ಶನಿವಾರ, ಏಪ್ರಿಲ್ 1, 2023
23 °C
ಹಾವೇರಿಯ ಹಿಮ್ಸ್‌ನಲ್ಲಿ ಬೋಧಕರ ಕೊರತೆಯಿಂದ ನಡೆಯದ ಪಾಠ

ಬೋಧಕರ ಕೊರತೆ: ಹಾವೇರಿ ಹಿಮ್ಸ್‌ನ 150 ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಸಿದ್ದು ಆರ್‌.ಜಿ.ಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಹೊಸದಾಗಿ ಆರಂಭವಾಗಿರುವ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್‌) ಕಾಲೇಜಿನಲ್ಲಿ ಬೋಧಕರ ಕೊರತೆಯಿಂದ ಒಂದೂವರೆ ತಿಂಗಳು ಕಳೆದರೂ ಪಾಠಗಳೇ ಆರಂಭವಾಗಿಲ್ಲ. ಇದರಿಂದ 150 ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. 

ಈ ಸರ್ಕಾರಿ ಮೆಡಿಕಲ್‌ ಕಾಲೇಜಿಗೆ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಮತ್ತು ಸಹಾಯಕ ಪ್ರಾಧ್ಯಾಪಕರು ಸೇರಿದಂತೆ ಒಟ್ಟು 79 ಮಂದಿಯನ್ನು ಕಾಯಂ ನೇಮಕಾತಿ ಮಾಡಿಕೊಳ್ಳಲು 2022ರ ಜನವರಿಯಲ್ಲಿ ಸಂದರ್ಶನ ನಡೆಸಲಾಗಿತ್ತು. ಸಂದರ್ಶನ
ದಲ್ಲಿ ಆಯ್ಕೆಯಾದವರ ತಾತ್ಕಾಲಿಕ ಪಟ್ಟಿಯನ್ನು 2022ರ ಡಿಸೆಂಬರ್‌ 9ರಂದು ಪ್ರಕಟಿಸಲಾಗಿತ್ತು. ಆಕ್ಷೇಪಣೆ ಅವಧಿ ಮುಗಿದು, ಒಂದೂವರೆ ತಿಂಗಳು ಕಳೆದರೂ ಅಂತಿಮ ಆಯ್ಕೆ ಪಟ್ಟಿಯೇ ಬಿಡುಗಡೆಯಾಗಿಲ್ಲ. 

ಪ್ರಸ್ತುತ ಮೆಡಿಕಲ್‌ ಕಾಲೇಜಿನಲ್ಲಿ ಡೀನ್‌ ಮತ್ತು ಪ್ರಾಧ್ಯಾಪಕ ಸೇರಿದಂತೆ ಇಬ್ಬರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೋಧಕರ ಕೊರತೆಯಿಂದ ವಿದ್ಯಾರ್ಥಿಗಳಿಗೆ ‘ಪಠ್ಯ’ ಆರಂಭವಾಗಿಲ್ಲ. ಆರಂಭದಲ್ಲಿ 15 ದಿನ ‘ಫೌಂಡೇಷನ್‌ ಕೋರ್ಸ್‌’ ಅನ್ನು ಹಾವೇರಿ ಜಿಲ್ಲಾಸ್ಪತ್ರೆ ಮತ್ತು ಹುಬ್ಬಳ್ಳಿ ಕಿಮ್ಸ್‌ ಆಸ್ಪತ್ರೆಯ ತಜ್ಞ ವೈದ್ಯರಿಂದ ಮಾಡಿಸಲಾಗಿದೆ 

ಪೂರ್ವಸಿದ್ಧತೆಯ ಕೊರತೆ: ‘ನಮ್ಮ ಮಕ್ಕಳು ‘ನೀಟ್‌‌’ನಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ, ಹಾವೇರಿ ಸರ್ಕಾರಿ ವೈದ್ಯಕೀಯ ಕಾಲೇಜನ್ನು ಆಯ್ಕೆ ಮಾಡಿಕೊಂಡು ಪ್ರವೇಶಾತಿ ಪಡೆದಿದ್ದಾರೆ. ಬೋಧಿಸಲು ಉಪನ್ಯಾಸಕರಿಲ್ಲದ ಕಾರಣ ವಿದ್ಯಾರ್ಥಿ
ಗಳು ತರಗತಿಗಳಿಗೆ ಹೋಗದೆ ಹಾಸ್ಟೆಲ್‌ನಲ್ಲಿ ಕಾಲಹರಣ ಮಾಡುವಂತಾಗಿದೆ. ಪೂರ್ವಸಿದ್ಧತೆ ಇಲ್ಲದೆ ಕಾಲೇಜು ಆರಂಭಗೊಳಿಸಿದ್ದು ಏಕೆ’ ಎಂದು ವಿದ್ಯಾರ್ಥಿಗಳ ಪೋಷಕರು ಪ್ರಶ್ನಿಸುತ್ತಿದ್ದಾರೆ. 

ವ್ಯರ್ಥವಾದ 2 ತಿಂಗಳು: ‘ಮೆಡಿಕಲ್‌ ಕೋರ್ಸ್‌ನ ಮೊದಲನೇ ವರ್ಷದ ಅವಧಿಯನ್ನು ಈ ಬಾರಿ 13 ತಿಂಗಳಿಗೆ ಸೀಮಿತಗೊಳಿಸಲಾಗಿದೆ. ಈಗಾಗಲೇ ಶೈಕ್ಷಣಿಕ ಅವಧಿಯ ಎರಡು ತಿಂಗಳು ವ್ಯರ್ಥವಾಗಿ ಹೋಗಿದೆ. ಬೇರೆ

ಜಿಲ್ಲೆಗಳ ಮೆಡಿಕಲ್‌ ಕಾಲೇಜುಗಳಲ್ಲಿ ಪಾಠ ಚೆನ್ನಾಗಿ ನಡೆಯುತ್ತಿವೆ. ವೈದ್ಯರಾಗಬೇಕು ಎಂದು ಕನಸು ಹೊತ್ತು ಬಂದಿರುವ ನಮಗೆ ಹಾವೇರಿ ಮೆಡಿಕಲ್‌ ಕಾಲೇಜಿನ ಅವ್ಯವಸ್ಥೆಯಿಂದ ನಿರಾಸೆಯಾಗಿದೆ. ಭವಿಷ್ಯದ ಬಗ್ಗೆ ಆತಂಕ ಕಾಡುತ್ತಿದೆ’ ಎಂದು ವಿದ್ಯಾರ್ಥಿಗಳು ಸಮಸ್ಯೆ ತೋಡಿಕೊಂಡರು.

---

ತಾತ್ಕಾಲಿಕ ವ್ಯವಸ್ಥೆ

ಹಾವೇರಿ ಜಿಲ್ಲೆಯ ಜನರ ಬಹುದಿನಗಳ ಕನಸಾದ ಸರ್ಕಾರಿ ಮೆಡಿಕಲ್‌ ಕಾಲೇಜು ಸ್ಥಾಪನೆಗೆ 2020ರ ಜನವರಿಯಲ್ಲಿ ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ದೊರೆಯಿತು. ದೇವಗಿರಿ–ಯಲ್ಲಾಪುರ ಬಳಿ 56 ಎಕರೆ ಜಾಗದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿ ₹478 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲಾಗುತ್ತಿದೆ. ಇನ್ನೂ ಕಾಮಗಾರಿ ಪೂರ್ಣಗೊಳ್ಳದ ಕಾರಣ ದೇವಗಿರಿ ಸಮೀಪದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮೆಡಿಕಲ್‌ ಕಾಲೇಜು ತರಗತಿ ನಡೆಸಲು ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲಾಗಿದೆ. 

‘ಎಂಜಿನಿಯರಿಂಗ್‌ ಕಾಲೇಜಿನ ಹಾಸ್ಟೆಲ್‌ನಲ್ಲಿ ಬಿಸಿನೀರು, ಶೌಚಾಲಯ, ಶುದ್ಧ ಕುಡಿಯುವ ನೀರು ಕೊರತೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಊಟದ ವ್ಯವಸ್ಥೆ ಸಮರ್ಪಕವಾಗಿಲ್ಲ. ವಾರಗಟ್ಟಲೇ ತರಗತಿ ಗಳು ನಡೆಯುತ್ತಿಲ್ಲ. ಕೂಡಲೇ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ, ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಬೇಕು’ ಎಂದು ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ. 

---

ಫೌಂಡೇಶನ್ ಕೋರ್ಸ್ ನಡೆಸಿದ್ದೇವೆ‌. ಬೋಧಕರ ತಾತ್ಕಾಲಿಕ ನೇಮಕಾತಿ ಪಟ್ಟಿ ಪ್ರಕಟಿಸಿದ್ದು, ವಾರದೊಳಗೆ ಅಂತಿಮ ಪಟ್ಟಿ ಪ್ರಕಟವಾಗಲಿದೆ.
- ಉದಯ ಮುಳಗುಂದ 
ನಿರ್ದೇಶಕ, ಹಿಮ್ಸ್, ಹಾವೇರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು