ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಲಕ್ಷ ಟನ್‌ ರಾಗಿ ಖರೀದಿಗೆ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ: ಗೋವಿಂದ ಕಾರಜೋಳ

Last Updated 9 ಮಾರ್ಚ್ 2022, 13:45 IST
ಅಕ್ಷರ ಗಾತ್ರ

ಬೆಂಗಳೂರು: ಈ ಸಾಲಿಗೆ ಒಟ್ಟು ಮೂರು ಲಕ್ಷ ಟನ್‌ ರಾಗಿ ಖರೀದಿಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ವಿಧಾನಸಭೆಯಲ್ಲಿ ಬುಧವಾರ ಶೂನ್ಯವೇಳೆಯಲ್ಲಿ ಬಿಜೆಪಿಯ ಗೂಳಿಹಟ್ಟಿ ಶೇಖರ್‌ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಸಾಲಿನಲ್ಲಿ 2.10 ಲಕ್ಷ ಟನ್‌ ರಾಗಿ ಖರೀದಿಗೆ ತೀರ್ಮಾನಿಸಲಾಗಿತ್ತು. ಅಷ್ಟು ಪ್ರಮಾಣದ ರಾಗಿ ಖರೀದಿಸಲಾಗಿದೆ ಎಂದರು.

ಈ ಬಾರಿ ಅತಿ ಹೆಚ್ಚು ಪ್ರಮಾಣದಲ್ಲಿ ರಾಗಿ ಬೆಳೆದಿದ್ದು, ಖರೀದಿ ಮಿತಿಯನ್ನು ಹೆಚ್ಚಿಸಲು ಅನುಮತಿ ನೀಡುವಂತೆ ಭಾರತೀಯ ಆಹಾರ ನಿಗಮಕ್ಕೆ ಜ.29 ರಂದು ಪತ್ರ ಬರೆಯಲಾಗಿದೆ. ಅನುಮತಿ ಸಿಕ್ಕಿದ ಕೂಡಲೇ ಖರೀದಿಗೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ವಿಷಯ ಪ್ರಸ್ತಾಪಿಸಿದ ಗೂಳಿಹಟ್ಟಿ ಶೇಖರ್‌, ನಿಗದಿತ ಅವಧಿಗೆ ಮೊದಲೇ ರಾಗಿ ಖರೀದಿ ನಿಲ್ಲಿಸಲಾಗಿದೆ. ಕೇವಲ ಸಣ್ಣ ರೈತರಿಂದ ಮಾತ್ರ ಖರೀದಿಸಿದ್ದು, ಈ ಸೌಲಭ್ಯವನ್ನು ಎಲ್ಲ ರೈತರಿಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದರು.

ಶೇ 75 ರಷ್ಟು ಸಬ್ಸಿಡಿ:

ಕೃಷಿ ಯಂತ್ರೋಪಕರಣಗಳ ಖರೀದಿಗಾಗಿ ಸಾಮಾನ್ಯ ವರ್ಗದ ರೈತರಿಗೆ ಶೇ 75 ರಷ್ಟು ಸಬ್ಸಿಡಿ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಆನಂದ್‌ ಸಿದ್ದು ನ್ಯಾಮಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾಮಾನ್ಯ ವರ್ಗದವರಿಗೆ ಶೇ 50 ರಷ್ಟು ಸಹಾಯಧನ, ಪರಿಶಿಷ್ಠ ಜಾತಿ ಮತ್ತು ಪಂಗಡದವರಿಗೆ ಶೇ 90 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಸಹಾಯಧನವನ್ನು ಗರಿಷ್ಠ ಮಿತಿ ₹1 ಲಕ್ಷದವರೆಗೆ ನೀಡಲಾಗುತ್ತಿದೆ. ಸಣ್ಣ ಟ್ರಾಕ್ಟರ್‌ಗಳಿಗೆ ಮಾತ್ರ (45 ಪಿಟಿಒ ಎಚ್‌.ಪಿ.ವರೆಗೆ) ಸಾಮಾನ್ಯ ರೈತರಿಗೆ ₹75 ಸಾವಿರ, ಪರಿಶಿಷ್ಠ ಜಾತಿ ಮತ್ತು ಪಂಗಡದ ರೈತರಿಗೆ ಶೇ 90 ರಷ್ಟು ಗರಿಷ್ಠ ಅಂದರೆ ₹3 ಲಕ್ಷ ಸಹಾಯ ಧನ ನೀಡಲಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT