ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನದಿಂದ ವಿಮಾನದಲ್ಲಿ ಬಂದು ನಗರದಲ್ಲಿ ಬೈಕ್‌ ಕದಿಯುತ್ತಿದ್ದ

₹ 36 ಲಕ್ಷ ಮೌಲ್ಯದ 26 ಬೈಕ್‌ ಜಪ್ತಿ lಜನರ ವಾಹನಗಳ ದಾಖಲೆ ದುರುಪಯೋಗ
Last Updated 29 ಜುಲೈ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜಸ್ಥಾನದಿಂದ ವಿಮಾನದಲ್ಲಿ ನಗರಕ್ಕೆ ಬಂದು ಬೈಕ್‌ ಕಳವು ಮಾಡುತ್ತಿದ್ದ ಆರೋಪದಡಿ ಮೆಕ್ಯಾನಿಕ್ ವಿಕಾಸ್‌ಕುಮಾರ್ ಸೇರಿ ಮೂವರನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

‘ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳು ಕಳವಾಗುತ್ತಿದ್ದು, ಪ್ರಕರಣಗಳು ದಾಖಲಾಗಿದ್ದವು. ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಚುರುಕಿನ ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಾರೆ’ ಎಂದು ಡಿಸಿಪಿ ಸಂಜೀವ್ ಪಾಟೀಲ ಹೇಳಿದರು.

‘ರಾಜಸ್ಥಾನದ ವಿಕಾಸ್‌ಕುಮಾರ್, ದಾವಲ್‌ದಾಸ್ ಹಾಗೂ ದಶರಥ್ ಬಂಧಿತರು. ₹ 36 ಲಕ್ಷ ಮೌಲ್ಯದ 26 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಕಾಮಾಕ್ಷಿಪಾಳ್ಯ, ಚಂದ್ರಾಲೇಔಟ್, ವಿಜಯನಗರ, ಜ್ಞಾನಭಾರತಿ, ಅನ್ನಪೂರ್ಣೇಶ್ವರಿನಗರ ಹಾಗೂ ಶೇಷಾದ್ರಿಪುರ ಠಾಣೆ ವ್ಯಾಪ್ತಿಗಳಲ್ಲಿ ಆರೋಪಿಗಳು ಕೃತ್ಯ ಎಸಗಿದ್ದರು’ ಎಂದೂ ತಿಳಿಸಿದರು.

ಲಾಕ್‌ಡೌನ್‌ನಿಂದ ಕೆಲಸ ಹೋಗಿತ್ತು; ‘ವಿಕಾಸ್‌ಕುಮಾರ್, ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದ. ನಾಗರಬಾವಿಯ ಗ್ಯಾರೇಜೊಂದರಲ್ಲಿ ಮೆಕ್ಯಾನಿಕ್ ಆಗಿದ್ದ. ಲಾಕ್‌ಡೌನ್‌ನಿಂದಾಗಿ ಕೆಲಸ ಹೋಗಿತ್ತು. ಬಳಿಕ ತನ್ನೂರಿಗೆ ತೆರಳಿದ್ದ. ನಗರದಲ್ಲಿ ನೆಲೆಸಿದ್ದ ದಾವಲ್‌ದಾಸ್ ಹಾಗೂ ದಶರಥ್‌ ಜೊತೆ ಒಡನಾಟವಿಟ್ಟುಕೊಂಡು ಬೈಕ್ ಕಳವು ಮಾಡಲಾರಂಭಿಸಿದ್ದ.’

‘ವಿಮಾನದಲ್ಲಿ ನಗರಕ್ಕೆ ಬರುತ್ತಿದ್ದ ಆರೋಪಿ, ಸಹಚರರ ಜೊತೆ ಸೇರಿ ಸುತ್ತಾಡುತ್ತಿದ್ದ. ಮನೆ ಮುಂದೆ ನಿಲ್ಲಿಸುತ್ತಿದ್ದ ಬೈಕ್‌ಗಳನ್ನು ಗುರುತಿಸಿ ಲಾಕ್‌ ಮುರಿದು ಕದಿಯುತ್ತಿದ್ದ. ಕದ್ದ ವಾಹನಗಳನ್ನು ಅಂದ್ರಹಳ್ಳಿಯ ಖಾಲಿ ಜಾಗವೊಂದರಲ್ಲಿ ನಿಲ್ಲಿಸುತ್ತಿದ್ದ. ಕೆಲದಿನ ಬಿಟ್ಟು ಆರೋಪಿಗಳು ತೆಗೆದುಕೊಂಡು ಹೋಗುತ್ತಿದ್ದರು’ ಎಂದೂ ಡಿಸಿಪಿ ಹೇಳಿದರು.

ಓಎಲ್‌ಎಕ್ಸ್ ದಾಖಲೆ ದುರುಪಯೋಗ: ‘ಸಾರ್ವಜನಿಕರು ವಾಹನಗಳ ಮಾರಾಟ ಕ್ಕಾಗಿ ಓಎಲ್‌ಎಕ್ಸ್ ಜಾಲತಾಣದಲ್ಲಿ ದಾಖಲೆ ಸಮೇತ ಜಾಹೀರಾತು ನೀಡುತ್ತಿದ್ದರು. ಅಂಥವರ ದಾಖಲೆ ಕದಿಯುತ್ತಿದ್ದ ಆರೋಪಿಗಳು, ಕದ್ದ ವಾಹನಗಳಿಗೆ ನಕಲಿ ನೋಂದಣಿ ಪ್ರಮಾಣ ಪತ್ರ ಸೃಷ್ಟಿಸುತ್ತಿದ್ದರು. ಅದೇ ದಾಖಲೆ ಬಳಸಿ ಕಡಿಮೆ ಬೆಲೆಗೆ ವಾಹನ ಮಾರುತ್ತಿದ್ದರು’ ಎಂದೂ ಅವರು ತಿಳಿಸಿದರು.

ರಾಜಸ್ಥಾನದಲ್ಲಿ ಮಾರಾಟ: ‘ಕದ್ದ ವಾಹನಗಳನ್ನು ರಾಜಸ್ಥಾನದವರೆಗೂ ಚಲಾಯಿಸಿಕೊಂಡು ಹೋಗುತ್ತಿದ್ದ ಆರೋಪಿಗಳು, ಅಲ್ಲಿ ಕಡಿಮೆ ಬೆಲೆಗೆ ಮಾರಿದ್ದರು. ಬಂದ ಹಣವನ್ನು ಹಂಚಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು. ಪೊಲೀಸರ ತಂಡವೊಂದು ರಾಜಸ್ಥಾನಕ್ಕೆ ಹೋಗಿದ್ದು, ಆರೋಪಿಗಳ ಬಗ್ಗೆ ಮತ್ತಷ್ಟು ಮಾಹಿತಿ ಕಲೆಹಾಕುತ್ತಿದೆ’ ಎಂದೂ ಡಿಸಿಪಿ ಹೇಳಿದರು.

ಬೈಕ್ ಮೇಲೆ ‘ಪಿಎಸ್‌ಐ’ ಎಂದು ಬರೆಸಿದ್ದ

‘ಆರೋಪಿ ವಿಕಾಸ್‌ಕುಮಾರ್, ತನ್ನ ಬೈಕ್‌ ಮೇಲೆ ಸೈರನ್ ಅಳವಡಿಸಿದ್ದ. ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್– ಕರ್ನಾಟಕ ಪೊಲೀಸ್ ಇಲಾಖೆ ಎಂದುಬರೆಸಿದ್ದ. ಪೊಲೀಸ್ ಹೆಸರಿನಲ್ಲೂ ಆರೋಪಿ ಹಲವರನ್ನು ವಂಚಿಸಿರುವ ಮಾಹಿತಿ ಇದೆ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ಇನ್‌ಸ್ಟಾಗ್ರಾಮ್ 'ರೀಲ್ಸ್‌'ನಲ್ಲೂ ಖಾತೆ ಹೊಂದಿರುವ ಆರೋಪಿ, ಯುವತಿಯರ ಜೊತೆ ನೃತ್ಯ ಮಾಡಿದ್ದ ದೃಶ್ಯಗಳನ್ನು ಅಪ್‌ಲೋಡ್ಮಾಡಿದ್ದಾನೆ. ವಿಡಿಯೊ ಹಾಡುಗಳಿಗೂ ಹೆಜ್ಜೆ ಹಾಕಿದ್ದಾನೆ. ಕಳವು
ಕೃತ್ಯದಿಂದ ಬಂದ ಹಣದಲ್ಲೇ ಆರೋಪಿ, ಆಲ್ಬಮ್ ಹಾಡು ಹಾಗೂಕಿರುಚಿತ್ರ ನಿರ್ಮಿಸುತ್ತಿದ್ದ ಮಾಹಿತಿಯೂ ಇದೆ’ ಎಂದೂ ಮೂಲಗಳುತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT