ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಪ ಹೆಚ್ಚಿದರೆ ಕೋಲಾರದಲ್ಲೂ ಪ್ರವಾಹ: ವರದಿ

ಗ್ಲಾಸ್ಗೊದಲ್ಲಿ ಕೈಗೊಂಡ ನಿರ್ಣಯ ರಾಜ್ಯ ಮಟ್ಟದಲ್ಲೂ ಜಾರಿ ಅಗತ್ಯ
Last Updated 16 ನವೆಂಬರ್ 2021, 20:04 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ತಾಪಮಾನ ಈಗಿರುವುದಕ್ಕಿಂತ 0.5 ರಿಂದ 2.5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾದರೂ ಕೋಲಾರ ಸೇರಿದಂತೆ ಬರಪೀಡಿತ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಮತ್ತು ಮಲೆನಾಡಿನಂತಹ ಪ್ರದೇಶಗಳಲ್ಲಿ ಮಳೆಯ ಕೊರತೆಯಾಗುವ ಸಾಧ್ಯತೆ ಇದೆ. 2050 ರ ವೇಳೆಗೆ ನೈಸರ್ಗಿಕ ಪ್ರಕೋಪದ ಪರಿಣಾಮಗಳನ್ನು ಊಹಿಸುವುದೂ ಕಷ್ಟ.

ಜಾಗತಿಕ ತಾಪಮಾನ ರಾಜ್ಯದ ಮೇಲೆ ಬೀರುವ ಪರಿಣಾಮ ಮತ್ತು ಅದನ್ನು ಎದುರಿಸುವ ಬಗ್ಗೆ ‘ಬೆಂಗಳೂರು ಕ್ಲೈಮೇಟ್‌ಚೇಂಜ್‌ ಇನಿಶಿಯೇಟಿವ್‌ ಕರ್ನಾಟಕ’ದ ತಜ್ಞರ ತಂಡದ ವರದಿ ಈ ಅಂದಾಜನ್ನು ಮಾಡಿದೆ.

ಆಗ ಮುಂಗಾರು ಮತ್ತು ಹಿಂಗಾರು ಮಳೆಯ ದಿನಗಳೂ ಹೆಚ್ಚಾಗಲಿವೆ. ಇದರ ಪರಿಣಾಮ ಹತ್ತಿ ಮತ್ತು ಕಬ್ಬು ಉತ್ಪಾದನೆ ಹೆಚ್ಚಾದರೆ, ಆಹಾರ ಧಾನ್ಯಗಳಾದ ಭತ್ತ, ರಾಗಿ, ಕಡಲೆಕಾಯಿ ಮುಂತಾದ ಬೆಳೆಗಳ ಇಳುವರಿ ಕುಸಿಯಲಿದೆ ಎಂದು ಹೇಳಿದೆ.

ಗ್ಲಾಸ್ಗೊದಲ್ಲಿ ನಡೆದ ಜಾಗತಿಕ ತಾಪಮಾನದ ನಿರ್ಣಯಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ನಗರದಲ್ಲಿ ತಜ್ಞರುಮಂಗಳವಾರ ಸಭೆ ನಡೆಸಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.

ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ಮಹಾನಿರ್ದೇಶಕ ಡಾ.ಜಗಮೋಹನ್‌ ಶರ್ಮಾ, ರಾಜ್ಯದಲ್ಲಿ ತಾಪಮಾನದ ಪ್ರಮಾಣ ತಗ್ಗಿಸದೇ ಹೋದರೆ, ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಹೆಚ್ಚು. ಇದಕ್ಕಾಗಿ ಪ್ಯಾರಿಸ್‌ ಮತ್ತು ಗ್ಲಾಸ್ಗೊದಲ್ಲಿ ನಡೆದ ಜಾಗತಿಕ ತಾಪಮಾನದ ನಿರ್ಣಯಗಳನ್ನು ಎಲ್ಲ ಹಂತಗಳಲ್ಲೂ ಅಳವಡಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಸಬೇಕು ಎಂದರು.

ಭಾರತೀಯ ವಿಜ್ಞಾನ ಸಂಸ್ಥೆಯ ಸುಸ್ಥಿರ ತಂತ್ರಜ್ಞಾನ ಕೇಂದ್ರದ ನಿವೃತ್ತ ಪ್ರಾಧ್ಯಾಪಕ ಡಾ.ಎನ್‌.ಎಚ್‌.ರವೀಂದ್ರನಾಥ್, ಜಾಗತಿಕ ಮಟ್ಟದಲ್ಲಿನ ಹೊರಸೂಸುವಿಕೆಯನ್ನು 2030 ರ ವೇಳೆಗೆ ಶೇ 40 ರಷ್ಟು ಮತ್ತು 2050 ರ ವೇಳೆಗೆ ಶೂನ್ಯ ಮಟ್ಟಕ್ಕೆ ಇಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಇದನ್ನು ಸಾಧಿಸಲು ರಾಜ್ಯಗಳ ಮಟ್ಟದಲ್ಲಿ ಅಳವಡಿಸಿಕೊಳ್ಳಬೇಕಾದ ಕ್ರಮಗಳ ಬಗ್ಗೆ ಕೇಂದ್ರ ಸರ್ಕಾರ ರಾಜ್ಯಗಳ ಜತೆ ಚರ್ಚಿಸಬೇಕು ಎಂದರು.

ಪ್ರೊ. ಬಿ.ಕೆ.ಚಂದ್ರಶೇಖರ್‌ ಮಾತನಾಡಿ, ದೇಶದಲ್ಲಿ ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ಗ್ಲಾಸ್ಗೊದಲ್ಲಿ ಕೇಂದ್ರ ಸರ್ಕಾರ ವ್ಯಕ್ತಪಡಿಸಿರುವ ನಿಲುವು ಸರಿಯಾಗಿಯೇ ಇದೆ. ಪ್ಯಾರಿಸ್‌ ಸಮ್ಮೇಳನದಲ್ಲೂ ಹಲವು ಉತ್ತಮ ನಿರ್ಧಾರಗಳನ್ನು ಪ್ರಕಟಿಸಿತ್ತು. ಅವುಗಳನ್ನು ಜಾರಿಗೆ ತರುವ ಯತ್ನ ನಡೆದಿಲ್ಲ ಎಂದರು.

ಡಾ.ಕೆ.ಇಂದುಮೂರ್ತಿ ಮಾತನಾಡಿ, 2030 ರ ಬಳಿಕ ಕೆಲವು ಕಡೆಗಳಲ್ಲಿ ದಿನಕ್ಕೆ 50 ಮಿ.ಮೀ.ಗಳಿಂದ 100 ಮಿ.ಮೀ ಮಳೆ ಆಗಬಹುದು. ಆಗ ಒಂದು ಕಡೆ ಪ್ರವಾಹ ಎದುರಿಸುವ ಮತ್ತೊಂದು ಕಡೆ ಬರ ಎದುರಿಸುವ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT