ಬೆಂಗಳೂರು: ‘ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಕೋವಿಡ್ ಲಸಿಕೆ ನೀಡಲು ಕಾರ್ಮಿಕ ಕಲ್ಯಾಣ ಮಂಡಳಿಯ ನಯಾಪೈಸೆ ಹಣವನ್ನೂ ಬಳಸಿಲ್ಲ. ಕೋವಿಡ್ ಲಸಿಕೆಗೆ ವೆಚ್ಚ ಪಾವತಿಸುವ ಸಂಬಂಧ ಹೊರಡಿಸಿದ್ದ ಆದೇಶವನ್ನೇ ಹಿಂಪಡೆಯಲಾಗಿದೆ’ ಎಂದು ಕಾರ್ಮಿಕ ಸಚಿವ ಅರಬೈಲ್ ಶಿವರಾಂ ಹೆಬ್ಬಾರ್ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಗುರುವಾರ ಕಾಂಗ್ರೆಸ್‌ನ ಕೆ. ಪ್ರಕಾಶ್ ರಾಥೋಡ್ ಪರವಾಗಿ ಸಚಿವರಿಗೆ ಪ್ರಶ್ನೆ ಕೇಳಿದ ವಿಧಾನ ಪರಿಷತ್ ಮುಖ್ಯ ಸಚೇತಕ ಎಂ. ನಾರಾಯಣಸ್ವಾಮಿ, ‘ಲಸಿಕೆಗೆ ಕಾರ್ಮಿಕ ನಿಧಿಯ ₹ 700 ಕೋಟಿ?’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ವಿಶೇಷ ವರದಿಯನ್ನು ಪ್ರಸ್ತಾಪಿಸಿದರು.
ಈ ಬಗ್ಗೆ ಉತ್ತರಿಸಿದ ಸಚಿವರು, ‘ರಾಜ್ಯದಲ್ಲಿ 27 ಲಕ್ಷ ಮಂದಿ ಕಟ್ಟಡ ನಿರ್ಮಾಣ ಕಾರ್ಮಿಕರಿದ್ದಾರೆ. ಅವರಿಗೆ ತ್ವರಿತವಾಗಿ ಕೋವಿಡ್ ಲಸಿಕೆ ನೀಡುವ ಉದ್ದೇಶದಿಂದ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಲಸಿಕೆಯ ವೆಚ್ಚ ಭರಿಸಲು ನಿರ್ಧರಿಸಲಾಗಿತ್ತು. ಆದರೆ, ಉಚಿತವಾಗಿ ಪೂರೈಸುತ್ತಿರುವ ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿದೆ. ಈ ಕಾರಣದಿಂದ ಕೋವಿಡ್ ಲಸಿಕೆಯ ವೆಚ್ಚ ಭರಿಸುವ ಆದೇಶವನ್ನು ರದ್ದು ಮಾಡಲಾಗಿದೆ’ ಎಂದರು.
ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ 16.48 ಲಕ್ಷ ಕಾರ್ಮಿಕರಿಗೆ ತಲಾ ₹ 5,000ದಂತೆ ₹ 824.21 ಕೋಟಿ ನೆರವು ನೀಡಲಾಗಿದೆ. ₹ 53.94 ಕೋಟಿ ವೆಚ್ಚದಲ್ಲಿ 7.15 ಲಕ್ಷ ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ. 89.87 ಲಕ್ಷ ಸಿದ್ಧಪಡಿಸಿದ ಆಹಾರ ಪೊಟ್ಟಣಗಳ ವಿತರಣೆಗೆ ₹ 26.71 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಎರಡನೆ ಅಲೆಯ ಸಂದರ್ಭದಲ್ಲಿ 18.20 ಲಕ್ಷ ಕಾರ್ಮಿಕರಿಗೆ ತಲಾ ₹ 2,000ದಂತೆ ₹ 546.21 ಕೋಟಿ ನೆರವು ನೀಡಲಾಗಿದೆ. ₹ 227.41 ಕೋಟಿ ವೆಚ್ಚದಲ್ಲಿ 23.42 ಲಕ್ಷ ಆಹಾರ ಕಿಟ್‌ಗಳನ್ನು ವಿತರಿಸಲಾಗಿದೆ. 21.07 ಲಕ್ಷ ರಕ್ಷಣೆ ಮತ್ತು ನೈರ್ಮಲ್ಯ ಕಿಟ್ ವಿತರಣೆಗೆ ₹ 118.69 ಕೋಟಿ ವೆಚ್ಚ ಮಾಡಲಾಗಿದೆ ಎಂದು ಹೆಬ್ಬಾರ್ ತಿಳಿಸಿದರು.
₹ 91 ಕೋಟಿ ಸಹಾಯಧನ: ಸದಸ್ಯತ್ವ ನವೀಕರಿಸದ 3.54 ಲಕ್ಷ ಕಾರ್ಮಿಕರ ಪೈಕಿ 2.49 ಲಕ್ಷ ಮಂದಿಗೆ ಕಾರ್ಮಿಕ ಅದಾಲತ್ ಮೂಲಕ ₹ 91 ಕೋಟಿ ನೆರವು ನೀಡಲಾಗಿದೆ ಎಂದರು.
ಕಾರ್ಮಿಕ ಕಲ್ಯಾಣ ಸೆಸ್ ರೂಪದಲ್ಲಿ 2021ರ ಆಗಸ್ಟ್ 31ರ ಅಂತ್ಯಕ್ಕೆ ₹ 7,709.06 ಕೋಟಿಯಷ್ಟು ಮೊತ್ತ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.