ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಬಾವುಟ ರೂಪಿಸಿದ ರಾಮಮೂರ್ತಿ ಪತ್ನಿಗೆ ನೆರವು ನಿರಾಕರಿಸಿದ ಸರ್ಕಾರ: ಆಕ್ರೋಶ

Last Updated 27 ಡಿಸೆಂಬರ್ 2022, 14:19 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಬಾವುಟ ರೂಪಿಸಿದ ಎಂ.ರಾಮಮೂರ್ತಿ ಅವರ ಪತ್ನಿ ಕಮಲಮ್ಮ ಅವರು ರಾಮಕೃಷ್ಣಾಶ್ರಮದ ಶಾರದಾ ಕುಟೀರದಲ್ಲಿ ಆಶ್ರಯ ಪಡೆದಿದ್ದು, ವಯಸ್ಸಾದ ಕಾರಣಕ್ಕೆ ಅವರು ಓಡಾಡುವ ಸ್ಥಿತಿಯಲ್ಲಿ ಇಲ್ಲ. ಅವರಿಗೆ ಸಹಾಯಕರನ್ನು ನೇಮಿಸುವಂತೆ ಕನ್ನಡ ಗೆಳೆಯರ ಬಳಗ ಮಾಡಿದ್ದ ಮನವಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ತಿರಸ್ಕರಿಸಿದೆ.

ರಾಮಮೂರ್ತಿ ಅವರು ಹೊಲದಲ್ಲಿ ಕೊಳವೆಬಾವಿ ತೋಡಿಸುತ್ತಿದ್ದ ವೇಳೆ ಭೂಕುಸಿತದಿಂದ ಇಬ್ಬರು ಮಕ್ಕಳ ಜತೆಗೆ ಮರಣ ಹೊಂದಿದ್ದರು. ಈ ದುರಂತ ನಡೆದು 50 ವರ್ಷ ಕಳೆದಿದೆ. ಕನ್ನಡ ಹೋರಾಟಗಾರ ರಾಮಮೂರ್ತಿ ಅವರ ಪತ್ನಿ ಕಮಲಮ್ಮ ಅನಾಥರಾಗಿದ್ದಾರೆ. ನೂರು ವರ್ಷದ ಆಸುಪಾಸಿನ ವಯಸ್ಸಿನ ಅವರು ಕುಟೀರದ ಸಣ್ಣ ಕೊಠಡಿಯಲ್ಲಿ ನೆಲೆಸಿದ್ದಾರೆ. ಅವರಿಗೆ ಸಹಾಯಕರ ಅಗತ್ಯವಿದ್ದು, ಇಲಾಖೆಗೆ ಮನವಿ ಸಲ್ಲಿಸಿದರೆ ನಿರಾಕರಿಸಲಾಗಿದೆ ಎಂದು ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್‌ ದೂರಿದ್ದಾರೆ.

ಕಡತ ರವಾನೆ

‘ವಿಶೇಷ ಪ್ರಕರಣವೆಂದು ಪರಿಗಣಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಸೂಚಿಸಿದ್ದಾರೆ. ಸಚಿವರಿಗೆ ಕಡತ ರವಾನಿಸಲಾಗಿದೆ. ಸಹಾಯಕರನ್ನು ನೇಮಿಸಲು ಇಲಾಖೆ ನಿಯಮದನ್ವಯ ಅವಕಾಶ ಇರಲಿಲ್ಲ. ಸಚಿವರು ನೀಡುವ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತ್‌ರಾವ್‌ ಪಾಟೀಲ್‌ ತಿಳಿಸಿದರು.

ನೆರವು ನಿರಾಕರಣೆಗೆ ಆಕ್ರೋಶ

ಮ. ರಾಮಮೂರ್ತಿ ಅವರ ಪತ್ನಿಯ ಶುಶ್ರೂಷೆಗೆ ನೆರವು ನಿರಾಕರಿಸಿದ ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ವ್ಯಕ್ತಪವಾಗಿದೆ.

‘ಯಾರೋ ಮಣ್ಣು ಮಾರುವ ಸಂತನಿಗೆ ವಿವೇಚನೆಯಿಲ್ಲದೇ ನೂರು ಕೋಟಿ ಕೊಡುವ ಸರ್ಕಾರ, ಓಟು ರಾಜಕಾರಣಕ್ಕೆ ಸ್ವಾಭಿಮಾನ ಅಡವಿಟ್ಟು ಕಟ್ಟುತ್ತಿರುವ ಮರಾಠ ಭವನಕ್ಕೆ ಕೋಟಿ ಕೋಟಿ ಖರ್ಚು ಮಾಡುವ ಸರ್ಕಾರ, ಕನ್ನಡಕ್ಕಾಗಿ ತಮ್ಮ ಇಡೀ ಜೀವನವನ್ನು ತ್ಯಾಗ ಮಾಡಿದ ಮ. ರಾಮಮೂರ್ತಿ ರವರ ಧರ್ಮಪತ್ನಿಗೆ ಆಸ್ಪತ್ರೆ ವೆಚ್ಚ ಮಾಡಲು ಹಣವಿಲ್ಲ? ಇದು ಕರ್ನಾಟಕ ಸರ್ಕಾರ’ ಎಂದು ಟ್ವಿಟರ್‌ ಬಳಕೆದಾರ ಗುರುದೇವ್ ನಾರಾಯಣಕುಮಾರ್ ಎಂಬುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮ.ರಾಮಮೂರ್ತಿ ಅವರು ಚಳವಳಿಗೆ ಸಂಬಂಧಿಸಿದ ಹಾಗೆ ನನ್ನ ಹೀರೊ. ಕನ್ನಡದ ಹಳದಿ, ಕೆಂಪು ಬಾವುಟ ಅವರದೇ ಕೊಡುಗೆ. ರಾಮಮೂರ್ತಿ ಅವರ ಹೋರಾಟದ ರೀತಿ, ಕೆಚ್ಚು, ಕೊಡುಗೆಗಳನ್ನು ಅರಿತವರು ಯಾರೇ ಇದ್ದರೂ ಇಂತಹ ಅಸೂಕ್ಷ್ಮ ಪತ್ರ ಬರೆಯುತ್ತಿರಲಿಲ್ಲ. ಕೋಟಿ ಕೋಟಿ ಹಣ ಮನೆಯಲ್ಲಿಟ್ಟ ಮಂದಿಗೆ ಅವರ ಒಂದು ಹೊತ್ತಿನ ತಿಂಡಿ ಖರ್ಚಿಗೂ ಸಮವಲ್ಲದ ಜೀವನೋಪಾಯ ನೀಡಲು ಆಗುವುದಿಲ್ಲವೆಂದರೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿರಲಾರದು.. ಇರಲಿ ಬಿಡಿ.. ಆ ತಾಯಿ ಒಪ್ಪಿದರೆ ಅವರ ಜೀವನೋಪಾಯದ ಖರ್ಚುಗಳನ್ನು ಇನ್ನು ಮೇಲೆ ನಾನೇ ನೋಡಿಕೊಳ್ಳುವೆ’ ಎಂದು ‘ವೀರಲೋಕ ಪುಸ್ತಕ ಪ್ರಪಂಚ’ದವೀರಕಪುತ್ರ ಶ್ರೀನಿವಾಸ್‌ ಎಂಬುವವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

‘ವಿಶ್ವದ ಎಲ್ಲ ಕನ್ನಡಿಗರು ಇವತ್ತಿಗೆ ಕನ್ನಡ ಬಾವುಟ ಹಾರಿಸುತ್ತಿರಿ. ಆದ್ರೆ ಆ ಬಾವುಟ ಕೊಟ್ಟ ಮ.ರಾಮಮೂರ್ತಿ ಅವರ ಬದುಕು ದುರಂತ. ಇವತ್ತಿಗೆ ಅವರ ಮಡದಿಯ ಸ್ಥಿತಿ ಕೂಡ ನೋವಿನ ಸಂಗತಿ’ ಎಂದು ಕರ್ಣಾಟಬಲ ಎಂಬ ಟ್ವಿಟರ್‌ ಖಾತೆಯಿಂದ ಬೇಸರ ವ್ಯಕ್ತಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT