ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮ್ಮ ಕೊಡವರಿಗೆ ಪೂಜೆಯ ಅವಕಾಶ ಕಲ್ಪಿಸಿ: ಬಿ.ಎ.ಮಾಚಯ್ಯ

ದೈವಶಕ್ತಿಗೆ ಮಾಡಿದ ಅನಾಚಾರದಿಂದ ಬೆಟ್ಟ ಕುಸಿತ
Last Updated 4 ಸೆಪ್ಟೆಂಬರ್ 2020, 12:01 IST
ಅಕ್ಷರ ಗಾತ್ರ

ಮಡಿಕೇರಿ: ‘ತಾಲ್ಲೂಕಿನ ತಲಕಾವೇರಿಯ ಗಜಗಿರಿ ಬೆಟ್ಟ ಕುಸಿತಕ್ಕೆ ಕ್ಷೇತ್ರದಲ್ಲಿ ದೈವಶಕ್ತಿಗೆ ಮಾಡಿದ ಅನಾಚಾರವೇ ಕಾರಣ’ ಎಂದು ಹಿರಿಯ ವಕೀಲ ಬಿ.ಎ.ಮಾಚಯ್ಯ ಇಲ್ಲಿ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಡಳಿತ, ದೇವಾಲಯ ಸಮಿತಿ ಹಾಗೂ ಅರ್ಚಕರ ವರ್ಗ ಈ ಹಿಂದೆ ಮಾಡಿದ ಅನಾಚರಗಳೇ ಬೆಟ್ಟ ಕುಸಿತಕ್ಕೆ ಕಾರಣವಾಗಿದೆ. ಇದರಿಂದಲೇ ಅರ್ಚಕ ಕುಟುಂಬವನ್ನು ಕಳೆದುಕೊಳ್ಳುವಂತಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

‘ತಲಕಾವೇರಿ ಕ್ಷೇತ್ರದಲ್ಲಿ ಪ್ರತಿವರ್ಷ ತಲಕಾವೇರಿ ಕ್ಷೇತ್ರ ಅಶುದ್ಧವಾಗಿದೆ ಎಂದೂ ಹೇಳಿಕೊಳ್ಳುವ ಆಡಳಿತ ವರ್ಗ ಧಾರ್ಮಿಕ ಶುದ್ಧೀಕರಣದ ಹೆಸರಿನಲ್ಲಿ ಹಣ ಮಾಡುತ್ತಿರುವುದೇ ಈ ದುರಂತಕ್ಕೆ ಕಾರಣವಾಗಿದೆ’ ಎಂದರು.

‘ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಇಲ್ಲಿಯ ದೈವಶಕ್ತಿ ಮೇಲೆ ಅನಾಚಾರಗಳು ನಡೆಯುತ್ತಲಿವೆ. ಬಹಳಷ್ಟು ವರ್ಷಗಳ ಹಿಂದೆಯೇ ಇಲ್ಲಿರುವ ತೀರ್ಥ ಕುಂಡಿಕೆ ಸಮೀಪವಿರುವ ಅಶ್ವತ ಮರವನ್ನು ನಾಶ ಮಾಡಿದ್ದಾರೆ. ನಂತರದ ದಿನಗಳಲ್ಲಿ ಶಿವಲಿಂಗಕ್ಕೆ ಹಾನಿಯಾಗಿದೆ ಎಂದೂ ಹಲವಾರು ಪೂಜೆ ಹೆಸರಿನಲ್ಲಿ ಹಣ ಪಡೆಯಲು ಮುಂದಾಗಿದ್ದಾರೆ’ ಎಂದು ದೂರಿದರು.

ಇನ್ನು ತಲಕಾವೇರಿಯಲ್ಲಿ ಸಾಕಷ್ಟು ವರ್ಷಗಳಿಂದ ಸ್ಥಳೀಯರ ವಿರೋಧದ ನಡುವೆಯೂ ಚಿತ್ರೀಕರಣಕ್ಕೆ ಜಿಲ್ಲಾಡಳಿವೇ ಅನುಮತಿ ನೀಡಿತ್ತು. ಬೆಟ್ಟದ ಮೇಲೆ ಶುಂಠಿ ಬೆಳೆಯಲು ಅನುಮತಿಯನ್ನು ಕೂಡ ಕಂದಾಯ ಇಲಾಖೆ ನೀಡಿದೆ. ಇನ್ನು ಬೆಟ್ಟದಲ್ಲೇ ರೆಸಾರ್ಟ್ ತೆರೆಯುವ ಅನುಮತಿಗಳನ್ನು ಕೂಡ ನೀಡಿರುವುದು ಬೆಟ್ಟ ಕುಸಿತಕ್ಕೆ ಪ್ರಮುಖ ಕಾರಣ ಎಂದು ಮಾಚಯ್ಯ ದೂರಿದರು.

ಕೊಡವರ ಕುಲದೇವತೆಯಾಗಿರುವ ಅಮ್ಮ ಕೊಡವರಿಗಷ್ಟೇ ತಲಕಾವೇರಿ ಕ್ಷೇತ್ರದಲ್ಲಿ ಪೂಜೆ ಮಾಡಲು ಅವಕಾಶ ನೀಡಬೇಕು. ಪರಿಶುದ್ಧ ಮನಸ್ಸು ಇದ್ದವರೂ, ಯಾರು ಬೇಕಾದರೂ ಪೂಜೆ ಮಾಡಬಹುದು. ಅಮ್ಮ ಕೊಡವರಿಗೆ ಪೂಜೆ ಮಾಡಲು ಜಿಲ್ಲಾಡಳಿತ ಅವಕಾಶ ನೀಡಬೇಕು ಎಂದು ಮಾಚಯ್ಯ ಮನವಿ ಮಾಡಿದರು.

ಕೊಡಗಿಗೆ ಬಂದಿರುವ 300 ವರ್ಷಗಳ ಇತಿಹಾಸವಿರುವ ಅರ್ಚಕರ ಕುಟುಂಬ ಕಂದಾಯ ಇಲಾಖೆಯೊಂದಿಗೆ ಸೇರಿಕೊಂಡು ಅಕ್ರಮವಾಗಿ ಭೂ ಖರೀದಿಸಿದ್ದಾರೆ. ಸುಮಾರು 500 ಎಕರೆ ಭೂಮಿಗಳನ್ನು ಅಕ್ರಮವಾಗಿ ಪಡೆದುಕೊಂಡಿರುವ ಬಗ್ಗೆ ಸಂಶಯವಿದೆ. ಈ ಬಗ್ಗೆ ತನಿಖೆಯಾಗಬೇಕು ಎಂದು ಮಾಚಯ್ಯ ಒತ್ತಾಯಿಸಿದರು.
ಕೊಡವರಿಗೆ ಬುಡಕಟ್ಟು ಸ್ಥಾನಮಾನ ನೀಡಬೇಕು ಎಂದು ಕೆಲವು ಕೊಡವ ಸಂಘಗಳೇ ಆಗ್ರಹಿಸುತ್ತಿರುವುದು ಯಾವ ನ್ಯಾಯ?, ಸರ್ಕಾರದ ಭಿಕ್ಷೆಗಾಗಿ ನಮ್ಮ ಜಾತಿಯನ್ನೇ ಬದಲಾಯಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಂವಿಧಾನದ ಪ್ರಕಾರ ಪ್ರತಿಯೊಂದು ಜಾತಿ, ಕುಲ, ಪರಭಾಷೆಯನ್ನು ಬದಲಾಯಿಸಲು ಯಾರು ಒತ್ತಾಯ ಮಾಡಬಾರದು. ಈ ರೀತಿಯ ಒತ್ತಡ ಪುನರಾವರ್ತನೆಯಾದರೆ ಕಾನೂನಿನ ಮೊರೆ ಹೋಗಲಾಗುವುದು ಎಂದು ಮಾಚಯ್ಯ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT