ಬುಧವಾರ, ಡಿಸೆಂಬರ್ 1, 2021
21 °C
ಹಳ್ಳದಲ್ಲಿ ಸಿಲುಕಿದ್ದ ಇಬ್ಬರ ರಕ್ಷಣೆ; ಕಾಳಗಿ, ಚಿತ್ತಾಪುರ, ಸೇಡಂ ತಾಲ್ಲೂಕಿನ ಹಲವೆಡೆ ಗ್ರಾಮಗಳ ಸಂಪರ್ಕ ಕಡಿತ

ಕಲಬುರ್ಗಿ, ಬೀದರ್‌ ಜಿಲ್ಲೆಗಳಲ್ಲಿ ಭಾರಿ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ/ಬೀದರ್‌: ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನವರೆಗೆ ಭಾರಿ ಮಳೆ ಸುರಿದಿದೆ. ಬೀದರ್‌ ಜಿಲ್ಲೆಯ ಕಮಲನಗರದಲ್ಲಿ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 14.2 ಸೆಂ.ಮೀ. ಮಳೆ ದಾಖಲಾಗಿದೆ.

ಕಲಬುರ್ಗಿ ಜಿಲ್ಲೆಯಲ್ಲಿ ಹಲವು ಮನೆಗಳು ಕುಸಿದಿದ್ದು, ಗ್ರಾಮಗಳಲ್ಲಿ ನೀರು ಹೊಕ್ಕಿದೆ. ತಾಲ್ಲೂಕಿನ ಹಾಗರಗಾ–ಖಾಜಾ ಕೋಟನೂರ ಗ್ರಾಮಗಳ ಮಧ್ಯದ ಹಳ್ಳ ಉಕ್ಕಿ ಹರಿಯುತ್ತಿದ್ದು, ಹಳ್ಳದ ಪಕ್ಕದ ದನದ ಕೊಟ್ಟಿಗೆಯಲ್ಲಿ ಸಿಲುಕಿದ್ದ ರುಕ್ಕಪ್ಪ (40) ಹಾಗೂ ರಾಜು ಬಟ್ಟು ಯಾದವ್ (50) ಅವರನ್ನು ಅಗ್ನಿಶಾಮಕ ದಳದವರು ರಕ್ಷಿಸಿದರು.

ಚಿತ್ತಾಪುರ, ಕಾಳಗಿ, ಸೇಡಂ ತಾಲ್ಲೂಕುಗಳಲ್ಲಿ ಹಳ್ಳಗಳ ಕಿರು ಸೇತುವೆಗಳು ಮುಳುಗಿದ್ದರಿಂದ ಕೆಲ ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಜಮೀನಿಗೆ ನೀರು ನುಗ್ಗಿ ಬೆಳೆಯೂ ಹಾನಿಯಾಗಿದೆ.

ಕಲಬುರ್ಗಿ ನಗರದ ಅತ್ತರ ಕೌಂಪೌಂಡ ಬಳಿಯ ಸಿದ್ದೇಶ್ವರ ನಗರದಲ್ಲಿ ಮನೆಯೊಂದು ಕುಸಿದು ಬಿದ್ದು ಮೂವರಿಗೆ ಗಾಯಗಳಾಗಿವೆ.

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಆನಂದವಾಡಿ ಸಮೀಪ ಕಾರಂಜಾ ನದಿ ಉಕ್ಕಿ ಹರಿದು ಎರಡು ತಾಸು ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಜ್ಯಾಂತಿ ಗ್ರಾಮದ ಹಳ್ಳ ಹಾಗೂ ಧಾಡಗಿ ಕೆರೆ ತುಂಬಿ ಹರಿಯುತ್ತಿವೆ.

ಕಮಲನಗರ–ಕೊಟ್ಯಗಾಳ ರಸ್ತೆ ಮಧ್ಯೆ ಇರುವ ಕಿರು ಸೇತುವೆ ಮೇಲಿಂದ ಬಿದ್ದು ದ್ವಿಚಕ್ರ ವಾಹನ ಸವಾರ ಕೊಟ್ಯಾಗಾಳದ ಅನಿಲ ಕೋಟೆ ಗಾಯಗೊಂಡಿದ್ದಾರೆ. ಬೋರಗಿ ಬಳಿ ರಸ್ತೆ ಕೊಚ್ಚಿ ಹೋಗಿದೆ. ತಾಲ್ಲೂಕಿನ ಕೌಠಾ ಬಳಿಯ ಮಾಂಜ್ರಾ ನದಿಗೆ ಅಪಾರ ನೀರು ಹರಿದು ಬರುತ್ತಿದೆ.

ಹುಮನಾಬಾದ್‌ ತಾಲ್ಲೂಕಿನ 11 ಹಳ್ಳಿಗಳ ಹೊಲದಲ್ಲಿನ ಮಣ್ಣು ಕೊಚ್ಚಿಕೊಂಡು ಹೋಗಿದೆ. ಇಲ್ಲಿಯ ಹಳ್ಳಗಳು ತುಂಬಿ ಹರಿಯುತ್ತಿವೆ. ಕಮಲನಗರ ತಾಲ್ಲೂಕಿನ ಡಿಗ್ಗಿ ಗ್ರಾಮದಲ್ಲಿ 6.6 ಸೆಂ.ಮೀ., ಠಾಣಾಕುಸನೂರಲ್ಲಿ 7.6 ಸೆಂ.ಮೀ., ಔರಾದ್‌ ತಾಲ್ಲೂಕಿನ ಲಾಧಾದಲ್ಲಿ 7.3 ಸೆಂ.ಮೀ., ಜಮಗಿಯಲ್ಲಿ 6.8 ಸೆಂ.ಮೀ., ಭಾಲ್ಕಿ ತಾಲ್ಲೂಕಿನ ಲಂಜವಾಡದಲ್ಲಿ 12.5 ಸೆಂ.ಮೀ., ಹಲಬರ್ಗಾದಲ್ಲಿ 10.7 ಸೆಂ.ಮೀ ಮಳೆ ಬಿದ್ದಿದೆ.

ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನ ಕೊಟಗೇರಾ–ಗಾಜರಕೋಟ ಹಳ್ಳದ ಸೇತುವೆ ಮಂಗಳವಾರ ಸಂಜೆಯವರೆಗೂ ಮುಳುಗಿತ್ತು.

ಕರಾವಳಿ: ಕ್ಷೀಣಿಸಿದ ಮಳೆ
ಮಂಗಳೂರು: ಕರಾವಳಿಯಲ್ಲಿ ಕೆಲವು ದಿನಗಳ ಕಾಲ ಧಾರಾಕಾರವಾಗಿ ಸುರಿದ ಮಳೆ, ಮಂಗಳವಾರ ಕ್ಷೀಣಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 1 ಸೆಂ.ಮೀ. ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಏಳು ಮನೆಗಳು ಭಾಗಶಃ ಹಾನಿಯಾಗಿವೆ. ಸುರತ್ಕಲ್‌ನ ಸತೀಶ್ ಸಾಲ್ಯಾನ್ (35) ನೀರಿನಲ್ಲಿ ಕೊಚ್ಚಿ ಹೋಗಿದ್ದು, ಶವ ಪತ್ತೆಯಾಗಿದೆ. ಏಪ್ರಿಲ್ ತಿಂಗಳಿನಿಂದ ಈ ತನಕ ಜಿಲ್ಲೆಯಲ್ಲಿ 69.35 ಹೆಕ್ಟೇರ್ ತೋಟಗಾರಿಕೆ ಹಾಗೂ 32.23 ಹೆಕ್ಟೇರ್ ಕೃಷಿ ಭೂಮಿ ಹಾನಿಗೀಡಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ವರದಿ ತಿಳಿಸಿದೆ. ‌

ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ, ಕಾಪು ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಸಾಧಾರಣ ಮಳೆ ಬಿದ್ದಿದೆ. ಉಡುಪಿ ತಾಲ್ಲೂಕಿನ ಬಡಾನಿಡಿಯೂರಿನಲ್ಲಿ ಗರಿಷ್ಠ 4.3 ಸೆಂ.ಮೀ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದ ವಿವಿಧೆಡೆ ಮಳೆಯಾಗಿದೆ. ಕೊಪ್ಪ, ಕಳಸ, ನರಸಿಂಹರಾಜಪುರ ಭಾಗದಲ್ಲಿ ತುಂತುರು ಮಳೆಯಾಗಿದೆ. ಕಮ್ಮರಡಿಯಲ್ಲಿ 2.1 ಸೆಂ.ಮೀ ಮಳೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು