ಶನಿವಾರ, ಜನವರಿ 28, 2023
15 °C
ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ l ಜಾತಿ ತಂದೆಯದ್ದು, ಆದಾಯ ಪತಿಯದ್ದು

ಪದವೀಧರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ: ಶಿಕ್ಷಕಿಯಾಗುವ ಕನಸು ಕಿತ್ತುಕೊಂಡ ಮದುವೆ!

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪದವೀಧರ ಪ್ರಾಥಮಿಕ ಶಿಕ್ಷಕ ವೃಂದದ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದ ಎರಡು ಸಾವಿರಕ್ಕೂ ಹೆಚ್ಚು ವಿವಾಹಿತ ಮಹಿಳೆಯರ ಉದ್ಯೋಗದ ಕನಸನ್ನು ಶಿಕ್ಷಣ ಇಲಾಖೆ ಕಿತ್ತುಕೊಂಡಿದೆ.  

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ (6ರಿಂದ 8ನೇ ತರಗತಿ) ಖಾಲಿ ಇರುವ 15 ಸಾವಿರ ಶಿಕ್ಷಕರ ಹುದ್ದೆಗೆ ಇದೇ ವರ್ಷದ ಮಾರ್ಚ್‌ನಲ್ಲಿ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ತಂದೆಯ ಆದಾಯ ಪ್ರಮಾಣ ಪತ್ರ ನೀಡಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ತಾತ್ಕಾಲಿಕ ಆಯ್ಕೆ ಪಟ್ಟಿಯಿಂದ ಕೈಬಿಡಲಾಗಿದೆ.

‘ಜಾತಿ ಮೀಸಲಾತಿ ಅನ್ವಯ ಹುದ್ದೆಗಳಿಗೆ ಆಯ್ಕೆ ಬಯಸುವವರು ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಲ್ಲಿಸಬೇಕು. ಅವಿವಾಹಿತೆಯರು ತಂದೆಯ ಆದಾಯ, ವಿವಾಹಿತೆಯರು ಗಂಡನ ಆದಾಯ ವಿವರ ಸಲ್ಲಿಸಬೇಕು. ಹಲವು ವಿವಾಹಿತ ಮಹಿಳೆಯರು ತಮ್ಮ ತಂದೆಯ ಆದಾಯ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಇದರಿಂದ ಅವರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ’ ಎನ್ನುವುದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತ ಆರ್.ವಿಶಾಲ್ ಅವರ ವಿವರಣೆ. 

ಸ್ಪಷ್ಟ ಮಾಹಿತಿ ಇರಲಿಲ್ಲ:

ರಾಜ್ಯ ಸರ್ಕಾರ ಇದೇ ವರ್ಷದ ಮಾರ್ಚ್‌ 21ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ಮದುವೆಯಾದ ಮಹಿಳೆಯರು ಗಂಡನ ಆದಾಯ ಪ್ರಮಾಣ ಪತ್ರವನ್ನೇ ಸಲ್ಲಿಸಬೇಕು ಎನ್ನುವ ಕುರಿತು ಯಾವುದೇ ಸ್ಪಷ್ಟ ನಿರ್ದೇಶನ ಇರಲಿಲ್ಲ. 

‘ಅಧಿಸೂಚನೆ ಹೊರಡಿಸಿದ ಸಮಯದಲ್ಲೇ ನನ್ನ ಮದುವೆಯಾಗಿತ್ತು. ಎಲ್ಲ ದಾಖಲೆಗಳಲ್ಲಿ ತಂದೆಯ ಹೆಸರು ಇದ್ದ ಕಾರಣ, ಅವರ ಆದಾಯ ಪ್ರಮಾಣಪತ್ರವನ್ನೇ ಸಲ್ಲಿಸಿದ್ದೆ. ದಾಖಲೆಗಳ ಪರಿಶೀಲನೆ ಸಮಯದಲ್ಲೂ ಈ ಕುರಿತು ಯಾವುದೇ ತಕರಾರು ಹೇಳಲಿಲ್ಲ. ಈಗ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಹೆಸರು ಕೈಬಿಟ್ಟಿದ್ದಾರೆ. ನನಗಿಂತ ಕಡಿಮೆ ಅಂಕ ಇರುವವರ ಹೆಸರು ಪಟ್ಟಿಯಲ್ಲಿ ಇದೆ. ಇಂತಹ ಅನ್ಯಾಯ ಒಪ್ಪಲು ಸಾಧ್ಯವಿಲ್ಲ. ಹೀಗಾಗಿ, ಆಕ್ಷೇಪಣೆ ಸಲ್ಲಿಸಿರುವೆ’ ಎಂದು ಅಭ್ಯರ್ಥಿ ಚೈತ್ರಾ ಹೇಳಿದರು.

ಮಹಿಳೆ ಇತರೆ ಯಾವುದೇ ಜಾತಿಯ ಪುರುಷನನ್ನು ಮದುವೆಯಾದರೂ, ಜಾತಿ ತಂದೆಯದೆ ಆಗಿರುತ್ತದೆ. ಹಾಗಾಗಿ, ತಂದೆಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಉದ್ಯೋಗ, ಚುನಾವಣೆ ಉಮೇದುವಾರಿಕೆಗೆ ಸಂಬಂಧಿಸಿದ ಹಲವು ಪ್ರಕರಣಗಳಲ್ಲಿ  ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ಗಳು ತೀರ್ಪು ನೀಡಿವೆ. ಹಿಂದೆ ನಡೆದ ಶಿಕ್ಷಕರ ನೇಮಕಾತಿಯಲ್ಲೂ ಈ ಸಮಸ್ಯೆ ಇರಲಿಲ್ಲ ಎನ್ನುವುದು ಅವಕಾಶ ವಂಚಿತರಾದ ಅಭ್ಯರ್ಥಿಗಳ ದೂರು.

ಅವಿವಾಹಿತೆ ಎಂದು ನಮೂದಿಸಿದವರಿಗೆ ಅವಕಾಶ :ಅನೇಕ ಮಹಿಳೆಯರು ಮದುವೆಯಾಗಿದ್ದರೂ, ಅರ್ಜಿ ಸಲ್ಲಿಸುವಾಗ ಅವಿವಾಹಿತರು ಎಂದು ನಮೂದಿಸಿದ್ದಾರೆ. ಅಂತಹ ಹಲವರು ತಾತ್ಕಾಲಿಕ ಪಟ್ಟಿಯಲ್ಲಿ ಅವಕಾಶ ಪಡೆದಿದ್ದಾರೆ. 

ಕುಗ್ಗಿದ ಅಭ್ಯರ್ಥಿಗಳ ಕೊರತೆ ಅಂತರ

ಸರ್ಕಾರ 15 ಸಾವಿರ ಶಿಕ್ಷಕರ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಸಿಇಟಿ ನಂತರ ಗಣಿತ ವಿಜ್ಞಾನ ಸೇರಿದಂತೆ ಹಲವು ವಿಷಯಗಳಲ್ಲಿ ಇದ್ದ ಖಾಲಿ ಹುದ್ದೆಗಳಿಗಿಂತ ಕಡಿಮೆ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು. 3 ಸಾವಿರಕ್ಕೂ ಹೆಚ್ಚು ಶಿಕ್ಷಕರ ಕೊರತೆ ಬೀಳಬಹುದು ಎಂದು ಶಿಕ್ಷಣ ಸಚಿವರೇ ಹೇಳಿದ್ದರು. ಈಗ ತಾತ್ಕಾಲಿಕ ಪಟ್ಟಿಯಲ್ಲಿ 13,363 ಅಭ್ಯರ್ಥಿಗಳ ಹೆಸರಿದೆ. 1,637 ಹುದ್ದೆಗಳಷ್ಟೇ ಖಾಲಿ ಉಳಿದಿವೆ. 

‘ಶಿಕ್ಷಕರ ನೇಮಕಾತಿ ಜಿಲ್ಲಾವಾರು ನಡೆದಿದೆ. ಕೆಲವು ಜಿಲ್ಲೆಗಳಲ್ಲಿ ಪ್ರವರ್ಗಗಳಿಗೆ ಮೀಸಲಾದ ಸ್ಥಾನಕ್ಕಿಂತ ಅದೇ ಸಮುದಾಯದ ಹೆಚ್ಚಿನ ಅಭ್ಯರ್ಥಿಗಳು ಆಯ್ಕೆ ಪಟ್ಟಿಯಲ್ಲಿ ಇದ್ದಾರೆ. ಇದು ಸಹ ಅನುಮಾನ ಮೂಡಿಸುತ್ತಿದೆ’ ಎನ್ನುವುದು ದಕ್ಷಿಣ ಕನ್ನಡದ ಅಭ್ಯರ್ಥಿಯೊಬ್ಬರ ಆರೋಪ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು