ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರೂಪವಾಗುತ್ತಿವೆ ಹಂಪಿಯ ಸಪ್ತಸ್ವರ ಕಂಬ!

ನಿರ್ಬಂಧದ ಹೊರತಾಗಿಯೂ ಕಂಬ ಬಾರಿಸಿ ಸಂಗೀತ ಆಲಿಸುವ ಹಂಪಿ ಪ್ರವಾಸಿಗರು
Last Updated 15 ಜನವರಿ 2021, 8:00 IST
ಅಕ್ಷರ ಗಾತ್ರ

ಹೊಸಪೇಟೆ: ಹಂಪಿ ವಿಜಯ ವಿಠಲ ದೇವಸ್ಥಾನದ ಆವರಣದಲ್ಲಿನ ಸಂಗೀತ ಹೊರಹೊಮ್ಮಿಸುವ ಮಂಟಪದ ಕಂಬಗಳನ್ನು ನಿರ್ಬಂಧದ ನಡುವೆಯೂ ಬಾರಿಸಿ ನೋಡುತ್ತಿರುವುದರಿಂದ ಅವುಗಳು ಸವೆದು ವಿರೂಪಗೊಳ್ಳುತ್ತಿವೆ.

ಸಪ್ತಸ್ವರ ನಾದ ಆಲಿಸಲು ಪ್ರವಾಸಿಗರು ಈ ಹಿಂದೆ ವಿಠಲ ದೇಗುಲದ ಕಂಬಗಳನ್ನು ಬಾರಿಸಿ ನೋಡುತ್ತಿದ್ದರು. ಅವುಗಳು ಸವೆದು ಮೂಲ ಸ್ವರೂಪ ಕಳೆದುಕೊಳ್ಳುವ ಹಂತಕ್ಕೆ ಬಂದಿದ್ದವು. ಬಳಿಕ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಕಂಬಗಳನ್ನು ಬಾರಿಸಿ ನೋಡುವುದರ ಮೇಲೆ ದಶಕದ ಹಿಂದೆ ನಿರ್ಬಂಧ ಹೇರಿತು.

ವಿಠಲ ದೇವಸ್ಥಾನದ ಆ ಕಂಬಗಳ ಸುತ್ತ ಪುರಾತತ್ವ ಇಲಾಖೆಯ ಸಿಬ್ಬಂದಿ ಪಹರೆ ಕಾಯುತ್ತಿರುತ್ತಾರೆ. ಯಾರಿಗೂ ಕಂಬಗಳ ಬಳಿ ಸುಳಿಯಲು ಬಿಡುವುದಿಲ್ಲ. ಇದನ್ನೆಲ್ಲ ಅರಿತಿರುವ ಪ್ರವಾಸಿಗರು, ಸ್ಥಳೀಯ ಗೈಡ್‌ಗಳು ಈಗ ದೇಗುಲದ ಮಗ್ಗುಲಲ್ಲಿರುವ ಸಭಾ ಮಂಟಪ, ಕಲ್ಯಾಣ ಮಂಟಪದ ಕಂಬಗಳನ್ನು ಬಾರಿಸಿ ಸಂಗೀತ ಕೇಳಿಸುತ್ತಿದ್ದಾರೆ. ಸುಂದರ ಕೆತ್ತನೆ ಒಳಗೊಂಡಿರುವ ಕಂಬಗಳು ಸವೆದು ಹೋಗುತ್ತಿವೆ. ಇದೇ ರೀತಿ ಬಾರಿಸಿ ಕೇಳುತ್ತಿದ್ದರೆ ಅವುಗಳಿಗೆ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂದು ಸ್ಮಾರಕಪ್ರಿಯರು ಕಳವಳ ವ್ಯಕ್ತಪಡಿಸಿದ್ದಾರೆ.

‘ಹಂಪಿಯಲ್ಲಿ ಅಪರೂಪದ ಸ್ಮಾರಕವೆಂದರೆ ವಿಜಯ ವಿಠಲ ದೇವಸ್ಥಾನ. ಆ ದೇವಸ್ಥಾನದ ಎಲ್ಲ ಮಂಟಪಗಳ ಕಂಬಗಳಿಂದ ಸಂಗೀತ ಹೊರಹೊಮ್ಮುತ್ತದೆ. ಇಲ್ಲಿಯೇ ಕಲ್ಲಿನ ರಥವೂ ಇದೆ. ವಿಠಲ ದೇವಸ್ಥಾನದ ಕಂಬಗಳ ಬಳಿ ಹೋಗಲು ಯಾರಿಗೂ ಬಿಡುತ್ತಿಲ್ಲ. ಕಲ್ಲಿನ ರಥದ ಸುತ್ತ ಇತ್ತೀಚೆಗೆ ಬ್ಯಾರಿಕೇಡ್‌ ಅಳವಡಿಸಲಾಗಿದೆ. ಆದರೆ, ಅದಕ್ಕೆ ಹೊಂದಿಕೊಂಡಂತೆ ಇರುವ ಸಭಾ ಮಂಟಪ, ಕಲ್ಯಾಣ ಮಂಟಪದ ಬಳಿ ಸೂಕ್ತ ಭದ್ರತೆ ಒದಗಿಸದ ಕಾರಣ ಮಂಟಪದ ಕಂಬಗಳು ವಿರೂಪಗೊಳ್ಳುತ್ತಿವೆ’ ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣ ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿ ತಿಳಿಸಿದ್ದಾರೆ.

‘ಸಾಮಾನ್ಯವಾಗಿ ಹೊರಗಿನಿಂದ ಬರುವ ಪ್ರವಾಸಿಗರಿಗೆ ಎಲ್ಲಿ, ಏನು ವಿಶೇಷ ಇರುತ್ತದೆ ಎನ್ನುವುದು ಗೊತ್ತಿರುವುದಿಲ್ಲ. ಆದರೆ, ಕೆಲವು ಗೈಡ್‌ಗಳು ಹಣದಾಸೆಗೆ ಕಂಬಗಳಿಗೆ ಬಾರಿಸಿ ಪ್ರವಾಸಿಗರಿಗೆ ಸಂಗೀತ ಕೇಳಿಸುತ್ತಿದ್ದಾರೆ. ಇದು ಒಬ್ಬರಿಂದ ಒಬ್ಬರಿಗೆ ಗೊತ್ತಾಗಿ ಎಲ್ಲರೂ ಅದೇ ರೀತಿ ಮಾಡುತ್ತಿದ್ದಾರೆ. ಪುರಾತತ್ವ ಇಲಾಖೆಯವರು ತಕ್ಷಣ ಇದನ್ನು ತಡೆಯಬೇಕು. ಇಲ್ಲವಾದರೆ ಸ್ಮಾರಕಕ್ಕೆ ಹಾನಿ ಉಂಟಾಗುತ್ತದೆ’ ಎಂದು ಹೇಳಿದ್ದಾರೆ.

***

ಹಂಪಿಯ ಯಾವ ಸ್ಮಾರಕದ ಮೇಲೆ ಹತ್ತುವುದಾಗಲಿ, ಮುಟ್ಟುವುದಕ್ಕಾಗಲಿ ಅವಕಾಶ ಇಲ್ಲ. ಆದರೆ, ರಾಜಾರೋಷವಾಗಿ ಅದನ್ನು ಮಾಡುತ್ತಿದ್ದರೂ ತಡೆಯುತ್ತಿಲ್ಲ

- ವಿಶ್ವನಾಥ ಮಾಳಗಿ, ಅಧ್ಯಕ್ಷ, ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣ ಸೇನೆ

***

ಈ ವಿಷಯ ಗಮನಕ್ಕೆ ಬಂದಿಲ್ಲ. ಅಲ್ಲಿ ಏನು ನಡೆಯುತ್ತಿದೆ ಎನ್ನುವುದನ್ನು ಪರಿಶೀಲಿಸಿದ ಕ್ರಮ ಕೈಗೊಳ್ಳಲಾಗುವುದು

- ಪಿ. ಕಾಳಿಮುತ್ತು, ಉಪ ಅಧೀಕ್ಷಕ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT