ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನಕ್ಕೆ ಕೊರಗಿಲ್ಲ, ಪದ್ಮ ಪ್ರಶಸ್ತಿಗೆ ಹಿಗ್ಗಲ್ಲ: ಹರೇಕಳ ಹಾಜಬ್ಬ

Last Updated 20 ನವೆಂಬರ್ 2021, 18:56 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನೊಬ್ಬ ಸಾಮಾನ್ಯ ಬಡ ಮನುಷ್ಯ. ಪ್ರತಿ ದಿನ ₹100 ಗಳಿಸುತ್ತಿದ್ದ ನನಗೆ ಪಂಚತಾರಾ ಹೋಟೆಲ್‌ನಲ್ಲಿ ಗೌರವಾತಿಥ್ಯ ನೀಡಿದರು. ಅಲ್ಲಿ ಒಂದು ದಿನಕ್ಕೆ ₹20,130 ಖರ್ಚು ಮಾಡಿದರು. ಸರ್ಕಾರ ಮತ್ತು ಸಮಾಜ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ನಮ್ಮೂರಲ್ಲಿ ಪಿಯು ಕಾಲೇಜು ಆಗಬೇಕು ಎನ್ನುವುದೇ ಸದ್ಯದ ನನ್ನ ಬಯಕೆ...’

– ಇದು ಅಕ್ಷರ ಸಂತ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ನುಡಿಗಳು. ಕನ್ನಡ ಮತ್ತು ಸಂಸ್ಕೃತ ಇಲಾಖೆ ಶನಿವಾರ ನಗರದಲ್ಲಿ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ಯ 217ನೇ ಕಾರ್ಯಕ್ರಮದಲ್ಲಿ ತಮ್ಮ ಬಡತನ, ಶಾಲೆ ನಿರ್ಮಿಸಲು ಒದಗಿ ಬಂದ ಸಂದರ್ಭ, ಕಟ್ಟಡಕ್ಕೆ ಹಣ ಸಂಗ್ರಹ, ಶಾಸಕರು ಮತ್ತು ಅಧಿಕಾರಿಗಳು ನೀಡಿದ ನೆರವು ಮತ್ತು ಮಾರ್ಗದರ್ಶನವನ್ನು ವಿನಯದಿಂದ ನೆನಪಿಸಿಕೊಂಡರು.

‘ಸಮಾಜ ನನ್ನನ್ನು ಗುರುತಿಸಿದ್ದಕ್ಕೆ ಹೆಮ್ಮೆಯಾಗುತ್ತದೆ. ಒಬ್ಬ ಸಾಮಾನ್ಯ ಮನುಷ್ಯನಿಗೆ ದೇಶದ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜೀವಮಾನದಲ್ಲೇ ಇಂತಹ ಕನಸು ಸಹ ಕಂಡಿರಲಿಲ್ಲ. ಪದ್ಮಶ್ರೀ ಪ್ರಶಸ್ತಿ ಪಡೆಯುವಾಗ ನನ್ನ ಕಣ್ಣಾಲಿಗಳು ತುಂಬಿ ಬಂದವು’ ಎಂದು ಭಾವುಕರಾಗಿ ನುಡಿದರು.

‘ಸಣ್ಣ ಜೋಪಡಿಯಲ್ಲಿ ನನ್ನ ಬದುಕು ಆರಂಭವಾಗಿತ್ತು. 1974ರ ಜುಲೈ 26ರಂದು ನೆರೆ ಬಂದು ಎಲ್ಲವೂ ಕೊಚ್ಚಿ ಹೋಗಿತ್ತು. ಆಗ ಬೇರೆ ಮನೆ ಮಾಡಿಕೊಳ್ಳಲು ಸರ್ಕಾರ ನೆರವು ನೀಡಿತ್ತು. ಬದುಕಿಗಾಗಿ ಬಸ್‌ ನಿಲ್ದಾಣದಲ್ಲಿ ಕಿತ್ತಳೆ ಮಾರಾಟ ಮಾಡುತ್ತಿದ್ದಾಗ ಇಂಗ್ಲಿಷ್‌ನಲ್ಲಿ ಕೇಳಿದ ಪ್ರಶ್ನೆ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಿತು. ನಾನಂತೂ ಕಲಿತಿಲ್ಲ. ನಮ್ಮೂರಿನ ಮಕ್ಕಳಿಗಾದರೂ ಶಾಲೆ ನಿರ್ಮಿಸಬೇಕು ಎನ್ನುವ ಛಲ ಮೂಡಿತು. ಹರೇಕಳದಲ್ಲಿ ಶಾಲೆ ನಿರ್ಮಿಸುವ ಕನಸು ಹಂತ ಹಂತವಾಗಿ ಈಡೇರಿದೆ’ ಎಂದು ವಿವರಿಸಿದರು.

‘ನನ್ನ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನನಗೆ ಮೂವರು ಮಕ್ಕಳು. ಬಡತನ ಇದೆ ಎಂದು ಕೊರಗುತ್ತ ಕೂರಲಿಲ್ಲ. ಕಷ್ಟದ ಜೀವನದಿಂದಲೇ ಈ ಹಂತಕ್ಕೆ ಬಂದಿದ್ದೇನೆ. ಬಡತನದ ಸಮಸ್ಯೆಯನ್ನು ದೇವರೇ ಪರಿಹರಿಸಿದ್ದಾನೆ. ಈಗ ಹಣಕಾಸಿನ ಪರಿಸ್ಥಿತಿಯೂ ಸುಧಾರಿಸಿದೆ. ಇಂದು ಈ ಬಡವನ ಮನೆಗೆ ಶ್ರೀಮಂತರು ಪ್ರೀತಿಯಿಂದ ಬಂದು ಗೌರವಿಸುತ್ತಾರೆ. ಇದೇ ನಾನು ಸಮಾಜಕ್ಕೆ ನೀಡಿರುವ ಕೊಡುಗೆ ಎಂದು ಭಾವಿಸಿಕೊಳ್ಳುತ್ತೇನೆ’ ಎಂದು ನುಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಎಸ್‌. ರಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT