ಭಾನುವಾರ, ಆಗಸ್ಟ್ 14, 2022
25 °C
ಜಯದೇವ ಹೃದ್ರೋಗ ಸಂಸ್ಥೆ

ಕೋವಿಡ್ ಗುಣಮುಖರಿಗೆ ಹೃದಯಾಘಾತ ಸಮಸ್ಯೆ: ಅಧ್ಯಯನದಿಂದ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್‌ ಕಾಯಿಲೆಯಿಂದ ಚೇತರಿಸಿಕೊಂಡ ಬಳಿಕ ಮೂರರಿಂದ ನಾಲ್ಕು ವಾರಗಳ ಅವಧಿಯಲ್ಲಿ ಹೃದಯಾಘಾತ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ.

ಜೂನ್ ತಿಂಗಳ ದಾಖಲಾತಿ ಅನುಸಾರ ಸಂಸ್ಥೆಯು ಈ ಅಧ್ಯಯನ ನಡೆಸಿದೆ. ಇದರಿಂದಾಗಿ ಕೋವಿಡ್‌ ಕಾಯಿಲೆ ಕೂಡ ಹೃದಯಾಘಾತಕ್ಕೆ ಕಾರಣವಾಗಬಹುದು ಎನ್ನುವುದು ಅಧ್ಯಯನದಿಂದ ಗೊತ್ತಾಗಿದೆ.

ಸೋಂಕಿನಿಂದ ಚೇತರಿಸಿಕೊಂಡವರಲ್ಲಿ 26 ಮಂದಿ ಹೃದಯಾಘಾತಕ್ಕೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅವರಲ್ಲಿ 16 ಮಂದಿ ಮನೆ ಆರೈಕೆಗೆ ಒಳಗಾದವರಾಗಿದ್ದಾರೆ. ಉಳಿದವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಮೂರರಿಂದ ನಾಲ್ಕು ವಾರಗಳ ಬಳಿಕ ಹೃದಯಾಘಾತ ಸಮಸ್ಯೆ ಅವರಲ್ಲಿ ಕಾಣಿಸಿಕೊಂಡಿದೆ. ಅಧ್ಯಯನಕ್ಕೆ ಒಳಪಟ್ಟವರಲ್ಲಿ ಶೇ 60ರಷ್ಟು ಮಂದಿ 50 ವರ್ಷದೊಳಗಿನವರಾಗಿದ್ದಾರೆ. ನಾಲ್ಕು ಮಂದಿಗೆ ಮಾತ್ರ ಈ ಮೊದಲೇ ಹೃದಯ ಸಂಬಂಧಿ ಸಮಸ್ಯೆಗಳು ಇದ್ದವು.

‘ಕೊರೊನಾ ಸೋಂಕು ದೇಹದ ವಿವಿಧ ಅಂಗಗಳಿಗೆ ಹಾನಿ ಮಾಡಲಿದೆ. ಕೋವಿಡ್‌ನಿಂದ ಚೇತರಿಸಿಕೊಂಡವರಿಗೆ ಹೃದಯಾಘಾತ ಸಾಧ್ಯತೆಯ ಬಗ್ಗೆ ಅಧ್ಯಯನವನ್ನು ನಡೆಸಲಾಗಿದೆ. 26 ಮಂದಿಯಲ್ಲಿ 10 ಜನರಿಗೆ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಯಾವುದೇ ಕೋವಿಡೇತರ ಸಮಸ್ಯೆ ಇರಲಿಲ್ಲ. ಆದರೂ ಹೃದಯಾಘಾತ ಸಂಭವಿಸಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತ ಕಾರಣ ಎಲ್ಲರೂ ಚೇತರಿಸಿಕೊಂಡಿದ್ದಾರೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ರಕ್ತ ಹೆಪ್ಪುಗಟ್ಟುವಿಕೆ: ‘ಅಧ್ಯಯನಕ್ಕೆ ಒಳಪಟ್ಟವರಲ್ಲಿ ಶೇ 65 ಮಂದಿ ಪುರುಷರು ಹಾಗೂ ಶೇ 35 ರಷ್ಟು ಮಂದಿ ಮಹಿಳೆಯರಾಗಿದ್ದಾರೆ. ಕೊರೊನಾ ಸೋಂಕಿನ ತೀವ್ರತೆಗೆ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಇರುತ್ತದೆ. ಹೃದಯ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟಿದರೆ ಹೃದಯ ಸಮಸ್ಯೆ, ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದರೆ ಪಾರ್ಶ್ವವಾಯು ಹಾಗೂ ಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿದರೆ ಗ್ಯಾಂಗ್ರೀನ್‌ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎನ್ನುವುದು ಅಧ್ಯಯನದಿಂದ ತಿಳಿದುಬಂದಿದೆ’ ಎಂದು ವಿವರಿಸಿದರು.

‘ಕೊರೊನಾ ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ತೆರಳುವಾಗ 6ರಿಂದ 8 ವಾರಗಳ ಕಾಲ ರಕ್ತ ತಿಳಿಗೊಳಿಸುವ ಔಷಧ ಸೇವಿಸಲು ಸೂಚನೆ ನೀಡಲಾಗುತ್ತದೆ. ಯಾರು ಇದನ್ನು ಸರಿಯಾಗಿ ಪಾಲಿಸುವುದಿಲ್ಲವೋ ಅಂತಹವರಲ್ಲಿ ರಕ್ತ ಹೆಪ್ಪುಗಟ್ಟಿ, ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಲಿವೆ’ ಎಂದು ತಿಳಿಸಿದರು.‌‌

ಸೌಮ್ಯ ಲಕ್ಷಣ: ಹೃದಯಾಘಾತ
‘ಕೋವಿಡ್‌ ಸೌಮ್ಯ ಮತ್ತು ಮಧ್ಯಮ ಸ್ವರೂಪದ ಲಕ್ಷಣದಿಂದ ಚೇತರಿಸಿಕೊಂಡವರಿಗೆ ಕೂಡ ಹೃದಯಾಘಾತ ಸಮಸ್ಯೆ ಕಾಣಸಿಕೊಂಡಿದೆ. ಕೋವಿಡ್ ಮೊದಲ ಅಲೆಯಲ್ಲಿ ಸೋಂಕಿನಿಂದ ಗುಣಮುಖರಾದವಲ್ಲಿ ಶೇ 5ರಷ್ಟು ಮಂದಿ ಹೃದಯಾಘಾತಕ್ಕೆ ಒಳಗಾಗುತ್ತಿದ್ದರು. ಎರಡನೇ ಅಲೆಯಲ್ಲಿ ಸೋಂಕಿನ ತೀವ್ರತೆಗೆ ಹಲವರು ಗಂಭೀರವಾಗಿ ಅಸ್ವಸ್ಥರಾಗಿದ್ದರು. ಇದರಿಂದಾಗಿ ಕೆಲವರು ದೀರ್ಘಕಾಲ ಔಷಧ ಪಡೆದುಕೊಂಡಿದ್ದರು. ಇದು ಕೂಡ ಹೃದಯಾಘಾತ ಸಮಸ್ಯೆಗೆ ಒಳಗಾಗುವರ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. ಹಾಗಾಗಿ, ಹೃದಯಾಘಾತ ಸಮಸ್ಯೆ ತಪ್ಪಿಸಲು ಇಸಿಜಿ, ಎಕೊ, ಥ್ರೆಡ್‌ಮಿಲ್ ಪರೀಕ್ಷೆಗಳನ್ನು ಒಮ್ಮೆ ಮಾಡಿಸಿಕೊಳ್ಳಬೇಕು’ ಎಂದು ಡಾ.ಸಿ.ಎನ್. ಮಂಜುನಾಥ್ ತಿಳಿಸಿದರು.

*
ಕೋವಿಡ್‌ನಿಂದ ಚೇತರಿಸಿಕೊಂಡ 2–3 ವಾರಗಳ ಬಳಿಕ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಮುಂದಾಗುವ ಅಪಾಯ ತಡೆಯಬಹುದು.
ಡಾ.ಸಿ.ಎನ್. ಮಂಜುನಾಥ್, ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು