ಗ್ರಾಮ ಪಂಚಾಯಿತಿ ಚುನಾವಣೆ:ದಕ್ಷಿಣ ಕೊಡಗಿನಲ್ಲಿ ಕಾಣದ ಉತ್ಸಾಹ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ನಿಗದಿಗೊಂಡಿದ್ದ ಗ್ರಾಮ ಪಂಚಾಯಿತಿ ಚುನಾವಣಾ ಮತದಾನವು ಮುಕ್ತಾಯವಾಗಿದ್ದು, ಒಟ್ಟು ಮೂರು ತಾಲ್ಲೂಕಿನ 101 ಗ್ರಾಮ ಪಂಚಾಯಿತಿಗೆ ಸ್ಪರ್ಧಿಸಿದ್ದ 3,088 ಮಂದಿ ಭವಿಷ್ಯ ಡಿ.30ಕ್ಕೆ ನಿರ್ಧಾರ ಆಗಲಿದೆ. ಮತಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ.
2ನೇ ಹಂತದಲ್ಲಿ ವಿರಾಜಪೇಟೆ ತಾಲ್ಲೂಕಿನಲ್ಲಿ ಭಾನುವಾರ ನಡೆದ ಮತದಾನದಲ್ಲಿ ಅಷ್ಟೊಂದು ಉತ್ಸಾಹ ಕಾಣಿಸಲಿಲ್ಲ. ಕಾಫಿ ಹಾಗೂ ಭತ್ತದ ಕೊಯ್ಲು ಜಿಲ್ಲೆಯಲ್ಲಿ ನಡೆಯುತ್ತಿದೆ. ರೈತರು ಕೆಲಸದಲ್ಲಿ ಸಕ್ರಿಯವಾಗಿದ್ದಾರೆ. ಕ್ರಿಸ್‌ಮಸ್, ವರ್ಷಾಂತ್ಯ ಹಾಗೂ ಸಾಲು ಸಾಲು ರಜೆಗಳ ನಡುವೆ ನಡೆದ ಮತದಾನಕ್ಕೆ ಗ್ರಾಮೀಣ ಮತದಾರರಿಂದ ಉತ್ಸಾಹ ಕಾಣಿಸಲಿಲ್ಲ.
ವಿರಾಜಪೇಟೆ ತಾಲ್ಲೂಕಿನ ಕೆಲವು ಮತಗಟ್ಟೆಗಳಲ್ಲಿ ಚುನಾವಣೆ ಸಿಬ್ಬಂದಿಯೇ ಮತದಾರರಿಗೆ ಕಾಯುತ್ತಿದ್ದ ದೃಶ್ಯವು ಕಂಡುಬಂತು. ಬೈರಂಬಾಡಿ ಮತಗಟ್ಟೆಯಲ್ಲಿ ಬೆಳಿಗ್ಗೆ 11ರ ವೇಳೆಗೆ ಕೆಲವೇ ಮತದಾರರ ಇದ್ದರು.
ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಮ್ಮತ್ತಿ ಒಂಟಿಯಂಗಡಿ ಮತಗಟ್ಟೆಯಲ್ಲಿ 930 ಮತದಾರರಿದ್ದು ಮಧ್ಯಾಹ್ನ 12ರ ವೇಳೆಗೆ 300 ಮಂದಿ ಮಾತ್ರ ಮತದಾನ ಮಾಡಿದ್ದರು. ಮಧ್ಯಾಹ್ನ 3ರ ನಂತರ ಮತದಾರರು ಆಗಮಿಸುವ ನಿರೀಕ್ಷೆಯಲ್ಲಿ ಚುನಾವಣೆ ಸಿಬ್ಬಂದಿ ಇದ್ದರು. ಕೊಂಡಂಗೇರಿಯ ಮತಗಟ್ಟೆಗಳಲ್ಲೂ ಕಡಿಮೆ ಸಂಖ್ಯೆಯ ಮತದಾರರು ಇದ್ದರು. ಹೊರಗೆ ಅಭ್ಯರ್ಥಿಗಳ ಬೆಂಬಲಿತರು ಮತದಾರರಿಗೆ ಕಾದಿದ್ದ ದೃಶ್ಯವು ಕಂಡುಬಂತು.
ಕೊಂಡಂಗೇರಿ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರು ಚುನಾವಣಾ ಚಿಹ್ನೆ ಟಾರ್ಚ್ ಹಿಡಿದು, ತಮ್ಮ ನೆಚ್ಚಿನ ನಾಯಕ, ಅಭ್ಯರ್ಥಿ ಎಂ.ಕೆ.ನಾಚಪ್ಪ ಅವರ ಪರ ಕೆಲಸ ಮಾಡುತ್ತಿದ್ದರು. ಇನ್ನು ಅದೇ ಆವರಣದಲ್ಲಿ ಯುವಕರು ಬಿಸಿಲಿನಲ್ಲೇ ಕುಳಿತು ಮತದಾರರ ಹೆಸರು ಹುಡುಕಿ ಮತದಾನಕ್ಕೆ ನೆರವು ನೀಡುತ್ತಿದ್ದರು. ಎಲ್ಲ ಮತಗಟ್ಟೆಗಳಲ್ಲೂ, ಆಶಾ ಕಾರ್ಯಕರ್ತೆಯರು ಉಷ್ಣಾಂಶ ತಪಾಸಣೆ ಮಾಡಿ ಮತದಾನಕ್ಕೆ ಬಿಡುತ್ತಿದ್ದರು. ಒಂಟಿಯಂಗಡಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 53ರಲ್ಲಿ ವಿಶೇಷ ಚೇತನ ಮಹಿಳೆಯೊಬ್ಬರು, ಸಿಬ್ಬಂದಿ ನೆರವು ಪಡೆದು ಮತ ಚಲಾಯಿಸಿದ್ದು ವಿಶೇಷ.
‘ಐದು ವರ್ಷಗಳಿಗೊಮ್ಮೆ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ. ಮನೆಯಲ್ಲಿ ಸುಮ್ಮನೆ ಇರುವುದಕ್ಕಿಂತ ಮತದಾನಕ್ಕೆ ಮುಂದಾಗಬೇಕು’ ಎಂದು ಕಿವಿಮಾತು ಹೇಳಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.