ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್‌ ಕಾಯಿನ್‌ ಅಕ್ರಮ: ಸಿಬಿಐ ತನಿಖೆಗೆ ನಕಾರ

Last Updated 7 ಮಾರ್ಚ್ 2022, 15:57 IST
ಅಕ್ಷರ ಗಾತ್ರ

ಬೆಂಗಳೂರು: ಬಿಟ್‌ ಕಾಯಿನ್‌ ಹ್ಯಾಕಿಂಗ್‌ ಅಕ್ರಮಗಳಿಗೆ ಸಂಬಂಧಿಸಿದ ಎಲ್ಲ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕೆಂಬ ಕಾಂಗ್ರೆಸ್‌ ಬೇಡಿಕೆಯನ್ನು ತಳ್ಳಿಹಾಕಿದ ಗೃಹ ಸಚಿವವ ಆರಗ ಜ್ಞಾನೇಂದ್ರ, ‘ರಾಜ್ಯ ಪೊಲೀಸರೇ ತನಿಖೆಯನ್ನು ಮುಂದುವರಿಸುತ್ತಾರೆ’ ಎಂದು ಪ್ರಕಟಿಸಿದರು.

ವಿಧಾನ ಪರಿಷತ್‌ನಲ್ಲಿ ಸೋಮವಾರ ನಿಯಮ 330ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌, ‘ಬಿಟ್‌ ಕಾಯಿನ್‌ ಹ್ಯಾಕಿಂಗ್‌ ಹಗರಣ ರಾಜ್ಯದಿಂದ ಅಂತರರಾಷ್ಟ್ರೀಯ ಮಟ್ಟದವರೆಗೆ ವ್ಯಾಪಿಸಿದೆ. ಬೆಂಗಳೂರು ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ. ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ರಾಜ್ಯ ಸರ್ಕಾರದ ಇ–ಸಂಗ್ರಹಣಾ ಪೋರ್ಟಲ್‌ ಹ್ಯಾಕ್‌ ಮಾಡಿ ಲಪಟಾಯಿಸಿದ್ದ ₹ 11.5 ಕೋಟಿಯನ್ನೂ ವಸೂಲಿ ಮಾಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ’ ಎಂದು ದೂರಿದರು.

‘ಅಮೆರಿಕದ ತನಿಖಾ ಸಂಸ್ಥೆ ಎಫ್‌ಬಿಐ ಕೂಡ ಇದೇ ಪ್ರಕರಣದ ಕುರಿತು ತನಿಖೆ ನಡೆಸುತ್ತಿದೆ. ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳು, ಪ್ರಭಾವಿ ರಾಜಕಾರಣಿಗಳು ಅಕ್ರಮದಲ್ಲಿ ಶಾಮೀಲಾಗಿದ್ದಾರೆ. ಪ್ರಕರಣವನ್ನು ಸಿಬಿಐ, ಜಾರಿ ನಿರ್ದೇಶನಾಲಯಕ್ಕೆ ವರ್ಗಾಯಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಯಾವ ಪ್ರಗತಿ ಆಗಿದೆ.’ ಎಂದು ಕೇಳಿದರು.

ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಮಾತನಾಡಿ, ‘ಹ್ಯಾಕರ್‌ ಶ್ರೀಕೃಷ್ಣ ಐಷಾರಾಮಿ ಜೀವನ ನಡೆಸುತ್ತಿದ್ದಾನೆ. ಈ ಹಗರಣದಲ್ಲಿ ಐಪಿಎಸ್‌ ಅಧಿಕಾರಿಗಳು, ದೊಡ್ಡ ರಾಜಕಾರಣಿಗಳ ಪಾತ್ರವಿದೆ. ಇಲ್ಲಿನ ಪೊಲೀಸರಿಗೆ ತನಿಖೆ ಕಷ್ಟ ಆಗಬಹುದು. ಸಿಬಿಐಗೆ ತನಿಖೆಯ ಹೊಣೆ ಒಪ್ಪಿಸಿ’ ಎಂದು ಆಗ್ರಹಿಸಿದರು.

‘ಈ ಪ್ರಕರಣದಲ್ಲಿ ಸರ್ಕಾರದ ಬಗ್ಗೆಯೇ ಸಂಶಯ ಮೂಡುತ್ತಿದೆ. ಅಂತರರಾಷ್ಟ್ರೀಯ ಮಟ್ಟದ ಹ್ಯಾಕರ್‌ಗಳು ಭಾಗಿಯಾದ ಮಾಹಿತಿ ಇದ್ದರೂ ಉನ್ನತಮಟ್ಟದ ತನಿಖೆಗೆ ಹಿಂದೇಟು ಏಕೆ’ ಎಂದು ಜೆಡಿಎಸ್‌ನ ಮರಿತಿಬ್ಬೇಗೌಡ ಪ್ರಶ್ನಿಸಿದರು.

‘ತಮ್ಮ ಬಳಿ ದಾಖಲೆಗಳಿವೆ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ಮಾಹಿತಿ ಮುಚ್ಚಿಡುವುದು ಕೂಡ ಅಪರಾಧ. ಅವರಲ್ಲಿರುವ ದಾಖಲೆಗಳನ್ನು ಸಭಾಪತಿಯವರ ಮೂಲಕ ವಶಕ್ಕೆ ಪಡೆದು ತನಿಖೆ ನಡೆಸಿ’ ಎಂದು ಬಿಜೆಪಿಯ ಆಯನೂರು ಮಂಜುನಾಥ ಸಲಹೆ ನೀಡಿದರು.

ದಾಖಲೆ ಕೊಟ್ಟರೆ ತನಿಖೆಗೆ ಸಿದ್ಧ: ಉತ್ತರ ನೀಡಿದ ಗೃಹ ಸಚಿವರು, ‘ಶ್ರೀಕೃಷ್ಣನ ತಪ್ಪೊಪ್ಪಿಗೆ ಹೇಳಿಕೆ ಆಧಾರದಲ್ಲಿ ಇಂಟರ್‌ಪೋಲ್‌ ಘಟಕಕ್ಕೆ ಮೂರು ಬಾರಿ ಪತ್ರ ಬರೆಯಲಾಗಿತ್ತು. ಅವರಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ. ಬಿಟ್‌ ಕಾಯಿನ್‌ ಹ್ಯಾಕಿಂಗ್‌ ಮತ್ತು ಬಿಟ್‌ ಕಾಯಿನ್‌ ನೀಡುವ ನೆಪದಲ್ಲಿ ಹಣ ಪಡೆದು ವಂಚಿಸಿದ ಆರೋಪದಲ್ಲಿ 11 ಪ್ರಕರಣಗಳಿವೆ. ಎಲ್ಲವನ್ನೂ ನಮ್ಮ ಪೊಲೀಸರೇ ತನಿಖೆ ನಡೆಸುತ್ತಾರೆ’ ಎಂದರು.

ಈ ಪ್ರಕರಣದಲ್ಲಿ ಹಣ ಕಳೆದುಕೊಂಡಿರುವನ ಯಾರೊಬ್ಬರೂ ದೂರು ಕೊಟ್ಟಿಲ್ಲ. ವಿರೋಧ ಪಕ್ಷದ ನಾಯಕರು ಮತ್ತು ಸದಸ್ಯರ ಬಳಿ ದಾಖಲೆಗಳಿದ್ದರೆ ಕೊಡಲಿ. ಅವುಗಳ ಆಧಾರದಲ್ಲಿ ತನಿಖೆಗೆ ಸಿದ್ಧ ಎಂದು ಪ್ರಕಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT