ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಗಳಿಲ್ಲದ ಜಿಲ್ಲೆಗಳಲ್ಲಿ ಹೊಸ ವಿವಿ ಸ್ಥಾಪಿಸಿ: ವಿಶ್ವೇಶ್ವರ ಹೆಗಡೆ ಕಾಗೇರಿ

ಶಿವಮೊಗ್ಗದಲ್ಲಿ ದಕ್ಷಿಣ ಭಾರತದ ಮೊದಲ ಆಯುಷ್ ವಿಶ್ವವಿದ್ಯಾಲಯ ಸ್ಥಾಪನೆಗೆ ಕ್ರಮ
Last Updated 22 ಡಿಸೆಂಬರ್ 2021, 4:30 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ಶಿವಮೊಗ್ಗದಲ್ಲಿ ಆಯುಷ್‌ ವಿಶ್ವವಿದ್ಯಾಲಯ ಸ್ಥಾಪನೆ ಸೇರಿದಂತೆ ನಾಲ್ಕು ಮಸೂದೆಗಳಿಗೆ ವಿಧಾನಸಭೆಯಲ್ಲಿ ಮಂಗಳವಾರ ಒಪ್ಪಿಗೆ ನೀಡಲಾಯಿತು.

ಕರ್ನಾಟಕ ರಾಜ್ಯ ಆಯುಷ್‌ ವಿಶ್ವವಿದ್ಯಾಲಯ ಮಸೂದೆ– 2021 ಮಂಡಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌, ’ದಕ್ಷಿಣ ಭಾರತದಲ್ಲಿ ಆಯುಷ್‌ ವಿಶ್ವವಿದ್ಯಾಲಯ ಇರಲಿಲ್ಲ. ಶಿವಮೊಗ್ಗದಲ್ಲಿ ಆಯುಷ್‌ ವಿಶ್ವವಿದ್ಯಾಲಯ ಸ್ಥಾಪಿಸಲಾಗುತ್ತಿದ್ದು, ದಕ್ಷಿಣ ಭಾರತದ ಮೊದಲ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ವಿವಿ ಸ್ಥಾಪನೆಗೆ ₹20 ಕೋಟಿ ಮೀಸಲಿಡಲಾಗಿದೆ‘ ಎಂದರು.

ಕಾಂಗ್ರೆಸ್‌ನ ಡಾ.ರಂಗನಾಥ್‌, ’ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ದಶಕಗಳೇ ಕಳೆದಿದೆ. ಆ ವಿಶ್ವವಿದ್ಯಾಲಯಕ್ಕೆ ಕ್ಯಾಂಪಸ್‌ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಮೊದಲು ಆ ವಿಶ್ವವಿದ್ಯಾಲಯಕ್ಕೆ ಮೂಲಸೌಕರ್ಯ ನೀಡಲು ಆದ್ಯತೆ ನೀಡಬೇಕಿತ್ತು‘ ಎಂದರು.

ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ’ರಾಜ್ಯದಲ್ಲಿ ಮೂರು ವರ್ಷಗಳಿಂದ ಸಾಂಕ್ರಾಮಿಕ ಕಾಯಿಲೆ ಇದೆ. ಇಂತಹ ಸಂದರ್ಭದಲ್ಲಿ ಆಯುಷ್‌ ವಿಶ್ವವಿದ್ಯಾಲಯ ಸ್ಥಾಪನೆ ಅಗತ್ಯ ಇರಲಿಲ್ಲ‘ ಎಂದರು.

ಜೆಡಿಎಸ್‌ನ ಬಂಡೆಪ್ಪ ಕಾಶೆಂಪೂರ, ’ನಮ್ಮ ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಇಲ್ಲ. ಆಯುಷ್‌ ವಿವಿಯನ್ನು ಬೀದರ್‌ ಜಿಲ್ಲೆಯಲ್ಲಿ ಸ್ಥಾಪಿಸಬೇಕು‘ ಎಂದರು. ಉಪಸಭಾಧ್ಯಕ್ಷ ಆನಂದ ಮಾಮನಿ, ’ಬೆಳಗಾವಿಯಲ್ಲಿ ಈ ವಿಶ್ವವಿದ್ಯಾಲಯ ಸ್ಥಾಪಿಸಬೇಕು‘ ಎಂದು ಕೋರಿದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ’ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದೇ ಒಂದು ವಿಶ್ವವಿದ್ಯಾಲಯ ಇಲ್ಲ. ವಿಶ್ವವಿದ್ಯಾಲಯ ಸ್ಥಾಪಿಸುವಾಗ ನಮ್ಮ ಜಿಲ್ಲೆಗೆ ಆದ್ಯತೆ ನೀಡಬೇಕಿತ್ತು‘ ಎಂದು ಕಿವಿಮಾತು ಹೇಳಿದರು. ’ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವಾಗ ವಿಶ್ವವಿದ್ಯಾಲಯಗಳೇ ಇಲ್ಲದ ಜಿಲ್ಲೆಗಳ ಕಡೆಗ ಗಮನ ಹರಿಸಬೇಕು. ಈ ಮೂಲಕ ಪ್ರಾದೇಶಿಕ ಅಸಮತೋಲನ ಸರಿಪಡಿಸಬೇಕು‘ ಎಂದು ಸಲಹೆ ನೀಡಿದರು.

ಕೈಗಾರಿಕೆಗಳ ತೆರಿಗೆ ಇಳಿಕೆಯ ಮಸೂದೆ: ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆ ಉತ್ತೇಜಿಸಲು ಪಾಲಿಕೆಗಳು ಮತ್ತು ಇತರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಕೈಗಾರಿಕಾ ಕಟ್ಟಡಗಳಿಗೆ ವಿಧಿಸಬೇಕಾದ ಸ್ವತ್ತು ತೆರಿಗೆಗೆ ಪ್ರತ್ಯೇಕ ದರ ನಿಗದಿ ಮಾಡುವ ‘ಕರ್ನಾಟಕ ನಗರ ಪಾಲಿಕೆಗಳ ಮತ್ತು ಕೆಲವು ಇತರ ಕಾನೂನು ಮಸೂದೆ’ಗೆ ವಿಧಾನಸಭೆಯಲ್ಲಿ ಮಂಗಳವಾರ ಅಂಗೀಕಾರ ನೀಡಲಾಯಿತು.

ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಮಾತನಾಡಿ, ’ಕೈಗಾರಿಕಾ ಆಸ್ತಿ ತೆರಿಗೆಯನ್ನು ವಾಣಿಜ್ಯ ಕಟ್ಟಡಗಳಿಗಿಂತ ಕಡಿಮೆ ವಿಧಿಸಿದರೆ ನಗರ ಸ್ಥಳೀಯ ಸಂಸ್ಥೆಗಳಿಗೆ ಹೊರೆಯಾದರೂ ಹೆಚ್ಚಿನ ಆಸ್ತಿ ತೆರಿಗೆ ಸಂಗ್ರಹವಾಗುವುದರಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇದರಿಂದ ಸ್ವಂತ ಸಂಪನ್ಮೂಲಗಳನ್ನು ಹೆಚ್ಚಿಸಿಕೊಂಡು ಮೂಲಸೌಕರ್ಯಗಳನ್ನು ಒದಗಿಸಲು ಈ ಕಾಯ್ದೆ ಸಹಕಾರಿಯಾಗಲಿದೆ‘ ಎಂದರು.

’ವಾಣಿಜ್ಯ ಕಟ್ಟಡಗಳ ಮೂಲ ದರ ಶೇ 0.5 ಕ್ಕಿಂತ ಕಡಿಮೆ ಇರುವಂತೆ, ಶೇ 3 ಕ್ಕಿಂತ ಹೆಚ್ಚಿಲ್ಲದಂತೆ, ವಾಣಿಜ್ಯೇತರ ಕಟ್ಟಡಗಳಿಗೆ ಕಟ್ಟಡದ ಮೂಲ ದರ ಶೇ 0.02 ಕ್ಕಿಂತ ಕಡಿಮೆ ಇಲ್ಲದಂತೆ ಹಾಗೂ ಶೇ 1.5 ಕ್ಕಿಂತ ಹೆಚ್ಚಿಲ್ಲದಂತೆ ನಿಗದಿ ಮಾಡಲಾಗಿದೆ. ಖಾಲಿ ಭೂಮಿಗಳಿಗೆ ಮೂಲ ಬೆಲೆಯ ಶೇ 0.2 ಕ್ಕಿಂತ ಕಡಿಮೆ ಇಲ್ಲದಂತೆ ಹಾಗೂ ಶೇ 0.5 ಕ್ಕಿಂತ ಹೆಚ್ಚಿಲ್ಲದಂತೆ ನಗರ ಸ್ಥಳೀಯ ಸಂಸ್ಥೆಗಳ ಆಸ್ತಿ ತೆರಿಗೆಯನ್ನು ನಿಗದಿಪಡಿಸಲು ಅವಕಾಶ ನೀಡಲಾಗಿದೆ‘ ಎಂದರು.

ಪಿಯು ಉಪನ್ಯಾಸಕರ ವರ್ಗಾವಣೆಗೆ ಅವಕಾಶ
ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರ ವರ್ಗಾವಣೆಗೂ ಅವಕಾಶ ನೀಡುವ ‘ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ಎರಡನೇ ತಿದ್ದುಪಡಿ) ಮಸೂದೆ‘ಗೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು.

‘2018–19ರಲ್ಲಿ ಕಡ್ಡಾಯ ವರ್ಗಾವಣೆಯಾಗಿ ಪದವಿಪೂರ್ವ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರಿಗೆ, ಖಾಲಿ ಹುದ್ದೆಗಳ ಲಭ್ಯತೆ ಆಧರಿಸಿ ಅವರು ಕಾರ್ಯನಿರ್ವಹಿಸುತ್ತಿರುವ ಜ್ಯೇಷ್ಠತಾ ಘಟಕದೊಳಗೆ ಒಂದು ಬಾರಿ ವರ್ಗಾವಣೆಯ ಸ್ಥಳ ಆಯ್ಕೆ ಮಾಡಲು ಕೂಡಾ ಅವಕಾಶ ನೀಡಲಾಗಿದೆ ಎಂದು ಮಸೂದೆಯಲ್ಲಿದೆ.

50 ವರ್ಷ ಮೀರಿದವರು, ಗರ್ಭಿಣಿಯರು, ಅಂಗವಿಕಲರಿಗೆ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡುವ ಪ್ರಸ್ತಾಪ ಮಸೂದೆಯಲ್ಲಿದೆ‘ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಕೆಳದಿ ಶಿವಪ್ಪ ನಾಯಕ ವಿವಿ: ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಹೆಸರನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯ ಎಂಬುದಾಗಿ ಮರುನಾಮಕರಣ ಮಾಡುವ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಗಳ (ತಿದ್ದುಪಡಿ) ಮಸೂದೆ– 2021‘ಕ್ಕೆ ಒಪ್ಪಿಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT