ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸು ಬಿಡಿ, ಹಸಿವಿನತ್ತ ನೋಡಿ: ರಮೇಶ್‌ಕುಮಾರ್

‘ಅಣುಬಾಂಬ್‌ಗಿಂತ ಮನುಸ್ಕೃತಿ ಅಪಾಯಕಾರಿ’‌
Last Updated 18 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರ ಜಾನುವಾರು ಹತ್ಯೆ ನಿಷೇಧ ಕಾಯ್ದೆ ತಂದ ಮೇಲೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೋವನ್ನು ಪೂಜಿಸುವುದು ತಪ್ಪಲ್ಲ. ಆದರೆ, ಹಸುವಿನ ಹೆಸರಿನಲ್ಲಿ ರಾಜಕಾರಣ ಮಾಡುವುದಕ್ಕಿಂತ ಹಸಿವು ಮುಕ್ತ ಮಾಡುವುದಕ್ಕೆ ಪೂರಕವಾದ ರಾಜಕೀಯ ಮಾಡೋಣ’ ಎಂದು ಕಾಂಗ್ರೆಸ್‌ನ ಕೆ.ಆರ್‌.ರಮೇಶ್‌ ಕುಮಾರ್‌ ಸಲಹೆ ನೀಡಿದರು.

ವಿಧಾನಸಭೆಯಲ್ಲಿ ಗುರುವಾರ ಬಜೆಟ್‌ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ‘ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆ ಕಾಯ್ದೆ ಜಾರಿಗೆ ಬಂದ ಬಳಿಕ ಹೈನುಗಾರಿಕೆ ವೃತ್ತಿಯಲ್ಲಿರುವವರ ಕಷ್ಟ ಹೆಚ್ಚಾಗಿದೆ. ಗಂಡು ಕರುಗಳನ್ನು ಸಾಕುವವರು ಯಾರು? ನೀವು ಬೇಕಾದರೆ ಪೂಜೆ ಮಾಡ್ಕೊಳ್ಳಿ? ಪ್ರದರ್ಶನಕ್ಕಾಗಿ ಸಾಕುವುದಕ್ಕೆ ಆಗುತ್ತಾ? ರೈತರು ಎಲ್ಲಿಂದ ಹಣ ತರಬೇಕು’ ಎಂದು ಪ್ರಶ್ನಿಸಿದರು.

‘ಎಲ್ಲರೂ ಸುಮ್ಮನೆ ಗೋವಿನ ಬಗ್ಗೆ ಮಾತನಾಡುತ್ತಾರೆ. ದನ ಸತ್ತರೆ ಎತ್ತುವುದಕ್ಕೆ ವೆಂಕಟರಾಯರು, ಶ್ರೀಪಾದಯ್ಯ ಬರ್ತಾರಾ? ದಲಿತರ ಕೇರಿಯವರೇ ಬರೋದಲ್ಲವೆ’ ಎಂದು ಕೇಳಿದರು.

ಉತ್ತಮ ತಳಿಯ ಹಸುಗಳು ಮಾತ್ರವಲ್ಲ, ಹಂದಿ, ಕುರಿಗಳನ್ನೂ ಸಾಕುವುದನ್ನು ಉತ್ತೇಜಿಸಬೇಕು. ತಳಿ ಅಭಿವೃದ್ಧಿಗಾಗಿ ಡಾರ್ಪರ್ ತಳಿಯ ಗಂಡು ಕುರಿ ಮರಿಗಳನ್ನು ವಿತರಿಸುವ ಯೋಜನೆಯನ್ನು ಸರ್ಕಾರ ಆರಂಭಿಸಬೇಕು. ಯಾಂತ್ರೀಕೃತ ಕಸಾಯಿಖಾನೆಗಳನ್ನು ಆರಂಭಿಸಿ ಎಲ್ಲ ಬಗೆಯ ಮಾಂಸದ ಉತ್ಪಾದನೆ, ಮಾರಾಟ, ರಫ್ತು ಉತ್ತೇಜಿಸಬೇಕು ಎಂದು ಸಲಹೆ ಮಾಡಿದರು.

ಎಲ್ಲರಿಗೂ ಸಮಾನ ಶಿಕ್ಷಣ ನೀಡುವ ವಿಚಾರ ಇನ್ನೂ ಜಾರಿಗೆ ಬಂದಿಲ್ಲ. ಮನು ಸಂಸ್ಕೃತಿಯನ್ನಲ್ಲ, ಜನ ಸಂಸ್ಕೃತಿಯನ್ನು ಆರಾಧಿಸಬೇಕು. ಹಿರೋಶಿಮಾ, ನಾಗಸಾಕಿ ನಗರಗಳ ಮೇಲೆ ಹಾಕಿದ್ದ ಅಣು ಬಾಂಬ್‌ಗಳಿಗಿಂತಲೂ ಮನುಸ್ಮೃತಿ ಅಪಾಯಕಾರಿಯಾದದ್ದು ಎಂದು ಹೇಳಿದರು.

ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿಗೆ ಆಗ್ರಹ

ಸರ್ಕಾರಿ ಉದ್ಯೋಗಗಳ ಸಂಖ್ಯೆ ಕುಸಿಯುತ್ತಿದೆ. ಆದ್ದರಿಂದ ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಜಾರಿಗೊಳಿಸಬೇಕು ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್‌. ಮಹೇಶ್‌ ಆಗ್ರಹಿಸಿದರು.

ಸಾರ್ವಜನಿಕ ಉದ್ದಿಮೆಗಳಲ್ಲಿ ಬಂಡವಾಳ ಹಿಂತೆಗೆಯುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ವೇಗ ನೀಡಿದೆ. ಇದರಿಂದ ಮೀಸಲಾತಿಗೆ ಅಪಾಯ ಎದುರಾಗಿದೆ ಎಂದರು.

ಜೆಡಿಎಸ್‌ನ ಎಚ್‌‌.ಕೆ. ಕುಮಾರಸ್ವಾಮಿ ಮಾತನಾಡಿ, ‘ಎಲ್ಲ ಜಾತಿಗಳಲ್ಲೂ ಕೆಳ ಸ್ತರದಲ್ಲಿರುವ ಜನರಿಗೆ ಮೀಸಲಾತಿಯ ಲಾಭ ದೊರೆಯಬೇಕು. ನನ್ನಂತೆ ಶಾಸಕರಾಗಿರುವವರಿಗೆ ಅಲ್ಲ. ಶೋಷಣೆ ಮತ್ತು ಆರ್ಥಿಕ ಅಸಮಾನತೆಯನ್ನು ಆಧರಿಸಿ ಮೀಸಲಾತಿ ನೀಡಬೇಕು’ ಎಂದರು.

ಚರ್ಚೆಯಲ್ಲಿ ಮಧ್ಯ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ‘ಮೇಲ್ವರ್ಗದ ಬಡವರಿಗೂ ಶೇ 10ರಷ್ಟು ಮೀಸಲಾತಿ ನೀಡಲಾಗಿದೆ. ಈಗ ಮೀಸಲಾತಿಯಿಂದ ಹೊರಗುಳಿದ ಜಾತಿಗಳೇ ಇಲ್ಲ. ಸಾರ್ವಜನಿಕ ಉದ್ದಿಮೆಗಳಿಂದ ಸರ್ಕಾರದ ಷೇರು ಹಿಂಪಡೆದರೂ ಮೀಸಲಾತಿ ವ್ಯವಸ್ಥೆ ಉಳಿಯುವಂತೆ ಮಾಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT