕೆ ಹೋದರೆ ವಿವಾಹ ನಡೆಯುವ ಯಾವುದೇ ಸುಳಿವೂ ಇರಲಿಲ್ಲ ಇಲ್ಲ!

ಅಧಿಕಾರಿಗಳು ಸ್ಥಳೀಯರ ವಿಚಾರಣೆ ನಡೆಸಿ ವಾಪಸಾದರು. ಆದರೆ ಕೆಲವೇ ಹೊತ್ತಿನಲ್ಲಿ ಬಾಲಕಿಯ ವಿವಾಹ ನಡೆದ ಚಿತ್ರಗಳು ಸಿಡಿಪಿಒಗೆ ದೊರೆಯಿತು. ಆ ಚಿತ್ರಗಳು ಮತ್ತು ಕೆಲವರ ಹೇಳಿಕೆ ಆಧರಿಸಿ ಲೈಂಗಿಕ ದೌರ್ಜನ್ಯ ತಡೆ, ಬಾಲ್ಯ ವಿವಾಹ ನಿಷೇಧ ಹಾಗೂ ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಕಾಯ್ದೆಯಡಿ ವರ ಹಾಗೂ ಆತನ ಪೋಷಕರ ವಿರುದ್ಧ ಸಿಡಿಪಿಒ ದೂರು ದಾಖಲಿಸಿದರು.

–ಹೀಗೆ ಲಾಕ್‌ಡೌನ್ ಅವಧಿಯಲ್ಲಿ ‘ಗು‍ಪ್ತ’ವಾಗಿ ನಡೆಯುವ ಬಾಲ್ಯ ವಿವಾಹ ತಡೆಯುವುದು ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ಸವಾಲಾಗಿದೆ.

ಶಿರಾ ತಾಲ್ಲೂಕಿನಲ್ಲಿ ಪೋಷಕರ ಒತ್ತಾಯಕ್ಕೆ ವಿವಾಹವಾದ ಬಾಲಕಿ ಎರಡೇ ದಿನಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಳು.

‘ಜುಲೈ ಕೊನೆ ವಾರದ ಒಂದು ದಿನ ಸಂಜೆ 5ರಿಂದ 7 ಗಂಟೆವರೆಗೆ ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಎಂಟು ಕರೆಗಳು ಬಂದಿವೆ’ ಎನ್ನುತ್ತಾರೆ ತುಮಕೂರು ಜಿಲ್ಲೆಯಲ್ಲಿ ಮಕ್ಕಳ ಸಹಾಯವಾಣಿ ನಿರ್ವಹಣೆ ಜವಾಬ್ದಾರಿ ಹೊತ್ತ ಅಭಿವೃದ್ಧಿ ಸಾಮಾಜಿಕ ಸೇವಾ ಸಂಸ್ಥೆ ಸಿಬ್ಬಂದಿ.

ಲಾಕ್‌ಡೌನ್ ನಿಯಮ ಉಲ್ಲಂಘನೆ!

ಬಾಗಲಕೋಟೆ: ಅದು ಏಪ್ರಿಲ್ ತಿಂಗಳು. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿಯಾದ ನಾಕಾಬಂದಿ ವ್ಯವಸ್ಥೆ ಮಾಡಲಾಗಿತ್ತು. ಎಲ್ಲೆಲ್ಲೂ ಪೊಲೀಸರಿಂದ ಕಟ್ಟೆಚ್ಚರ. ಈ ವೇಳೆ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕು ತೇವರಟ್ಟಿಯಿಂದ ಬೆಳಗಿನ ಜಾವ 4.30ಕ್ಕೆ ಬೈಕ್‌ನಲ್ಲಿ ಹೊರಟ ವರ ಹಾಗೂ ಆತನ ತಾಯಿ 6.30ಕ್ಕೆ ಮುಧೋಳ ತಾಲ್ಲೂಕಿನ ಮಳಲಿ ಗ್ರಾಮಕ್ಕೆ ಬಂದಿದ್ದರು. ಬಿಗಿ ಲಾಕ್‌ಡೌನ್ ನಡುವೆಯೂ ಪೊಲೀಸರ ಕಣ್ತಪ್ಪಿಸಿ ಒಳ ರಸ್ತೆಗಳ ಮೂಲಕ ಅವರು ವಧುವಿನ ಮನೆಗೆ ಬಂದು ಸೇರಿದ್ದರು.

ವಿಶೇಷವೆಂದರೆ ಬೆಳಗ್ಗೆ 11.30ರ ಮುಹೂರ್ತದಲ್ಲಿ ಯುವಕನ ಮದುವೆ ನಡೆಯುವುದಿತ್ತು. ಅದೂ ಬಾಲಕಿಯೊಂದಿಗೆ! ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ಬಾಲಕಿಯನ್ನು ತೇವರಟ್ಟಿಯ ಆ ಯುವಕನಿಗೆ ಕೊಟ್ಟು ಮದುವೆ ಮಾಡಲು ಆಕೆಯ ಪೋಷಕರು ಮುಂದಾಗಿದ್ದರು. ಬಾಲೆಗೆ ಮದುವೆ ಇಷ್ಟವಿರಲಿಲ್ಲ. ವಿಷಯ ತಿಳಿದ ಮಕ್ಕಳ ರಕ್ಷಣಾ ಅಧಿಕಾರಿಗಳು ಹಾಗೂ ಸಹಾಯವಾಣಿ ಸಿಬ್ಬಂದಿ ಬೆಳಗ್ಗೆ 8.30ಕ್ಕೆ ಗ್ರಾಮಕ್ಕೆ ತೆರಳಿದ್ದರು. ಆಗಿನ್ನೂ ಮದುವೆಗೆ ಸಿದ್ಧತೆ ನಡೆದಿತ್ತು. ವರ ಸೇರಿದಂತೆ ಮದುವೆಗೆ ಬಂದಿದ್ದ ಅವನ ಕುಟುಂಬದವರು ಎಲ್ಲರೂ ಸಿಕ್ಕಿಬಿದ್ದರು. ಮದುವೆ ತಡೆಯುವ ಜೊತೆಗೆ, ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ವರನ ಕಡೆಯವರ ಮೇಲೆ ಪೊಲೀಸರು ಕ್ರಮಕ್ಕೆ ಮುಂದಾದರು. ಕೋವಿಡ್ ಸಂಕಷ್ಟ ಇದ್ದ ಕಾರಣ ಬಾಲಕಿಯನ್ನು ಮಕ್ಕಳ ರಕ್ಷಣಾ ಕೇಂದ್ರಕ್ಕೆ ಅಧಿಕಾರಿಗಳು ಕರೆತರಲಿಲ್ಲ. ಬದಲಿಗೆ ಆಕೆಗೆ 18 ತುಂಬುವವರೆಗೂ ಮದುವೆ ಮಾಡುವುದಿಲ್ಲ ಎಂದು ಪೋಷಕರಿಂದ ಮುಚ್ಛಳಿಕೆ ಬರೆಸಿಕೊಳ್ಳುವ ಜೊತೆಗೆ ಆ ಬಗ್ಗೆ ನಿಗಾ ವಹಿಸುವ ಹೊಣೆ ಗ್ರಾಮ ಪಂಚಾಯ್ತಿ ಪಿಡಿಒಗೆ ವಹಿಸಿದರು. ಮದುವೆ ಬಂಧನಕ್ಕೆ ಸಿಲುಕಬೇಕಿದ್ದ ಬಾಲಕಿ ಈಗ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದಾರೆ.

ನಿರ್ಬಂಧದ ದುರುಪಯೋಗಕ್ಕೆ ಹುನ್ನಾರ

ಮಂಗಳೂರು: ಲಾಕ್‌ಡೌನ್‌ ನಿರ್ಬಂಧಗಳನ್ನೇ ದುರುಪಯೋಗ ಪಡಿಸಿಕೊಂಡು, ಬಾಲ್ಯ ವಿವಾಹ ನಡೆಸಲು ಯತ್ನಿಸಿದ್ದ ಸ್ವಾರಸ್ಯಕರ ಪ್ರಕರಣವೊಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಬಳಿ ನಡೆದಿದೆ. ಆದರೆ, ಅಧಿಕಾರಿಗಳ ಎಚ್ಚರದಿಂದ ಮದುವೆ ತಪ್ಪಿದೆ. ಲಾಕ್‌ಡೌನ್‌ ಪರಿಣಾಮ ಮನೆಯಲ್ಲಿದ್ದ ಬಾಲಕಿಗೆ ಪಕ್ಕದೂರಿನ ಯುವಕನ ಜೊತೆ ನಿಶ್ಚಿತಾರ್ಥ ನಡೆಸಲಾಗಿತ್ತು. ವಿವಾಹದ ಬಗ್ಗೆ ಮಾಹಿತಿ ಪಡೆದ ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಶ್ರೀಲತಾ ನೇತೃತ್ವದ ತಂಡವು, ಬಾಲಕಿಯ ಮನೆಗೆ ತೆರಳಿ ಮದುವೆ ಮಾಡುವುದು ಬೇಡ ಎಂದು ತಿಳಿವಳಿಕೆ ಹೇಳಿದ್ದರು. 

ಆದರೆ, ಇವರ ಭೇಟಿಯನ್ನೇ ದುರುಪಯೋಗ ಪಡಿಸಿಕೊಂಡ ಬಾಲಕಿಯ ಪೋಷಕರು, ‘ಲಾಕ್‌ಡೌನ್‌ ಕಾರಣ ಹೆಚ್ಚು ಜನ ಸೇರಿಸದೇ ಬೇಗನೇ ಮದುವೆ ಮಾಡಿ ಮುಗಿಸಬೇಕು ಎಂದು ಪೊಲೀಸರು ಮತ್ತು ಅಧಿಕಾರಿಗಳು ಹೇಳಿದ್ದಾರೆ. ನೀವು ಬೇಗನೇ ಮುಹೂರ್ತ ನಿಗದಿ ಪಡಿಸಿ, ಬೆಳ್ಳಂಬೆಳ್ಳಗ್ಗೆಯೇ ಶಾಸ್ತ್ರಗಳನ್ನು ಮುಗಿಸಬೇಕು’ ಎಂದು ಅರ್ಚಕರಿಗೆ ಹೇಳಿದ್ದಾರೆ.

‘ಹುನ್ನಾರ’ದ ಅರಿವಿಲ್ಲದ ಅರ್ಚಕರು, ಸಿದ್ಧತೆ ನಡೆಸಿದ್ದಾರೆ. ಈ ಮಾಹಿತಿಯು ಪೊಲೀಸ್‌ ಹಾಗೂ ಸಿಡಿಪಿಒ ತಂಡಕ್ಕೆ ತಲುಪಿದ್ದು,  ಅವರು, ಬಾಲಕಿ ಪೋಷಕರಿಗೆ ‘ಜೈಲು ಶಿಕ್ಷೆ’ಯ ಎಚ್ಚರಿಕೆಯನ್ನು ನೀಡಿ ಬಾಲ್ಯವಿವಾಹಕ್ಕೆ ಬ್ರೇಕ್ ಹಾಕಿದ್ದಾರೆ. 

‘ಇತರ ಜಿಲ್ಲೆಗೆ ಹೋಲಿಸಿದರೆ, ದಕ್ಷಿಣ ಕನ್ನಡದಲ್ಲಿ ಬಾಲ್ಯ ವಿವಾಹದ ಪ್ರಕರಣಗಳು ತೀರಾ ಕಡಿಮೆ’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಉಸ್ಮಾನ್.

‘ದಕ್ಷಿಣ ಕನ್ನಡಕ್ಕಿಂತಲೂ ಹೆಚ್ಚಾಗಿ, ಇಲ್ಲಿ ಶಿಕ್ಷಣ ಪಡೆಯುತ್ತಿರುವ ಉತ್ತರ ಕರ್ನಾಟಕದ ಮಕ್ಕಳ ಬಗ್ಗೆ ನಾವು ತೀವ್ರ ನಿಗಾ ಇರಿಸಬೇಕಾಗಿದೆ’ ಎನ್ನುತ್ತಾರೆ  ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ, ಮಕ್ಕಳ ಸಹಾಯವಾಣಿ ನಿರ್ದೇಶಕ ರೆನ್ನಿ ಡಿಸೋಜ.

ಬಾಲ್ಯ ವಿವಾಹ ದತ್ತಾಂಶ

2020ನೇ ಸಾಲಿನ ಬಾಲ್ಯ ವಿವಾಹ ಮಾಹಿತಿ (ಬಾರ್ ಗ್ರಾಫ್)

ತಡೆದ ಬಾಲ್ಯವಿವಾಹಗಳ ಸಂಖ್ಯೆ;ಜರುಗಿದ ಬಾಲ್ಯವಿವಾಹಗಳ ಸಂಖ್ಯೆ;ದಾಖಲಾದ ಎಫ್‌ಐಆರ್‌ ಸಂಖ್ಯೆ

ಲಾಕ್‌ಡೌನ್ ಪೂರ್ವ(ಫೆಬ್ರುವರಿ, ಮಾರ್ಚ್);160;19;12

ಲಾಕ್‌ಡೌನ್ ವೇಳೆ(ಏಪ್ರಿಲ್,ಮೇ);660;48;27

ಅನ್‌ಲಾಕ್‌ ಅವಧಿ(ಜೂನ್,ಜುಲೈ);689;59;34

ಬಾಲ್ಯ ವಿವಾಹ: ಜಿಲ್ಲಾವಾರು ದತ್ತಾಂಶ (ಜುಲೈ)

ಜಿಲ್ಲೆ; ತಡೆದ ಬಾಲ್ಯವಿವಾಹಗಳ ಸಂಖ್ಯೆ; ಜರುಗಿದ ಬಾಲ್ಯವಿವಾಹಗಳ ಸಂಖ್ಯೆ; ದಾಖಲಾದ ಎಫ್‌ಐಆರ್‌ ಸಂಖ್ಯೆ

ಬಾಗಲಕೋಟೆ;5;0;0

ಬೆಂಗಳೂರು ಗ್ರಾ.;6;6;1

ಬೆಂಗಳೂರು ನಗರ;1;0;0

ಬೆಳಗಾವಿ;8;2;0

ಬಳ್ಳಾರಿ;12;3;3

ಬೀದರ್;8;0;0

ವಿಜಯಪುರ;12;0;0

ಚಾಮರಾಜನಗರ;4;0;0

ಚಿಕ್ಕಬಳ್ಳಾಪುರ;6;0;0

ಚಿಕ್ಕಮಗಳೂರು;10;1;1

ಚಿತ್ರದುರ್ಗ;2;0;0

ದಕ್ಷಿಣ ಕನ್ನಡ;1;0;0

ದಾವಣಗೆರೆ;11;0;0

ಧಾರವಾಡ;0;0;0;

ಗದಗ;2;0;0

ಕಲಬುರ್ಗಿ;9;0;0

ಹಾಸನ;6;1;1

ಹಾವೇರಿ;1;0;0

ಕೊಡಗು;0;0;0

ಕೋಲಾರ;8;0;0

ಕೊಪ್ಪಳ;8;0;0

ಮಂಡ್ಯ;4;3;0

ಮೈಸೂರು;5;1;1

ರಾಯಚೂರು;6;0;0

ರಾಮನಗರ;3;0;0

ಶಿವಮೊಗ್ಗ;4;1;0

ತುಮಕೂರು;9;1;1

ಉಡುಪಿ;0;0;0

ಉತ್ತರ ಕನ್ನಡ;1;0;0

ಯಾದಗಿರಿ;4;0;0

ಒಟ್ಟು156;14;8

ಲಾಕ್‌ಡೌನ್‌ಗೂ ಮುನ್ನ–ನಂತರದ ಬಾಲ್ಯವಿವಾಹ ಪ್ರಕರಣಗಳ ವಿವರ 

ತಡೆದಿರುವುದು;ವಿವಾಹಗಳ ಸಂಖ್ಯೆ; ಎಫ್‌ಐಆರ್‌ 

2019ರ ಏ.ನಿಂದ 2020 ಮಾರ್ಚ್‌; 1,623;156;85 

2020 ಏಪ್ರಿಲ್‌ನಿಂದ–ಜುಲೈ‌; 1,349;107;69 

ಆಧಾರ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ  

ವರದಿ: ಗುರು ಪಿ.ಎಸ್/ ಸೂರ್ಯನಾರಾಯಣ ವಿ/ಶಶಿಕಾಂತ ಶೆಂಬಳ್ಳಿ/ ಚಂದ್ರಹಾಸ ಹಿರೇಮಳಲಿ/ ಜೆ.ಬಿ.ನಾಗರಾಜ್‌/ ಬಾಲಕೃಷ್ಣ ಪಿ.ಎಚ್‌/ಡಿ.ಎಂ.ಕುರ್ಕೆ ಪ್ರಶಾಂತ್‌, ವೆಂಕಟೇಶ್‌.ಜೆ.ಎಚ್‌/ಹರ್ಷವರ್ಧನ ಪಿ.ಆರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು