ಭಾನುವಾರ, ನವೆಂಬರ್ 29, 2020
19 °C

ಕಪಾಲಬೆಟ್ಟದಲ್ಲಿ ಎಲ್ಲಾ ನಿರ್ಮಾಣ ಕಾರ್ಯಕ್ಕೆ ಹೈಕೋರ್ಟ್‌ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕನಕಪುರದ ಹಾರೋಬೆಲೆಯ ಕಪಾಲಬೆಟ್ಟದಲ್ಲಿನ ಎಲ್ಲಾ ನಿರ್ಮಾಣ ಕಾರ್ಯಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

‘ಭೂಮಂಜೂರಾತಿ ನಿಯಮಗಳನ್ನು ಉಲ್ಲಂಘಿಸಿ 10 ಎಕರೆ ಗೋಮಾಳವನ್ನು ಮಂಜೂರು ಮಾಡಲಾಗಿದೆ’ ಎಂದು ಅಂತೋಣಿಸ್ವಾಮಿ ಮತ್ತು ಇತರ ಏಳು ಜನ ಸ್ಥಳೀಯರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ಪೀಠ, ಸರ್ಕಾರಕ್ಕೆ ನೋಟಿಸ್ ನೀಡಿದೆ. ನ್ಯಾಯಾಲಯ ಅನುಮತಿ ಪಡೆಯದೆ ಯಾವುದೇ ನಿರ್ಮಾಣ ಕಾರ್ಯ ಕೈಗೊಳ್ಳದಂತೆ ಹಾರೋಬೆಲೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್‌ಗೆ ಪೀಠ ನಿರ್ದೇಶನ ನೀಡಿದೆ.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ, ಸಂಸದ ಡಿ.ಕೆ. ಸುರೇಶ್ ಅವರೇ ಮುಂದಾಳತ್ವ ವಹಿಸಿ ಭೂಮಿ ಮಂಜೂರು ಮಾಡಿಸಿದ್ದಾರೆ. ಟ್ರಸ್ಟ್‌ನಿಂದ ಮನವಿ ಸಲ್ಲಿಕೆಯಾಗುವ ಮುನ್ನವೇ ಭೂಮಂಜೂರಾತಿ ಪ್ರಕ್ರಿಯೆ ಆರಂಭಿಸಿದ್ದರು’ ಎಂದು ಅರ್ಜಿದಾರರು ದೂರಿದ್ದಾರೆ.

‘2017ರ ಫೆಬ್ರುವರಿ 15ರಂದು ಡಿ.ಕೆ.ಶಿವಕುಮಾರ್, ಅದೇ ತಿಂಗಳ 20ರಂದು ಡಿ.ಕೆ.ಸುರೇಶ್‌ ಅವರು ರಾಮನಗರ ಜಿಲ್ಲಾಧಿಕಾರಿಗೆ  ಭೂಮಂಜೂರಾತಿ ಸಂಬಂಧ ಅಧಿಕೃತ ಟಿಪ್ಪಣಿ ಕಳುಹಿಸಿದ್ದರು. ಬಳಿಕ ಮಾರ್ಚ್ 18ರಂದು ಟ್ರಸ್ಟ್‌ನಿಂದ ಔಪಚಾರಿಕ ಮನವಿ ಪತ್ರ ಪಡೆದಿದ್ದಾರೆ. 2018ರ ಫೆಬ್ರುವರಿ 26ರಂದು ಭೂಮಿ ಮಂಜೂರಾಗಿದೆ’ ಎಂದು ಅರ್ಜಿದಾರರು ವಿವರಿಸಿದ್ದಾರೆ.

ಭೂಮಂಜೂರಾತಿ ಮತ್ತು ಭೂಪರಿವರ್ತನೆ ಶುಲ್ಕ ಮನ್ನಾ ಮಾಡಿರುವ ಆದೇಶಗಳನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ. ‘ಜಾತಿ, ಮತ ಮತ್ತು ಧರ್ಮದ ಆಧಾರದಲ್ಲಿ ಭೂಮಿ ಮಂಜೂರು ಮಾಡುವುದು ಸುಪ್ರೀಂ ಕೋರ್ಟ್‌ ಆದೇಶದ ಉಲ್ಲಂಘನೆ’ ಎಂದು ದೂರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು