ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮಾ ನಿರ್ಣಯ ಆಯೋಗ ರಚನೆಗೆ ಅಂಕಿತ: ತಾ.ಪಂ, ಜಿ.ಪಂ ಚುನಾವಣೆ ಮುಂದೂಡಿಕೆಗೆ ದಾರಿ?

ಸೀಮಾ ನಿರ್ಣಯ ಆಯೋಗ ರಚನೆಯ ಕಾಯ್ದೆ ತಿದ್ದುಪಡಿಗೆ ರಾಜ್ಯಪಾಲರ ಅಂಕಿತ
Last Updated 18 ಸೆಪ್ಟೆಂಬರ್ 2021, 18:13 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಪಂಚಾಯತ್‌ರಾಜ್‌ ಸೀಮಾ ನಿರ್ಣಯ ಆಯೋಗ ಸ್ಥಾಪಿಸಿ, ಅದಕ್ಕೆ ಅಧಿಕಾರ ನೀಡುವ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ಕಾಯ್ದೆ’ಗೆ ರಾಜ್ಯಪಾಲರು ಶನಿವಾರ (ಸೆ. 18) ಅಂಕಿತ ಹಾಕಿದ್ದಾರೆ.

ಆ ಮೂಲಕ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಮುಂದೂಡುವ ರಾಜ್ಯ ಸರ್ಕಾರದ ಚಿಂತನೆಗೆ ಬಲ ಸಿಕ್ಕಂತಾಗಿದೆ.

ಮೂರೂ ಹಂತದ ಪಂಚಾಯತ್‌ ವ್ಯವಸ್ಥೆಯಡಿ ಕ್ಷೇತ್ರ ಪುನರ್‌ ವಿಂಗಡಣೆ ಮಾಡುವ ಅಧಿಕಾರವನ್ನು ಚುನಾವಣಾ ಆಯೋಗದಿಂದ ಹಿಂದಕ್ಕೆ ಪಡೆದು ಆಯೋಗ ಸ್ಥಾಪಿಸುವ ಅವಕಾಶ ಕಲ್ಪಿಸಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಈ ತಿದ್ದುಪಡಿಗೆ ವಿಧಾನಮಂಡಲದ ಕಲಾಪದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ಮಧ್ಯೆಯೂ ಸರ್ಕಾರ, ಈ ಮಸೂದೆಗೆ ಅಂಗೀಕಾರ ಪಡೆದಿತ್ತು.

ಕಾಯ್ದೆ ತಿದ್ದುಪಡಿ ಮಸೂದೆ ವಿಧಾನಸಭೆಯಲ್ಲಿ ಸೆ. 16ರಂದು ಮಂಡನೆಯಾಗಿದ್ದರೆ, ಮರುದಿನ ವಿಧಾನ ಪರಿಷತ್‌ನಲ್ಲಿ ಮಂಡನೆಯಾಗಿತ್ತು. ಇದೀಗ, ರಾಜ್ಯಪಾಲರಿಗೆ ತರಾತುರಿಯಲ್ಲಿ ಮಸೂದೆಯನ್ನು ಕಳುಹಿಸಿ ಸರ್ಕಾರ ಅಂಕಿತ ಪಡೆದುಕೊಂಡಿದೆ.

‘ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಮುಂದೂಡುವ ಉದ್ದೇಶದಿಂದಲೇ ಸಂವಿಧಾನಕ್ಕೆ ವಿರೋಧವಾಗಿ ಕಾಯ್ದೆ ತಿದ್ದುಪಡಿಗೆ ಮಸೂದೆ ಮಂಡಿಸಲಾಗಿದೆ. ಇದುರಾಜ್ಯದ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನೇ ದುರ್ಬಲಗೊಳಿಸಲಿದೆ’ ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಎರಡೂ ಸದನಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ, ಮಸೂದೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT