ಸೋಮವಾರ, ಡಿಸೆಂಬರ್ 5, 2022
19 °C
ರಿಟ್‌ ಅರ್ಜಿ ವಜಾ, ಮಹತ್ವದ ತೀರ್ಪು ನೀಡಿದ ಹೈಕೋರ್ಟ್‌ l ನಿವೃತ್ತ ಲೆಫ್ಟಿನೆಂಟ್ ಕರ್ನಲ್‌ಗೆ ಒದಗಿದ ನ್ಯಾಯ

ಉಳುವವನೇ ಒಡೆಯ ನೀತಿ ಸೈನಿಕರಿಗೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಸೈನಿಕರ ಮಾಲೀಕತ್ವದ ಗೇಣಿ ಜಮೀನುಗಳನ್ನು ಉಳುವವರಿಂದ ವಾಪಸು ಕೊಡಿಸಲು ಸರ್ಕಾರ ತನ್ನ ದೈತ್ಯ ಶಕ್ತಿ ಉಪಯೋಗಿಸಬೇಕು ಮತ್ತು ಇದು ಸರ್ಕಾರದ ಆದ್ಯ ಜವಾಬ್ದಾರಿ’ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. 

ಹಿಡುವಳಿ ಕಾಯ್ದೆ ಅಡಿಯಲ್ಲಿ ಕೈತಪ್ಪಿದ್ದ ಗೇಣಿ ಜಮೀನನ್ನು ಮರಳಿ ಪಡೆಯಲು 40 ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಅವರಿಗೆ ನ್ಯಾಯ ಒದಗಿಸಿರುವ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ‘ಸೈನಿಕರನ್ನು ಗೌರವದಿಂದ ಕಾಣದೇ ಹೋದರೆ ಹೇಗೆ?’ ಎಂದು ಪ್ರಶ್ನಿಸಿದೆ.

‘ತಮ್ಮ ಮಾಲೀಕತ್ವದಲ್ಲಿದ್ದ 4 ಎಕರೆಗೂ ಹೆಚ್ಚಿನ ಗೇಣಿ ಜಮೀನನ್ನು ಮರಳಿ ಸ್ವಾಧೀನಕ್ಕೆ ಒಪ್ಪಿಸಬೇಕು‘ ಎಂದು ಕೋರಿ ಪುತ್ತೂರು ಬಳಿಯ ದರ್ಬೆ ಗ್ರಾಮದ ಲೆಫ್ಟಿನೆಂಟ್ ಕರ್ನಲ್‌ ದಿವಾಣ ಗೋಪಾಲಕೃಷ್ಣ ಭಟ್‌ ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಲಾವಣಿ ಜಮೀನನ್ನು ಬಿಟ್ಟುಕೊಡುವಂತೆ ತಹಶೀಲ್ದಾರ್, ಗೇಣಿ ಮಾಡುತ್ತಿದ್ದ ನಫೀಜಾ ಮತ್ತಿತರರಿಗೆ ನಿರ್ದೇಶಿಸಿದ್ದರು. ಆದರೆ, ತಹಶೀಲ್ದಾರ್ ಆದೇಶವನ್ನು ಪ್ರಶ್ನಿಸಿ ನಫೀಜಾ ಸೇರಿದಂತೆ ಒಟ್ಟು 23 ಜನರು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು.

ಈ ರಿಟ್‌ ಅರ್ಜಿ ವಜಾಗೊಳಿಸಿರುವ ನ್ಯಾಯಪೀಠ, ‘ಹಿಡುವಳಿ ಕಾಯ್ದೆ ಅಡಿಯಲ್ಲಿ ಉಳುವವನೇ ಒಡೆಯ ತತ್ವವು ಸೈನಿಕರಿಗೆ ಅನ್ವಯ ಆಗುವುದಿಲ್ಲ. ತಮ್ಮ ಜಮೀನು ಗೇಣಿದಾರರ ವಶಕ್ಕೆ ಹೋಗಿದ್ದರೆ ಸೇವೆಯಿಂದ ಹಿಂದಿರುಗಿ ಅಥವಾ ನಿವೃತ್ತಿ ಪಡೆದು ಬಂದ ನಂತರದ ಒಂದು ವರ್ಷದ ಅವಧಿಯಲ್ಲಿ ವಾಪಸು ಪಡೆಯಲು ಮನವಿ ಸಲ್ಲಿಸಬೇಕು. ಅಂತಹವರಿಗೆ ಕಾಯ್ದೆಯ ಗುತ್ತಿಗೆ ಕರಾರುಗಳಿಂದ ರಿಯಾಯ್ತಿ ನೀಡಲಾಗಿದೆ’ ಎಂದು ಹೇಳಿದೆ.

‘ಕರ್ನಾಟಕ ಭೂ ಸುಧಾರಣಾ ಕಾಯ್ದೆ–1961ರ 15 (5)ರ ಅನುಸಾರ ಸೈನಿಕರು ನಿವೃತ್ತಿ ಆದ ಮೇಲೆ ತಮ್ಮ ಮಾಲೀಕತ್ವದ ಗೇಣಿ ಜಮೀನನ್ನು ಪುನಃ ಪಡೆಯಬಹುದು. ಇಲ್ಲವಾದಲ್ಲಿ ಸೈನಿಕರು ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಅವರು ಭಾವಿಸಿದ್ದೇ ಆದಲ್ಲಿ, ತಾವು ಹೇಗೆ ದೇಶ ರಕ್ಷಣೆ ಮಾಡಬೇಕು ಎಂಬ ಜಿಜ್ಞಾಸೆಗೆ ಒಳಗಾಗುತ್ತಾರೆ. ಹೀಗಾಗಿ, ಸರ್ಕಾರಗಳು ಸೈನಿಕರ ಬಗ್ಗೆ ಅತ್ಯಂತ ಮುತುವರ್ಜಿಯಿಂದ ವರ್ತಿಸಬೇಕು’ ಎಂದು ನ್ಯಾಯಪೀಠ ರಕ್ಷಣಾ ಇಲಾಖೆಯ ವರದಿಯನ್ನು ತೀರ್ಪಿನಲ್ಲಿ ಉಲ್ಲೇಖಿಸಿದೆ.

‘ನಮ್ಮ ದೇಶದ ಗಡಿಗಳನ್ನು ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಡುವ ಸೈನಿಕರನ್ನು ಸಮಾಜದ ಒಂದು ವಿಭಾಗವು ಎಷ್ಟೊಂದು ಕಳಪೆಯಾಗಿ ನಡೆಸಿಕೊಳ್ಳಬಹುದು ಎಂಬುದಕ್ಕೆ ಇದೊಂದು ಶ್ರೇಷ್ಠ ಉದಾಹರಣೆಯಾಗಿದೆ’ ಎಂದು ‌ಕಳವಳ ವ್ಯಕ್ತಪಡಿಸಿರುವ ನ್ಯಾಯಪೀಠ, ‘ಲೆಫ್ಟಿನೆಂಟ್‌ ಕರ್ನಲ್‌ ಅವರಿಗೆ ಎಂಟು ವಾರಗಳಲ್ಲಿ ಜಮೀನು ಸ್ವಾಧೀನಕ್ಕೆ ನೀಡಬೇಕು. ತಪ್ಪಿದಲ್ಲಿ ಸಂಬಂಧಿಸಿದ ಅಧಿಕಾರಿಗಳು ಅರ್ಜಿದಾರರನ್ನು ವಿವಾದಿತ ಸ್ಥಳದಿಂದ ಒಕ್ಕಲೆಬ್ಬಿಸಿ ಸ್ವಾಧೀನಕ್ಕೆ ನೀಡಬೇಕು’ ಎಂದು ಆದೇಶ ನೀಡಿದೆ.

ಲೆಫ್ಟಿನೆಂಟ್‌ ಕರ್ನಲ್‌ ಗೋಪಾಲಕೃಷ್ಣ ಭಟ್ಟ ಅವರು 1993ರಲ್ಲಿ ರಕ್ಷಣಾ ಸೇವೆಯಿಂದ ನಿವೃತ್ತಿ ಹೊಂದಿದ್ದರು. ತಮ್ಮ ಗೇಣಿ ಜಮೀನನ್ನು ವಾಪಸು ಕೊಡಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು