ಶನಿವಾರ, ಸೆಪ್ಟೆಂಬರ್ 26, 2020
27 °C

ಶಾಸಕರ ಮನೆಗೆ ಬೆಂಕಿ; ಇತಿಹಾಸದಲ್ಲೇ ಮೊದಲು: ದೇವೇಗೌಡ ಕಳವಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಶಾಸಕರೊಬ್ಬರ ಮನೆಗೆ ನುಗ್ಗಿ ಗಲಾಟೆ ಮಾಡಿ, ಬೆಂಕಿ ಹಾಕಿ ನಾಶ ಮಾಡಿದ್ದು ರಾಜ್ಯ ಇತಿಹಾಸದಲ್ಲೇ ಮೊದಲು ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಆಘಾತ ವ್ಯಕ್ತಪಡಿಸಿದರು.

ಹಿಂದೆಂದೂ ಇಂತಹ ಘಟನೆ ನಡೆದಿರಲಿಲ್ಲ. ಶಾಸಕರ ಮನೆಗೆ ನುಗ್ಗಿ ಗಲಾಟೆ ಮಾಡಿದ್ದು ತಪ್ಪು. ಆದ್ದರಿಂದ ತಪ್ಪಿತಸ್ಥರನ್ನು ಕಠಿಣವಾಗಿ ಶಿಕ್ಷಿಸಬೇಕು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಶ್ರೀನಿವಾಸಮೂರ್ತಿ ಹಿಂದೆ ನಮ್ಮ ಪಕ್ಷದಲ್ಲಿದ್ದವರು. ಯಾವುದೇ ಪಕ್ಷದ ಶಾಸಕ ಇರಲಿ, ಇಂತಹ ಘಟನೆ ನಡೆಯಬಾರದು. ಗಲಭೆಯ ವಿಚಾರದಲ್ಲಿ ಕೆಸರೆರಚಾಟವೂ ಸರಿಯಲ್ಲ. ಮನಸ್ಸಿಗೆ ಬಂದಂತೆ ಮಾತನಾಡುವುದೂ ಸರಿಯಲ್ಲ. ಬಿಜೆಪಿ ನಾಯಕರ ಮಾತುಗಳನ್ನೂ ಕೇಳಿದ್ದೇನೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರಮಾತನ್ನೂ ಕೇಳಿದ್ದೇನೆ’ ಎಂದು ಹೇಳಿದರು.

‘ಪೊಲೀಸ್‌ ಅಧಿಕಾರಿಗಳ ಬಗ್ಗೆ ವಿಶ್ವಾಸವಿದೆ. ಅವರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಾಗ ರಾಜಕೀಯ ಪಕ್ಷಗಳು ಮಧ್ಯ ಪ್ರವೇಶ ಮಾಡಬಾರದು. ಸರ್ಕಾರದ ಮುಖ್ಯಸ್ಥರಾಗಿ ಮುಖ್ಯಮಂತ್ರಿಯವರು ಮಾತನಾಡಿದ ಬಳಿಕ ಉಳಿದ ಸಚಿವರು ಮಾತನಾಡುವ ಅವಶ್ಯಕತೆ ಏನಿದೆ’ ಎಂದು ದೇವೇಗೌಡ ಪ್ರಶ್ನಿಸಿದರು.

‘ಕಾಯ್ದೆ ತಿದ್ದುಪಡಿ ವಿರೋಧಿಸಿ ಜೆಡಿಎಸ್ ಹೋರಾಟ’
ಬೆಂಗಳೂರು: ಭೂಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಹೇಳಿದ್ದಾರೆ.

‘ಈ ತಿದ್ದುಪಡಿಗಳನ್ನು ನಮ್ಮ ಪಕ್ಷ ಕಟುವಾಗಿ ವಿರೋಧಿಸುತ್ತದೆ. ಇದರ ಅಂಗವಾಗಿ ನಾಳೆ ಹಾಸನದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸುತ್ತೇವೆ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೊರೊನಾ ಇರುವುದರಿಂದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಹೆಚ್ಚು ಜನರನ್ನು ಸೇರಿಸುವುದಿಲ್ಲ. ಪಕ್ಷದ ಕಾರ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ಶಾಸಕ ಎಚ್‌.ಡಿ.ರೇವಣ್ಣ ಭಾಗವಹಿಸುತ್ತಾರೆ. ಯಾವುದೇ ಘೋಷಣೆಗಳನ್ನು ಕೂಗದೇ ಜಿಲ್ಲಾಧಿಕಾರಿಯವರಿಗೆ ಪ್ರತಿಭಟನೆಯ ಮನವಿ ಪತ್ರ ಸಲ್ಲಿಸುತ್ತೇವೆ’ ಎಂದು ಹೇಳಿದರು.

‘ವಿವಿಧ ಜಿಲ್ಲಾ ಕೇಂದ್ರಗಳಲ್ಲೂ ಹೋರಾಟ ನಡೆಸಲಾಗುವುದು. ಹೋರಾಟದ ವಿಚಾರದಲ್ಲಿ ಪಕ್ಷದಲ್ಲಿ ಒಡಕಿಲ್ಲ. ಹೋರಾಟದಲ್ಲಿ ಶಾಸಕರು, ವಿಧಾನಪರಿಷತ್‌ ಸದಸ್ಯರು ಭಾಗವಹಿಸುತ್ತಾರೆ. ಸಂಸತ್‌ ಅಧಿವೇಶನದಲ್ಲೂ ಈ ವಿಷಯವನ್ನು ಪ್ರಸ್ತಾಪಿಸುತ್ತೇನೆ. ರೈತ ಸಮುದಾಯಕ್ಕೆ ಮಾರಕವಾದ ತಿದ್ದುಪಡಿಗಳನ್ನು ವಾಪಸ್‌ ಪಡೆಯುವಂತೆಯೂ ಒತ್ತಾಯಿಸಲಾಗುವುದು’ ಎಂದು ದೇವೇಗೌಡ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು